
Article · November 18, 2026
ಸಿಕ್ಕಿದ್ದನ್ನು ಕಾಪಾಡುವುದು ಸುಲಭವಲ್ಲ!
ರವೀ ಸಜಂಗದ್ದೆ
ಕನಸುಗಳನ್ನು ಕಾಣುವುದು ಮನುಷ್ಯನಿಗಿರುವ ವಿಶಿಷ್ಟ ಗುಣಗಳಲ್ಲೊಂದು. ಚಿಕ್ಕ ಮಕ್ಕಳಿಂದ ತೊಡಗಿ ಇಳಿವಯಸ್ಸಿನ ಹಿರಿಯರವರೆಗೆ ಪ್ರತಿಯೊಬ್ಬರ ಎದೆಯಲ್ಲೂ ಒಂದಿಲ್ಲೊಂದು ಹಂಬಲವಿರುತ್ತದೆ, ಕನಸಿರುತ್ತದೆ. ಹಗಲು-ರಾತ್ರಿ ಎನ್ನದೆ ಬೆವರು ಸುರಿಸಿ, ಕಣ್ಣೀರು ಹಾಕಿ, ದೇವರ ಮುಂದೆ ಕೈಮುಗಿದು ನಾವು ಕೇಳಿದ್ದೆಲ್ಲವೂ ಸತತ ಪ್ರಯತ್ನದಿಂದ ಒಂದಲ್ಲ ಒಂದು ದಿನ ನಮ್ಮ ಪಾಲಿಗೆ ಒದಗಿ ಬರುತ್ತದೆ ಎಂದಿಟ್ಟುಕೊಳ್ಳಿ. ಬದುಕು ನಿಜಕ್ಕೂ ಶುರುವಾಗುವುದೇ ಅಲ್ಲಿಂದ! ಏಕೆಂದರೆ, ''ಬಯಸಿದ್ದು ಕೈಸೇರಲು 'ಯೋಗ' ಬೇಕು; ಕೈಸೇರಿದ್ದನ್ನು ಕೊನೆವರೆಗೂ ಕಾಪಾಡಿಕೊಳ್ಳಲು 'ಯೋಗ್ಯತೆ' ಬೇಕು".
ಹೌದಲ್ಲವೇ!? ಯೋಗ ಎನ್ನುವುದು ನಮ್ಮ ಪಾಲಿನ ಅದೃಷ್ಟವೋ, ಮಾಡಿದ ಪುಣ್ಯದ ಫಲ ಅಥವಾ ಕಠಿಣ ಪರಿಶ್ರಮದ ಫಲ... ಹೀಗೆ ಏನೂ ಆಗಿರಬಹುದು. ಅಂದುಕೊಂಡದ್ದು ನಮ್ಮನ್ನು ಹುಡುಕಿಕೊಂಡು ಬಂದು ಕೈತುಂಬಾ ಹಣ, ದೊಡ್ಡ ಅಂತಸ್ತು, ಪ್ರೀತಿಸುವ ಸಂಗಾತಿ ಅಥವಾ ಜನಮನ್ನಣೆಯ ಶಿಖರವನ್ನು ನೀಡಬಹುದು. ಈ ಎಲ್ಲಾ ಸುಖಗಳು ಒಲಿದು ಬಂದಾಗ ಮನುಷ್ಯನ ಕಾಲುಗಳು ನೆಲದ ಮೇಲೆ ನಿಲ್ಲುವುದಿಲ್ಲವಲ್ಲ! ತಾನು ಕಟ್ಟಿಕೊಂಡ ಸಣ್ಣ ಪ್ರಪಂಚದಲ್ಲೇ ತಾನೊಬ್ಬ ಚಕ್ರವರ್ತಿ, ತಾನು ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟೆ ಎಂಬಿತ್ಯಾದಿ ಭ್ರಮೆ ಆತನನ್ನು ಆವರಿಸುತ್ತದೆ. ನಿಜ ಹೇಳಬೇಕೆಂದರೆ, ಈ ರೀತಿಯ ಜಂಭದ ನಡವಳಿಕೆ ತೋರಿದಾಕ್ಷಣ ಅಂಥಾ ಮನುಷ್ಯನ ಪತನದ ಮೊದಲ ಹೆಜ್ಜೆ ತನ್ನದೇ ಅಹಂಕಾರದ ನೆರಳಿನಲ್ಲಿ ಶುರುವಾಗುತ್ತದೆ.
ಇತಿಹಾಸ ಮತ್ತು ಪುರಾಣಗಳ ಪುಟಗಳನ್ನು ತಿರುವಿ ಹಾಕಿದರೆ ಈ ಸತ್ಯ ಎದ್ದು ಕಾಣುತ್ತದೆ. ರಾವಣನ ಬಳಿ ಬಂಗಾರದಂತಹಾ ಲಂಕೆಯಿತ್ತು, ಅಪಾರ ಪಾಂಡಿತ್ಯವಿತ್ತು. ಆದರೆ ಪರಸ್ತ್ರೀಯನ್ನು ಬಯಸಿದ ಕ್ಷಣದಲ್ಲೇ ಅವನು ತನ್ನ ಯೋಗ್ಯತೆಯನ್ನು ಕಳೆದುಕೊಂಡ. ಪರಿಣಾಮ, ಇಡೀ ಲಂಕೆಯೇ ಸುಟ್ಟು ಬೂದಿಯಾಯಿತು. ಕೌರವರ ಬಳಿ ಹಸ್ತಿನಾಪುರದಂತಹ ಬೃಹತ್ ಸಾಮ್ರಾಜ್ಯವಿತ್ತು, ಅಜೇಯ ಸೈನ್ಯವಿತ್ತು. ಆದರೆ ದುರಹಂಕಾರ ಮತ್ತು ಮತ್ಸರದ ಮುಂದೆ ಅವರ ವಿವೇಕ ಕುರುಡಾಯಿತು. ಅವರಿಗೆ ಸಾಮ್ರಾಜ್ಯ ಪಡೆಯುವ ಯೋಗವಿತ್ತು, ಆದರೆ ಅದನ್ನು ಆಳುವ ಯೋಗ್ಯತೆಯೇ ಇರಲಿಲ್ಲ.
ಇಂದಿಗೂ ಇದು ಬದಲಾಗಿಲ್ಲ! ಬಲು ಬೇಗ ಮತ್ತು ಸುಲಭವಾಗಿ ಶ್ರೀಮಂತರಾದವರು, ಅಧಿಕಾರದ ಗದ್ದುಗೆ ಏರಿದವರು, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಸಂಬಂಧಗಳನ್ನು ಪಡೆದವರು, ಪ್ರಾಣ ಕೊಡುವ ಸ್ನೇಹ ಪಡೆದವರು... ಹೀಗೆ ಹಲವರು ತಮಗೆ ಬೇಕಾದುದು ಸಿಕ್ಕಿದ ನಂತರದ ಜಂಭ, ಹುಂಬುತನ, ಮೈಮರೆವಿನಿಂದಾಗಿ ಎಲ್ಲವನ್ನೂ ನೋಡನೋಡುತ್ತಿದ್ದಂತೆಯೇ ಕಳೆದುಕೊಳ್ಳುತ್ತಾರೆ! ರಿಲಾಯನ್ಸ್ ಸಾಮ್ರಾಜ್ಯದ ಕಿರಿಯ ಸಹೋದರ ಅನಿಲ್ ಅಂಬಾನಿ ಇದಕ್ಕೆ ತಾಜಾ ಉದಾಹರಣೆ. 'ಯಾರೋ ಬಂದು, ಒಂದು ಸುಂದರವಾದ ಹಣತೆಯನ್ನು ನಮ್ಮ ಪರಿಸರದಲ್ಲಿ ಹಚ್ಚಿ ಬೆಳಕು ತೋರುತ್ತಾರೆ; ಬೀಸುವ ಬಿರುಗಾಳಿಗೆ ಅದು ಆರಿಹೋಗದಂತೆ ಎರಡೂ ಕೈಗಳನ್ನು ಅಡ್ಡ ಹಿಡಿದು ಆರದಂತೆ ಕಾಪಾಡಿಕೊಳ್ಳುವ ಎಚ್ಚರಿಕೆಯೂ ನಮಗಿರಬೇಕು ಮತ್ತು ಕಾಲಕಾಲಕ್ಕೆ ಅದಕ್ಕೆ ಬೇಕಾದ ಎಣ್ಣೆ ಹಾಕುವ ಜವಾಬ್ದಾರಿಯೂ ನಮ್ಮದಾಗಿರಬೇಕು. ಆ ಎಚ್ಚರಿಕೆಯೇ ಯೋಗ್ಯತೆ!
'ಸಿಕ್ಕಿದ್ದನ್ನು ಉಳಿಸಿಕೊಳ್ಳುವುದು' ಸುಲಭದ ಮಾತಲ್ಲ! ಅದಕ್ಕೆ ಗಾಳಿ-ಮಳೆ-ಬಿಸಿಲಿಗೆ ಮೈಯೊಡ್ಡಿ ನಿಲ್ಲುವ ಬಂಡೆಯಂತಹ ತಾಳ್ಮೆ ಬೇಕು, ಗೆದ್ದಾಗಲೂ ತಲೆಬಾಗಿ ನಡೆಯುವ ವಿನಮ್ರತೆ ಬೇಕು. ಸಂಪತ್ತು, ಸ್ಥಾನಮಾನ, ಅಧಿಕಾರ, ಐಶ್ವರ್ಯ ತಲೆಗೇರದಂತೆ ನೋಡಿಕೊಳ್ಳುವ ಸಂಯಮ, ಮತ್ತು ನಮ್ಮವರನ್ನು ಜೊತೆಯಲ್ಲೇ ಕರೆದೊಯ್ಯುವ ನಿಸ್ವಾರ್ಥ ಪ್ರೀತಿ ಬೇಕು.' 'ನಾನಂದುಕೊಂಡಂತೆ ನನಗೆ ಎಲ್ಲವೂ ಸಿಕ್ಕಿದೆ, ಇನ್ನು ನನ್ನನ್ನು ಯಾರೂ ಅಲುಗಾಡಿಸಲಾರರು' ಎನ್ನುವ ಅಹಂಕಾರ ತಲೆಗೇರಿದ ಕ್ಷಣದಿಂದಲೇ ನಮ್ಮ ಕೈಯಲ್ಲಿರುವುದೆಲ್ಲವೂ ಮರಳಿನಂತೆ ಜಾರಲು, ಉದುರಲು, ಖಾಲಿಯಾಗಲು ಶುರುವಾಗುತ್ತದೆ. ಅದುವೇ 'ಅಂತ್ಯದ ಆರಂಭ'!
'ಬಯಸಿದ್ದು ಸಿಕ್ಕಾಗ ಮೂಡುವ ನಗು, ಸಂತಸ, ಸಮಾಧಾನ ಕೇವಲ ಕ್ಷಣಿಕ; ಆದರೆ ಸಿಕ್ಕಿದ್ದನ್ನು ಕಳೆದುಕೊಳ್ಳದೆ, ಕೊನೆವರೆಗೂ ಜೋಪಾನ ಮಾಡಿಕೊಂಡು, ಜತನದಿಂದ ಕಾಪಾಡಿಕೊಂಡು ಹೋಗುವಾಗ ಸಿಗುವ ನೆಮ್ಮದಿ, ಸಾತತ್ಯ ಶಾಶ್ವತ'. ಅದೃಷ್ಟ ನಮ್ಮನ್ನು ಎತ್ತರದ ಶಿಖರಕ್ಕೆ ಕೊಂಡೊಯ್ದು ನಿಲ್ಲಿಸಬಹುದು, ಆದರೆ ಆ ಶಿಖರದ ಮೇಲೆ ನಾವು ಎಷ್ಟು ಕಾಲ ನಿಲ್ಲುತ್ತೇವೆ ಎನ್ನುವುದು ನಮ್ಮ ಯೋಗ್ಯತೆ, ವ್ಯಕ್ತಿತ್ವ ಮತ್ತು ಎಚ್ಚರಿಕೆಯ ಹೆಜ್ಜೆಗಳಿಂದ ಮಾತ್ರ ನಿರ್ಧಾರವಾಗುತ್ತದೆ ಎನ್ನುವ ನೆನಪು ಮತ್ತು ಅರಿವು ನಮ್ಮಲ್ಲಿರಲಿ.
ಬದುಕಿನಲ್ಲಿ ಅಮೂಲ್ಯವಾಗಿ ಸಿಕ್ಕಿರುವ-ದಕ್ಕಿರುವ ಎಲ್ಲವನ್ನೂ ಪ್ರೀತ್ಯಾದರದಿಂದ ಕಾಪಿಡುವ-ಕಾಪಾಡುವ ನಿರಂತರ ಪ್ರಯತ್ನ ನಮ್ಮದಾಗಿರಲಿ. ಶುಭಮಸ್ತು.
