Karada Vishwa

Article · November 1, 2026

100 ರ ಸಂಭ್ರಮದ ಹಿಂದಿರುವ ಹೃದಯಗಳನ್ನು ನೆನೆಯುತ್ತ....

By ಜಯಶ್ರೀ ಕೆ.ಆರ್ ಭಟ್, ಪಳ್ಳತಡ್ಕ .

ಜಯಶ್ರೀ ಐಲುಕುಂಜೆ

100 ರ ಸಂಭ್ರಮಕ್ಕೆ ಏನು ಬರೆಯುವಿರಿ? ಎಂದು ಕೇಳಿದಾಗ ಏನು ಹೇಳಲಿ ಎಂದು ಯೋಚಿಸಿದೆ. ಏನು ಹೇಳಿದರೂ ಕಡಿಮೆಯೇ.

ಮೊದಲಿಗೆ,
ನಾನು ಬರೆದ ಕವನಗಳು, ಲೇಖನಗಳು ಇವುಗಳನ್ನ
'ಕರಾಡ ವಿಶ್ವ 'ದಲ್ಲಿ ಪ್ರಕಟಿಸಿ ಬಹಳಷ್ಟು ಜನ ಓದುವಂತೆ ಮಾಡಿದ ಕರಾಡ ವಿಶ್ವ ತಂಡದಲ್ಲಿರುವ ಎಲ್ಲ ಸಹೃದಯರಿಗೂ ಹೃತ್ಪೂರ್ವಕ ವಂದನೆಗಳು.

ನಾನೇನೇ ಬರೆದರೂ ಎಲ್ಲರಿಗೂ ಗೊತ್ತಿರುವ ವಿಚಾರಗಳೇ ಇವೆ ಅದರಲ್ಲಿ. ಬರೆದ ಶೈಲಿ ಸ್ವಲ್ಪ ಬೇರೆಯಾಗಿರಬಹುದು ಅಷ್ಟೇ. ಪರಿಸರದಲ್ಲಿರುವ ಯಾವುದೇ, ಏನೇ ಇದ್ದರೂ ಅದಕ್ಕೊಂದು ಕವನ ಬರೆಯಬಹುದು ಸರಳ ಶಬ್ದಗಳಲ್ಲಿ ಎಂದು ನನಗನಿಸುವುದು. ನನಗೆ ಕವನಗಳನ್ನು ಬರೆವ ಹವ್ಯಾಸವಿದ್ದರೂ ಬರೆದು ಯಾರಿಗೂ ತಿಳಿಯದೆ ಸುಟ್ಟುಬಿಡುತ್ತಿದ್ದೆ ಮೊದಮೊದಲು. ಅನಂತರ ಬರೆದುದನ್ನು ಉಳಿಸಲು ಪ್ರಾರಂಭಿಸಿದೆ. ಬೇಜಾರಾದಾಗ ಕವನಗಳನ್ನು ತೆಗೆದು ಓದುತ್ತಿದ್ದೆ. ಕಡೆಗೊಮ್ಮೆ ಗೆಳೆಯರ ಬಳಗ ಪ್ರಾರಂಭವಾಗಿ ನನ್ನನ್ನು ಸೇರಿಸಿಕೊಂಡರು ಬಳಗಕ್ಕೆ.
ಅದರಲ್ಲಿ ನನ್ನ ಕವನಗಳನ್ನು ಕಳುಹಿಸಲು ಪ್ರಾರಂಭಿಸಿದೆ.
ಅಂದಿನಿಂದ ಗೆಳೆಯ ಗೆಳತಿಯರ ಪ್ರೋತ್ಸಾಹವೂ ಸಿಕ್ಕಿತು.
ಮಹಿಳಾ ಕರಾಡಕ್ಕೆ ಕಳಿಸಿದೆ.ತುಂಬಾ ಜನ ಮೆಚ್ಚಿ ಪ್ರೊತ್ಸಾಹಿಸಿದರು. ಎಲ್ಲರಿಗೂ ಮನದಾಳದ ವಂದನೆಗಳು, ಧನ್ಯವಾದಗಳು. ನನಗೆ ಪ್ರೋತ್ಸಾಹಕೊಟ್ಟ ಹೃದಯಗಳ ಬಗ್ಗೆ ಬರೆಯಲು ಶಬ್ದಗಳು ಇಲ್ಲ. ಬರಿದೇ ಶಬ್ದಗಳಲ್ಲಿ ಹೇಳಲು ಸಾಧ್ಯವಿಲ್ಲ.... ಹಾಗಾಗಿ ಎಲ್ಲರಿಗೂ ಮತ್ತೊಮ್ಮೆ ವಂದನೆಗಳು. ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ ಎಂದು ಕೇಳಿಕ್ಕೊಳ್ಳುವೆನು.

ಕವನ ಬರೆಯುವ ಕೆಲಸ ನನಗೆ ಬಲು ಇಷ್ಟ,
ಮರೆತು ಹೋದರೆ ಮತ್ತೆ ಬರೆಯುವುದು ಕಷ್ಟ,/

ಮನಸಿನಲಿ ಮೂಡಿದ ಕ್ಷಣದಲೇ ಬರೆದು
ಬರೆದಾದ ಮೇಲೆ ತಲೆ ಬರಿದೋ ಬರಿದು/

ಬರೆದದ್ದು ಸರಿ ಇಲ್ಲ ಎನಿಸಿದರೆ ಹರಿದು,
ಮತ್ತೆ ತಲೆ ಕೆರೆಯುತ್ತ ಹೊಸತನ್ನು ಬರೆದು /

ಸರಿಯಾಯ್ತು ಎನಿಸಿದರೆ ಸಂತಸವೆ ಸುರಿದು,
ಕೊನೆಗೂ ಮುಗಿಸುವುದು ಕವನವನು ಬರೆದು /


Creative Writings