Karada Vishwa

Article · June 15, 2026

ಬಾಲ್ಯದ ಸೊಗಸು

✍️ದಿವ್ಯಾ ಶಿರಂತಡ್ಕ

ಆಹಾ ಸೊಗಸೆಮ್ಮ ಬಾಲ್ಯವದು ಕೇಳಿರಿ 
ಆಡುತಿಹ ಆಟಗಳು ನೂರು..
ಹಾಳೆಯಲಿ ಕೂರಿಸಿ ಎಳೆಯುವವರಿದ್ದರೆ
ನಮಗೆಲ್ಲ  ಆಗದುವೇ ತೇರು!

ಮನೆ ತುಂಬ ಮಕ್ಕಳು ತುಂಬಿರಲು ಅಲ್ಲಿ 
ನಾವಾಡಿದುದೆ ನಮಗೆ ಆಟ..
ಗೆಳೆಯರು ಜೊತೆಯಲಿ ಸೇರಿರಲು ಅಲ್ಲೇ
ಕಲಿಯುತ್ತಿದ್ದೆವು ಐಕ್ಯ ಪಾಠ!

ಹೆಂಚಿನ ತುಂಡುಗಳು, ಕಾಗದದ ಚೆಂಡು 
ಖರ್ಚಿನ ಹೊರೆಯಿಲ್ಲ ಆಗ..
ಆಟವಾಡಲು ದೊಡ್ಡ ಮೈದಾನ ಬೇಕಿಲ್ಲ 
ಸಾಕಿತ್ತು ಇದ್ದಷ್ಟೇ  ಜಾಗ!

ಆಟಗಳ ಮಧ್ಯೆ ಜಗಳವಾಗಲು ಒಮ್ಮೆ 
ಕಿರುಬೆರಳು ತೋರಿಸಿ ಮೌನ..
ಮತ್ತೆ ಆಡುವ ಹಂಬಲವು ಸೆಳೆದಾಗ 
ಮೂಲೆ ಹಿಡಿವುದಾ ಮಾನ! 

ಕೋಟಿ ಕೊಟ್ಟರೂ ಸಿಗಲಾರದೆಂದೆಂದೂ
ಕಳೆದು ಹೋಗಿರುವ ಆ ಕಾಲ..
ಸಂತಸದ ಹೊನಲಲ್ಲಿ ಮುಳುಗಿ ಏಳುತಲಿದ್ದ
ಮತ್ತೆ ಬಾರದ ಆ ಬಾಲ್ಯ!


Creative Writings