Karada Vishwa

Article · January 14, 2026

ಕಳೆದುಕೊಂಡದ್ದು...

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ


☘️☘️☘️☘️☘️
ಹತ್ತು ವರುಷಗಳಾಯ್ತು ಹೆತ್ತವರ ಕಳಕೊಂಡು, 
ಹತ್ತಾರು ನೆನಪುಗಳು ಉಳಿದೂ
ಒರೆಗೆ ಹಚ್ಚುತಲಿಹವು ನಿತ್ಯವೂ ಮನವನ್ನು 
"ಇವರು ನೆನಪಿಹರೆ?'' ನಿನಗೆಂದೂ 

ಉಸಿರ ನೀಡಿದರವರು, ಬದುಕು ನೀಡಿದರವರು, 
ವಿದ್ಯೆ ಬುದ್ಧಿಯ ನೀಡಿದವರೂ 
ಹೊತ್ತು ಹೆತ್ತೂ ಸಾಕಿ ಸಲಹಿ ಜ್ಞಾನವ ನೀಡಿ,
ತಪ್ಪುಗಳ ತಿದ್ದಿ ತೀಡಿದರು 

ಇಂದು ನಮಗೀ ತರದ ನೆಮ್ಮದಿಯ ಬಾಳಿರಲು
ನಿಜವಾದ ಕಾರಣವೆ ಅವರೂ 
ಮರೆಯಲುಂಟೇ ಅವರ ? ನೆನಪಿಸದೆ ಇರಲುಂಟೇ?
ಒಲವಿಂದ ಬದುಕನಿತ್ತವರೂ 

ಪ್ರೀತಿ ಮಮತೆಯ ತೋರಿ, ಕತ್ತಲಿನ ಕಡೆಯಿಂದ
ಬೆಳಕಿನೆಡೆಗೆಮ್ಮ ಒಯ್ದವರೂ
ಅರೆ ಹೊಟ್ಟೆ ಉಂಡರೂ ನಮಗರಿವು ಬರದಂತೆ
ಬಾಳಿ ಬದುಕೀ ತೋರಿದವರೂ 

ತಮಗಾಗಿ ಏನನ್ನು ಅವರು ಬಯಸಲೆ ಇಲ್ಲ,
ಹೃದಯದಲ್ಲಿತ್ತು ನಿಸ್ವಾರ್ಥ
ಮನೆಗೆ ಹಿರಿಯರು ಅವರು, ಜೋಡಿ ನಂದಾದೀಪ
-ದಂತೆ ಬೆಳಗುತಲಿದ್ದರವರೂ 

ಕಷ್ಟಗಳೆ ಇದ್ದರೂ ಬಡತನವೆ ಬಂದರೂ 
ಅದಕಾಗಿ ಮರುಗಿದವರಲ್ಲಾ
ಎಂತು ಹೊಗಳಲಿ ನಾನು ಇಂಥ ಸದ್ಗುಣಿಗಳನು ?
ಹೊಗಳಲೊಂದೂ ಪದಗಳಿಲ್ಲಾ

ಆಲದಾ ಮರದಂತೆ ನೆರಳಾಗಿ ನಿಂತವರು, 
ಅಂಥವರ ಕಳಕೊಂಡೆನಲ್ಲಾ
ಮತ್ತೆಂದಿಗೂ ಸಿಗುವುದಿಲ್ಲಾ ಅವರು
ಮತ್ತೆಂದಿಗೂ ಸಿಗುವುದಿಲ್ಲಾ!
🙏

Creative Writings
ಕಳೆದುಕೊಂಡದ್ದು...