
Article · October 20, 2026
ಶಾರದಾಂಬೆ
ಸಂಧ್ಯಾ ಕೊರೆಕ್ಕಾನ
ವೇದವಾಙ್ಮಯಿ ನಾದದೇವತೆ
ತಾಯಿಶಾರದೆ ಪೂಜಿತೆ
ಬುದ್ಧಿ ಜ್ಞಾನವ ನೀಡುತಿಹಳು
ವಿದ್ಯೆಗಧಿಪತಿ ಸಂಸ್ತುತೆ
ಕರದಿ ಪುಸ್ತಕ ಮಣಿಯ ಹಾರ
ವೀಣೆ ನುಡಿಸುತ ನಿಂತರೆ
ಮನಕೆ ಮುದವನು ತರುವ ಸ್ವರವನು
ಹೊತ್ತ ಇಂಪಿನ ಕಂಧರೆ
ಹಂಸ ಆಸನೆ ಶ್ವೇತವಸನಳು
ಪದಕ ಕಂಕಣ ಶೋಭಿತೆ
ಸತ್ಯಲೋಕದ ಒಡತಿ ಯಾಗಿಹ
ಬ್ರಹ್ಮ ಮಾನಸ ವಂದಿತೆ
ಆದಿಶಂಕರಗೊಲಿದು ಬಂದಿಹೆ
ಶೃಂಗಗಿರಿಯಲಿ ನಿಂತಿಹೆ
ತುಂಗೆ ನದಿಯಲಿ ಮಿಂದು ನಿನ್ನಯ
ಚರಣ ಸೇವೆಯ ಮಾಡುವೆ
Creative Writings
