Karada Vishwa

Article · November 21, 2026

ಅಣ್ಣಯ್ಯನ ವಚನಗಳು

ಸಂತೋಷ್ ಕುಮಾರ್ ನಡುಮನೆ

1

ಮನಕೆ ತೋಚಿದ ರೀತಿ ಬರೆದೆ ನಾ ತಪವನು |

ಅನುದಿನವು ಜಪಿಸುವೆನು ತಾಪ ಕಳೆವ ಜಪವ |

ಘನವಾದ ಸ್ವರ್ಗಕ್ಕೆ ದಾರಿ ಅಣ್ಣಯ್ಯ ||

2.

ನೂರು ಕವನವ ಬರೆದು ಹರಿ-ಹರರ ಜಪಿಸಿದರೆ |

ತೋರುವವರಿಲ್ಲ ತಪ್ಪು-ಒಪ್ಪುಗಳ ತಿದ್ದಿ |

ದೂರದ ಸ್ವರ್ಗಕ್ಕೆ ನಾನೇ ನಡೆಯಬೇಕು ಅಣ್ಣಯ್ಯ

3.

ಅಟ್ಟದಲಿ ಕಟ್ಟಿಟ್ಟ ಬತ್ತವನು ತೆಗೆದಿಟ್ಟು |

ಸಿಟ್ಟಿಲ್ಲದೆಯೆ ನೀನು ಹಸಿದವಗೆ ಹಂಚಿದರೆ |

ಹುಟ್ಟುವುದು ಪುಣ್ಯ ಅಣ್ಣಯ್ಯ ||

4.

ಅತ್ತಿತ್ತ ನೋಡುತ್ತ ಜೀವವಿದ್ದಾಗ ನೀ |

ಮತ್ತೆ ಮತ್ತೆ ನೋವ ಕೊಟ್ಟು ಕೊರಗಿಸುತ |

ಸತ್ತ ಮೇಲೆ ಅತ್ತು ಫಲವೇನು ಅಣ್ಣಯ್ಯ

ಅರ್ಥ:

1 ನನ್ನ ಮನಸ್ಸಿಗೆ ಹೊಳೆದಂತೆ ಭಕ್ತಿಪೂರ್ವಕವಾಗಿ ಈ ಸಾಲುಗಳನ್ನು ತಪಸ್ಸಿನಂತೆ ಬರೆದಿದ್ದೇನೆ. ಬದುಕಿನ ಸಂಕಟ ಮತ್ತು ತಾಪಗಳನ್ನು ಕಳೆಯುವ ಈ ಜಪವನ್ನು ನಾನು ಪ್ರತಿದಿನವೂ ಮಾಡುತ್ತೇನೆ. ಇದೇ ನನಗೆ ಶ್ರೇಷ್ಠವಾದ ಸ್ವರ್ಗಕ್ಕೆ ದಾರಿಯಾಗಿದೆ ಅಣ್ಣಯ್ಯ

2 ನಾನು ನೂರಾರು ಕವನಗಳನ್ನು ಬರೆದು, ಹರಿ-ಹರರನ್ನು (ದೇವರನ್ನು) ಜಪಿಸಿದರೂ ಅವುಗಳನ್ನು ಓದಿ ತಪ್ಪು-ಒಪ್ಪುಗಳನ್ನು ತಿದ್ದಿ ತೋರಿಸುವವರು ಯಾರೂ ಇಲ್ಲ. ಆದ್ದರಿಂದ ಯಾರ ಹಂಗೂ ಇಲ್ಲದೆ ನನ್ನ ಭಕ್ತಿಯ ಬಲದಿಂದಲೇ ನಾನು ದೂರದ ಸ್ವರ್ಗದ ಹಾದಿಯಲ್ಲಿ ಒಬ್ಬನೇ ನಡೆಯಬೇಕು ಅಣ್ಣಯ್ಯ

3 ಮನೆಯ ಅಟ್ಟದ ಮೇಲೆ ಕೂಡಿಟ್ಟಿರುವ ಭತ್ತವನ್ನು (ಸಂಪತ್ತು ಅಥವಾ ಆಹಾರವನ್ನು) ಕೆಳಗಿಳಿಸಿ, ಯಾವುದೇ ಸಿಟ್ಟು ಅಥವಾ ಬೇಸರವಿಲ್ಲದೆ ಹಸಿದವರಿಗೆ ಪ್ರೀತಿಯಿಂದ ಹಂಚಿ ಕೊಟ್ಟರೆ ಅದರಿಂದ ನಿಜವಾದ ಪುಣ್ಯ ಪ್ರಾಪ್ತಿಯಾಗುತ್ತದೆ ಅಣ್ಣಯ್ಯ

4 ಮನುಷ್ಯ ಜೀವಂತವಾಗಿರುವಾಗ ಅವನ ಕಷ್ಟಕ್ಕೆ ಸ್ಪಂದಿಸದೆ ನಿರ್ಲಕ್ಷಿಸಿ, ಪದೇ ಪದೇ ನೋವು ಕೊಟ್ಟು ಕೊರಗುವಂತೆ ಮಾಡಿ, ಆತ ಸತ್ತು ಹೋದ ಮೇಲೆ ಬಂದು ಅತ್ತರೆ ಅದರಿಂದ ಏನು ಪ್ರಯೋಜನವಿದೆ ಅಣ್ಣಯ್ಯ? (ಇರುವಾಗಲೇ ಪ್ರೀತಿ ಮತ್ತು ಗೌರವ ತೋರಬೇಕು ಎಂಬುದು ಇದರ ಆಶಯ)

Creative Writings