
Article · August 18, 2026
ಕೃಷ್ಣನ ಮಾಯೆ
ವೀಣಾ ಎಂ ಭಟ್
ಏನು ಮಾಯೆಯೊ ಏನು ಪ್ರಭೆಯೊ ಮಹಾವಿಷ್ಣು
ಕಪಟ ನಾಟಕ ಸೂತ್ರಧಾರ ಶ್ರೀ ಕೃಷ್ಣಾ //ಏನು//
ಎಂಟನೆಯ ಗರ್ಭದಲಿ ದೇವಕಿಯ ಸುತನಾದೆ
ಭಂಟರ ನಡುವಲ್ಲಿ ಸೆರೆಮನೆಲಿ ಜನಿಸಿದೆ
ತುಂಟತನವನು ತಾಯಿ ಯಶೋದೆಯಲಿ ತೋರಿದೆ
ಕಂಟಕವು ಮಾವ ಕಂಸನಿಗೆ ಯಮನಾದೆ //ಏನು//
ರಾಧೆಯನು ಪ್ರೇಮಿಸಿದೆ ರುಕ್ಮಿಣಿಯ ವರಿಸಿದೆ
ಮಾಧವನೆ ಏನು ನಿನ್ನ ಮಹಿಮೆಯು ಆಗಾಧ
ಸೋದರನ ಯುಕ್ತಿಯಲಿ ತೀರ್ಥ ಯಾತ್ರೆಗೆ ಕಳುಹಿ
ಯಾದವ ಮಹಾಭಾರತ ಯುದ್ಧ ಸೂತ್ರವಿದೇನೊ //ಏನು//
ಪಕ್ಷ ಪಾಂಡವರಲ್ಲಿ ಊಟ ಕೌರವರಲ್ಲಿ
ಸಖ್ಯ ಕೋರುತ ಬರಲು ನೀ ಭಾರಿ ಶಯನದಲಿ
ಪರಮ ಪಾವನ ಮೂರ್ತಿ ಪನ್ನಗ ಶಯನನೆ
ಪಾದತಲದಲ್ಲಿರುವ ಪಾರ್ಥನಿಗೆ ಸಾರಥಿಯಾದೆ //ಏನು//
ಕುಂತಿ ಪುತ್ರರ ನಡುವೆ ತಾರತಮ್ಯವು ನಿನಗೆ
ಕರ್ಣಕುಂಡಲ ಕವಚ ಯೋಚಿಸಿ ಯಾಚಿಸಿದೆ
ಸೂರ್ಯಪುತ್ರನ ಮರಣ ಹೆಣ್ಣಿಗೆ ಕಂಕನ ಶಾಪ
ಶ್ಯಾಮಸುಂದರ ನಿನ್ನ ಮಹಿಮೆ ಅರಿಯೆನು ದೇವಾ //ಏನು//
Creative Writings
