Karada Vishwa

News · June 3, 2026

ದೂರದರ್ಶನ 'ಬಿ' ಗ್ರೇಡ್ ಕಲಾವಿದೆಯಾಗಿ ಪೃಥ್ವಿಶ್ರೀ ಆಯ್ಕೆ

ಕರಾಡ ವಿಶ್ವದ ಅಭಿನಂದನೆಗಳು..💐

ಬೆಂಗಳೂರು ದೂರದರ್ಶನ ಕೇಂದ್ರ 2025 ನವೆಂಬರ್‌ನಲ್ಲಿ ನಡೆಸಿದ ಭರತನಾಟ್ಯ ವಿಭಾಗದ ಆಡಿಷನ್‌ಗೆ ಹಾಜರಾದ ಪೃಥ್ವಿಶ್ರೀ ಅವರು 'ಬಿ' ಗ್ರೇಡ್ ಪಡೆದುಕೊಂಡಿದ್ದಾರೆ. ನೃತ್ಯೋಪಾಸನಾ ಕಲಾ ಅಕಾಡೆಮಿಯ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ಅವರಲ್ಲಿ ಕಳೆದ 14 ವರ್ಷಗಳಿಂದ ನೃತ್ಯಾಭ್ಯಾಸ ಮಾಡುತ್ತಿದ್ದಾರೆ. ಅವರು ಈ ವರ್ಷ ವಿದ್ವತ್ ಅಂತಿಮ ಪರೀಕ್ಷೆ ಬರೆದಿದ್ದಾರೆ.

ಕಾಸರಗೋಡು ಪೈಕ ನಿವಾಸಿ ಕುಂದಕಟ್ಟೆ ಬಾಲಸುಬ್ರಹ್ಮಣ್ಯ ಭಟ್ ಮತ್ತು ಶ್ರೀದೇವಿ ದಂಪತಿ ಪುತ್ರಿಯಾಗಿರುವ ಪೃಥ್ವಿಶ್ರೀ ಅವರು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಕಲಿಯುತ್ತಿದ್ದಾರೆ.
 ನೃತ್ಯೋಪಾಸನಾ ಕಲಾ ಅಕಾಡೆಮಿಯ ತಂಡದಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಲಕ್ಷ ದೀಪೋತ್ಸವ, ಹಂಪಿ ಉತ್ಸವ, ಬನವಾಸಿ ಕದಂಬೋತ್ಸವ, ಮೈಸೂರು ದಸರಾ, ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ, ಮಂತ್ರಾಲಯ ಮಹೋತ್ಸವ ಮತ್ತಿತರ ಕಡೆಗಳಲ್ಲಿ ನೃತ್ಯ ಕಾರ್ಯಕ್ರಮ ನೀಡಿದ್ದಾರೆ.

ಈ ಕಲಾವಿದೆಗೆ ಕರಾಡ ವಿಶ್ವದ ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು.

AchieversArt