Karada Vishwa

Article · October 25, 2025

ಹರಿಯೆ ಲಕ್ಷ್ಮೀಪತಿಯೆ, ಕೇಳೆಮ್ಮ ಅಳಲು.

ಕವಯಿತ್ರಿ : ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

ಹರಿಯೆ ಲಕ್ಷ್ಮೀಪತಿಯೆ, ನಿನ್ನ ಮುಂದೆನ್ನಳಲು,

ತೋಡಿಕೊಳ್ಳುವೆ ನಾನು ಕೇಳು ಮೊದಲು,I

ಸಮಯ ನಿನಗಿಲ್ಲದಿರೆ, ಯಾರನಾದರು ಕಳಿಸು,

ಜನವು ಬೇಕೆಮಗೀಗ, ನಿನ್ನ ಬದಲುI

 

ನಿನ್ನ ದಿವ್ಯ ಸೃಷ್ಟಿ ಈ ವಸುಂಧರೆಯೊಳಗೆ,

ಜನ್ಮ ತಳೆದಿದೆ ನೋಡೂ ಅಸುರ ಕುಲವೂ |

ಅಂದು ನೆಲಸಮ ಮಾಡಿದವರು ಮತ್ತು ದಿಸಿಹರು,

ಮತ್ತೆ ಕಂಟಕ ವಾಗೀ ಬಂದಿರುವರೂ I

 

ಅಂದವರ ಸಂಹರಿಸಿ ಹಿಂದಿರುಗಿ ನೋಡದೆಯೆ,

ಸೇರಿಕೊಂಡಿರುವೆ ನೀ, ಸ್ವರ್ಗ ಲೋಕಾ I

ನಿನ್ನ ಸೃಷ್ಟಿಯ ಭೂಮಿ ಕಷ್ಟದಲ್ಲಿದೆ ಸ್ವಾಮಿ,

ಬಂದು ನೋಡದೆ ಸುಮ್ಮನಿರುವಿ ಯಾಕ?

 

ಊಟದೊಳಗೂ ವಿಷವು, ನೋಟದೊಳಗೂ ವಿಷವು,

ಕೂಟವೇ ವಿಷಮಯವು ನೋಡು ಈಗಾ I

ರಕ್ತ ಬೀಜಾಸುರನ ವಂಶವಾಗಿಹುದೀಗ

ಒಂದಳಿಸೆ ಸಾವಿರವು ಹುಟ್ಟಿ ಬಹುದೂI

 

ಕಾಲಭೈರವ, ಭದ್ರಕಾಳಿ ರೂಪದಿ ಬಂದು,

ಹನಿರಕ್ತ ಉಳಿಸದೆಯೆ ಕುಡಿಯಬೇಕು I

ಸಂಪೂರ್ಣ ಅಳಿಸುವುದು ನಿನಗೆ ಕಷ್ಟವೆ ಅಲ್ಲ

ಮನಸು ಮಾಡೂ ಒಮ್ಮೆ ಅಷ್ಟು ಸಾಕೂ |

 

ಚಿನ್ನದರಮನೆಯೊಳಗೆ ಮಲಗಿ ಬಿಟ್ಟರೆ ಸ್ವಾಮಿ,

ಆಗುವುದು ನಿನಗೆ ಇದು ಹೇಗೆ ವೇದ್ಯ?

ಇಂದಿರಾಪತಿ ಸ್ವಾಮಿ ಸುಂದರೇಶನೆ ನೀನು

ಬಂದೊಮ್ಮೆ ನೋಡು ನೀ ನಿನಗೆಸಾಧ್ಯ!


ಒಂಟಿ ಹೆಣ್ಣು ತಾನು ರಸ್ತೆಯಲಿ ನಡೆಯುತಿರೆ

ಬಿತ್ತವಳ ಮೇಲವರ ಕಾಮದೃಷ್ಟಿI

ಹೀಗಾದರೆ, ಹೇಗೆ ಉಳಿಯುವುದು ಈ ಸೃಷ್ಟಿ ?

ಬಿಡುವಿಲ್ಲವೇ ನಿನಗೆ ಹರಿಸೆ ದೃಷ್ಟಿ?

 

ಪಿತೃಪಕ್ಷ ಬಂದಿಹುದು ಸಮಯವನು ತಂದಿಹುದು,

ಈಗ ಸರಿ ಇದೆ ಸಮಯ ಉಳಿಸು ಧರೆಯಾI

ದುಷ್ಟಕೂಟಕ್ಕಿದೋ ಎಳ್ಳು ನೀರನು ಬಿಡಲು,

ಸಜ್ಜನರ ಪಾಲಿಗಿದು ಭಾಗ್ಯೋದಯ!

 

ಅಂದು ಮೋಹಿನಿ ರೂಪ ತಾಳಿ ಬಂದಿದ್ದೆ ನೀ

ಇಂದೇಕೆ ಹೀಗಿರುವೆ ನೆನಪಿಲ್ಲವೇ?

ನಿನ್ನ ಭಕ್ತರನೆಲ್ಲ ರಕ್ಷಿಸುವ ಮನಸೊಮ್ಮೆ

ನಿನಗಿಲ್ಲವೇ ದೇವ ?ಮನಸಿಲ್ಲವೇ?

 

ದೈತ್ಯಕುಲದಲ್ಲೀಗ ಜನಸಂಖ್ಯೆ ಬಲವಿಹುದು

ರಕ್ತ ಕುಡಿದಿಹ ದೇಹ ಕೊಬ್ಬಿರುವುದೂ ' I

ಮಗ್ಗುಲಿನ ಮುಳ್ಳಾಗಿ ನಿತ್ಯ ಚುಚ್ಚುತಲಿಹುದು,

ಇಳಿದು ಅಸಹಾಯಕದ ಕಣ್ಣ ನೀರೂ I

 

ಎಲ್ಲಿರುವೆ ಭಗವಂತ ಏಳು ನೀ ಗುಣವಂತ

ಯೋಗನಿದ್ರೆಯು ಸಾಕು,  ಬೇಗಏಳೂ I

ಆಯಾಸವಾಗಿದೆಯೆ?ಎಳನೀರ ತಂದಿರುವೆ,

ವಿಶ್ರಾಂತಿ ಪಡೆಯೆ ನೀ ಸ್ವಲ್ಪ ತಾಳೂ I

 

ಒಬ್ಬನೇ ಬರಬೇಡ ಬಳಗವನು ಕರೆದುತಾ,

ಹೂಹಣ್ಣು ನಿನಗಾಗಿ ತಂದು ಬಿಡು ವೇI

ಹಾಲ ಪಾಯಸ ಮಾಡಿ ನೈವೇದ್ಯ ನಿನಗಿಡುವೆ,

ಏಕೆ ಬಾರದೆ ಇರುವೆ? ಹೀಗೆ ಸರಿಯೇ?

 

ನವರಾತ್ರಿ ಬಂದಿಹುದು, ಸಂಭ್ರಮದ ದಿನವಹುದು,

ನಿನ್ನ ಶಕ್ತ್ಯಾಯುಧಕೆ ಪೂಜೆ ಮಾಡೀ I

ನಿನಗೆ ತಿಲಕವನಿಟ್ಟು   ಮಂಗಳಾರತಿ ಮಾಡಿ

ಭಕ್ರಿಯಲಿ ಕೈ ಮುಗಿದೂ ನಿಂತು ಬಿಡುವೇ 

ಜಗವನುಳಿಸೂ ಎಂದು ಬೇಡುತಿರುವೇ II


 ಕಿರುಪರಿಚಯ :

ಜಯಶ್ರೀ ಐಲುಕುಂಜೆ, ಪಳ್ಳತಡ್ಕ . ಪರಿಸರಪ್ರಿಯೆ . ಗೃಹಿಣಿ . ಮನಸಿಗನಿಸಿದ್ದನ್ನು ಚೊಕ್ಕವಾಗಿ ಪುಟಕ್ಕಿಳಿಸುವ ಹವ್ಯಾಸ. ಕರಾಡ ಭಾಷೆಯಲ್ಲಿ ಮತ್ತು ಕನ್ನಡದಲ್ಲಿ ಬರೆಯಬಲ್ಲರು.

Creative Writings
ಹರಿಯೆ ಲಕ್ಷ್ಮೀಪತಿಯೆ, ಕೇಳೆಮ್ಮ ಅಳಲು.