Karada Vishwa

Article · August 20, 2026

ಅಸ್ತಮಾನ

ವೀಣಾ ಎಂ ಭಟ್

ಹೊಂಗಿರಣ ಸೂಸುವನು ರವಿ ಅಸ್ತಮಾನದ ಕಡೆಗೆ

ಆಕಾಶದಲಿ ಹೊಳೆವ ಗಗನ ಕುಸುಮವು ಇಳೆಗೆ

ದಾರಿದೀಪವ ಉರಿಸಿ ಸೋಮ ಸುಂದರನಿಗೆ

ಸುರಿಸಿ ಮುತ್ತಿನ ಹನಿಯ ಮಸುಕು ಹಸಿರೆಲೆಗೆ

ತಂಗಾಳಿಗೆ ಮೈಯೊಡ್ಡಿ ತಲೆ ತಗ್ಗಿಸುವ ಹೂವುಗಳು

ಮೃದುವಾದ ತಂಬೆಲರಿಗೆ ತಲೆ ಎತ್ತಿ ಮೊಗ್ಗುಗಳು

ಕಾವ್ಯದ ಮೆರಗಲ್ಲಿ ಸುವಾಸನೆ ಮಲ್ಲಿಗೆ ಅರಳು

ಶೃಂಗಾರ ಲೋಲ ನವಿಲ ಸವಿಗಾನದ ಕರೆಗಳು

ಹಕ್ಕಿ ಮಕ್ಕಳ ಸೇರೊ ತವಕದ ಹೆಜ್ಜೆಯ ನೆರಳು

ನವರಸ ಮಾಧುರ್ಯದ ಪಕ್ಷಿ ಸಂಕುಲಗಳು

ಭುವಿಯ ಆಲಂಗಿಸಿದ ಹೊಂಬಣ್ಣದ ಮರಳು

ಮುಸ್ಸಂಜೆಯ ಗುಂಗಿನಲಿ ಸುಂದರ ಸಸ್ಯಗಳು

ಮುಸ್ಸಂಜೆ ಘಳಿಗೆ ದಿನದ ಕೊನೆಯ ಗತಿಯು

ಸೂರ್ಯಾಸ್ತಮಾನ ಚಂದ್ರನಂತೆ ಶಾಂತ ಮತಿಯು

ಜಗದ ಕಲರವವೀಗ ಮಧುರ ಮಿಲನದ ರಾಗ

ಸಾಗರದ ಅಲೆಗಳ ಹೊಂಬಣ್ಣ ತೆರೆಗಳ ವೇಗ

ಬಾಳ ಬಾಗಿಲಲ್ಲಿ ಹಸಿರ ಕನಸುಗಳ ಗಂಗೋತ್ರಿ

ನಾಳೆಗಳ ಮಡಿಲಲ್ಲಿ ಮನಸುಗಳು ಖಾತ್ರಿ

ನೆನಪುಗಳ ಸುಳಿಯಲ್ಲಿ ಅನುರಾಗದ ಹೊನಲು

ಮರಳಿನೊಂದಿಗೆ ಬೆರೆವ ಲಹರಿಯ ಈ ಬಾಳು

Creative Writings