
Article · October 23, 2025
ಮುಗ್ಧತೆಯ ಬೆಳಕು
ಕರಾಡ ವಿಶ್ವ ಆಯೋಜಿಸಿದ ದೀಪಾವಳಿ ಕವನ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಉತ್ತಮ ಕವನ
ಕವಯಿತ್ರಿ : ದಿವ್ಯಾ ಬಿ ಶಿರಂತಡ್ಕ
ಬಾಲ್ಯದ ಮರೆಯದ ನೆನಪುಗಳಲ್ಲಿ
ದೀಪಾವಳಿಯೂ ಒಂದು..
ಹಣತೆಯ ಬೆಳಕಲಿ ಕಾಣುತ ಅದನು
ನೆನಪಿಸಬಹುದು ಇಂದು..
ಅಮಾವಾಸ್ಯೆಯ ಕತ್ತಲ ರಾತ್ರಿಯ
ಸೋಲಿಸುತಿತ್ತು ದೀಪ..
ಸೋಜಿಗವೆನಿಸುತ್ತಿತ್ತು ನಮಗೆ
ಬೆಳಕಿನ ಸುಂದರ ರೂಪ..
ಹಂಡೆಯ ಪೂಜಿಸಿ ನೀರನು ಕಾಯಿಸಿ
ಎಣ್ಣೆಯ ಉಜ್ಜಿ ಸ್ನಾನ..
ಹೊಸ ಹೊಸ ಬಟ್ಟೆಯ ಧರಿಸುತ ನಾವು
ಹಾಡುತ ಬೆಳಕಿನ ಗಾನ....
ಸುರ್ ಸುರ್ ಕಡ್ಡಿ, ನೆಲಚಕ್ರವದು
ನೋಡಲು ಕಣ್ಣಿಗೆ ಹಬ್ಬ..
ಮಾಲೆ ಪಟಾಕಿ ಸದ್ದನು ಮಾಡಿರೆ
ಹೃದಯ ಬಡಿತ ಅಬ್ಬಬ್ಬಾ..
ವರುಷಗಳೆಷ್ಟೇ ಸಂದರು ನಮಗೆ
ದೀಪಾವಳಿಯು ಹೊಸತು..
ಮಿನುಗುವ ಹಣತೆ ಬೆಳಕದೊ ಇಂದು,
ನುಡಿಯಿತು ಬಾಲ್ಯದ ಮಾತು..
ದಿವ್ಯಾ ಬಿ. ಶಿರಂತಡ್ಕ -

Creative Writings
