Karada Vishwa

Article · November 21, 2026

ಅವನ ಮೌನದ ಹಿಂದೆ ಒಂದು ನೋವಿನ ಕಥೆಯಿದೆ..!

19-11-2026 ಅಂತರರಾಷ್ಟ್ರೀಯ ಪುರುಷರ ದಿನದ ಅಂಗವಾಗಿ ಮೇಘನಾ ಕಾನೇಟ್ಕರ್ ಅವರು ಬರೆದ ಲೇಖನ

ಅವನು ಅಮ್ಮನ ಮುದ್ದಿನ ಮಗನಾಗಿ ಬೆಳೆದಿರುವ ಗಂಡು ಮದುವೆಯಾದ ನಂತರ ಅಮ್ಮನ ಪ್ರೀತಿ ಮತ್ತು ಹೆಂಡತಿಯ ನಿರೀಕ್ಷೆಗಳ ನಡುವೆ ಸಿಲುಕುತ್ತಾನೆ. ಅಮ್ಮನ ಪರ ನಿಂತರೆ ಹೆಂಡತಿಗೆ ಬೇಸರ, ಹೆಂಡತಿಯ ಪರ ನಿಂತರೆ ಅಮ್ಮನ ಕಣ್ಣೀರು!ಮನೆಯ ಹಿರಿಯ ಮಗನಾಗಿ ಹುಟ್ಟಿದರೆ ಮತ್ತೊಂದು ರೀತಿ — ತಂಗಿ ಮತ್ತು ಹೆಂಡತಿಯ ನಡುವಿನ ಮನಸ್ತಾಪದಲ್ಲಿ ಯಾರನ್ನು ಸಮಾಧಾನಪಡಿಸಬೇಕು ಎಂಬ ಗೊಂದಲ. ಹೆಣ್ಣುಮಕ್ಕಳ ತಂದೆಯಾಗಿ ಅವರ ಭವಿಷ್ಯ, ಸುರಕ್ಷತೆ, ಮದುವೆ ಮತ್ತು ಸಮಾಜದ ಸಾವಿರ ಪ್ರಶ್ನೆಗಳ ಜವಾಬ್ದಾರಿ ಅವನ ಹೆಗಲ ಮೇಲೆ.ಕುಟುಂಬದ ಕನಸುಗಳಿಗಾಗಿ ಮನೆ ಸಾಲ, ವಾಹನ ಸಾಲ, ಚಿನ್ನದ ಸಾಲ, ಕೈ ಸಾಲ ಎಂದು ದುಡಿಯುತ್ತಾನೆ. ಓವರ್‌ಟೈಮ್, ಹೆಚ್ಚುವರಿ ಕೆಲಸ, ರಜೆ ದಿನಗಳಲ್ಲಿಯೂ ದುಡಿತ — ಎಲ್ಲರ ಆಸೆಗಳನ್ನು ಈಡೇರಿಸುವ ಭರದಲ್ಲಿ ತನ್ನ ಕನಸುಗಳನ್ನೇ ಮರೆತುಬಿಡುತ್ತಾನೆ.

ಮಗುವಿನ ಜನನದ ನಂತರ ಹೆಂಡತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳಬೇಕಾದದ್ದು ಗಂಡನ ಕರ್ತವ್ಯ. ಆದರೆ ಅವನಿಗೂ ಭಾವನೆಗಳು ಮತ್ತು ದೈಹಿಕ ಅಗತ್ಯಗಳಿವೆ; ಅವುಗಳನ್ನು ಗೌರವದಿಂದ ವ್ಯಕ್ತಪಡಿಸುವ ಅವಕಾಶವೂ ಇರಬೇಕು. ಪ್ರೀತಿಯಲ್ಲಿ ಒತ್ತಾಯವಿರಬಾರದು, ಹಾಗಂತ ಭಾವನೆಗಳಿಗೆ ತಿರಸ್ಕಾರವೂ ಇರಬಾರದು.

ವಿಚ್ಛೇದನದ ನಂತರ ಮಹಿಳಾ ಸಹೋದ್ಯೋಗಿಯೊಂದಿಗೆ ಅಥವಾ ಪಕ್ಕದ ಮನೆಯ ಹುಡುಗಿಯೊಂದಿಗೆ ಸ್ನೇಹಪೂರ್ವಕವಾಗಿ ಮಾತನಾಡಿದರೂ ಅನುಮಾನದ ದೃಷ್ಟಿ, ಹೆಣ್ಣುಬಾಕನೆಂಬ ಹಣೆಪಟ್ಟಿ! ಆದರೆ ಇಂಥವರ ನಡುವೆ ಹೊರಗೆ ಅಮಾಯಕರಂತೆ ಸೋಗು ಹಾಕಿ ಆದರ್ಶ ಗೃಹಸ್ಥನಂತೆ ನಟಿಸುತ್ತಾ, ಖಾಸಗಿಯಾಗಿ ದುರ್ಬಲ ಮಹಿಳೆಯರ ಭಾವನೆಗಳೊಂದಿಗೆ ಆಟವಾಡುವ ಕೆಲವು ಪುರುಷರೂ ಇದ್ದಾರೆ. ಇಲ್ಲಿ ಮುಖವಾಡಕ್ಕಿಂತ ನಿಜವಾದ ವ್ಯಕ್ತಿತ್ವ ಮುಖ್ಯ. ವೈವಾಹಿಕ ಜೀವನದಲ್ಲಿ ಸುಳ್ಳು ಆರೋಪಗಳು ಎದುರಾದಾಗ, ವಿಚಾರಣೆಗಳ ನಡುವೆ ಗೌರವ, ಉದ್ಯೋಗ ಮತ್ತು ಮಾನಸಿಕ ನೆಮ್ಮದಿ ಕಳೆದುಕೊಳ್ಳುವ ಪುರುಷರ ನೋವನ್ನೂ ಕೇಳಬೇಕು. ಮಹಿಳೆಯರ ರಕ್ಷಣೆಗೆ ಕಾನೂನುಗಳು ಅಗತ್ಯ; ಅದೇ ರೀತಿ ಅವುಗಳ ದುರುಪಯೋಗವಾಗದಂತೆ ನ್ಯಾಯಯುತ ವಿಚಾರಣೆಯೂ ಅಗತ್ಯ.

ಇನ್ನೊಂದು ಕಹಿ ಸತ್ಯವೆಂದರೆ, ಗಂಡಾಗಿರುವುದು ಅಷ್ಟು ಸುಲಭವಲ್ಲ! ಅನೇಕ ಬಾರಿ ಅವನ ಭಾವನೆ, ಅಭಿಪ್ರಾಯ, ಆಲೋಚನೆ ಮತ್ತು ನಿರ್ಧಾರಗಳಿಗೆ ಅವನ ಸ್ವಂತ ಮನೆಯಲ್ಲೇ ಬೆಲೆ ಇರುವುದಿಲ್ಲ.

ಅಮ್ಮನಿಂದ – "ನೀನು ಸುಮ್ಮನಿರು, ನಿನಗೆ ಏನೂ ಗೊತ್ತಾಗಲ್ಲ!"

ಹೆಂಡತಿಯಿಂದ – "ರೀ, ನೀವು ಸುಮ್ಮನಿರಿ. ಇದರಲ್ಲಿ ತಲೆ ಹಾಕಬೇಡಿ, ಇದೆಲ್ಲ ನಿಮಗೆ ಅರ್ಥವಾಗಲ್ಲ!"

ಬೆಳೆದು ದೊಡ್ಡವರಾದ ಮಕ್ಕಳಿಂದ – _"ಅಯ್ಯೋ ಅಪ್ಪಾ, ನಿಮಗ್ಯಾಕೆ ಅದೆಲ್ಲ? ಸುಮ್ಮನೆ ದೂರ ಇರಿ. ಎಲ್ಲದಕ್ಕೂ ಮೂಗು ತೂರಿಸಿಕೊಂಡು ಬರಬೇಡಿ!"

ಇಂತಹ ಮಾತುಗಳನ್ನು ಕೇಳುತ್ತಾ ಒಂದು ಹಂತದಲ್ಲಿ ಅವನು ತನ್ನ ಅಭಿಪ್ರಾಯ, ಯೋಜನೆ, ಆಲೋಚನೆ ಮತ್ತು ಭಾವನೆಗಳನ್ನು ಹಂಚಿಕೊಳ್ಳುವುದನ್ನೇ ನಿಲ್ಲಿಸಿಬಿಡುತ್ತಾನೆ. ಎಲ್ಲರ ಮಾತಿಗೂ ಕಿವಿಗೊಡುವ ಅವನ ಮಾತನ್ನು ಕೇಳಿಸಿಕೊಳ್ಳಲು ಮಾತ್ರ ಯಾರಿಗೂ ಸಮಯವಿರುವುದಿಲ್ಲ. ಅವನು ಹೇಳುವುದೆಲ್ಲ ಸರಿಯೇ ಇರಬೇಕೆಂದಿಲ್ಲ, ಆದರೆ ಅವನ ಮಾತು ಕೇಳಿಸಿಕೊಳ್ಳುವಷ್ಟು ಗೌರವವನ್ನಾದರೂ ನೀಡಬಾರದೇ? ಅವನ ಪಾತ್ರ ಕೇವಲ ದುಡಿಯುವುದು, ಹಣ ಸಂಪಾದಿಸುವುದು ಮತ್ತು ಜವಾಬ್ದಾರಿ ಹೊರುವುದು ಮಾತ್ರವಲ್ಲ. ಅವನಿಗೂ ಆ ಕುಟುಂಬದಲ್ಲಿ ಒಂದು ಧ್ವನಿ, ಒಂದು ಸ್ಥಾನ ಮತ್ತು ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇರಬೇಕು.

ಸಮಾಜ ಅವನಿಗೆ ಹೇಳುವುದೊಂದೇ — ಗಂಡಸರು ಅಳಬಾರದು, ಕುಗ್ಗಬಾರದು, ದುರ್ಬಲರಾಗಬಾರದು! ಆದರೆ ಅವನಿಗೂ ನೋವಾಗುತ್ತದೆ, ಅವನಿಗೂ ಒಂಟಿತನ ಕಾಡುತ್ತದೆ, ಅವನಿಗೂ ತನ್ನನ್ನು ಜಡ್ಜ್ ಮಾಡದೇ ಇರುವ ಒಂದು ಆಪ್ತ ಜೀವ "ನಾನಿದ್ದೇನೆ" ಎಂದು ಹೇಳಬೇಕೆನಿಸುತ್ತದೆ. ಗಂಡಾಗಲಿ, ಹೆಣ್ಣಾಗಲಿ, ತಪ್ಪು ಮಾಡಿದವರು ತಮ್ಮ ತಪ್ಪಿಗೆ ಜವಾಬ್ದಾರರಾಗಬೇಕು. ಒಳ್ಳೆಯವರನ್ನು ಅನುಮಾನದಿಂದ ನೋಡುವುದೂ ತಪ್ಪು; ತಪ್ಪಿತಸ್ಥರನ್ನು ಅವರ ಲಿಂಗದ ಕಾರಣಕ್ಕೆ ಸಮರ್ಥಿಸುವುದೂ ತಪ್ಪು.

ಈ ಪುರುಷರ ದಿನದಂದು ಪ್ರತಿಯೊಬ್ಬ ಮಗ, ಅಣ್ಣ, ತಮ್ಮ, ಗಂಡ, ತಂದೆ ಮತ್ತು ಸಹೋದ್ಯೋಗಿಯ ಮೌನದ ಹಿಂದಿರುವ ಭಾವನೆಗಳನ್ನು ಅರ್ಥಮಾಡಿಕೊಳ್ಳೋಣ. ಅವನೂ ಒಬ್ಬ ಮನುಷ್ಯನೇ; ಅವನಿಗೂ ಪ್ರೀತಿ, ಗೌರವ, ನ್ಯಾಯ ಮತ್ತು ನೆಮ್ಮದಿಯಿಂದ ಬದುಕುವ ಹಕ್ಕಿದೆ.

ಪುರುಷರ ದಿನದ ಹಾರ್ದಿಕ ಶುಭಾಶಯಗಳು!

Creative Writings