Karada Vishwa

Article · August 13, 2026

ಕನಸಿನ ಲಾವಂಚ

By Shrihari Bhat Pelthaje

_ಶ್ರೀಹರಿ ಭಟ್

- ಶ್ರೀಹರಿ ಭಟ್ ಪೆಲ್ತಾಜೆ (ಕನ್ನಡ - ಕರ್ಹಾಡಿ ಕವನ ಸಂಕಲನದಿಂದ ಆಯ್ದ ಕವಿತೆ)

ನನ್ನ ಕನಸಿನ ಮಂಚ
ಲಾವಂಚದಂತಿರಲಿ
ಮನವ ತಣಿಸುವ ಗಂಧ
ಅದರಲಿರಲಿ |

ತಪ್ತಮನಸಿನ ಕಾವ
ತಣಿಸುವಾ ಸುಖಗನಸು
ನನ್ನ ಸುತ್ತವೆ ಗಿರಕಿ
ಹೊಡೆಯುತ್ತಿರಲಿ |

ಹೊಸತಾದ ಜೀವನದ
ಹೊಸ ಚಿಂತನೆಯ ಕೊಡುವ
ಯೌವನದ ರೋಮಾಂಚ
ನೀಡುತಿರಲಿ |

ಬಾಲ್ಯದಾ, ಆಟಗಳ,
ಓಟಗಳ, ಪಾಠಗಳ,
ತಂಟೆ, ತಡೆಗಳ, ಮಿಂಚು
ನೀಡುತಿರಲಿ |

ಹಾಲು ಕುಡಿದಾ ಬಳಿಕ
ಓಡುವಾ ಕರುವಿನಲಿ
ಹಾರುತಿಹ ಹಕ್ಕಿಗಳ
ನೋಟವಿರಲಿ |

ಭೋರ್ಗರೆವ ಸಾಗರದ
ಚುಂಬಿಸುವ ತೆರೆಗಳಲಿ
ನನ್ನ ಕನಸಿನ ಪಯಣ
ಸಾಗುತಿರಲಿ |

ದೊಡ್ಡ ಬಯಲುಗಳಲ್ಲಿ
ಮೇಯುವಾ ಹಸುಗಳಲಿ
ನನ್ನ ಸುಂದರ ಕನಸು
ಅಲೆಯುತಿರಲಿ |

ಕಾನನದ ಪಕ್ಷಿಗಳ
ಕಲರವದ ಸದ್ದನ್ನು
ಕದ್ದು ಕೇಳುವ ಕನಸು
ನನ್ನದಾಗಿರಲಿ |

ತುಂಬು ಶೃಂಗಾರದಲಿ
ಮೈ ತಳೆದ ಭೂಮಿಯಲಿ
ಕೃಷಿಕನಾ ಚಿತ್ರಣವು
ಮೂಡಿ ಬರಲಿ |

ಮುಂದಿನಾ ತಲೆಮಾರ
ಹಿತಕಾಗಿ ಗಿಡನೆಟ್ಟು
ಬೆಳೆಸುತಿಹ ಸೋದರಿಯರಾ
ಕನಸು ಬರಲಿ |

ಇನ್ನು ಮುಂದೆಯು ನನಗೆ
ಕನಸುಗಳು ಬರಲೆಂದು
ಕನಸುಗಳ ಕನವರಿಕೆ
ನಾ ಮಾಡುತಿರುವೆ |

Creative Writings
ಕನಸಿನ ಲಾವಂಚ