
News · October 15, 2025
ಅನುಪಮ ಕೆ. ಎನ್. ಅವರ ಮಕ್ಕಳ ಕಥಾಪುಸ್ತಕ ಬಿಡುಗಡೆ....
“Sky is Yours, Little Feather!” ಎಂಬ ಶೀರ್ಷಿಕೆಯ ಈ ಪುಸ್ತಕವು ಎಲ್ಲಾ ವಯೋಮಾನದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಆಂಗ್ಲಭಾಷೆಯಲ್ಲಿ ಮನೋಜ್ಞವಾಗಿ ಬರೆಯಲ್ಪಟ್ಟಿದೆ. ಬಣ್ಣದ ಚಿತ್ರಗಳು, ಸರಳವಾದ ಹಾಗೂ ಆಕರ್ಷಕ ಭಾಷೆ, ಮಕ್ಕಳನ್ನು ಸ್ವಯಂ ಓದುವುದಕ್ಕೆ ಉತ್ತೇಜಿಸುವ ಶೈಲಿ - ಇವೆಲ್ಲವೂ ಪುಸ್ತಕದ ವೈಶಿಷ್ಟ್ಯಗಳು.
ಶ್ರೀಮತಿ ಅನುಪಮ ಕೆ. ಎನ್. ಅವರು ತಮ್ಮ ಮೊದಲ ಮಕ್ಕಳ ಕಥಾಪುಸ್ತಕವಾದ “Sky is Yours, Little Feather!” ಎಂಬ ಪುಸ್ತಕವನ್ನು ಪ್ರಕಟಿಸಿರುವ ವಿಚಾರವನ್ನು ಅಭಿಮಾನಪೂರ್ವಕವಾಗಿ ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಮೂಲತಃ ಕೊಡಿಯಡ್ಕ ಕುಟುಂಬದಲ್ಲಿ ಜನಿಸಿದ ಅನುಪಮಾ ಅವರು ಕಿಶೋರ್ ಶಿರಂತಡ್ಕ ಇವರೊಡನೆ ವಿವಾಹವಾಗಿ, ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
“Sky is Yours, Little Feather!” ಎಂಬ ಶೀರ್ಷಿಕೆಯ ಈ ಪುಸ್ತಕವು ಎಲ್ಲಾ ವಯೋಮಾನದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಆಂಗ್ಲಭಾಷೆಯಲ್ಲಿ ಮನೋಜ್ಞವಾಗಿ ಬರೆಯಲ್ಪಟ್ಟಿದೆ. ಬಣ್ಣದ ಚಿತ್ರಗಳು, ಸರಳವಾದ ಹಾಗೂ ಆಕರ್ಷಕ ಭಾಷೆ, ಮಕ್ಕಳನ್ನು ಸ್ವಯಂ ಓದುವುದಕ್ಕೆ ಉತ್ತೇಜಿಸುವ ಶೈಲಿ - ಇವೆಲ್ಲವೂ ಪುಸ್ತಕದ ವೈಶಿಷ್ಟ್ಯಗಳು. ಅನುಪಮಾ ಅವರಿಗೆ ಕರಾಡ ವಿಶ್ವದ ಅಭಿನಂದನೆಗಳು.
---------
ಪುಸ್ತಕದ ಹಿನ್ನೆಲೆಯ ಬಗ್ಗೆ ಲೇಖಕಿಯ ಮಾತು :
ಅಮ್ಮನ ಕಾಸಿನ ಡಬ್ಬಿ ಮತ್ತು ಅಜ್ಜಿಯ ಕಥೆಗಳ ಡಬ್ಬಿ ಯಾವತ್ತು ತುಂಬಿಯೇ ಇರುತ್ತದೆ. ಅದು ಖಾಲಿಯಾಗುವ ಪ್ರಮೇಯವೆ ಇಲ್ಲ. ಅಂದಿನ ನನ್ನ ಬಾಲ್ಯವೇ ಹಾಗೆ... 90 ರ ದಶಕ.. ಎಷ್ಟು ಕಥೆ ಕೇಳಿದರೂ ಇನ್ನೊಂದು, ಮತ್ತೊಂದು ತಿಳಿದುಕೊಳ್ಳುವ ಆಸೆ. ಅಲ್ಲದೆ ಮಕ್ಕಳ ಬಾಲ್ಯ ಸಂಗಾತಿ.. ಅಂದಿನ ಬಾಲಮಿತ್ರ ,ತುಂತುರು..ಪುಸ್ತಕಗಳು. ಅದು ಬರುವ ದಿನ ಸಂಜೆ ಅಪ್ಪನ ಬರವನ್ನೇ ಕಾಯುತ್ತಿದ್ದ ನಾವು.. ಒಂದೇ ದಿನದಲ್ಲಿ ಅದು ಓದಿ ಮುಗಿದಾಯ್ತು. ನನ್ನ ಬಾಲ್ಯದ ಸುಂದರ ನೆನಪುಗಳಲ್ಲಿ ಪ್ರತಿ ವರ್ಷವೂ ನನ್ನ ಹುಟ್ಟಿದ ಹಬ್ಬಕ್ಕೆ ಅಮ್ಮ ತಂದುಕೊಡುತ್ತಿದ್ದದ್ದು ಕಥೆ ಪುಸ್ತಕಗಳು. ಅದರಲ್ಲೂ ಡಾl ಅನುಪಮಾ ನಿರಂಜನ ಅವರು ಬರೆದ ದಿನಕ್ಕೊಂದು ಕಥೆ ಪುಸ್ತಕಗಳು ಇಂದಿಗೂ ನನ್ನ ಪುಸ್ತಕದ ಭಂಡಾರದಲ್ಲಿ ಆಗೊಮ್ಮೆ ಈಗೊಮ್ಮೆ ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ. ಈಗಿನ ಮಕ್ಕಳು ಕೂಡ ನಾನು ತಿಳಿದ ಮಟ್ಟಿಗೆ ಚಾಕಲೇಟಿಗಿಂತ ಹೆಚ್ಚಾಗಿ ಕಥೆಗಳನ್ನೇ ಇಷ್ಟಪಡುವವರು. ನನ್ನ ಮಗಳು ಶಾಮಿ (ನಿಜ ಹೆಸರು.. ರಿಧಿ)ಕೂಡ ಕಥೆ ಕೇಳುವ ಹವ್ಯಾಸದ ಜೊತೆಗೆ ಬೆಳೆದ ಮಗು. ಅಮ್ಮ, ಅಜ್ಜಿ, ಮುತ್ತಜ್ಜಿಯರ ಬಾಯಿಯಲ್ಲಿ ಕಥೆ ಕೇಳುವುದೆಂದರೆ ಶಾಮಿಗೆ ಎಲ್ಲಿಲ್ಲದ ಉತ್ಸಾಹ.. ದಿನಕ್ಕೊಂದು ಕಥೆ ಹುಡುಕಿ ಹೇಳಲೇಬೇಕು.. ಒಂದಾದ ಮೇಲೆ ಒಂದರಂತೆ ಅದೆಷ್ಟು ಕಥೆ ಕೇಳಿದರು ತೀರದ ದಾಹ. ಕರಾಡ, ತುಳು, ಕನ್ನಡ, ಇಂಗ್ಲಿಷ್.. ಯಾವುದೇ ಭಾಷೆಯಾದರೂ..ಆದೀತು. ಕಥೆ ಆದರೆ ಆಯ್ತು. ಅಂದು ನನ್ನ ಅಮ್ಮನ ಆಶಯದಂತೆ ಕಥೆ ಓದಲು ಕಲಿತೆ. ಇಂದು ನನ್ನ ಮಗಳ ಈ ಆಸೆಯಂತೆ, ನಾನು ಪ್ರಯತ್ನಪಟ್ಟರೆ ಕಥೆ ಬರೆಯಬಹುದೇನೋ ಎಂದು ಆಂಗ್ಲ ಭಾಷೆಯಲ್ಲಿ ಬರೆದ ಕಥೆಗಳು ...The Sky is Yours, Little Feather! ಪುಟ್ಟ ಪುಸ್ತಕ ರೂಪವಾಗಿ ಹೊರಬಂದಿರುತ್ತದೆ. ನಮಗೆ ಅಂದಿನ ಬಾಲ್ಯ ಒಂದು ಥರ ಸಂತೋಷದಾಯಕವಾಗಿದ್ದರೇ, ನಮ್ಮ ಮಕ್ಕಳಿಗೆ ಇಂದಿನ ಬಾಲ್ಯ ಸ್ವಲ್ಪ ವಿಭಿನ್ನವಾಗಿ ಸಂತೋಷದಾಯಕವಾಗಿದೆ. ನನ್ನ ಪ್ರಕಾರ ಬಾಲ್ಯ ಅಂದರೆ ಮಕ್ಕಳ ಆಟ ಪಾಠ ಊಟದ ಜೊತೆ ಹಿರಿಯರಿಗೊಂದು work.. 'ಪ್ಲೀಸ್ ಒಂದು ಕಥೆ ಹೇಳು!'. ನನ್ನ ಈ ಕಥಾಹಂದರದ ಮೊದಲ ಕೇಳುಗಳಾಗಿ ನನ್ನ ಮಗಳು ಶಾಮಿ ಅದೆಷ್ಟು ಸಂತೋಷ ಪಟ್ಟಳು! ಮುಂದಕ್ಕೆ ಓದಿದವರೆಲ್ಲ ಪ್ರೋತ್ಸಾಹದಾಯಕವಾಗಿ ಶುಭ ಕೋರುತ್ತಿದ್ದಾರೆ. ಎಲ್ಲರ ಪ್ರೋತ್ಸಾಹ ,ಶುಭಾಶಯಗಳಿಗೆ ನಾನು ಆಭಾರಿ🙂
(ಈ ಪುಸ್ತಕವನ್ನು ಕೊಂಡು ಓದಿ , ಮಕ್ಕಳಿಗೆ ಉಡುಗೊರೆಯಾಗಿ ನೀಡಿ . ಐದು ಪ್ರತಿಗಳಿಗಿಂತ ಹೆಚ್ಚು ಪುಸ್ತಕಗಳನ್ನು ಜೊತೆಯಾಗಿ ಖರೀದಿಸಲು ಆಸಕ್ತಿರುವವರು ನೇರವಾಗಿ ಸಂಪರ್ಕಿಸಬಹುದು: 99001 50577)
ಧನ್ಯವಾದಗಳು.
Anu KN


