
Article · March 18, 2026
ಯುಗಾದಿ - ಇತಿಹಾಸ ಹಿನ್ನೆಲೆ ಮತ್ತು ಮಹತ್ವ
- ಶ್ರೀದೇವಿ ಎಸ್ ಭಟ್ ಕಜಮಲೆ
ಯುಗಾದಿ - ಇತಿಹಾಸ ಹಿನ್ನೆಲೆ ಮತ್ತು ಮಹತ್ವ
ಯುಗಾದಿಯು ಹಿಂದೂಗಳು ಆಚರಿಸುವ ಪವಿತ್ರವಾದ ಹಬ್ಬಗಳಲ್ಲಿ ಒಂದಾಗಿದೆ. ನಮ್ಮ ಭಾರತದಲ್ಲಿ ಯುಗಾದಿಯನ್ನು ಎರಡು ರೀತಿಯಲ್ಲಿ ಆಚರಿಸುತ್ತಾರೆ. ಕೆಲವರು ಚಾಂದ್ರಮಾನ ಗಣತಿಯ ಪ್ರಕಾರವೂ, ಇನ್ನು ಕೆಲವರು ಸೌರಮಾನ ಗಣತಿಯ ಪ್ರಕಾರವೂ ಆಚರಿಸುತ್ತಾರೆ.
ಚಾಂದ್ರಮಾನವೆಂದರೆ ಚಂದ್ರನ ಚಲನೆಯ ಆಧಾರದಿಂದ, ಹದಿನೈದು ದಿನಗಳು ಶುಕ್ಲಪಕ್ಷವೂ ಇನ್ನು ಹದಿನೈದು ದಿನಗಳು ಕೃಷ್ಣಪಕ್ಷವೂ ಸೇರಿದಾಗ ಚಾಂದ್ರಮಾನದ ಒಂದು ತಿಂಗಳಾಗುತ್ತದೆ. ಚೈತ್ರ ಮಾಸದ ಪಾಡ್ಯದಿಂದ ಹುಣ್ಣಿಮೆಯ ತನಕ ಶುಕ್ಲಪಕ್ಷವೂ ಅನಂತರದ ಪಾಡ್ಯದಿಂದ ಅಮಾವಾಸ್ಯೆಯ ತನಕ ಕೃಷ್ಣಪಕ್ಷವೂ ಸೇರಿದಾಗ ಚಾಂದ್ರಮಾನದ ಚೈತ್ರ ಮಾಸದ ಒಂದು ತಿಂಗಳಾಗುತ್ತದೆ. ಚಾಂದ್ರಮಾನ ಗಣತಿಯ ಪ್ರಕಾರ ಚೈತ್ರ ಮಾಸದಿಂದ ಹಿಡಿದು ಫಾಲ್ಗುಣ ಮಾಸದ ತನಕ ಒಂದು ಸಂವತ್ಸರವೆಂದು ಹೇಳಲಾಗುವುದು. ಹೀಗೇ ಒಟ್ಟು ಅರವತ್ತು ಸಂವಂತ್ಸರಗಳಿವೆ.
ಸೌರಮಾನವೆಂದರೆ ಸೂರ್ಯನ ಚಲನೆಯ ಆಧಾರದಲ್ಲಿ ಅಂದರೆ ಮೇಷ ಮಾಸದಿಂದ ಆರಂಭವಾಗಿ ಮೀನ ಮಾಸದ ತನಕ ಸಂಕ್ರಮಣದ ಗಣತಿಯಲ್ಲಿ ಆಚರಿಸಲಾಗುವುದು.
ಚಾಂದ್ರಮಾನ ಗಣತಿಯ ಪ್ರಕಾರ ಪ್ರತೀ ಚೈತ್ರಮಾಸದ ಪಾಡ್ಯದಂದು ಚಾಂದ್ರಮಾನ ಯುಗಾದಿಯನ್ನು ಆಚರಿಸಲಾಗುವುದು. ಇದು ಹಿಂದೂಗಳ ಅತ್ಯಂತ ಪವಿತ್ರವಾದ ಹಬ್ಬ. ಈ ದಿನ ನವ ವಸಂತ ಋತುವಿನ ಆಗಮನ. ಅಂದರೆ ಗಿಡ ಮರ ಬಳ್ಳಿಗಳು ಚಿಗುರಿ ಫಲ ಪುಷ್ಪಗಳಿಂದ ನಳನಳಿಸಿ ಹಚ್ಚಹಸಿರಿನಿಂದ ಪ್ರಕೃತಿಯನ್ನು ಸಿಂಗರಿಸಿ ಕಣ್ಣುಗಳಿಗೆ ಸೌಂದರ್ಯದ ಮೆರುಗನ್ನು ನೀಡುವುದು. ಇದರಿಂದಾಗಿ ನಮ್ಮ ಪೂರ್ವಜರು ಪ್ರತೀವರ್ಷದ ಚೈತ್ರ ಶುಕ್ಲದ ಪಾಡ್ಯದಿನದಂದು ಯುಗಾದಿಯನ್ನು ಆಚರಿಸಿಕೊಂಡು ಬಂದಿರುವರು. ಅಂದಿನಿಂದ ಇಂದಿನ ತನಕವೂ ಯುಗಾದಿ ಎಂಬ ಈ ಹಬ್ಬವನ್ನು ನಮ್ಮ ದೇಶದಲ್ಲಿ ಅನೂಚಾನವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಹಾಗೂ ಈ ಹಬ್ಬವು ಸಮಾಜದ ಹಿತದೃಷ್ಟಿಯಿಂದಲೂ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವುದಕ್ಕಾಗಿ ಇದಕ್ಕೆ ಮಹತ್ವವನ್ನು ಕೊಡಬೇಕಾಗಿದೆ. ಇದರಿಂದ ಮಾನಸಿಕವಾಗಿಯೂ, ಬೌಧ್ಧಿಕವಾಗಿಯೂ ಅಂತರಂಗದ ವಿಕಸನವಾಗುವುದು. ಹೀಗೇ ಪ್ರತೀ ಸಂವತ್ಸರದ ಚೈತ್ರ ಮಾಸದ ಪಾಡ್ಯದಂದು ಯುಗಾದಿಯನ್ನು ಆಚರಿಸುತ್ತಾರೆ. ಈ ದಿನ ಬೇವು ಬೆಲ್ಲವನ್ನು ಸವಿಯುವುದರೊಂದಿಗೆ ಜೀವನದ ನೋವು ನಲಿವುಗಳೆರಡನ್ನೂ ಸಮಾನವಾಗಿ ಸ್ವೀಕರಿಸುವ ನಿಟ್ಟಿನಲ್ಲಿ ಯುಗಾದಿ ಹಬ್ಬವು ಮಹತ್ವವನ್ನ ಪಡೆದಿರುವುದು. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸವರುಷಕೆ ಹೊಸಹರುಷವ ಹೊಸತು ಹೊಸತು ತರುತಿದೆ.
ಯುಗಾದಿಯನ್ನು ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಪ್ರತೀ ಹಿಂದೂಗಳು ಮನೆಯನ್ನು ಅಲಂಕರಿಸಿ, ದೇವರಿಗೆ ದೀಪಹಚ್ಚಿ, ತುಳಸೀಕಟ್ಟೆಯನ್ನು ಸಿಂಗರಿಸಿ, ಪಂಚಾಂಗ, ಹೊಸ ಬಟ್ಟೆ, ಫಲಪುಷ್ಪಗಳಿಂದ ಕೂಡಿದ ಹರಿವಾಣದಲ್ಲಿ ಅರಸಿನ ಕುಂಕುಮ, ಕನ್ನಡಿಯನ್ನಿಟ್ಟು, ಅದರಲ್ಲಿ"ಕಣಿ '' ನೋಡುವ ಸಂಪ್ರದಾಯವಿದೆ. ಈ ಶುಭದಿನದಂದು ಮನೆಯವರೆಲ್ಲರೂ, ಬೇವು ಬೆಲ್ಲವನ್ನು ಸವಿಯುವ ಸಂಪ್ರದಾಯವೂ ಇದೆ. ಅಂದರೆ, ಜೀವನದಲ್ಲಿ ಬರುವ ಕಷ್ಟ,ಸುಖಗಳೆರಡನ್ನೂ ಸಮಾನವಾಗಿ ಸ್ವೀಕರಿಸುವ ಭಾವನೆಯನ್ನು ಬಲಗೊಳಿಸುವ ನಂಬಿಕೆಯಿಂದ ಈ ಆಚರಣೆ ಮಹತ್ವವನ್ನ ಪಡೆದಿರುತ್ತದೆ.
ಕರಾಡ ಬ್ರಾಹ್ಮಣ ಸಮುದಾಯದಲ್ಲಿ ಯುಗಾದಿ ಹಬ್ಬವು ಮಹತ್ವದ ಸ್ಥಾನವನ್ನ ಪಡೆದಿದೆ. ಸಾಮಾನ್ಯವಾಗಿ, ಕರಾಡ ಬ್ರಾಹ್ಮಣರು ಚಾಂದ್ರಮಾನ ಹಬ್ಬಗಳ ಆಚರಣೆಗೆ ಮಹತ್ವವನ್ನು ನೀಡುತ್ತಾರೆ. ಈ ಚಾಂದ್ರಮಾನ ಆರಂಭವಾದ ದಿನದಂದೇ ಯುಗಾದಿ ಹಬ್ಬವು ಬರುವುದರಿಂದ ಇದನ್ನು ನಮ್ಮ ಸಮುದಾಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಗುವುದು. ಇದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ , ನವ ಮನ್ವಂತರಕ್ಕೆ ಪಾದಾರ್ಪಣೆ ಮಾಡುವ, ಹಾಗೂ ಭಾವನಾತ್ಮಕವಾಗಿ ಅದ್ಭುತವಾದ ಪರಿಕಲ್ಪನೆಯನ್ನು ಸಾರುವ ವಿಶಿಷ್ಟವಾದ ಹಬ್ಬ. ಆದುದರಿಂದ ಕರ್ಹಾಡ ಬ್ರಾಹ್ಮಣರು ಯುಗಾದಿಯನ್ನು ಸಂತಸದಿಂದಲೂ, ಶ್ರದ್ಧಾ ಭಕ್ತಿಯಿಂದಲೂ ಆಚರಿಸುತ್ತಾರೆ.
ಚೈತ್ರ ಶುಕ್ಲ ಮಾಸದ ಯುಗಾದಿಯಂದು ಪಂಚಾಂಗದ ಉತ್ತಮವಾದ ಫಲಗಳನ್ನುಶ್ರವಣ ಮಾಡುವುದರಿಂದ ದು:ಖದಾರಿದ್ರ್ಯಗಳು ದೂರವಾಗಿ ಆಯುರಾರೋಗ್ಯ , ಐಶ್ವರ್ಯಾದಿಗಳಿಂದ ಸುಖಸಂತಸವು ಪ್ರಾಪ್ತಿಯಾಗುವುದೆಂಬ ನಂಬಿಕೆಯಿದೆ. ಯುಗಾದಿಯ ಈ ದಿನದಂದು ಇಡ್ಲಿ, ಪಾಯಸ, ಲಡ್ಡು, ಹಾಗೂ ಇನ್ನಿತರ ಭಕ್ಷ್ಯ ಭೋಜ್ಯಗಳನ್ನು ಮಾಡಿ, ಮನೆಯವರು, ಬಂದ ಅತಿಥಿ, ಅಭ್ಯಾಗತರಿಗೆ ಪ್ರೀತಿಯಿಂದ ಉಣಬಡಿಸಿ, ಆಮೇಲೆ ಮನೆಯವರೆಲ್ಲರೂ ಉಣ್ಣುತ್ತಾರೆ.
Creative Writings
