
Article · January 27, 2026
ಮುಸ್ಸಂಜೆ
ಕವಯಿತ್ರಿ : ಸಂಧ್ಯಾ ಕೊರೆಕ್ಕಾನ
ದಿನಪನಿರುವ ಗಗನ ಸಂಜೆ
ನೋಡು ಎಷ್ಟು ಕೆಂಪಗೆ
ಬಾನಿನಿಂದ ಅವನು ಜಾರೊ
ಹೊತ್ತು ಆಯ್ತು ಮೆಲ್ಲಗೆ
ಹಕ್ಕಿ ಹಾರಿ ಹಾರಿ ಗೂಡು
ಸೇರುವಂಥ ತವಕವು
ಚುಕ್ಕಿ ತಾರೆ ಮಿನುಗುತಿದೆಯೊ
ಹುಡುಕುತಿರುವ ನಯನವು
ಬಣ್ಣ ಹರಡಿ ನಿಂತ ನಭದ
ಸೊಬಗ ನಿಂತು ಸವಿಯಲು
ಕಣ್ಣ ತುಂಬ ತುಂಬಿಕೊಂಡೆ
ಕವಿತೆಯೊಂದ ಬರೆಯಲು
ದೀಪ ಹಚ್ಚು ಬಾರೊ ಎಂದು
ಅಮ್ಮ ನನ್ನ ಕೂಗಲು
ದಾಪುಗಾಲು ಹಾಕಿ ಹೊರಟೆ
ದೀಪವನ್ನು ಹಚ್ಚಲು
ಕೇಕೆ ಹಾಕಿ ನಗುತಲಿದ್ದ
ತಮ್ಮನನ್ನು ಕರೆದೆನು
ಏಕೆ ಅಕ್ಕ ನನ್ನ ಕರೆವೆ
ನಾನು ಬರೆನು ಎಂದನು
ಪ್ರೀತಿಯಿಂದ ಕರೆದೆನವನ
ಬಾರೊ ಮನೆಗೆ ಹೋಗುವ
ಜ್ಯೋತಿ ಉರಿಸಿ ಜತೆಗೆ ನಾವು
ಶ್ಲೋಕವನ್ನು ಪಠಿಸುವ
Creative Writings
