Karada Vishwa

Article · March 21, 2026

ಉಭೇರ್ಲಿಂ ಉಂಡಲಿಕಂ.. ( ಸೆಕೆ ಉಂಡಲಿಕ )

- ನಳಿನಿ ಸೈಪಂಗಲ್ಲು

ಬೇಕಾಗುವ ಸಾಮಗ್ರಿಗಳು :
ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ಸೋಳೆ,  ಅಕ್ಕಿ , ತೆಂಗಿನ ತುರಿ, ಹಸಿ ಗಾಂಧಾರಿ ಮೆಣಸು, ಅಗತ್ಯವಿದ್ದಲ್ಲಿ ಸ್ವಲ್ಪ ಉಪ್ಪು, ಒಗ್ಗರಣೆಗೆ -  ಎಣ್ಣೆ, ಸಾಸಿವೆ, ಒಣ ಕೆಂಪುಮೆಣಸಿನ ಕಾಯಿ , ಒಗ್ಗರಣೆ ಸೊಪ್ಪು, ನೀರುಳ್ಳಿ , ಮಸಾಲ ಹುಡಿ
ಮಾಡುವ ವಿಧಾನ :
ಎರಡು ಮುಷ್ಠಿ ಹಲಸಿನ ಉಪ್ಪು ಸೋಳೆಯನ್ನು ಎರಡು ದಿನ ನೀರಲ್ಲಿಟ್ಟು ಅದರ ಉಪ್ಪಿನ ಅಂಶ ಕಮ್ಮಿಯಾದ ಮೇಲೆ ನೀರು ಹಿಂಡಿ ತೆಗೆದ ಬಳಿಕ ಮಿಕ್ಸಿ ಜಾರಿನಲ್ಲಿ ಹಾಕಿ ನೆನೆಯಲಿಟ್ಟ ಒಂದು ಕಪ್ ಅಕ್ಕಿಯೊಂದಿಗೆ ಸ್ವಲ್ಪ ತೆಂಗಿನ ತುರಿ, ನಾಲ್ಕು ಹಸಿ ಗಾಂಧಾರಿ ಮೆಣಸು (ಸಣ್ಣ ಮೆಣಸು )ರುಚಿಗೆ ತಕ್ಕಷ್ಟು ಉಪ್ಪು (ಸೋಳೆಗೆ ಉಪ್ಪು ಮೊದಲೇ ಇದ್ದಲ್ಲಿ ಬೇಡ )ಇವೆಲ್ಲವನ್ನೂ ಸೇರಿಸಿ ನೀರು ಬೆರೆಸದೆ ಗಟ್ಟಿಯಾಗಿ ರುಬ್ಬಿಟ್ಟುಕೊಳ್ಳಿ. ಹಿಟ್ಟು ತುಂಬಾ ಮೆತ್ತಗಿದ್ದರೆ ಸ್ವಲ್ಪ ಅಕ್ಕಿ ಹುಡಿ ಸೇರಿಸಿ ಹಿಟ್ಟು ಉಂಡೆ ಕಟ್ಟುವಷ್ಟು ಗಟ್ಟಿಯಾಗಿ ಇರುವಂತೆ ಕಲಸಿಟ್ಟು ಕೊಳ್ಳಿ. ಒಂದು ತಟ್ಟೆಯಲ್ಲಿ ಈ ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ. ಇಡ್ಲಿ ತಟ್ಟೆಯಲ್ಲಿಟ್ಟು ಬೇಯಿಸಿ. ತಣಿದ ಬಳಿಕ ಅವುಗಳನ್ನೆಲ್ಲ ಬಿಡಿಯಾಗಿ ಬಿಡಿಸಿಟ್ಟುಕೊಳ್ಳಿ.
ತವಾದಲ್ಲಿ ಎರಡು ಚಮಚ ಒಗ್ಗರಣೆಗೆ ತಕ್ಕಷ್ಟು ಎಣ್ಣೆ, ಸಾಸಿವೆ, ಒಣ ಕೆಂಪು ಮೆಣಸಿನಕಾಯಿ ತುಂಡು, ಒಗ್ಗರಣೆ ಸೊಪ್ಪು, ಸಣ್ಣಕ್ಕೆ ಕೊಚ್ಚಿ ಇಟ್ಟ ನೀರುಳ್ಳಿ, ಸ್ವಲ್ಪ ಮೆಣಸಿನ ಹುಡಿ, ಮಸಾಲ ಹುಡಿ ಹಾಕಿ ಒಗ್ಗರಿಸಿ ಬಿಡಿಸಿಟ್ಟ ಉಂಡಲಿಕಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ ಬಿಸಿ ಮಾಡಿ. ಸ್ವಲ್ಪ ತೆಂಗಿನ ತುರಿಯನ್ನು ಇದರ ಮೇಲೆ ಉದುರಿಸಿ ಬಿಸಿ ಇರುವಾಗಲೇ ತಿನ್ನಲು ಕೊಡಿ. ಎಣ್ಣೆಯಲ್ಲಿ ಕರಿದ ಉಂಡ್ಲ ಕಾಳಿಗಿಂತ ವಿಭಿನ್ನ ರುಚಿಯಾಗಿದ್ದು ಎಲ್ಲಾ ವಯಸ್ಕರಿಗೂ ಇದು ಇಷ್ಟ ಆಗುತ್ತೆ. ಸಂಜೆ coffee ಗೆ ಇದು ಚೆನ್ನಾಗಿರುತ್ತೆ. ಎಣ್ಣೆಯಲ್ಲಿ ಕರಿದ ಉಂಡಲಿಕದಂತೆ ತುಂಬಾ ದಿನ ಇಡುವಂತಿಲ್ಲ ಅಷ್ಟೇ.
ಈಗಿನ ಮಕ್ಕಳಿಗೆ ಇದು ಹೊಸ ತಿಂಡಿ.
Food
ಉಭೇರ್ಲಿಂ ಉಂಡಲಿಕಂ.. ( ಸೆಕೆ ಉಂಡಲಿಕ )