
Karada Vishwa · July 14, 2025
ಸಮಾಜದ ಅಸಹಾಯಕರಿಗೊಂದು ಆಶಾಕಿರಣ - “ಕರಾಡ ಸಹಾಯಕ ಬಂಧು”
'ಕರಾಡ ಸಹಾಯಕ ಬಂಧು’ ಸಮಾಜಪರ ಕೆಲಸಗಳಲ್ಲಿ ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳುವ ಗುಂಪು-ಸಂಘಟನೆ. ಇದರೊಂದಿಗೆ ಕರಾಡ ಸಮಾಜದ ಹೆಚ್ಚಿನ ಎಲ್ಲ ಸಂಘ ಸಂಸ್ಥೆಗಳೂ ಸಹಕರಿಸುತ್ತ ಸಮಾಜಮುಖಿ ಕಾರ್ಯಗಳಿಗೆ ಹುರುಪನ್ನು ನೀಡುತ್ತಿವೆ. ಈ ಮೂಲಕ 'ಜನರು ಸಂಘ ಸಂಸ್ಥೆಗಳೊಂದಿಗೆ ಇದ್ದಲ್ಲಿ, ಸಂಘ ಸಂಸ್ಥೆಗಳು ಜನರಿಗಾಗಿ ಇವೆ' ಎಂಬ ಸಂದೇಶವನ್ನು ಸಮಾಜಕ್ಕೆ ಕೊಟ್ಟಿವೆ.
ಬಂಧುಗಳೇ,
ಕರಾಡ ಬ್ರಾಹ್ಮಣ ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ಬಂಧುಗಳಿಗೆ ಸಹಾಯ ಮಾಡುವ ವಿಷಯದಲ್ಲಿ ಒಂದು ವ್ಯವಸ್ಥಿತವಾದ ಸಾಂಘಿಕ - ಏಕೀಕೃತ ವ್ಯವಸ್ಥೆಯ ಕೊರತೆಯನ್ನು ನೀಗಿಸಲು ಒಂದಷ್ಟು ‘‘ಸಮಾನ ಮನಸ್ಕ ಬಾಂಧವರು’’ ಒಟ್ಟು ಸೇರಿಕೊಂಡು ಸ್ಥಾಪಿಸಿಕೊಂಡ ಪಾರದರ್ಶಕ ವ್ಯವಸ್ಥೆ ಕರಾಡ ಸಹಾಯಕ ಬಂಧು. ಇದರ ಮುಖಾಂತರ ಕರಾಡರಿಂದ- ಕರಾಡರಿಗಾಗಿ ಎಂಬ ಧ್ಯೇಯವನ್ನಿಟ್ಟುಕೊಂಡು ಸಮಾಜದ ಆರ್ಥಿಕ ದುರ್ಬಲರನ್ನೇ ಲಕ್ಷ್ಯದಲ್ಲಿರಿಸಿ ಅವರ ಆಪತ್ಕಾಲಗಳಿಗೊದಗಲೆಂದೇ ರೂಪ ತಳೆದ ಸೀಮಿತ ಉದ್ದೇಶದ ವಾಟ್ಸಪ್ ಗುಂಪು ಇದು. ಸಮಾನ ಮನಸ್ಕ ಕರಾಡ ಬಾಂಧವರಿಗೆ ಗ್ರೂಪ್ ನ ಲಿಂಕ್ ಮುಖಾಂತರ ಸದಸ್ಯರಾಗಲು ಮುಕ್ತ ಅವಕಾಶವಿದ್ದು ಸಹಾಯಕ ಗುಂಪಿನ ಉದ್ದೇಶಕ್ಕನುಗುಣವಾದ ಸಂವಹನಗಳಿಗೆ ಮಾತ್ರ ತೆರೆದಿರುತ್ತದೆ.
ವಿಶೇಷ ಸೂಚನೆ - ಪ್ರಸಕ್ತ ಈ ಗುಂಪು ಯಾವುದೇ ಹಣಕಾಸಿನ ವ್ಯವಹಾರಗಳನ್ನು ಸ್ವಂತ ಬ್ಯಾಂಕ್ ಅಕೌಂಟ್ ಮೂಲಕ ನಡೆಸುವುದಿಲ್ಲ. ಕೇವಲ ಸಹಾಯಾರ್ಥಿ ಮತ್ತು ದಾನಿಗಳ ಮಧ್ಯೆ ಒಂದು ವಿಶ್ವಸ್ಥ ವೇದಿಕೆಯಾಗಿ ಮಾತ್ರ ಪಾತ್ರವಹಿಸುತ್ತದೆ. ಕೊಡುವಂತಹ ಸಹಾಯ ಕೇವಲ ದಾನಿಯ ಬ್ಯಾಂಕ್ ಖಾತೆಯಿಂದ ಸಹಾಯಾಕಾಂಕ್ಷಿಯ ಬ್ಯಾಂಕ್ ಖಾತೆಗೆ ಕೊಡು-ಕೊಳ್ಳುವಿಕೆಯ ಮೂಲಕ ಮಾತ್ರ.
ಗುಂಪಿನ ಧ್ಯೇಯೋದ್ದೇಶಗಳು –
ಕೆಳಗಿನ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡು ತಾರೀಕು 21-07-2021ರಂದು ಈ ಗುಂಪು ರಚನೆಗೊಂಡಿತು.
- ಕೇವಲ ಕರಾಡ ಸಮಾಜದ ಆರ್ಥಿಕವಾಗಿ ಹಿಂದುಳಿದ, ಅನಾರೋಗ್ಯದಿಂದ ಕಷ್ಟಪಡುವ, ಅನ್ಯಮಾರ್ಗರಹಿತ ಬಂಧುಗಳಿಗಾಗಿರುವ ಆಶಾಕಿರಣ.
- ‘ವೈದ್ಯಕೀಯ ಉಪಕರಣಗಳ ಬ್ಯಾಂಕ್’ ವ್ಯವಸ್ಥೆ- ನಮ್ಮ ಸಮಾಜ ಬಾಂಧವರ ಮನೆಗಳಲ್ಲಿ ಈಗಾಗಲೇ ಒಮ್ಮೆ ಉಪಯೋಗಿಸಿ, ಸದ್ಯಕ್ಕೆ ಉಪಯೋಗಶೂನ್ಯವಾಗಿ ಉಳಿದಿರುವ ವೈದ್ಯಕೀಯ ಸಲಕರಣೆಗಳು ಮತ್ತು ಉಪಕರಣಗಳನ್ನು ಸಂಗ್ರಹಿಸಿ ಅಥವಾ ಲಭ್ಯತೆಯನ್ನು ಖಚಿತಪಡಿಸಿ ಅಗತ್ಯ ಇರುವ ಬಂಧುಗಳಿಗೆ ತಲುಪಿಸುವ ಮತ್ತು ಅದನ್ನು ನಿರ್ವಹಿಸುವ ವ್ಯವಸ್ಥೆ.
- ಕರಾಡ ಸಂಘ ಸಂಸ್ಥೆಗಳೊಂದಿಗೆ ಸೇರಿ ನಡೆಸಲ್ಪಡುವ, ಈಗಾಗಲೇ ಚಾಲ್ತಿಯಲ್ಲಿರುವ ಹಾಗೂ ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲುದ್ದೇಶಿಸಿರುವ ಜನಪರ ಯೋಜನೆಗಳು :-
i. ‘ಕರಾಡ ರಕ್ತನಿಧಿ’ - ಸ್ವಯಂ ರಕ್ತದಾನಕ್ಕೆ ಪ್ರೇರಣೆ ಮತ್ತು ಪ್ರೋತ್ಸಾಹ.
ii. ನಮ್ಮ ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ‘ವಿದ್ಯಾನಿಧಿ’.
iii. ನಮ್ಮ ಸಮಾಜದ ಅಶಕ್ತರ ಪ್ರಾಥಮಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಶಾರೀರಿಕ ಹಾಗೂ ಆರ್ಥಿಕ ಸಹಾಯ.
iv. ಆಂಬುಲೆನ್ಸ್ ಸೇವೆ, ಆರೋಗ್ಯ ಕ್ಯಾಂಪ್ ಗಳು, ಪ್ರಾದೇಶಿಕ ಆಸ್ಪತ್ರೆಗಳಲ್ಲಿ ಅಪೂರ್ವ ಆರೋಗ್ಯ ಸೇವೆಗಳ ಲಭ್ಯತೆ, ತುರ್ತುಪರಿಸ್ಥಿತಿಗಳ ಸಂದರ್ಭಗಳಲ್ಲಿ ಸ್ವಯಂ ಸೇವೆ, ವೈದ್ಯಕೀಯ ಸಲಹೆ ಸೂಚನೆಗಳು, ನಮ್ಮ ಸಮಾಜದ ವಿದ್ಯಾರ್ಥಿಗಳಲ್ಲಿ ತಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಭವಿಷ್ಯದ ಬಗ್ಗೆ ಅರಿವು ಮೂಡಿಸುವುದು.
v. ಸಮಾಜದ ಮುಂದಿನ ಯುವ ಪೀಳಿಗೆಯನ್ನು ‘ಸಹಾಯ-ಸಹಕಾರ’ದ ಮಾನಸಿಕತೆಗೆ ಅಣಿಗೊಳಿಸುವುದು.
vi. ಯುವ ನಾಯಕತ್ವವನ್ನು ಉತ್ತೇಜಿಸಲು ಕೇಂದ್ರ ಸರಕಾರ ಇತ್ತೀಚೆಗೆ ಹಮ್ಮಿಕೊಂಡ ಯೋಜನೆಗಳಾದ ಮೇರಾ ಯುವ ಭಾರತ್ (My Bharath) ಅಥವಾ My Young India (My India) ಗಳ ಅನುಷ್ಠಾನಕ್ಕೆ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಅನುಭವ (experience) ಮತ್ತು ಕೌಶಲ್ಯ (skill) ವೃದ್ಧಿಗಾಗಿರುವ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.
vii.
ಶಿಸ್ತುಬದ್ಧ ಜೀವನ, ಪರಿಸರ ಸಂರಕ್ಷಣೆ, ಅರಣ್ಯೀಕರಣ ರಾಷ್ಟ್ರಭಕ್ತಿ, ರಾಷ್ಟ್ರಸೇವೆ, ಸಮಾಜಸೇವೆಯೇ ಮೊದಲಾದ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಭಾರತ್ ಸ್ಕೌಟ್ಸ್ ಅಂಡ್ ಗೈಡ್, NCC, NSS, SPC ಹಾಗೂ ಭಾರತೀಯ ಸೈನಿಕರ ತರಬೇತಿಗೆ ಸೇರಲು ಪ್ರೇರೇಪಿಸುವುದು.
ಈ ಮೇಲಿನ ಎಲ್ಲಾ ಕಾರ್ಯಕ್ರಮಗಳನ್ನೂ ಕರಾಡ ಸಮಾಜದ ಅನ್ಯಾನ್ಯ ಸಂಘ ಸಂಸ್ಥೆಗಳೊಂದಿಗೆ ಸೇರಿ ಕಾರ್ಯಗತಗೊಳಿಸುವುದು.
‘ಹನಿಗೂಡಿ ಹಳ್ಳ’ ಎಂಬ ಮಾತಿನಂತೆ ಕಷ್ಟದಲ್ಲಿದ್ದಾಗ ಸಿಗುವ ಚಿಕ್ಕ ಸಹಾಯವೂ ಬೆಟ್ಟವಾಗಿ ಪರಿಣಮಿಸುತ್ತದೆ. ಇಲ್ಲಿ ಸಹಾಯದ ಕೊಡು-ಕೊಳ್ಳುವಿಕೆಗೆ ಯಾವುದೇ ಇತಿಮಿತಿ, ಪರಿಮಿತಿ ಇಲ್ಲ.
‘ಕರಾಡ ಸಹಾಯಕ ಬಂಧು’ ಗುಂಪಿನ ಮುಖಾಂತರ ಆರ್ಥಿಕ ಸಹಾಯ ಮಾಡುವ ವ್ಯವಸ್ಥೆ-
ಫಲಾನುಭವಿಗಳ ವಿವರಗಳನ್ನು ವಾಟ್ಸಪ್ ಗುಂಪಿನ ಅಡ್ಮಿನ್ ಗಳಿಗೆ ತಿಳಿಸಿದಲ್ಲಿ ಫಲಾನುಭವಿಗಳಿಂದ ಸ್ವ ವಿವರಗಳನ್ನು ಪಡೆದು, ಆಳವಾಗಿ ಪರಾಂಬರಿಸಿ ಅರ್ಹರೆನಿಸಿದರೆ ಮಾತ್ರ ಗುಂಪಿನ ಮೂಲಕ ಸಹಾಯಕ್ಕಾಗಿ ನಮ್ಮ ಸಮುದಾಯವನ್ನು ವಿನಂತಿಸಲಾಗುವುದು.
‘ಕರಾಡ ಸಹಾಯಕ ಬಂಧು’ ವಿನ ಈ ವರೆಗಿನ ಕಾರ್ಯ ಚಟುವಟಿಕೆಗಳು-
- ಸಂಘಟನಾತ್ಮಕ ವ್ಯವಸ್ಥೆ 👇
ಈ ಮೊದಲು ಹೇಳಿದಂತೆ 21-07-2021ರಂದು ಜನ್ಮತಾಳಿದ ಸಮಾನ ಮನಸ್ಕರ ಕನಸಿನ ಕೂಸಾದ ಈ ಗುಂಪು ಸದ್ಯಕ್ಕೆ 900+ ಸದಸ್ಯರನ್ನು ಒಳಗೊಂಡ ಕೇವಲ ಗ್ರೂಪ್ ಲಿಂಕ್ ಮುಖಾಂತರ ಕಟ್ಟಿಕೊಂಡ ‘ಕರಾಡ ಸಮಾಜದ ಏಕೈಕ ಮತ್ತು ಅತಿದೊಡ್ಡ ವಾಟ್ಸಪ್ ಗುಂಪು’.
- ಅಸಹಾಯಕರಿಗೆ ಸಹಾಯ 👇
ಈ ವರೆಗೆ ಕರಾಡ ಸಮಾಜ ಬಾಂಧವರು ವೈಯಕ್ತಿಕವಾಗಿ ಹಾಗೂ ಸಮಾಜಕ್ಕೆ ಸಂಬಂಧಪಟ್ಟ ಸಂಘ ಸಂಸ್ಥೆಗಳೊಂದಿಗೆ ಸೇರಿ ಸಮಾಜದ 38 ಮಂದಿ ಅಸಹಾಯಕ ಬಂಧುಗಳಿಗೆ ಒದಗಲು ರೂಪಾಯಿ 52.81 ಲಕ್ಷಗಳಿಗಿಂತಲೂ ಹೆಚ್ಚಿನ ಮೊತ್ತವು ಕ್ರೋಢೀಕರಣಗೊಳ್ಳಲು ನೇರ ಹಾಗೂ ಪರೋಕ್ಷವಾಗಿ ಕಾರಣವಾದುದು ಗುಂಪಿಗೆ ಹೆಮ್ಮೆಯ ಸಂಗತಿ. ಈ ರೀತಿ ಒದಗಿದ ಸಹಾಯದಲ್ಲಿ ಆಪತ್ತಿನ ಸಮಯದ ವೆಚ್ಚಕ್ಕೂ ಮಿಕ್ಕಿದ ಮೊತ್ತವನ್ನು ನಮ್ಮ ಗುಂಪು ಬ್ಯಾಂಕ್ ವ್ಯವಹಾರದಲ್ಲಿ ತೊಡಗಿಸಿಕೊಂಡಿಲ್ಲದ ಕಾರಣ ಸಹಾಯ ಪಡೆದ ಬಂಧುವಿನ ಸ್ವಇಚ್ಛೆಯಿಂದ ತಮ್ಮದೇ ಬ್ಯಾಂಕ್ ಖಾತೆಯಲ್ಲಿ ಮುಂದಿನ ಸಹಾಯಗಳಿಗಾಗಿ ಕಾದಿರಿಸಿದ ತುರ್ತು ನಿಧಿ 2.94 ಲಕ್ಷ ರೂಪಾಯಿಗಳು. ಇಂತಹ ಕಾದಿರಿಸಿದ ತುರ್ತು ನಿಧಿಯಿಂದಲೇ ಈ ವರೆಗೆ ಸಹಾಯ ಪಡೆದಂತಹ ಬಂಧುಗಳು 13 ಮಂದಿ.
- ವೈದ್ಯಕೀಯ ಉಪಕರಣಗಳ ಭಂಡಾರ 👇
25-07-2023 ರಂದು ಪ್ರಾರಂಭವಾದ ಈ ಗುಂಪಿನ ‘ವೈದ್ಯಕೀಯ ಉಪಕರಣಗಳ ಭಂಡಾರ’ದ ಮುಖಾಂತರ ವಿವಿಧ ವೈದ್ಯಕೀಯ ಉಪಕರಣಗಳ ಉಪಕಾರ ಪಡೆದಂತಹ ಬಂಧುಗಳ ಸಂಖ್ಯೆ ಸುಮಾರು 135+. ಈಗಾಗಲೇ ಈ ವ್ಯವಸ್ಥೆಯಲ್ಲಿ ನೇರವಾಗಿ ಮತ್ತು ಪರೋಕ್ಷವಾಗಿ ಒಮ್ಮೆ ಉಪಯೋಗಿಸಿ ಪ್ರಕೃತ ಉಪಯೋಗಶೂನ್ಯವಾಗಿರುವ, ಈ ಗುಂಪಿನ ಅಪೇಕ್ಷೆಯ ಮೇರೆಗೆ ಉಪಯೋಗಕ್ಕೆ ಉದಾರವಾಗಿ ನೀಡಿರುವ, ನಮ್ಮ ಸಂಗ್ರಹದಲ್ಲಿರುವ ವಿವಿಧ ವೈದ್ಯಕೀಯ ಉಪಕರಣಗಳು ಸುಮಾರು 70+. ಇವುಗಳೆಲ್ಲವುಗಳ ಒಟ್ಟು ಮಾರುಕಟ್ಟೆ ಮೌಲ್ಯ ಸುಮಾರು 6.5 ಲಕ್ಷ ರೂಪಾಯಿಗಳು.
ಈ ವ್ಯವಸ್ಥೆಯ ನಿರ್ವಹಣೆಗೆಂದು ಬೆಂಗಳೂರಿನ ಹಿತೈಷಿಯೊಬ್ಬರು 15000 ರೂಪಾಯಿಗಳನ್ನು ಕೊಟ್ಟಿರುತ್ತಾರೆ.
- ಗ್ರಾಮೀಣ ಪ್ರದೇಶಗಳಲ್ಲಿ ಅಪೂರ್ವ ವೈದ್ಯಕೀಯ ಸೇವೆ ಹಾಗೂ ಮೆಡಿಕಲ್ ಕ್ಯಾಂಪುಗಳು 👇
17-03-2023 ರಂದು Dr Swadhi Charitable Trust Shirsi ಅವರು ನಮ್ಮ ಗುಂಪಿನ ಅಪೇಕ್ಷೆಯ ಮೇರೆಗೆ ಕಿಡ್ನಿ ವೈಫಲ್ಯದ ರೋಗಿಗಳಿಗಾಗಿ ಗ್ರಾಮೀಣ ಪ್ರದೇಶದ ಜನರಿಗೆ ಉಪಯೋಗ ಆಗುವಂತೆ Mulleriya ದ Co-Operative Medical Centreಗೆ 2 ಡಯಾಲಿಸಿಸ್ ಯಂತ್ರಗಳನ್ನು, ಬೆಂಗಳೂರಿನ ಜನಸೇವಾ ಚಾರಿಟೇಬಲ್ ಅಸೋಸಿಯೇಶನ್ ಮುಖಾಂತರ ಕೊಟ್ಟಿರುತ್ತಾರೆ. ಈ ವ್ಯವಸ್ಥೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ಮೊತ್ತ 18 ಲಕ್ಷ ರೂಪಾಯಿಗಳು. ಇದರ ಲೋಕಾರ್ಪಣೆ ಸಂದರ್ಭ ಆಸ್ಪತ್ರೆ ಹಾಗೂ ಜನಸೇವಾ ಚಾರಿಟೇಬಲ್ ಅಸೋಸಿಯೇಶನ್ ಸಹಯೋಗದೊಂದಿಗೆ ಈ ಆಸ್ಪತ್ರೆಯಲ್ಲಿ ವಿವಿಧ ವಿಭಾಗಗಳ ಮೆಡಿಕಲ್ ಕ್ಯಾಂಪ್ ನಡೆದಿತ್ತು.
ಇದಲ್ಲದೆ ಜನ ಸೇವಾ ಸಂಸ್ಥೆ ನಲ್ವತ್ತು ಸಾವಿರ ರೂಪಾಯಿಗಳ Bipap ಮಷೀನ್, 1,65,000 ರೂಪಾಯಿಗಳ ನಾಲ್ಕು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಹಾಗೂ 27 ಸಾವಿರ ರೂಪಾಯಿಗಳ ಎರಡು Medical cot ಗಳನ್ನು ನಮ್ಮ ವೈದ್ಯಕೀಯ ಉಪಕರಣಗಳ ವಿಭಾಗಕ್ಕೆ ಕೊಟ್ಟಿರುತ್ತದೆ.
- ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿಯ ಉತ್ತೇಜನ 👇
ಗ್ರಾಮೀಣ ಪ್ರದೇಶವಾದ ಪಣಿಯೆ ಶಾಲೆಯಲ್ಲಿ ನಡೆದ ಎನ್ಎಸ್ಎಸ್ ಶಿಬಿರಕ್ಕೆ ನಮ್ಮ ಗುಂಪಿನ ಮುಖಾಂತರ ಕಳೆದ ಬೇಸಿಗೆಯಲ್ಲಿ ಕಾರ್ಯಕರ್ತರು ಅಡುಗೆ ತಯಾರಿಯಲ್ಲಿ ಸಹಕರಿಸಿ, ಸಲಕರಣೆಗಳು ಹಾಗೂ ಖರ್ಚಿಗೆ ಎಂದು 3000 ರೂಪಾಯಿಗಳ ವ್ಯವಸ್ಥೆಯನ್ನು ನಮ್ಮ ಈ ಗುಂಪಿನ ಮುಖೇನ ಮಾಡಿರುತ್ತಾರೆ.
- ಕರಾಡಛಾಯಾ( 10-01-2025)- ಹಾಗೂ ಕರಾಡವಿದ್ಯಾನಿಧಿ 👇
ಪಿತೃವಿಯೋಗದ ಕಾರಣ ಅಸಹಾಯಕವಾದ ನಮ್ಮ ಸಮಾಜದ ಸಂಸಾರಗಳಿಗೆ ಕರಾಡ ಛಾಯಾ ಎಂಬ ನಮ್ಮ ಯೋಜನೆಯಡಿ ಅವರ ಮಕ್ಕಳಿಗೆ ವಿದ್ಯಾನಿಧಿಯ ರೂಪದಲ್ಲಿ, ಈ ವರೆಗೆ ಆರು ಮಕ್ಕಳಿಗೆ 76,000 ಗಳ ಧನಸಹಾಯ ಕೊಡಮಾಡಲಾಗಿದೆ.
- ಕರಾಡರಕ್ತ ನಿಧಿ👇
27-01-2024 ರಂದು ತೊಡಗಿದ ಕರಾಡರಕ್ತ ನಿಧಿಯ ಮುಖಾಂತರ 'ಸೇವಾ ಭಾರತಿ ಜೀವನಿಧಿ ಕಾಸರಗೋಡು' ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಈವರೆಗೆ 123 ಯೂನಿಟ್ ಗಳಷ್ಟು ರಕ್ತವನ್ನು ಪೂರೈಸಲಾಗಿದೆ.
2024-2025 update👇
- 21-07-2024 ನಂತರ ಒಂದು ವರ್ಷದಲ್ಲಿ 10 ಮಂದಿಗಾಗಿ 15,54,724 ರೂಪಾಯಿಗಳ ಸಹಾಯ ನಮ್ಮ ಸಮಾಜದ ಬಂಧುಗಳಿಗೆ ಆಗಿರುತ್ತದೆ.
- ದೇಹ ದಾನ ಹಾಗೂ ಅವಯವ ದಾನ ಇವುಗಳಿಗೆ ಪ್ರೇರಣೆ : ನಮ್ಮ ಗುಂಪಿನ ಪ್ರೇರಣೆಯಿಂದಾಗಿ ಒಟ್ಟು ಐದು ಮಂದಿ ಬಂಧುಗಳು ತಮ್ಮ ಮರಣಾನಂತರ ತಮ್ಮ ಶರೀರ ಹಾಗೂ ಅವಯವಗಳನ್ನು ಅರ್ಹರಿಗೆ ಅಥವಾ ವೈದ್ಯಕೀಯ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಮೆಡಿಕಲ್ ಕಾಲೇಜುಗಳಿಗೆ ದಾನ ಮಾಡಲು ಮುಂದೆ ಬಂದಿರುತ್ತಾರೆ.
- ಅರಣ್ಯೀಕರಣ : ಅರಣ್ಯೀಕರಣ ಹಾಗೂ ಫಲ ಪುಷ್ಪ ಗಿಡಗಳ ವಿತರಣೆಯ ಅಂಗವಾಗಿ ಚೇರ್ ಕೂಡ್ಲು ಮನೆತನದವರು ಕಳೆದ ವರ್ಷ ಸುಮಾರು 80ಕ್ಕಿಂತ ಹೆಚ್ಚಿನ ಗಿಡಗಳನ್ನು ಈ ವ್ಯವಸ್ಥೆಯ ಮೂಲಕ ವಿತರಿಸಿರುತ್ತಾರೆ.
ಸಮಾಜ ಸೇವೆ
ಕರಾಡ ಸಂಘಟನೆಗಳ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಮ್ಮದೇ ಸಮಾಜದ ಹಾಗೂ ಇದರೊಂದಿಗೆ ನಮ್ಮ ಗಂಪಿನ ಸದಸ್ಯರೂ ಸೇರಿಕೊಂಡು ಸಮಾಜಕ್ಕೆ, ಮತ್ತು ಮುಂದಿನ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ,ಸಂಸ್ಕಾರಗಳು ದೇಶಭಕ್ತಿ ಮೊದಲಾದ ವಿಷಯಗಳ ಬಗ್ಗೆ ಅರಿವು ,ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕ್ಕೊಳ್ಳುತ್ತಿದ್ದೇವೆ.
ಸ್ವಯಂಸೇವೆ
ಇದಲ್ಲದೆ ಕರಾಡ ಸಮಾಜಕ್ಕೆ ಸಂಬಂಧಪಟ್ಟ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸ್ವಯಂಸೇವಾ ರೂಪದಲ್ಲಿ ಈ ಗುಂಪಿನ ಪ್ರತಿನಿಧಿಗಳು ಮತ್ತು ಸದಸ್ಯರು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಕಿರು ಸೇವೆಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ.
ನಿಸ್ವಾರ್ಥ ಸೇವೆ
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಗುಂಪಿನ ಮುಖಾಂತರ ಕರಾಡ ಸಮಾಜಕ್ಕೆ ಸಲ್ಲುವ ಸೇವಾಕಾರ್ಯಗಳು ನೂರಕ್ಕೆ ನೂರರಷ್ಟು ಪಾರದರ್ಶಕವೇ ಹೊರತು ಇದರಲ್ಲಿ ಕಿಂಚಿತ್ತೂ ಸ್ವಾರ್ಥ ಇಲ್ಲ.
ಅನೇಕತೆಯಲ್ಲಿ ಏಕತೆ
वसुधैव कुटुम्बकम् ಎಂಬ ನಾಣ್ನುಡಿಯಂತೆ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಎಲ್ಲಾ ಬಂಧುಗಳೂ ಒಂದೇ ಮನೆಯವರಂತೆ ಪರಸ್ಪರ ಸಹಕರಿಸಿ ವಿಶ್ವಾಸವನ್ನಿಟ್ಟುಕೊಂಡು ಯಾವುದೇ ಅವಿಶ್ವಸನೀಯತೆಗೆ ಎಡೆ ಕೊಡದೆ, ಕಷ್ಟದಲ್ಲಿರುವ ಸಮಾಜದ ಪ್ರತೀ ವ್ಯಕ್ತಿಗೆ ಸಹಾಯ ಮಾಡಿದ ಸಂತೃಪ್ತಿ ಗುಂಪಿನ ಪ್ರತಿಯೊಬ್ಬರಿರೂ ಸಿಗುತ್ತಿರುವ ಸನ್ಮಾನ, ಆತ್ಮತೃಪ್ತಿ ಹಾಗೂ ಪ್ರಯತ್ನಕ್ಕೆ ತಕ್ಕ ಪ್ರತಿಫಲವೇ ಸರಿ.
ಪಾರದರ್ಶಕತೆ
ಇಂತಹ ಪಾರದರ್ಶಕ ವ್ಯವಸ್ಥೆಯ ಕಾರಣದಿಂದಲೇ ನಿಕಟಪೂರ್ವದಲ್ಲಿ ಈ ಮೊದಲು ಬಂದ ಅಪೇಕ್ಷೆಗೆ ಕೇವಲ ಒಂದೇ ವಾರದಲ್ಲಿ 8.14 ಲಕ್ಷ ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತದ ಸಹಾಯ ನಮ್ಮ ಸಮಾಜದ ಸುಮಾರು 400+ ಬಂಧುಗಳ ಹಾಗೂ ನಮ್ಮ ಸಮಾಜದ ಆರು ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಲಭಿಸಿರುವುದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
‘ಕರಾಡ ಸಹಾಯಕ ಬಂಧು’ ಸಮಾಜಪರ ಕೆಲಸಗಳಲ್ಲಿ ಸ್ವತಂತ್ರವಾಗಿ ನಿರ್ಣಯ ತೆಗೆದುಕೊಳ್ಳುವ ಗುಂಪು-ಸಂಘಟನೆ.
ಇದರೊಂದಿಗೆ ಕರಾಡ ಸಮಾಜದ ಹೆಚ್ಚಿನ ಎಲ್ಲ ಸಂಘ ಸಂಸ್ಥೆಗಳೂ ಸಹಕರಿಸುತ್ತ ಸಮಾಜಮುಖಿ ಕಾರ್ಯಗಳಿಗೆ ಹುರುಪನ್ನು ನೀಡುತ್ತಿವೆ. ಈ ಮೂಲಕ ಜನರು ಸಂಘ ಸಂಸ್ಥೆಗಳೊಂದಿಗೆ ಇದ್ದಲ್ಲಿ,- ಸಂಘ ಸಂಸ್ಥೆಗಳು ಜನರಿಗಾಗಿ ಇವೆ ಎಂಬ ಸಂದೇಶವನ್ನು ಸಮಾಜಕ್ಕೆ ಕೊಟ್ಟಿವೆ.
ಕರಾಡ ಸಮಾಜದ ಬಹುತೇಕ ಎಲ್ಲ ಸಂಘ ಸಂಸ್ಥೆಗಳ ಜೊತೆಗೂಡಿ ಸಮಾಜದ ಉನ್ನತಿಗಾಗಿ, ಶ್ರೇಯಸ್ಸಿಗಾಗಿ ಮತ್ತು ಏಕತೆಗಾಗಿ ಜೊತೆಗೂಡಿ ಶ್ರಮಿಸಿ ಕರಾಡ ಸಮಾಜದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದು, ತನ್ಮೂಲಕ ಅನೇಕತೆಗಿಂತ ಏಕತೆಯಲ್ಲಿ ವಿಶ್ವಾಸವನ್ನಿಟ್ಟು ಪರಸ್ಪರ ಸಹಕಾರದಿಂದ ಮುಂದುವರಿಯುವುದುಈ ಗುಂಪಿನ ಧ್ಯೇಯ.
ಬನ್ನಿ ಬಂಧುಗಳೇ... ಒಟ್ಟಾಗಿ, ಒಗ್ಗಟ್ಟಿನಿಂದ ಮುಂದುವರಿಯೋಣ.
ಸಂತಸದ ಮತ್ತು ಸಾರ್ಥಕ್ಯದ ಕ್ಷಣಗಳು!

ಬೆನ್ನುಮೂಳೆ ಪೆಟ್ಟಾಗಿ ಮಲಗಿದ ಸ್ಥಿತಿಯಲ್ಲಿದ್ದ ಶ್ರೀಮತಿ ಭಾಗ್ಯಲಕ್ಷ್ಮೀ ಅವರಿಗೆ ಒದಗಿಬಂದ ಭಾಗ್ಯ! ಆಪರೇಷನ್ ಮೊದಲು ಮತ್ತು ಅನಂತರದ ನಿರಾಳತೆ!

ಶ್ರೀಯುತ ಗಣಪತಿ ಭಟ್ - ಉದರ ಸಂಬಂಧಿ ಚಿಕಿತ್ಸೆಯ ಮೊದಲು ಮತ್ತು ಅನಂತರ

ಸಕಾಲಕ್ಕೆ ಒದಗಿದ ಹಳೆಯ ವೈದ್ಯಕೀಯ ಉಪಕರಣದ (Wheelchair) ಮೂಲಕ ಹಿರಿಯ ಜೀವದ ಮುಖದಲ್ಲಿ ಮಂದಹಾಸ ಮತ್ತು ನಮಗೆಲ್ಲ ಧನ್ಯತಾಭಾವ
(ರೋಗಿಯ ಗುರುತನ್ನು ಉದ್ದೇಶಪೂರ್ವಕ ಮರೆಮಾಚಲಾಗಿದೆ).
ಸಮಾಜ ಬಾಂಧವರಲ್ಲಿ ಈ ಸಂದರ್ಭದಲ್ಲಿ ಒಂದೇ ಒಂದು ವಿನಂತಿ.
‘ಕರಾಡ ಸಹಾಯಕ ಬಂಧು’ ಗುಂಪಿನ ಮುಖಾಂತರ ಅಪೇಕ್ಷಿಸುವ ಪ್ರತಿ ಸಹಾಯದ ಸಂದರ್ಭದಲ್ಲೂ ಗುಂಪಿನ ಲಿಂಕ್ ನ್ನು ಸಮಾಜಕ್ಕೆ ಸಂಬಂಧಪಟ್ಟ ವಾಟ್ಸಪ್ ಗುಂಪುಗಳಲ್ಲಿ ಪರಿಚಯಿಸಲಾಗುತ್ತಿದೆ. ಈ ಲಿಂಕ್ ಮುಖಾಂತರ ತಾವೆಲ್ಲರೂ ಸ್ವಯಂ ಗುಂಪಿಗೆ ಸೇರಿಕೊಂಡು ಹಾಗೂ ಈ ಗ್ರೂಪ್ ಲಿಂಕನ್ನು ಕರಾಡ ಸಮಾಜದ ತಮ್ಮ ಇಷ್ಟ ಮಿತ್ರರಿಗೆ ಪರಿಚಯಿಸಿ ಅವರೂ ನಿಮ್ಮಂತೆ ನಮ್ಮ ಕರಾಡ ಸಮಾಜದ ಈ ಸ್ವಯಂಸೇವಾ ಕಾರ್ಯದಲ್ಲಿ ಒಗ್ಗೂಡಿ ಸಹಕರಿಸಬೇಕೆಂದು ಈ ಮೂಲಕ ಕಳಕಳಿಯಿಂದ ಪ್ರತಿಯೊಬ್ಬ ಕರಾಡ ಬಾಂಧವರಲ್ಲಿಯೂ ಕೇಳಿಕೊಳ್ಳುತ್ತಿದ್ದೇವೆ.
- ಕರಾಡ ಸಹಾಯಕ ಬಂಧು 👇
https://chat.whatsapp.com/DYOcl2nqzcZ7VmMvlwD5XN
- ಕರಾಡರಕ್ತ ನಿಧಿ 👇
ಅವಶ್ಯವಿರುವ ಸಂದರ್ಭದಲ್ಲಿ ಅರ್ಹ ಬಂಧುಗಳು ಅಪೇಕ್ಷೆಯ ಮೇರೆಗೆ ರಕ್ತದಾನ ಮಾಡಿ ಸಹಕರಿಸುವ ನಮ್ಮ ಸಮಾಜದ ಒಂದು ಒಕ್ಕೂಟ ವ್ಯವಸ್ಥೆ. ಇದಕ್ಕೆ ಅರ್ಹ ಬಂಧುಗಳು ಸೇರಿ ಸಹಕರಿಸಬೇಕೆಂದು ಕೇಳಿಕೊಳ್ಳುತ್ತಿದ್ದೇವೆ 🙏. 👇
https://docs.google.com/forms/d/e/1FAIpQLScvNxHFU9B15GRd33jwgPIizIFQpF4TRU4gT7O4npar2Y97Ww/viewform

ನಮ್ಮ ಅಭಿಲಾಷೆ, ಅಪೇಕ್ಷೆ, ಆಶಯ, ಹಾರೈಕೆಗಳು ಇಷ್ಟೇ.
सर्वे भवंतु सुखिनः सर्वे संतु निरामयाः। Miles to go before we sleep.
ಇಂತಿ,
ಕರಾಡ ಸಹಾಯಕ ಬಂಧು
21-07-2025
ಉದ್ದೇಶಕ್ಕನುಗುಣವಾಗಿ ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆಗಳು:
§ ಗಣೇಶ್ ಚೇರ್ಕೂಡ್ಲು – 9495180395
§ ಡಾ. ಕಾರ್ತಿಕ್ ಕೋಳಿಕ್ಕಜೆ – 9495374613
§ ಪ್ರಸಾದ್ ಪಾರ್ಥಕೊಚ್ಚಿ – 9747872339
§ ಪ್ರಸಾದ್ ಕೂಟೇಲು – 9741013388

