
Article · September 6, 2026
ಗೀಸರ್ ಗಳಾಚೆಗಿನ ಯೆಲ್ಲೋಸ್ಟೋನ್ ಸೌಂದರ್ಯ
ಪದ್ಮಶ್ರೀ ಮಾದೇರಿ
ಅಮೆರಿಕ ಪ್ರವಾಸ ಭಾಗ-3
ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ಇಲ್ಲಿನ ಗೀಸರ್ ಗಳು ಮತ್ತು ಬಿಸಿ ನೀರಿನ ಬುಗ್ಗೆಗಳು. ಓಲ್ಡ್ ಫೇತ್ ಫುಲ್, ಗ್ರಾಂಡ್ ಪ್ರಿಸ್ಮ್ಯಾಟಿಕ್ ಸ್ಪ್ರಿಂಗ್ಸ್ , ಮ್ಯಾಮತ್ ಹಾಟ್ ಸ್ಪ್ರಿಂಗ್ಸ್ ಮುಂತಾದ ಸ್ಥಳಗಳು ಜಗತ್ಪ್ರಸಿದ್ಧವಾಗಿವೆ ನಿಜ. ಆದರೆ ಯೆಲ್ಲೋಸ್ಟೋನ್ ಎಂದರೆ ಕೇವಲ ಗೀಸರ್ ಗಳು ಮತ್ತು ಬಿಸಿ ನೀರಿನ ಬುಗ್ಗೆಗಳು ಮಾತ್ರವಲ್ಲ . ವಿಶಾಲವಾದ ಕಾಡುಗಳು,ಹಸಿರು ಹುಲ್ಲುಗಾವಲುಗಳು, ಎತ್ತರದ ಪರ್ವತಗಳು, ಹರಿಯುವ ನದಿಗಳು, ಶಾಂತವಾದ ಸರೋವರಗಳು, ಭೋರ್ಗರೆವ ಜಲಪಾತಗಳು ಮತ್ತು ವೈವಿಧ್ಯಮಯ ವನ್ಯಜೀವಿಗಳಿಂದ ಕೂಡಿದ ಯೆಲ್ಲೋಸ್ಟೋನ್ ಪ್ರಕೃತಿಯ ಸೌಂದರ್ಯದ ಹಲವು ರೂಪಗಳನ್ನು ಒಂದೇ ಸ್ಥಳದಲ್ಲಿ ಪರಿಚಯಿಸುತ್ತದೆ. ಈ ಎಲ್ಲಾ ಜಾಗಗಳನ್ನು ನೋಡಲು ನಾವು ಒಂದೂವರೆ ದಿನಗಳನ್ನು ಮೀಸಲಿಟ್ಟಿದ್ದೆವು.
ಇಲ್ಲಿನ ಲಾಮಾರ್ ವ್ಯಾಲಿ ಮತ್ತು ಹೇಡನ್ ವ್ಯಾಲಿ ವನ್ಯಜೀವಿಗಳನ್ನು ನೋಡಲು ಉತ್ತಮ ಸ್ಥಳಗಳು. ಬೆಳಗಿನ ಸಮಯದಲ್ಲಿ ಪ್ರಾಣಿಗಳು ಕಾಣಿಸಿಕೊಳ್ಳುವ ಸಂಭವನೀಯತೆ ಹೆಚ್ಚಿದ್ದುದರಿಂದ ಐದು ಗಂಟೆಗೆಲ್ಲ ರೆಡಿಯಾಗಿ ಲಾಮಾರ್ ವ್ಯಾಲಿಯತ್ತ ಹೊರಟೆವು. ವ್ಯಾಲಿ ಪ್ರವೇಶಿಸುತ್ತಿದ್ದಂತೆ ವಿಶಾಲವಾದ ಹುಲ್ಲುಗಾವಲುಗಳ ನಡುವೆ ಮೇಯುತ್ತಿದ್ದ ಕಾಡುಕೋಣಗಳ ಹಿಂಡನ್ನು ಕಂಡೆವು. ನೂರಾರು ಕಾಡುಕೋಣಗಳಿದ್ದವು. ಹಾಗೆಯೇ ಮುಂದೆ ಹೋದಂತೆ ತೋಳ ಅಥವಾ ಕರಡಿ ಕಾಣಲು ಸಿಗಬಹುದಾ ಎಂದು ಕಾತುರದಿಂದ ಕಿಟಕಿಯಾಚೆ ನೋಡುತ್ತಿದ್ದೆವು. ಆದರೆ ಬೇರೆ ಯಾವ ಪ್ರಾಣಿಯೂ ಕಾಣಿಸಲಿಲ್ಲ. ನಿರಾಶರಾಗಿ ಹೇಡನ್ ವ್ಯಾಲಿಯತ್ತ ಹೋದೆವು. ನಮ್ಮ ಅದೃಷ್ಟ ಚೆನ್ನಾಗಿದ್ದರೆ, ಇಲ್ಲಿ ಹರಿಯುವ ಯೆಲ್ಲೋಸ್ಟೋನ್ ನದಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಕಾಡು ಪ್ರಾಣಿಗಳನ್ನು ಕಾಣಬಹುದು ಎಂಬುವುದು ನಮ್ಮ ಅಂದಾಜಾಗಿತ್ತು. ಕೆಲವೊಮ್ಮೆ ಎಲ್ಕ್ , ಮೂಸ್ (ಜಿಂಕೆಯಂತಹ ಪ್ರಾಣಿಗಳು, ಆದರೆ ಗಾತ್ರದಲ್ಲಿ ದೊಡ್ಡ ),ಕಾಡುಕೋಣಗಳ ಹಿಂಡುಗಳು ರಸ್ತೆಯಲ್ಲೇ ನಿಂತಿರುವುದರಿಂದ,ವಾಹನಗಳು ಅವುಗಳು ಹೋಗುವವರೆಗೆ ಅಲ್ಲೇ ನಿಲ್ಲಬೇಕಾಗುತ್ತದೆ . ಆಗ ಪ್ರಾಣಿಗಳನ್ನು ಪ್ರವಾಸಿಗರು ಸಮೀಪದಿಂದ ನೋಡಬಹುದು. ನಮಗೆ ಇಂತಹ ಸನ್ನಿವೇಶವೇನೂ ಎದುರಾಗಲಿಲ್ಲ. ಅಲ್ಲಲ್ಲಿ ರಸ್ತೆಯ ಬದಿಯಲ್ಲಿ ನಿಂತು ದೂರದರ್ಶಕ ಅಥವಾ ಬೈನಾಕ್ಯುಲರ್ ಗಳಿಂದ ಪ್ರಾಣಿಗಳನ್ನು ಹುಡುಕುತ್ತಿರುವ ಪ್ರವಾಸಿಗರು ಕಾಣಸಿಗುತ್ತಿದ್ದರು. ಅಂಥ ಕಡೆಗಳಲ್ಲಿ ನಾವು ಕೂಡ ಕಾರ್ ನಿಲ್ಲಿಸಿ ಯಾವುದಾದರೂ ಪ್ರಾಣಿ ಕಾಣಲು ಸಿಗುತ್ತದೆಯೋ ಎಂದು ನೋಡುತ್ತಿದ್ದೆವು. ಅಂತೂ ಒಂದು ಕಡೆ ಕಂದು ಕರಡಿ ( ಗ್ರಿಸ್ಲಿ ಬೇರ್ ) ಹಾಗೂ ಮತ್ತೊಂದು ಕಡೆ ಒಂದು ನರಿಯನ್ನು ಕಂಡೆವು. ತುಂಬಾ ಖುಷಿಯಾಯಿತು. ಬಾವನ ಹತ್ತಿರ ಕ್ಯಾಮರಾ ಇದ್ದುದರಿಂದ ಅನೇಕ ಫೋಟೋಗಳನ್ನು ಕ್ಲಿಕ್ಕಿಸಿದನು. ಇದನ್ನೆಲ್ಲ ಮುಗಿಸಿ ಅಪ್ಪರ್ ಫಾಲ್ಸ್ ನತ್ತ ಪ್ರಯಾಣ ಬೆಳೆಸಿದವು .
ಅಪ್ಪರ್ ಫಾಲ್ಸ್ ನಲ್ಲಿ ಯೆಲ್ಲೋಸ್ಟೋನ್ ನದಿಯ ನೀರು ಕಲ್ಲಿನ ಬಂಡೆಗಳ ನಡುವೆ ರಭಸವಾಗಿ ಹರಿದು ಸುಮಾರು 109 ಅಡಿ ಎತ್ತರದಿಂದ ಕೆಳಗೆ ಧುಮುಕುತ್ತದೆ. ಬಿಳಿ ನೊರೆಯೊಂದಿಗೆ ಕೆಳಗೆ ಧುಮುಕುವ ನೀರು, ಸುತ್ತಲಿನ ಕಂದು ಮತ್ತು ಹಳದಿ ಬಣ್ಣದ ಬಂಡೆಗಳು ಹಾಗೂ ಹಸಿರು ಮರಗಳು ಸುಂದರವಾದ ದೃಶ್ಯವನ್ನು ಸೃಷ್ಟಿಸುತ್ತವೆ.ನಾವು ಇಲ್ಲಿಗೆ ಹೋದಾಗ ತುಂತುರು ಮಳೆ ಬರುತ್ತಾ ಇತ್ತು . ಆ ಮಳೆಯಲ್ಲಿ ನೆನೆಯುತ್ತಾ, ಚಳಿಯಲ್ಲಿ ಗಡಗಡ ನಡುಗುತ್ತಾ, ಆ ಸುಂದರವಾದ ಜಲಪಾತವನ್ನು ಬೇಗ ಬೇಗನೆ ನೋಡಿ, ಒಂದೆರಡು ಫೋಟೋ ಕ್ಲಿಕ್ಕಿಸಿ, ಕಾರ್ ನತ್ತ ಧಾವಿಸಿದೆವು. ಕಾರ್ ನಲ್ಲಿ ಕುಳಿತು, ಹೀಟರ್ ಆನ್ ಮಾಡಿ, ಸ್ವಲ್ಪ ಬೆಚ್ಚಗಾಗುತ್ತಿದ್ದಂತೆ ಲೋವರ್ ಫಾಲ್ಸ್ ಕಡೆಗೆ ಹೊರಟೆವು.
ಲೋವರ್ ಫಾಲ್ಸ್ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ಅತ್ಯಂತ ಪ್ರಸಿದ್ಧ ಜಲಪಾತಗಳಲ್ಲಿ ಒಂದು. ಇಲ್ಲಿ ಯೆಲ್ಲೋಸ್ಟೋನ್ ನದಿಯ ನೀರು ಸುಮಾರು 3೦8 ಅಡಿ ಎತ್ತರದಿಂದ ಭೋರ್ಗರೆಯುತ್ತಾ ಕೆಳಗೆ ಧುಮುಕುತ್ತದೆ. ಈ ಭವ್ಯ ಜಲಪಾತವನ್ನು ನೋಡಿ ನಾವು ಕ್ಷಣಕಾಲ ಮೌನವಾದೆವು. ಸುತ್ತಲಿನ ಆಳವಾದ ಕಣಿವೆ ಹಾಗೂ ಹಸಿರು ಮರಗಳ ನಡುವೆ ಧುಮುಕುತ್ತಿರುವ ಜಲಪಾತದ ದೃಶ್ಯ ರುದ್ರರಮಣೀಯವಾಗಿತ್ತು. ಪ್ರಕೃತಿಯೇ ತನ್ನ ಕೈಯಿಂದ ಬಿಡಿಸಿದ ಬೃಹತ್ ಚಿತ್ರವೊಂದರ ಮುಂದೆ ನಿಂತಿರುವ ಅನುಭವವಾಯಿತು. ಈ ದೃಶ್ಯವನ್ನು ಎಷ್ಟು ನೋಡಿದರೂ ಮನಸ್ಸಿಗೆ ತೃಪ್ತಿಯಾಗದಂತಿತ್ತು. ನಾನು ಕನಸಿನಲ್ಲಿದ್ದೇನೋ ಏನೋ ಎಂದು ನನಗೆ ಭಾಸವಾಯಿತು. ತುಂಬಾ ಹೊತ್ತು ಅಲ್ಲಿ ಕಳೆದ ನಂತರ, ಮನಸ್ಸಿಲ್ಲದ ಮನಸ್ಸಿನಿಂದ ಇಲ್ಲಿಂದ ಹೊರಟು ಗ್ರಾಂಡ್ ಕಾನ್ಯನ್ ನತ್ತ ಹೋದೆವು.
ಗ್ರಾಂಡ್ ಕಾನ್ಯನ್ ಆಫ್ ಯೆಲ್ಲೋಸ್ಟೋನ್ ನಮ್ಮನ್ನು ಬಹಳವಾಗಿ ಆಕರ್ಷಿಸಿದ ಸ್ಥಳಗಳಲ್ಲಿ ಒಂದು. ಯೆಲ್ಲೋಸ್ಟೋನ್ ನದಿಯು ಸಾವಿರಾರು ವರ್ಷಗಳಿಂದ ಹರಿಯುತ್ತಾ, ಕಲ್ಲುಗಳನ್ನು ಸವೆಸಿದ ಪರಿಣಾಮ,ಈ ಆಳವಾದ ಮತ್ತು ವಿಶಾಲವಾದ ಕಣಿವೆ ರೂಪುಗೊಂಡಿದೆ . ಇದರ ಅಗಾಧತೆ ಮತ್ತು ಸೌಂದರ್ಯ ನಮ್ಮನ್ನು ಬೆರಗುಗೊಳಿಸಿತು.
ಈ ಕಣಿವೆಯ ವಿಶೇಷತೆ ಎಂದರೆ ಇಲ್ಲಿ ಕಾಣಿಸುವ ಬಣ್ಣ ಬಣ್ಣದ ಬಂಡೆಗಳು. ಹಳದಿ, ಕಂದು,ಕೆಂಪು ಮತ್ತು ಕಿತ್ತಳೆ ಬಣ್ಣದ ಛಾಯೆಗಳು ಕಣಿವೆಯ ಗೋಡೆಗಳ ಮೇಲೆ ಕಾಣಿಸುತ್ತವೆ. ಕಣಿವೆಯ ಅಂಚಿನಲ್ಲಿ ನಿಂತು ಕೆಳಗೆ ನೋಡಿದಾಗ,ಅದರ ಆಳ ನೋಡಿ ಮೈ ಜುಮ್ಮೆನ್ನುತ್ತದೆ. ಕಣಿವೆಯ ಮಧ್ಯೆ ಯಲ್ಲೋಸ್ಟೋನ್ ನದಿ ಹಾವಿನಂತೆ ತಿರುವುಗಳನ್ನು ಪಡೆದು ಹರಿಯುತ್ತದೆ. ಕೆಲವೆಡೆ ಅದು ಶಾಂತವಾಗಿ ಹರಿದರೆ, ಮತ್ತೊಂದೆಡೆ ಬಂಡೆಗಳ ನಡುವೆ ರಭಸದಿಂದ ಹರಿದು ಜಲಪಾತವಾಗಿ ಕೆಳಗೆ ಧುಮುಕುತ್ತದೆ. ಗ್ರಾಂಡ್ ಕಾನ್ಯನ್ ನ,ಆರ್ಟಿಸ್ಟ್ ಪಾಯಿಂಟ್ ನಿಂದ ಲೋವರ್ ಫಾಲ್ಸ್ ಅದ್ಭುತವಾಗಿ ಕಾಣಿಸುತ್ತದೆ. ಈ ಕ್ಷಣದಲ್ಲಿ ಒಂದು ವಿಚಾರ ಮತ್ತೆ ಮತ್ತೆ ಮನಸ್ಸಿಗೆ ಬಂತು - ಪ್ರಕೃತಿಯ ಮುಂದೆ ನಾವು ಮನುಷ್ಯರು ಎಷ್ಟು ಚಿಕ್ಕವರು ಎಂದು. ನಾವು ನಮ್ಮ ಸುತ್ತಲಿನ ಜಗತ್ತನ್ನು ಗೆದ್ದಿದ್ದೇವೆ ಎಂದುಕೊಂಡರೂ, ಪ್ರಕೃತಿಯ ಒಂದು ಸೃಷ್ಟಿಯ ಮುಂದೆ ನಿಂತಾಗ, ನಮ್ಮ ಶಕ್ತಿ ಎಷ್ಟು ಸೀಮಿತ ಎಂಬುವುದು ಅರಿವಾಗುತ್ತದೆ.
ಯೆಲ್ಲೋಸ್ಟೋನ್ ನಲ್ಲಿ ಒಂದು ದಿನದ ಪ್ರವಾಸದಲ್ಲಿ ನೋಡಿದ ದೃಶ್ಯ ಮತ್ತೊಂದು ದಿನ ಕಾಣಿಸುವುದಿಲ್ಲ. ಇಲ್ಲಿ ಎಲ್ಲವೂ ವಿಭಿನ್ನ. ಹವಾಮಾನ ಕೂಡ. ನಾವು ಇಲ್ಲಿ ಇದ್ದ ಮೂರು ದಿನಗಳಲ್ಲಿ ದಟ್ಟವಾದ ಮಂಜು, ಬಿಸಿಲು,ಆಲಿಕಲ್ಲು ಮಳೆ ಮತ್ತು ಹಿಮಪಾತ ಎಲ್ಲವನ್ನೂ ನೋಡಿದೆವು. ಒಟ್ಟಿನಲ್ಲಿ ಹೇಳುವುದಾದರೆ, ಭೂಮಿಯೊಳಗಿನ ಅಗ್ನಿಶಕ್ತಿಯಿಂದ ಹಿಡಿದು ಕಾಡಿನಲ್ಲಿರುವ ಜೀವ ಜಗತ್ತಿನವರೆಗೆ - ಪ್ರಕೃತಿಯ ಅನೇಕ ವೈವಿಧ್ಯತೆಗಳನ್ನು ಒಂದೇ ಕಡೆ ಕಾಣಬಹುದಾದ ವಿಸ್ಮಯಕಾರಿ ಲೋಕವೇ ಯೆಲ್ಲೋಸ್ಟೋನ್ ರಾಷ್ಟ್ರೀಯ ಉದ್ಯಾನವನ. ಇಲ್ಲಿಂದ ಹೊರಡುವಾಗ ಪ್ರಕೃತಿಯ ಅದ್ಭುತಗಳನ್ನು ಕಣ್ಣಾರೆ ಕಂಡ ತೃಪ್ತಿ ಮತ್ತು ಅದರ ಮುಂದೆ ಮೂಡಿದ ವಿನಮ್ರತೆಯ ಭಾವನೆ ಎರಡೂ ನಮ್ಮ ಮನಸ್ಸಿನಲ್ಲಿ ಉಳಿದಿದ್ದವು.















