
News · October 12, 2026
ಬೆಂಗಳೂರು ಕರಾಡ ಮಹಿಳಾ ವೇದಿಕೆ – ನವರಾತ್ರಿ ಆನ್‌ಲೈನ್ ಸ್ಪರ್ಧೆಗಳ ಉದ್ಘಾಟನಾ ಸಮಾರಂಭ
ಅಕ್ಷತಾ ಭಟ್ ಕನಿಯಾಲ ಅವರ ನಿವಾಸದಲ್ಲಿ ಕರ್ನಾಟಕ ಮಹಿಳಾ ವೇದಿಕೆ, ಬೆಂಗಳೂರು ವತಿಯಿಂದ ನವರಾತ್ರಿ ಆನ್‌ಲೈನ್ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಭಕ್ತಿ, ಸಂಭ್ರಮ ಹಾಗೂ ಸೌಹಾರ್ದದ ವಾತಾವರಣದಲ್ಲಿ ನೆರವೇರಿತು.
ನಿರೂಪಕಿ ಶ್ರದ್ಧಾ ಕನ್ನಡ್ಕ ಅವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಮಹಿಳಾ ವೇದಿಕೆಯ ಸಂಸ್ಥಾಪಕಿ ಮಹಿತಾ ಭಟ್ ಕದಂಡೇಲು ಹಾಗೂ ಅಕ್ಷತಾ ಭಟ್ ಕನಿಯಾಲ ಉಪಸ್ಥಿತರಿದ್ದರು. ಲಕ್ಷ್ಮಿ ಎಸ್. ಭಟ್ ಕನಿಯಾಲ ಅವರ ಪ್ರಾರ್ಥನಾ ಗೀತೆಯೊಂದಿಗೆ ದೀಪಪ್ರಜ್ವಲನೆ ನೆರವೇರಿತು.
ಆನ್‌ಲೈನ್ ಮೂಲಕ ಭಾಗವಹಿಸಿದ ಮುಖ್ಯ ಅತಿಥಿ ಡಾ. ಪ್ರಫುಲ್ಲ ಗಣಪತಿ ಭಟ್ ಕುಂಡೇಲು ಅವರು ಮಹಿಳೆಯರು ಕುಟುಂಬದ ಜವಾಬ್ದಾರಿಗಳೊಂದಿಗೆ ತಮ್ಮ ವೈಯಕ್ತಿಕ ಬೆಳವಣಿಗೆ ಹಾಗೂ ಸಾಧನೆಗೂ ಆದ್ಯತೆ ನೀಡಬೇಕೆಂದು ಪ್ರೇರಣಾದಾಯಕವಾಗಿ ನುಡಿದರು. ಮತ್ತೊಬ್ಬ ಮುಖ್ಯ ಅತಿಥಿ ಅರ್ಚನಾ ಎಸ್. ಎನ್. ಭಟ್ ಕುಂಟಿಕಾನ ಅವರು ನಾರಿಶಕ್ತಿ, ಸೌಂಡ್ ಥೆರಪಿ ಹಾಗೂ ಸೌಂಡ್ ಬಾತ್ ಕುರಿತು ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ನವರಾತ್ರಿ ಸ್ಪರ್ಧೆಗಳ ಬಹುಮಾನಗಳಿಗೆ ಪ್ರಾಯೋಜಕತ್ವ ನೀಡಿದ ಮ್ಯಾಕ್ರೇಮ್ ಉದ್ಯಮಿ ಸಂಧ್ಯಾ ರಾಣಿ ದೈತೋಟ ಹಾಗೂ ಕ್ರೋಶೆ ಉದ್ಯಮಿ ಶೀಲಾ ಮಾಣಿಮೂಲೆ ಅವರನ್ನು ಅಭಿನಂದಿಸಲಾಯಿತು. ಇಬ್ಬರೂ ತಮ್ಮ ಉತ್ಪನ್ನಗಳ ಪರಿಚಯವನ್ನೂ ಮಾಡಿಕೊಟ್ಟರು. ಕೆ. ಎಸ್. ಭಟ್ ಅವರು ಕೆಬಿಎಸ್ ಬೆಂಗಳೂರು ಸಮಿತಿಯ ಪರವಾಗಿ ಶುಭಾಶಯಗಳನ್ನು ತಿಳಿಸಿ, ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ಇಂತಹ ವೇದಿಕೆಗಳನ್ನು ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದರು.
ಬಳಿಕ ಲಕ್ಷ್ಮಿ ಎಸ್ ಭಟ್ ಕನಿಯಾಲ, ಮಾಲತಿ ಭಟ್ ಕನಿಯಾಲ, ರಮ್ಯಾ ಭಟ್ ಕನಿಯಾಲ, ದಿವ್ಯಾ ಮಡಿಕೇರಿ, ಶ್ರದ್ಧಾ ಕನ್ನಡ್ಕ, ಅರ್ಚನಾ , ಅಕ್ಷತಾ ಭಟ್ ಕನಿಯಾಲ ಹಾಗೂ ಮಾಹಿತಾ ಭಟ್ ಕಡಂದೇಲು ಅವರಿಂದ ಲಲಿತಾ ಸಹಸ್ರನಾಮ ಪಾರಾಯಣ ನೆರವೇರಿತು. ಸುಮಾರು 30 ಮಂದಿ ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದ ಕೊನೆಯಲ್ಲಿ ಲಕ್ಷ್ಮಿ ಎಸ್. ಭಟ್ ಕನಿಯಾಲ ಅವರು ಪ್ರೀತಿಯಿಂದ ತಯಾರಿಸಿದ ಉಪಾಹಾರವನ್ನು ಎಲ್ಲರಿಗೂ ಉಣಬಡಿಸಲಾಯಿತು.
ಮಹಿಳೆಯರ ಪ್ರತಿಭೆ, ಸ್ವಾವಲಂಬನೆ, ಆಧ್ಯಾತ್ಮಿಕತೆ ಮತ್ತು ಪರಸ್ಪರ ಸಹಕಾರವನ್ನು ಬೆಸೆಯುವ ಈ ಸುಂದರ ಸಮಾರಂಭವು ನವರಾತ್ರಿ ಸಂಭ್ರಮಕ್ಕೆ ಭಕ್ತಿಪೂರ್ಣ ಹಾಗೂ ಅರ್ಥಪೂರ್ಣ ಆರಂಭವನ್ನು ನೀಡಿತು.


