Karada Vishwa

Article · October 23, 2025

ಹೊಸ ದೀಪಾವಳಿ

ಕರಾಡ ವಿಶ್ವ ಆಯೋಜಿಸಿದ ದೀಪಾವಳಿ ಕವನ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಉತ್ತಮ ಕವನ

ಕವಯಿತ್ರಿ : ಡಾ/ಪ್ರಫುಲ್ಲ. ಜಿ. ಭಟ್ಟ, ಉಡುಪಿ

ಹೊಸದೀಪಾವಳಿ ಹಣತೆಯಸಾಲು,

ಜೀವನದುದ್ದಕ್ಕೂ ಇದೆ ಸವಾಲು

ಅಭ್ಯಂಜನದ ಸವಿಗನಸಿನಲಿ

ಮಾವಕರೆದರು ಅರ್ಧ ರಾತ್ರಿಯಲಿ


ಹಂಡೆ ತೂತಾಗಿದೆ ಮಹಾರಾಯ ಇಂದೇ....

ಕಣ್ಣೀರೇ ಗತಿ ಇನ್ನು ಮುಂದೆ 

ನಿದ್ದೆಯೂ ಅರ್ಧ ಸ್ನಾನವು ಅರ್ಧ

ಅಡುಗೆಯ  ಗಡಿಬಿಡಿ ನನ್ನಾಕೆಯೂ ಅರ್ಧ

 

ಅತ್ತೆ- ಮಗಳು ಸೇರಿ ಮಾಡಿದ್ದರು  ಅದಾವುದೋ ಕಡುಬಂತೆ 

ನೀರು ಹೆಚ್ಚಿತೆ ಕಡಿಮೆ ಬೆಂದಿತೆ  ನನಗಂತೂ ಹೊಟ್ಟೆಯದೇ ಚಿಂತೆ

ಪಟಾಕಿಗದಾವ ರೇಟು ಗೊತ್ತಯ್ಯ; ಮಾವ ತೊಡಗಿದರು

ತರೋಣವೇ ಭಾವ ಬರ್ತಿರಾ ಅಂತೆ ಇವಳ ತಮ್ಮಂದಿರು

 

ಪಟಾಕಿ ನೆಲಚಕ್ರ ದುರುಸು ರೈಲು 

ಕಿಸೆಯೆಲ್ಲಾ ಖಾಲಿ ಅಲ್ಲೂ ಸೋಲು

ಒಂದೇ ಬಾರಿಗೆ ಟುಸ್ಸು ಪುಸ್ಸು, 

ಪಟಾಕಿ ಅಂಗಡಿ ಕಾಮತ್ರ ಚಾನ್ಸು

 

ಉಡುಗೊರೆ ಗಿಡುಗೊರೆ ಕ್ರಮ ನಮ್ಮಲಿಲ್ಲ ಮಾವ ಜಾರಿದರು. 

ಎಂತೋ ಏನೋ ಬಾಯ್ಬಿಡುವಂತಿಲ್ಲ ಹೋದಲ್ಲಿ ಮೊಣಕಾಲ ನೀರು

ಆಪೂಜೆ ಈ ಪೂಜೆ ಗೋಪೂಜೆ ಅಂತ ಏನೇನೂ ಮಾಡಿದರು 

ಆರತಿ ಅಕ್ಷತೆ ಎಲ್ಲದರಲ್ಲೂ ಬಾಯುಪಚಾರವೆ ಜೋರು


ಹೊಸಹಬ್ಬ ಅಳಿಯಂದಿರು ಸುಧಾರಿಸಬೇಕು, ಕೈಮುಗಿದರು ಮಾವ

'ಇನ್ನೇನು ಮಾಡಲಿ ಇರಬೇಕಲ್ಲ ನಿಮ್ಮಮಗಳ ತಾವ'

ಅಬ್ಬಬ್ಬ ಕಳೆಯಿತು ನಾಲ್ಕು ದಿನದಾ ಈ ಹೊಸ ದೀಪಾವಳಿ

ಎಚ್ಚರ ನಿಮಗೆಲ್ಲ ಹೋಗಲೆ ಬೇಡಿ ನನ್ನ ಕಥೆಯ ಕೇಳಿ


--ಶ್ರೀಮತಿ ಪ್ರಫುಲ್ಲ ಕೆ . ವಿ .

Creative Writings
ಹೊಸ ದೀಪಾವಳಿ