
Article · August 20, 2026
ಬ್ಯಾಡ್‌ಲ್ಯಾಂಡ್ಸ್ ಎಂಬ ಪ್ರಾಕೃತಿಕ ಅದ್ಭುತ
ಪದ್ಮಶ್ರೀ ಮಾದೇರಿ , ಬೆಂಗಳೂರು
ಅಮೆರಿಕ ಪ್ರವಾಸ – ಭಾಗ ೧.
ಜೂನ್ ನಲ್ಲಿ ನನ್ನ ಮನೆಯವರಿಗೆ ಕೆಲಸದ ನಿಮಿತ್ತ ಅಮೆರಿಕಕ್ಕೆ ಹೋಗುವ ಅವಕಾಶ ಒದಗಿತು. ಇದನ್ನು ತಿಳಿದ,ಅಮೆರಿಕದಲ್ಲೇ ನೆಲೆಸಿರುವ ನನ್ನ ತಂಗಿ "ನೀನೂ ಬಾವನ ಜೊತೆ ಅಮೆರಿಕಕ್ಕೆ ಬಾ " ಎಂದು ಅವಳ ಮನೆಗೆ ಆಹ್ವಾನಿಸಿದಳು. ಬಹಳ ಯೋಚನೆ ಮಾಡಿ, ನಾನು ಹಾಗೂ ಮನೆಯವರು ಜೊತೆಯಲ್ಲಿ ಅಮೆರಿಕಕ್ಕೆ ಹೋಗುವುದೆ೦ದೂ, ಮನೆಯವರ ಆಫೀಸ್ ಕೆಲಸ ಮುಗಿದ ಮೇಲೆ ಎರಡು ವಾರಗಳ ಕಾಲ ರಜೆ ಹಾಕಿ ಎಲ್ಲರೂ ರೋಡ್ ಟ್ರಿಪ್ ಮಾಡುವುದೆಂದೂ ನಿರ್ಧಾರ ಮಾಡಿದೆವು. ತಂಗಿ ಹಾಗೂ ಅವಳ ಗಂಡ ಸೇರಿ ಎಲ್ಲಾ ಪ್ಲಾನ್ ಮಾಡಿದ್ದರು. ನಾವು ಹೋಗಬೇಕಾದ ಜಾಗಗಳು, ರಾತ್ರಿ ತಂಗುವ ಹೋಟೆಲ್ ಗಳು ಇತ್ಯಾದಿ ಎಲ್ಲವನ್ನು ಮೊದಲೇ ಬುಕ್ ಮಾಡಿದ್ದರು. ಅಲ್ಲಿನ ಪಿಜ್ಜಾ, ಬರ್ಗರ್ ತಿನ್ನಲು ಸಾಧ್ಯವಾಗದ ಕಾರಣ ಆದಷ್ಟು ನಾವೇ ಅಡುಗೆ ಮಾಡುವುದೆಂದು ತೀರ್ಮಾನ ಮಾಡಿಕೊಂಡೆವು.
ನೋಡು ನೋಡುತ್ತಿದ್ದಂತೆ ನಾವು ಅಮೆರಿಕಕ್ಕೆ ಹೋಗಿಯೂ ಆಯಿತು, ಮನೆಯವರ ಆಫೀಸ್ ಕೆಲಸವೂ ಮುಗಿಯಿತು. ನಮ್ಮ ಪ್ರವಾಸದ ದಿನ ಬಂದೇ ಬಿಟ್ಟಿತು. ಬೆಳಗ್ಗೆ 7:00 ಗಂಟೆಗೆ ಮನೆಯಿಂದ ಹೊರಟೆವು. ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಎಲ್ಲವನ್ನೂ ಪ್ಯಾಕ್ ಮಾಡಿದ್ದೆವು. ಸುಮಾರು 10 ಗಂಟೆಗಳ ಡ್ರೈವ್ ಬಳಿಕ ಸಂಜೆ ಬ್ಯಾಡ್ ಲ್ಯಾಂಡ್ಸ್ ನ್ಯಾಷನಲ್ ಪಾರ್ಕ್ ತಲುಪಿದೆವು. ಅಲ್ಲಿ ಹೋಟೆಲ್ ನಲ್ಲಿ ರಾತ್ರಿ ತಂಗಿದ್ದು, ಮಾರನೆಯ ದಿನ ಬೆಳಗ್ಗೆ ಉದ್ಯಾನವನ ನೋಡಲು ಹೋದೆವು.
ಉದ್ಯಾನವನ ಪ್ರವೇಶಿಸುತ್ತಿದ್ದಂತೆ ವಾವ್ ಎಂಬ ಉದ್ಗಾರ ನಮ್ಮೆಲ್ಲರ ಬಾಯಿಯಿಂದ ಹೊರ ಬಿತ್ತು . ಕಣ್ಣು ಹಾಯಿಸಿದಲ್ಲೆಲ್ಲ ವಿಚಿತ್ರ ಆಕಾರದ ದೊಡ್ಡ ದೊಡ್ಡ ಬೆಟ್ಟ ಗುಡ್ಡಗಳು ಹಾಗೂ ಕಣಿವೆಗಳು. ಗಿಡ ಮರಗಳಂತೂ ಇಲ್ಲವೇ ಇಲ್ಲ. ಕಾರಿನಿಂದ ಇಳಿದು ನಡೆಯಲಾರಂಭಿಸಿದೆವು.
ಬ್ಯಾಡ್ಲ್ಯಾಂಡ್ಸ್ ರಾಷ್ಟ್ರೀಯ ಉದ್ಯಾನವನ ಅಮೆರಿಕದ ದಕ್ಷಿಣ ಡಕೋಟಾ ರಾಜ್ಯದಲ್ಲಿದೆ. ಇದರ ವಿಸ್ತೀರ್ಣ ಸುಮಾರು 2,43,000 ಎಕರೆಗಳು . ಇಲ್ಲಿ ವಿಚಿತ್ರ ಆಕಾರದ ಬೆಟ್ಟಗಳು, ಕಲ್ಲಿನ ಗೋಪುರಗಳು, ಆಳವಾದ ಕಣಿವೆಗಳು ಹಾಗೂ ಬಣ್ಣ ಬಣ್ಣದ ಬಂಡೆಗಳು ಕಾಣಲು ಸಿಗುತ್ತವೆ .ಇಲ್ಲಿಯ ಭೂಪ್ರದೇಶವನ್ನು ನೋಡಿದ ನಮಗೆಲ್ಲಾ ಅಬ್ಬ, ಅದ್ಭುತ! ಎಂದು ಅನಿಸುವುದರ ಜೊತೆಗೆ ಈ ಉದ್ಯಾನವನ ಹೇಗೆ ರೂಪುಗೊಂಡಿತು ಎಂಬ ಪ್ರಶ್ನೆಯೂ ಕಾಡತೊಡಗಿತು. ಇದರ ಬಗ್ಗೆ ಅಲ್ಲಲ್ಲಿ ಅನೇಕ ಬೋರ್ಡ್ ಗಳನ್ನು ಹಾಕಿದ್ದರು. ಅದರಲ್ಲಿದ್ದ ವಿವರಣೆ ಈ ಕೆಳಗಿನಂತಿತ್ತು.
ಸುಮಾರು 3 ರಿಂದ 7 ಕೋಟಿ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನದಿಗಳು ಮತ್ತು ಸರೋವರಗಳು ಹರಿಯುತ್ತಿದ್ದವು. ಇದರಿಂದಾಗಿ ಮಣ್ಣು, ಮರಳು ಮತ್ತು ಜೇಡಿ ಮಣ್ಣು ಪದರ ಪದರವಾಗಿ ಈ ಪ್ರದೇಶದಲ್ಲಿ ಸಂಗ್ರಹವಾಯಿತು. ಹಲವು ಲಕ್ಷ ವರ್ಷಗಳ ಕಾಲ ಮಳೆ, ಗಾಳಿ,ಹಿಮ ಮತ್ತು ಹರಿಯುವ ನೀರು ಈ ಮಣ್ಣಿನ ಹಾಗೂ ಕಲ್ಲಿನ ಪದರಗಳನ್ನು ಕೊರೆಯಲು ಪ್ರಾರಂಭಿಸಿದವು. ಹೀಗೆ ಈ ಉದ್ಯಾನವನದ ಕಡಿದಾದ ಕಣಿವೆಗಳು, ಚೂಪಾದ ಗೋಪುರಗಳು ಮತ್ತು ಸಮತಟ್ಟಾದ ಗುಡ್ಡಗಳು ಕೆತ್ತಲ್ಪಟ್ಟವು. ಈ ತೀವ್ರವಾದ ಸವೆತವು ಇಂದಿಗೂ ವರ್ಷಕ್ಕೆ ಸುಮಾರು ಒಂದು ಇಂಚಿನಷ್ಟು ಮುಂದುವರೆಯುತ್ತಿದೆಯಂತೆ.
ಇದು ಕೃಷಿಗೆ ಅನುಕೂಲವಿಲ್ಲದ ಪ್ರದೇಶವಾದ್ದರಿಂದ ಹಾಗೂ ವಾಸ ಯೋಗ್ಯವಲ್ಲದ ಕಾರಣ ಇದನ್ನು ಬ್ಯಾಡ್ ಲ್ಯಾಂಡ್ಸ್ ಎಂದು ಕರೆಯುತ್ತಾರಂತೆ .
ಈ ಉದ್ಯಾನವನವು ಪಳೆಯುಳಿಕೆಗಳಿಗಾಗಿ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಸುಮಾರು 2 - 3.5 ಕೋಟಿ ವರ್ಷಗಳ ಹಿಂದೆ ಬದುಕಿದ್ದ ಅನೇಕ ಪ್ರಾಣಿಗಳ ಪಳೆಯುಳಿಕೆಗಳು ದೊರೆತಿವೆ. ಅವುಗಳ ಅಧ್ಯಯನದಿಂದ ವಿಜ್ಞಾನಿಗಳು ಪುರಾತನ ಜೀವ ಜಗತ್ತಿನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.
ಈ ಉದ್ಯಾನವನವು ಅನೇಕ ಕಾಡು ಪ್ರಾಣಿಗಳ ವಾಸಸ್ಥಾನವಾಗಿದ್ದರೂ ನಮಗೆ ಒಂದು ಜಿಂಕೆ ಮತ್ತು ಒಂದು ಕಾಡುಕೋಣ ಕಾಣಲು ಸಿಕ್ಕಿತು ಅಷ್ಟೇ. ನಾವು ಹೋದದ್ದು ಬೇಸಿಗೆಯಲ್ಲಿ ಆದ ಕಾರಣ ವಿಪರೀತ ಬಿಸಿಲು ಇತ್ತು. ಮೂರು - ನಾಲ್ಕು ಗಂಟೆಗಳ ಕಾಲ ಸುತ್ತಾಡಿ,ಹಲವು ಪ್ರಮುಖ ಆಕರ್ಷಣೆಗಳನ್ನು ನೋಡಿ, ಇಲ್ಲಿಂದ ಹೊರಟೆವು.
ಈ ಉದ್ಯಾನವನವು ಪ್ರಕೃತಿಯ ಅದ್ಭುತ ಶಿಲ್ಪಕಲೆಗೆ ಉತ್ತಮ ಉದಾಹರಣೆಯಾಗಿದೆ. ಲಕ್ಷಾಂತರ ವರ್ಷಗಳ ಕಾಲ ಗಾಳಿ, ಮಳೆ, ಹಿಮ ಮತ್ತು ಹರಿಯುವ ನೀರಿನಿಂದ ಸವೆತ ಉಂಟಾಗಿ ರೂಪುಗೊಂಡ ಈ ಪ್ರದೇಶವು ಇಂದು ಪ್ರವಾಸಿಗರನ್ನು ಹಾಗೂ ಭೂವಿಜ್ಞಾನಿಗಳನ್ನು ತನ್ನ ವಿಶಿಷ್ಟ ಸೌಂದರ್ಯದಿಂದ ಆಕರ್ಷಿಸುತ್ತದೆ ಅಂತೆಲ್ಲಾ ಮಾತನಾಡುತ್ತಾ ನಾವು ನಮ್ಮ ಟ್ರಿಪ್ಪಿನ ಮುಂದಿನ ಗಮ್ಯಸ್ಥಾನವಾದ ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದತ್ತ ಪ್ರಯಾಣ ಬೆಳೆಸಿದೆವು.




