
Article · November 27, 2026
ತಾಯ್ತನದ ಸಂಭ್ರಮಕ್ಕೆ ಸಂಪ್ರದಾಯದ ಸೊಬಗು
ವಿಶ್ವವಾಣಿಯ ಆರಾಮ ಪುರವಣಿಯಲ್ಲಿ ಪ್ರಕಟಿತ ಮೇಘನಾ ಕಾನೇಟ್ಕರ್ ಅವರ ಲೇಖನ.
ಉತ್ತರ ಕರ್ನಾಟಕದ ಸಂಪ್ರದಾಯಗಳಲ್ಲಿ ಹಬ್ಬ, ಮದುವೆ, ಉಪನಯನ, ಹೆಣ್ಣುಮಕ್ಕಳ ಋತುಮತಿಯಾಗುವ ಸಂದರ್ಭ ಹೀಗೆ ಪ್ರತಿಯೊಂದು ಶುಭಕಾರ್ಯಕ್ಕೂ ತನ್ನದೇ ಆದ ಸಂಭ್ರಮವಿದೆ. ಅದರಲ್ಲೂ ಹೆಣ್ಣಿನ ಜೀವನದ ಅತ್ಯಂತ ಸುಂದರ ಘಟ್ಟವಾದ ತಾಯ್ತನವನ್ನು ಸಂಭ್ರಮಿಸುವಲ್ಲಿ ಇಲ್ಲಿನ ಸಂಪ್ರದಾಯಗಳು ವಿಶೇಷ ಸ್ಥಾನ ಪಡೆದಿವೆ. ಗರ್ಭಿಣಿಯ ಆಸೆಗಳನ್ನು ಈಡೇರಿಸುವುದು, ಅವಳನ್ನು ಪ್ರೀತಿಯಿಂದ ಆರೈಕೆ ಮಾಡುವುದು, ತವರುಮನೆಯವರು ಮತ್ತು ಬಂಧುಬಳಗದವರು ಒಟ್ಟಾಗಿ ಸಂತೋಷ ಹಂಚಿಕೊಳ್ಳುವುದು ಈ ಆಚರಣೆಗಳ ಮುಖ್ಯ ಉದ್ದೇಶ. ಇಂತಹ ಆಚರಣೆಗಳಲ್ಲಿ ಒಂದಾದ “ಕುಬಸ” ಅಥವಾ “ಸೀಮಂತ ಶಾಸ್ತ್ರ” ಹಲವು ವಿಧಗಳಲ್ಲಿ ನಡೆಯುತ್ತದೆ. ಪ್ರತಿ ಕುಬಸಕ್ಕೂ ತನ್ನದೇ ಆದ ವೈಶಿಷ್ಟ್ಯ, ಸೊಗಡು ಮತ್ತು ಭಾವನಾತ್ಮಕ ಅರ್ಥವಿದೆ.
'ಕಳ್ಳ ಕುಬಸ' ಗರ್ಭಧಾರಣೆಯ ಆರಂಭದ ದಿನಗಳಲ್ಲಿ, ಸಾಮಾನ್ಯವಾಗಿ ಎರಡೂವರೆ ಮೂರು ತಿಂಗಳ ಹೊತ್ತಿಗೆ ಗರ್ಭವತಿಯಾದ ಸುದ್ದಿ ವೈದ್ಯರಿಂದ ಖಚಿತವಾದಾಗ ಕೆಲವು ಮನೆತನಗಳಲ್ಲಿ ಆಚರಿಸುವ ಸಂಪ್ರದಾಯ. ಈ ಹಂತದಲ್ಲಿ ಗರ್ಭವತಿಯಾದ ವಿಷಯವನ್ನು ಎಲ್ಲರಿಗೂ ತಿಳಿಸದೆ, ಮನೆಯ ಆಪ್ತರ ನಡುವೆ ಮಾತ್ರ ಆಚರಣೆ ಮಾಡಲಾಗುತ್ತದೆ. ತಾಯಿ, ಅಜ್ಜಿ, ಅತ್ತೆಯಂದಿರು, ಸಹೋದರಿಯರು ಸೇರಿದಂತೆ ತವರುಮನೆಯ ಹತ್ತಿರದ ಹೆಂಗಸರು ಬುತ್ತಿಗಳನ್ನು ಹೊತ್ತು ಬಂದು ಗರ್ಭಿಣಿಗೆ ಪ್ರೀತಿಯಿಂದ ಉಣಬಡಿಸುತ್ತಾರೆ. ರೊಟ್ಟಿ, ಎಣ್ಣೆಗಾಯಿ, ಕಾಳುಪಲ್ಲೆ, ಚಿತ್ರಾನ್ನ, ಮೊಸರನ್ನ, ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಜುಣುಕದ ವಡೆ, ಗೋಧಿ ಕುಟ್ಟಿದ ಪಾಯಸ, ಬುರಬುರಿ, ಜೋಳದ ವಡೆ, ಕರ್ಜಿಕಾಯಿ, ಚಕ್ಕುಲಿ, ಕೋಡುಬಳೆ, ಚೂಡಾ ಹೀಗೆ ಹಲವು ಬಗೆಯ ಖಾದ್ಯಗಳು ಬುತ್ತಿಯಲ್ಲಿ ತುಂಬಿರುತ್ತವೆ. ತೈಲ ಅಭ್ಯಂಜನ, ಆರತಿ ಮಾಡಿ, ಉಡಿ ತುಂಬಿ ಬುತ್ತಿ ಬಡಿಸುವ ಕ್ರಮ ಚೊಚ್ಚಲ ಬಸರಿಗೆ ದೃಷ್ಟಿ ಬೀಳಬಾರದು ಎಂಬ ನಂಬಿಕೆಯ ಜೊತೆಗೆ, ಬಸರಿಯ ಆಸೆಗಳನ್ನು ಅರಿತು ಅವಳನ್ನು ಕಾಳಜಿಯಿಂದ ನೋಡಿಕೊಳ್ಳುವ ಪ್ರೀತಿಯೇ ಈ ಆಚರಣೆಯ ಹಿಂದಿನ ಮಮತೆ.
'ಸೀಮಂತ ಶಾಸ್ತ್ರ ಅಥವಾ ಗರ್ಭಸಂಸ್ಕಾರ' ಸಾಮಾನ್ಯವಾಗಿ ಬೆಸ ಸಂಖ್ಯೆಯ ತಿಂಗಳುಗಳಾದ ಐದನೇ, ಏಳನೇ ಅಥವಾ ಒಂಬತ್ತನೇ ತಿಂಗಳಲ್ಲಿ, ಕುಟುಂಬದ ಸಂಪ್ರದಾಯದಂತೆ ನಡೆಯುತ್ತದೆ. ಪುರೋಹಿತರ ಮಾರ್ಗದರ್ಶನದಲ್ಲಿ ನಡೆಯುವ ಈ ಶಾಸ್ತ್ರದಲ್ಲಿ ಹುಟ್ಟಲಿರುವ ಮಗು ಯಾವುದೇ ರೀತಿಯ ಗ್ರಹದೋಷ, ಪ್ರಾರಬ್ಧ ಕರ್ಮದ ಫಲಕ್ಕೆ ತುತ್ತಾಗದೆ ಆರೋಗ್ಯವಂತವಾಗಿರಲಿ, ಒಳ್ಳೆಯ ಗುಣನಡತೆ ಹೊಂದಿರಲಿ, ಶುಭ ಭವಿಷ್ಯ ಪಡೆಯಲಿ ಎಂಬ ಆಶಯದೊಂದಿಗೆ ಪೂಜೆ ಮತ್ತು ಮಂತ್ರೋಚ್ಚಾರಣೆಗಳನ್ನು ಮಾಡಲಾಗುತ್ತದೆ. ತಾಯಿ ಮತ್ತು ಮಗು ಸುರಕ್ಷಿತವಾಗಿರಲಿ, ಹೆರಿಗೆ ಸುಸೂತ್ರವಾಗಿ ನಡೆಯಲಿ, ದಂಪತಿಗಳ ಬದುಕು ಸುಖಮಯವಾಗಿರಲಿ ಎಂದು ಹಿರಿಯರು ಹಾರೈಸುತ್ತಾರೆ. ಇವು ಧಾರ್ಮಿಕ ನಂಬಿಕೆ ಮತ್ತು ಶುಭಾಶಯಗಳ ಅಭಿವ್ಯಕ್ತಿಯಾಗಿದ್ದು, ಗರ್ಭಿಣಿಗೆ ಮಾನಸಿಕ ನೆಮ್ಮದಿ ಹಾಗೂ ಕುಟುಂಬದ ಬೆಂಬಲ ನೀಡುವ ಸಂದರ್ಭವೂ ಆಗಿದೆ.
'ರಂಗೋಲಿ ಕುಬಸ' ದಲ್ಲಿ ಬೆಳ್ಳಂಬೆಳಗ್ಗೆ ಮನೆಯ ಅಂಗಳದ ಮಧ್ಯೆ ಗರ್ಭಿಣಿಯನ್ನು ಕೂರಿಸಿ, ಸುತ್ತಲೂ ಬಣ್ಣಬಣ್ಣದ ಸುಂದರ ರಂಗೋಲಿಗಳನ್ನು ಬಿಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿಯ ಕೈಗಳಿಗೂ ಮದರಂಗಿಯ ಚಿತ್ತಾರವನ್ನು ಬರೆಯಲಾಗುತ್ತದೆ. ಬಣ್ಣಗಳ ಚಿತ್ತಾರ, ರಂಗೋಲಿಯ ವಿನ್ಯಾಸ ಮತ್ತು ಅಂಗಳದ ಅಲಂಕಾರ ನೋಡುಗರ ಮನಸ್ಸಿಗೆ ಮುದ ನೀಡುತ್ತವೆ. ಗರ್ಭಿಣಿಗೂ ಆಯಾಸ ಮರೆಯಾಗಿ ಉಲ್ಲಾಸ ತರುತ್ತದೆ.
'ಹೂವಿನ ಕುಬಸ' ದಲ್ಲಿ ಗರ್ಭಿಣಿಯನ್ನು ಹೂವಿನ ದಂಡೆ, ಹೂವಿನ ಬಳೆ, ಹೂವಿನ ಸರ ಹಾಗೂ ಇತರ ಹೂವಿನ ಆಭರಣಗಳಿಂದ ಅಲಂಕರಿಸಲಾಗುತ್ತದೆ. ಹೂಗಳ ಪರಿಮಳ ಮತ್ತು ಸೊಬಗಿನ ನಡುವೆ ಅವಳ ಸೌಂದರ್ಯವನ್ನು ಸಂಭ್ರಮಿಸಿ, ತಾಯ್ತನದ ಸಂತೋಷವನ್ನು ಹಂಚಿಕೊಳ್ಳಲಾಗುತ್ತದೆ.
'ಮುತ್ತಿನ ಕುಬಸ' ದಲ್ಲಿ ಅವಳಿಷ್ಟದ ಬಣ್ಣದ ಸೀರೆಯನ್ನುಡಿಸಿ ಮುತ್ತಿನ ಹಾರ, ತೋಳಬಂದಿ, ಡಾಬು, ಬಳೆ, ಉಂಗುರ, ನತ್ತು ಹಾಗೂ ಜುಮಕಿ ಸೇರಿದಂತೆ ಮುತ್ತಿನ ಆಭರಣಗಳಿಂದ ಗರ್ಭಿಣಿಯನ್ನು ಸಿಂಗರಿಸಲಾಗುತ್ತದೆ. ಮುತ್ತಿನ ಮಣಿಗಳಿಂದ ಅಲಂಕೃತವಾದ ಬುಟ್ಟಿಗಳಲ್ಲಿ ಹೂವು, ಹಣ್ಣು ಮತ್ತು ತಿಂಡಿಗಳನ್ನು ತುಂಬಿ, ಮುತ್ತಿನಿಂದಲೇ ಸಿಂಗರಿಸಿದ ಆರತಿ ತಟ್ಟೆಯಿಂದ ಆರತಿ ಮಾಡಿ ಗರ್ಭಿಣಿಗೆ ಉಣಬಡಿಸುವುದು ಈ ಆಚರಣೆಯ ಮತ್ತೊಂದು ವಿಶೇಷ.
'ಬೆಳದಿಂಗಳ ಕುಬಸ' ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ನಡೆಯುವ ಮನಮೋಹಕ ಸಂಭ್ರಮ. ಹುಣ್ಣಿಮೆಯ ರಾತ್ರಿ ಮನೆಯ ಮೇಲ್ಛಾವಣಿಯಲ್ಲಿ ಅಲಂಕರಿಸಿದ ಜೋಕಾಲಿಯಲ್ಲಿ ಗರ್ಭಿಣಿ ಮತ್ತು ಪತಿಯನ್ನು ಕೂರಿಸಿ, ಅವಳಿಗೆ ಇಷ್ಟವಾದ ಹಾಡು, ನೃತ್ಯ ಮತ್ತು ತಿಂಡಿಗಳ ಮೂಲಕ ಸಂತೋಷಪಡಿಸಲಾಗುತ್ತದೆ. ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ನಗೆಬುಗ್ಗೆ ಹರಟೆಯ ಜೊತೆ ಊಟ ಮಾಡುವುದರ ಜೊತೆಗೆ, ಗರ್ಭಿಣಿಯ ಆಸೆ, ಕನಸು ಮತ್ತು ಬಯಕೆಗಳನ್ನು ಹಾಡಿನ ರೂಪದಲ್ಲಿ ಹೇಳುವ, ಒಡಪು ಕಟ್ಟಿ ಹೇಳುವ ಸಂಪ್ರದಾಯವೂ ಕೆಲವೆಡೆ ಇದೆ. ಮನೆಯಲ್ಲಿರುವ ಹಾಡುಗಾರರು ತಾವೇ ಸಾಲುಗಳನ್ನು ರಚಿಸಿ ರಾಗದಲ್ಲಿ ಹಾಡಿದರೆ, ಉಳಿದವರು ಜನಪದ ಹಾಡುಗಳನ್ನು ಹಾಡುತ್ತಾ ಸಂಭ್ರಮಕ್ಕೆ ಮೆರಗು ನೀಡುತ್ತಾರೆ. ಇದು ಕೇವಲ ಆಚರಣೆಯಲ್ಲ; ತಲೆಮಾರಿನಿಂದ ತಲೆಮಾರಿಗೆ ಹರಿದುಬಂದ ಮೌಖಿಕ ಜನಪದ ಪರಂಪರೆಯ ಸುಂದರ ರೂಪವೂ ಹೌದು.
'ಬಾವಿ ಕುಬಸ' ದಲ್ಲಿ ಬಾವಿಯನ್ನು ಗಂಗೆಯ ಸ್ವರೂಪವೆಂದು ಭಾವಿಸಿ, ನೀರಿಗೆ ಪೂಜೆ ಸಲ್ಲಿಸುವ ಪದ್ಧತಿ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ. ಅರಿಶಿನ, ಕುಂಕುಮ, ದೀಪ ಮತ್ತು ಬಾಗಿನ ಅರ್ಪಿಸಿ ಸೃಷ್ಟಿಯಲ್ಲಿ ನೀರಿನ ಮಹತ್ವವನ್ನು ಸ್ಮರಿಸಲಾಗುತ್ತದೆ. ಕೆಲವು ಮನೆತನಗಳಲ್ಲಿ ಗರ್ಭಿಣಿ ಹಾಗೂ ಮನೆಯ ಹೆಂಗಸರು ಒಟ್ಟಾಗಿ ಬಾವಿಯ ಬಳಿಗೆ ತೆರಳಿ ಪೂಜೆ ಮಾಡಿ, ನೀರನ್ನು ಮನೆಗೆ ತಂದು ದೇವರಿಗೆ ಅಥವಾ ತುಳಸಿಗೆ ಅರ್ಪಿಸುತ್ತಾರೆ. ಹೆರಿಗೆ ಸುಗಮವಾಗಲಿ ಎಂಬ ಸಾಂಪ್ರದಾಯಿಕ ಆಶಯದ ಜೊತೆಗೆ, ನೀರು ಮತ್ತು ಪ್ರಕೃತಿಯನ್ನು ಕುರಿತು ಕೃತಜ್ಞತೆ ಸಲ್ಲಿಸುವ ಭಾವನೆಯೂ ಅಡಕವಾಗಿದೆ.
'ಗಡಗಿ ನೀರು ಶಾಸ್ತ್ರ ಅಥವಾ ಘಡ್ನೀರು ಶಾಸ್ತ್ರ' ದಲ್ಲಿಯೂ ನೀರಿಗೆ ವಿಶೇಷ ಸ್ಥಾನವಿದೆ. ಉತ್ತರ ಕರ್ನಾಟಕದಲ್ಲಿ ಗಡಗಿ ಎಂದರೆ ಮಣ್ಣಿನ ಮಡಕೆ. ಹೊಸ ಮಡಕೆಗಳನ್ನು ಅರಿಶಿನ, ಕುಂಕುಮ ಮತ್ತು ದಾರದಿಂದ ಅಲಂಕರಿಸಿ, ಜನಪದ ಹಾಡುಗಳನ್ನು ಹಾಡುತ್ತಾ ಬಾವಿ ಅಥವಾ ಕೆರೆಯ ಬಳಿಗೆ ತೆಗೆದುಕೊಂಡು ಹೋಗಿ ಪೂಜಿಸಿ ನೀರು ತುಂಬಲಾಗುತ್ತದೆ. ಬಳಿಕ ಮಡಕೆಗಳನ್ನು ಧಾನ್ಯಗಳ ಮೇಲೆ ಇರಿಸಿ ರಂಗೋಲಿಯಿಂದ ಅಲಂಕರಿಸುವ ಪದ್ಧತಿಯೂ ಇದೆ. ಕುಟುಂಬದ ಸಂಪ್ರದಾಯಕ್ಕೆ ಅನುಗುಣವಾಗಿ ಈ ನೀರನ್ನು ಗರ್ಭಿಣಿಯ ಮಜ್ಜನಕ್ಕೆ ಬಳಸಲಾಗುತ್ತದೆ. ಕೆಲವು ಮನೆತನಗಳಲ್ಲಿ ಬಂಧುಗಳು ಗರ್ಭಿಣಿಯನ್ನು ಮನೆಗೆ ಆಹ್ವಾನಿಸಿ ಹೊಸ ಬಟ್ಟೆ ನೀಡಿ, ಅವಳಿಷ್ಟದ ಅಡುಗೆ ಮಾಡಿ ಪ್ರೀತಿಯಿಂದ ಸತ್ಕರಿಸುತ್ತಾರೆ.
ಇದರ ಜೊತೆಗೆ, ಕೆಲವು ಕುಟುಂಬಗಳಲ್ಲಿ ಪತಿ-ಪತ್ನಿ ಪರಸ್ಪರರ ವೇಷ ಧರಿಸಿ ತಮಾಷೆ ಮಾಡುವುದು, ಅಂದರೆ ಗರ್ಭಿಣಿ ಪತಿಯ ಶರ್ಟ್-ಪ್ಯಾಂಟ್ ಧರಿಸಿ ಮೀಸೆ ಬಿಡಿಸಿಕೊಳ್ಳುವುದು, ಪತಿ ಸೀರೆ ಅಥವಾ ಚೂಡಿದಾರ್ ಧರಿಸಿ ಅವಳನ್ನು ಅನುಕರಿಸುವುದು ಹೀಗೆ ಮುಂತಾದ ಮನರಂಜನಾ ಆಟಗಳೂ ಇರುತ್ತವೆ. ಗೊಂಬೆಯನ್ನು ಮಗುವೆಂದು ಭಾವಿಸಿ ಅದಕ್ಕೆ ಎಣ್ಣೆ ಹಚ್ಚಿದಂತೆ, ಸ್ನಾನ ಮಾಡಿಸಿದಂತೆ, ಊಟ ಮಾಡಿಸಿ ಮಲಗಿಸುವಂತೆ ಮಾಡುವ ಮೂಲಕ ಮುಂದೆ ಬರಲಿರುವ ಪೋಷಕತ್ವವನ್ನು ನಗುನಗುತ್ತಾ ಕಲ್ಪಿಸಿಕೊಳ್ಳುತ್ತಾರೆ. ಇಂತಹ ಚಟುವಟಿಕೆಗಳು ದಂಪತಿಗಳ ನಡುವಿನ ಆತ್ಮೀಯತೆಯನ್ನು ಹೆಚ್ಚಿಸಿ, ಗರ್ಭಿಣಿಯ ಮನಸ್ಸಿಗೆ ಸಂತೋಷ ನೀಡುತ್ತವೆ ಎನ್ನುವ ನಂಬಿಕೆ ಬಂಧುಗಳಲ್ಲಿ.
ಇಂದಿನ ಕಾಲದಲ್ಲಿ ಬೇಬಿ ಶವರ್, ಬೇಬಿ ಬಂಪ್ ಫೋಟೋಶೂಟ್, ಆಕರ್ಷಕ ಆಧುನಿಕ ಉಡುಪುಗಳು ಮತ್ತು ವಿಭಿನ್ನ ಸ್ಥಳಗಳಲ್ಲಿ ನಡೆಯುವ ಅದ್ಧೂರಿ ಸಮಾರಂಭಗಳು ಜನಪ್ರಿಯವಾಗಿವೆ. ಅವುಗಳೂ ತಮ್ಮದೇ ಆದ ರೀತಿಯಲ್ಲಿ ಸಂತೋಷವನ್ನು ವ್ಯಕ್ತಪಡಿಸುವ ಮಾರ್ಗಗಳೇ. ಆದರೆ ಹಳೆಯ ಕುಬಸಗಳ ವಿಶೇಷತೆ ಎಂದರೆ, ಅಲ್ಲಿ ಅಲಂಕಾರಕ್ಕಿಂತ ಆತ್ಮೀಯತೆ, ಫೋಟೋಗಳಿಗಿಂತ ಸುಂದರ ನೆನಪುಗಳು, ಆಡಂಬರಕ್ಕಿಂತ ಕಾಳಜಿ ಮತ್ತು ಕುಟುಂಬದ ಒಡನಾಟಕ್ಕೆ ಹೆಚ್ಚಿನ ಮಹತ್ವವಿತ್ತು. ಗರ್ಭಿಣಿಯ ಆಸೆಗಳನ್ನು ಕೇಳಿ ತಿಳಿದುಕೊಳ್ಳುವುದು, ಅವಳನ್ನು ಪ್ರೀತಿಯಿಂದ ಉಣಬಡಿಸುವುದು, ಚೊಚ್ಚಲ ಹೆರಿಗೆಯ ಭೀತಿಯನ್ನು ಹೊಗಲಾಡಿಸಲು ಹಾಡು-ಹಾಸ್ಯಗಳೊಂದಿಗೆ ಅವಳ ಮನಸ್ಸನ್ನು ಹಗುರಗೊಳಿಸುವುದು ಇವೆಲ್ಲವೂ ತಾಯ್ತನವನ್ನು ಒಟ್ಟಾಗಿ ಸಂಭ್ರಮಿಸುವ ಸುಂದರ ಮಾರ್ಗಗಳಾಗಿದ್ದವು. ಕಾಲ ಬದಲಾದರೂ ಈ ಸಂಪ್ರದಾಯಗಳಲ್ಲಿರುವ ಪ್ರೀತಿ, ಕಾಳಜಿ ಮತ್ತು ಕುಟುಂಬದ ಬಾಂಧವ್ಯವನ್ನು ಉಳಿಸಿಕೊಂಡರೆ, ತಾಯ್ತನದ ಸಂಭ್ರಮಕ್ಕೆ ನಿಜವಾದ ಅರ್ಥ ದೊರೆಯುತ್ತದೆ.
