
Article · September 5, 2026
ವರುಣಾss ಎಲ್ಲಿದ್ದಿಯಪ್ಪ ?
ಸಂತೋಷ್ ಕುಮಾರ್ ನಡುಮನೆ, ಚನ್ನಪಟ್ಟಣ
ಈ ಸಲದ ಮಳೆ ಭಯಂಕರ,
ಬರಲೇ ಇಲ್ಲ—ಇದೇನಿದು ಅಚ್ಚರ!
ಸಮುದ್ರವಿದೆ, ಗಾಳಿಯಿದೆ,
ಸೂರ್ಯನ ಬಿಸಿಲು ಧಗಧಗಿಸಿದೆ,
ಮುಗಿಲು ಮಾತ್ರ ಕಪ್ಪಾಗಲಿಲ್ಲ,
ಬಿಳಿ ಮುಗಿಲ ನೋಡಿ ಮನ ನಗಲಿಲ್ಲ!
ಸಿಡಿಲು ಗುಡುಗಲಿಲ್ಲ,
ಮಿಂಚು ಹೊಳೆಯಲಿಲ್ಲ,
ಮೋಡ ಮಳೆಯಾಗಲಿಲ್ಲ,
ಮಣ್ಣಿನ ಬಾಯಾರಿಕೆ ತೀರಲಿಲ್ಲ
ಆಕಾಶ ನೋಡುತ್ತಾ ರೈತ ಕಾದ,
ಬಳಲಿ ಬೆಂಡಾದ, ಬಸಳೆ ದಂಡಾದ
ಊಟಕ್ಕೆ ಬೆಳೆ ಇಲ್ಲ,
ಕುಡಿಯಲು ನೀರಿಲ್ಲ,
ತೋಡಿನಲ್ಲಿ ನೀರೇ ಎಲ್ಲಾ—ಆದರೆ ನೀರೇ ಇಲ್ಲ !
ಯಾಕೆಂದರೆ ನೆರೆ ಇಲ್ಲವಲ್ಲಾ!
ತೋಡು ಇದೆ, ತೀರ ಇದೆ, ಮನಸು ಮಳೆಯ ಕನಸಾಗಿದೆ
ನೀರು ಮಾತ್ರ ದೂರದ ನನಸಾಗಿದೆ
ಕೆರೆಯಿದೆ, ಕಟ್ಟೆಯಿದೆ,
ಕೆರೆಯೊಳಗೆ ಬಿರುಕುಗಳಿದೆ,
ಮೀನು ಇಲ್ಲ, ಕಪ್ಪೆ ಇಲ್ಲ,
ಕೆರೆಯೊಳಗೆ ನೀರೇ ಇಲ್ಲ
ಕೆರೆಯ ಹೆಸರು ಕೆರೆಯಾಗಿದೆ,
ಒಡಲು ಮಾತ್ರ ಮರಳಾಗಿದೆ!
ಮುಂದಿನ ವರ್ಷದ ಊರ ಹಬ್ಬ,
ಮದುವೆ, ಮುಂಜಿ, ಜಾತ್ರೆಯ ಸದ್ದು—
ಎಲ್ಲವೂ ನಿಂತಿವೆ ನೀರಿನ ದಾರಿಗೆ,
ಎಲ್ಲರ ಕಣ್ಣು ಒಂದೇ ದಿಕ್ಕಿಗೆ;
ಹಬ್ಬಕ್ಕಿಂತ ಮೊದಲು ಬೇಕು ನೀರು,
ಬದುಕಿಗಿಂತ ದೊಡ್ಡದೇನಿದೆ ಹೇಳು?
ಬೇಡಿಕೆ ಇದೆ, ನೀರಡಿಕೆ ಇದೆ,
ಬಾಯಾರಿಕೆಯ ಬಿಸಿಯಡಿಕೆ ಇದೆ,
ನೀರಿಲ್ಲದೆ ನಾಡಿನ ನಡಿಗೆ
ನಿಲ್ಲುವ ಹಂತದ ನೋವಡಿಕೆ ಇದೆ;
ನೀರಿಗಾಗಿ ಕೈಜೋಡಿಸಿ,
ವರುಣನ ಮುಂದೆ ತಲೆಬಾಗಿ!
ಅಡಿಕೆ ಒಣಗಿದೆ,
ತೆಂಗು ಬಾಡಿದೆ,
ತೋಟದ ಹಸಿರು
ಮಣ್ಣೊಳಗೇ ಸೇರಿದೆ;
ಅಡಿಕೆಗೆ ನೀರು, ತೆಂಗಿಗೆ ನೀರು,
ಬೇರು ಬಾಳಲು ಬೇಕು ನೀರು!
ತಿನ್ನಲು ಅನ್ನ ಬೇಕು,
ಅನ್ನಕ್ಕೆ ಬೆಳೆ ಬೇಕು,
ಬೆಳೆಗೆ ಮಳೆ ಬೇಕು,
ಮಳೆಗೆ ಮೋಡ ಬೇಕು;
ಇಂಗು ಬೇಕು, ಮೆಣಸು ಬೇಕು,
ಅಡಿಕೆ ಬೇಕು, ತೆಂಗು ಬೇಕು—
ಇವೆಲ್ಲಕ್ಕೂ ಒಂದೇ ಬೇಡಿಕೆ,
ಮೊದಲು ಬೇಕು ನೀರಿನ ಹೊಳೆ!
ದೇವರೂ ಬೇಕು ಕೋಲವೂ ಬೇಕು
ಜನರಿಗೆ ಈಗ ಆಡಂಬರವೂ ಬೇಕು,
ಗುಡ್ಡ-ತೋಟದ ಮಾತೂ ಬೇಡ,
ದೊಡ್ಡ ದೊಡ್ಡ ಹರಕೆಗಳೂ ಬೇಡ;
ಬಾಯಾರಿದ ಬದುಕಿಗೆ ಒಂದೇ ಬೇಡಿಕೆ—
ಮೊದಲು ನೀರು ಬೇಕು ನಾಡಿಗೆ
ವರುಣ ದೇವಾ, ಇನ್ನಾದರೂ ಬಾ,
ಮೋಡದ ಮೆರವಣಿಗೆಯಾಗಿ ಬಾ,
ಸಿಡಿಲಿನ ತಾಳಕ್ಕೆ ಗುಡುಗುತ್ತಾ ಬಾ,
ಮಳೆಯ ಮುತ್ತಿನ ಹಾರವಾಗಿ ಬಾ;
ಒಣಗಿದ ಮಣ್ಣಿಗೆ ಜೀವವಾಗಿ ಬಾ,
ರೈತನ ನಗುವಿಗೆ ಕಾರಣವಾಗಿ ಬಾ!
ಹನಿ ಹನಿಯಾಗಿ ಮಳೆ ಸುರಿಯಲಿ,
ಮಣ್ಣಿನ ಮೈಯೆಲ್ಲ ತಂಪಾಗಲಿ,
ಹನಿಕೂಡಿ ಹಳ್ಳವಾಗಲಿ,
ಹಳ್ಳಕೂಡಿ ಕೆರೆಯಾಗಲಿ,
ಕೆರೆ ತುಂಬಿ ನದಿಯಾಗಲಿ,
ನದಿ ಹರಿದು ನಾಡು ಸಮೃದ್ಧಿಯಾಗಲಿ!
ಅಡಿಕೆ ತೋಟ ಮತ್ತೆ ಹಸಿರಾಗಲಿ,
ತೆಂಗಿನ ಮರ ತಲೆಯಾಡಲಿ,
ಹೊಲದ ಬಯಲು ಬೆಳೆ ತುಂಬಲಿ,
ರೈತನ ಮನೆ ಧಾನ್ಯ ತುಂಬಲಿ;
ಇಂಗಿನ ವಾಸನೆ ಅಡುಗೆಯಲ್ಲಿ ಬರಲಿ,
ಊರಿನ ನಗು ಬೀದಿಯಲ್ಲಿ ಹರಡಲಿ!
ಅರುಣನ ಬಿಸಿಲು ಇರಲಿ,
ವರುಣನ ಕರುಣೆ ಇರಲಿ,
ಬಿಸಿಲು-ಮಳೆಯ ಸಮತೋಲನ ಇರಲಿ,
ಮಣ್ಣಿನ ಮೇಲೆ ಹಸಿರು ಹೊದಿಕೆ ಇರಲಿ;
ಬೇಸಿಗೆ ಬಂದರೂ ಭಯವಿರದಿರಲಿ,
ಮುಂದಿನ ವರ್ಷ ನೀರಿಗಾಗಿ ಅಳುವ ಸ್ಥಿತಿ ಬರದಿರಲಿ!
ಇಂದಿನ ಬೇಗೆ ಹೇಗೋ ಸಹಿಸಬಹುದು,
ನಾಳೆಯ ಬೇಗೆಯನ್ನು ಹೇಗೆ ಊಹಿಸಬಹುದು?
ಇಂದು ಹನಿಗಾಗಿ ಕೈ ಚಾಚಿದ್ದೇವೆ,
ನಾಳೆ ನೀರಿಗಾಗಿ ಊರು ಅಲೆಯಬಾರದು;
ಆಕಾಶವೇ, ಮಾತು ಕೇಳು
ಈ ಸಲವಾದರೂ ಮಳೆ ಸುರಿಸು!
ಮೋಡ ಕಪ್ಪಾಗಲಿ,
ಮಿಂಚು ಹೊಳೆಯಲಿ,
ಸಿಡಿಲು ಗುಡುಗಲಿ,
ಮಳೆ ಧಾರೆಯಾಗಿ ಸುರಿಯಲಿ;
ಹನಿಕೂಡಿ ಹಳ್ಳವಾಗಲಿ,
ಹಳ್ಳಕೂಡಿ ಕೆರೆಯಾಗಲಿ—
ಕೆರೆ ತುಂಬಿ ನಾಡು ನಗಲಿ,
ನಮ್ಮ ಬದುಕು ಮತ್ತೆ ಹಸಿರಾಗಲಿ!
