
Article · March 20, 2025
ತೈರೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ
1960-61ರಲ್ಲಿ ದುಬಾರಿ ವೆಚ್ಚದಲ್ಲಿ ಬ್ರಹ್ಮಕಲಶ ಮತ್ತು ಅಷ್ಟಬಂಧ ಕಲಶಗಳು ನೆರವೇರಲ್ಪಟ್ಟವು. ಈ ಸಂದರ್ಭದಲ್ಲಿಯೇ ದುರ್ಗಾಪರಮೇಶ್ವರಿಯ ಬಂಗಾರದ ವಿಗ್ರಹದೊಂದಿಗೆ ಶ್ರೀ ಚಕ್ರವನ್ನೂ ಪ್ರತಿಷ್ಠಾಪಿಸಲಾಯಿತು. ಬಡವರಾಗಿದ್ದ ನಿಷ್ಠಾವಂತ ದೇವಿ ಆರಾಧಕರಾದ ತೈರೆ ಕುಟುಂಬದವರು ಕ್ರಮೇಣ ಹೆಚ್ಚು ಅನುಕೂಲವಂತರೆನಿಸಿ ಪೂಜಾ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಡೆಸುವಂತಾಯಿತು.
ಕರಾಡ ಬ್ರಾಹ್ಮಣರ ಕುಲದೇವತೆ ದುರ್ಗಾಪರಮೇಶ್ವರೀ ದೇವಿ. ತೈರೆ, ಅಗಲ್ಪಾಡಿ, ಆವಳ, ಕೊಂಗೂರು ಎಂಬ ನಾಲ್ಕು ಮಠಗಳು ದಕ್ಷಿಣ ಕನ್ನಡ ಜಿಲ್ಲೆ, ಕಾಸರಗೋಡು ಪ್ರದೇಶದಲ್ಲಿ ಕರಾಡರ ಆರಂಭ ಕಾಲದ ಆರಾಧನಾ ಸ್ಥಳಗಳಾಗಿದ್ದು "ಮಠ ಚತುಷ್ಟಯ"ಗಳೆಂದು ಪ್ರಸಿದ್ಧವಾಗಿವೆ.
ಈಗಲೂ ಕರಾಡರಲ್ಲದ ಇತರರು ಈ ನಾಲ್ಕು ಮಠಗಳ ಪ್ರಾಶಸ್ತ್ಯವನ್ನು , ಕರಾಡರ ಬದುಕಿನ ವಿವಿಧ ಹಂತಗಳಲ್ಲಿ ಬೀರುವ ಪ್ರಭಾವವನ್ನು ಗುರುತಿಸುತ್ತಿರುವುದು ಗಮನಾರ್ಹ.
ಐತಿಹ್ಯ :
ನಂಬೂದಿರಿ ಬ್ರಾಹ್ಮಣನೋರ್ವನು ಕನ್ಯಾಕುಮಾರಿಯ ದುರ್ಗಾ ಪರಮೇಶ್ವರಿಯನ್ನು ಪ್ರಸನ್ನೀಕರಿಸಿಕೊಂಡು ಉತ್ತರಕ್ಕೆ ತೆರಳಿದನಂತೆ. ತಾನು ತಂದ ಒಂದು ವಿಗ್ರಹವನ್ನು ಉತ್ತರ ಮಲಬಾರಿನ "ಚೆರುಕುನ್ನು" ಎಂಬ ಸ್ಥಳದಲ್ಲಿ ಪ್ರತಿಷ್ಠಾಪಿಸಿದನು. ಅಲ್ಲಿಂದ ಉತ್ತರಕ್ಕೆ ಸಂಚರಿಸುತ್ತಾ ಪಯಸ್ವಿನಿಯ ದಕ್ಷಿಣ ತೀರದಲ್ಲಿರುವ ತೆಕ್ಕಿಲ್ ಗ್ರಾಮದ ತೈರೆ ಕುಟುಂಬದವರ ಆದರಾತಿಥ್ಯ ಮತ್ತು ಸೇವೆಯಿಂದ ತಾನು ಹೊಂದಿದ್ದ ರೋಗದಿಂದ ಗುಣಮುಖವಾಗುವನು. ಕೃತಜ್ಞತಾಭಾವದಿಂದ ಆತನು ಚೆರುಕುನ್ನು ದೇವಿಕ್ಷೇತ್ರದಿಂದ ತನ್ನೊಂದಿಗೆ ತಂದಂತಹ 'ಜ್ಯೋತಿ'ಯನ್ನು ಬೆಳಗಿಸಿ ದುರ್ಗಾಪರಮೇಶ್ವರಿಯ ಶಿಲಾಮೂರ್ತಿಯೊಂದಿಗೆ "ಪ್ರಭಾಳ ಶಕ್ತಿ" (ಕಬ್ಬಿಣದಿಂದ ತಯಾರಿಸಿಲಾದ ಕತ್ತರಿಯಂತಿರುವ ಎರಡು ಶಸ್ತ್ರಗಳು) ಯನ್ನೂ ತೈರೆ ಕುಟುಂಬದ ಗೃಹ ದೇವತೆಯಾಗಿ ಪ್ರತಿಷ್ಠಾಪಿಸಿದನು.
ತೀರಾ ಬಡತನದಲ್ಲಿದ್ದ ತೈರೆ ಕುಟುಂಬದವರು ನಿಷ್ಠಾವಂತ ಭಕ್ತರಾಗಿದ್ದರು. ಮುಳಿ ಹೊದಿಸಿದ ಗುಡಿಯಿಂದ ದೇವಿಯ ಶಿಲಾ ವಿಗ್ರಹವನ್ನು ಪ್ರಸಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಬಯಸಿದಾಗ, ನಂಬೂದಿರಿ ಬ್ರಾಹ್ಮಣ ಆರಂಭದಲ್ಲಿ ದೀಪ ಬೆಳಗಿಸಿದ ಹಾಗೂ ವಿಗ್ರಹ ಪ್ರಭಾಳ ಶಕ್ತಿ ಇರಿಸಿದ ಸ್ಥಳದಲ್ಲೇ ದೇವಾಲಯ ನಿರ್ಮಿಸಬೇಕೆಂದು ಕಂಡು ಬಂದಿತು.
ಇತಿಹಾಸ :
1960-61ರಲ್ಲಿ ದುಬಾರಿ ವೆಚ್ಚದಲ್ಲಿ ಬ್ರಹ್ಮಕಲಶ ಮತ್ತು ಅಷ್ಟಬಂಧ ಕಲಶಗಳು ನೆರವೇರಲ್ಪಟ್ಟವು. ಈ ಸಂದರ್ಭದಲ್ಲಿಯೇ ದುರ್ಗಾಪರಮೇಶ್ವರಿಯ ಪಂಚಲೋಹದ ದರ್ಪಣಬಿಂಬದೊಂದಿಗೆ ಶ್ರೀ ಚಕ್ರವನ್ನೂ ಪ್ರತಿಷ್ಠಾಪಿಸಲಾಯಿತು. ಬಡವರಾಗಿದ್ದ ನಿಷ್ಠಾವಂತ ದೇವಿ ಆರಾಧಕರಾದ ತೈರೆ ಕುಟುಂಬದವರು ಕ್ರಮೇಣ ಹೆಚ್ಚು ಅನುಕೂಲವಂತರೆನಿಸಿ ಪೂಜಾ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಡೆಸುವಂತಾಯಿತು.
ನಿತ್ಯ ನೈಮಿತ್ತಿಕಗಳು :
ಈ ದೇವಾಲಯದಲ್ಲಿ ಪ್ರತಿದಿನವೂ ಗಣಪತಿ ಹೋಮ, ಪಂಚಾಮೃತ, ರುದ್ರಾಭಿಷೇಕದೊಂದಿಗೆ ಅನ್ನ ನೈವೇದ್ಯಗಳೂ ಪ್ರಾತಃಕಾಲದ ಪೂಜೆ, ಮಧ್ಯಾಹ್ನದ ಮಹಾಪೂಜೆ, ರಾತ್ರಿಪೂಜೆ - ಹೀಗೆ ತ್ರಿಕಾಲಗಳಲ್ಲಿಯೂ ಪೂಜಾಕಾರ್ಯಗಳನ್ನೂ ನಡೆಸಲಾಗುತ್ತದೆ. ಉಪವಾಸವ್ರತದೊಂದಿಗೆ ದೇವಿಪಾರಾಯಣ, ವಿಶೇಷ ಪೂಜೆ, ಪ್ರಾರ್ಥನೆ, ಅನ್ನಸಂತರ್ಪಣೆಗಳನ್ನು ನವರಾತ್ರಿಯಲ್ಲಿ 9 ದಿನಗಳಲ್ಲಿಯೂ ವಿಜೃಂಭಣೆಯಿಂದ ನಡೆಸಲಾಗುತ್ತದೆ. ತುಳುನಾಡು ಹಾಗೂ ಕೇರಳದ ಇತರ ದೇವಸ್ಥಾನಗಳಲ್ಲಿರುವ ಪದ್ಧತಿಯಂತೆ ಬೆಡಿ, ಆರಾಟುಗಳೊಂದಿಗೆ 5 ದಿನಗಳವರೆಗೆ ವಾರ್ಷಿಕ ಉತ್ಸವ, ಉತ್ಸವದ ಮರುದಿನ ವಿಷ್ಣು ಮೂರ್ತಿ ಭೂತದ ಕೋಲವನ್ನೂ ನಡೆಸಲಾಗುತ್ತದೆ. ಕಾರ್ತಿಕಮಾಸದ ಹುಣ್ಣಿಮೆಯ ದಿನ "ಕಾರ್ತಿಕ ಪೂರ್ಣಿಮಾ" ದಿನದ ಆಚರಣೆಯನ್ನೂ ವಸಂತಮಾಸದ ಹುಣ್ಣಿಮೆಯ ದಿನ 'ವಸಂತ ಪೌರ್ಣಿಮಾ' ದಿನದ ಆಚರಣೆಯನ್ನು ವಿಶಿಷ್ಟ ಕಾರ್ಯಗಳಿಂದ ನೆರವೇರಿಸಲಾಗುತ್ತದೆ. ಪ್ರತಿ ತಿಂಗಳ ಮೊದಲನೆಯ ಮಂಗಳವಾರ ಪ್ರಥಮ ಮಂಗಳವಾರ ಎಂಬ ನಿಮಿತ್ತದಿಂದ ನವಕಾಭಿಷೇಕ ಪೂರ್ವಕ ಮಹಾಪೂಜೆಯನ್ನು ನಡೆಸಲಾಗುತ್ತದೆ.
ಪ್ರತಿವರ್ಷವೂ ಕಳಭಾಭಿಷೇಕದೊಂದಿಗೆ "ಪ್ರತಿಷ್ಠಾದಿನ" ವನ್ನು 'ಒತ್ತೆಕೋಲ' (ಕೆಂಡಸೇವೆ)ದೊಂದಿಗೆ ಆಚರಿಸಲಾಗುತ್ತದೆ. ಇತ್ತೀಚೆಗಿನ ವರ್ಷಗಳಲ್ಲಿ 'ಅನುಜ್ಞಾಕಲಶ' ವನ್ನೂ ನೆರವೇರಿಸಲಾಯಿತು. ತೈರೆ ಕುಟುಂಬದವರ ದೇವಿ ಭಕ್ತರ ಪರಿಶ್ರಮ, ಸತತ ಪ್ರಯತ್ನಗಳಿಂದ 'ದುರ್ಗಾ ಪರಮೇಶ್ವರೀ ಕಲ್ಯಾಣ ಮಂಟಪ' ವನ್ನೂ ನಿರ್ಮಿಸಲಾಯಿತು.
ಸ್ಥಿತಿಗಳು :
ವಿದ್ಯಾದಾನದೊಂದಿಗೆ ನಿರಂತರ ಅನ್ನಸಂತರ್ಪಣೆಗಳನ್ನು ಮಾಡುತ್ತಿರುವ 'ಆರಾಧನಾ ಕೇಂದ್ರ' ಗಳು ಮಠಗಳೆಂದು ಕರೆಯಲ್ಪಡುತ್ತವೆ. ಭಾರತ ದೇಶದ ಸಾಂಸ್ಕೃತಿಕ ಮುನ್ನಡೆಯಲ್ಲಿ, ಧಾರ್ಮಿಕ-ಪಾರಮಾರ್ಥಿಕ ಸಾಧನೆಗಳಿಗೆ ಮಹತ್ತರ ಪಾತ್ರವಿದೆ. ದೇವಾಲಯ ಮತ್ತು ಮಠಗಳು ಜನರ ಧಾರ್ಮಿಕ ಜೀವನದ ಚೌಕಟ್ಟನ್ನು ಭದ್ರವಾಗಿ ರೂಪಿಸಿರುವುದನ್ನು ಗಮನಿಸಬಹುದು.
ಧಾರ್ಮಿಕ ತಾತ್ವಿಕ ಶಿಕ್ಷಣ ಮತ್ತು ತರಬೇತಿ ಮಠಗಳ ಪ್ರಧಾನ ಉದ್ದೇಶ. ಅವು ದೇವಾಲಯಗಳಿಗೆ ಪೂರಕವಾಗಬಲ್ಲ ಧಾರ್ಮಿಕ ಸಂಸ್ಥೆಗಳು, ದೇವಾಲಯಗಳಲ್ಲಿ ನಡೆಸಲಾಗುವ ಸಾಮೂಹಿಕ ದೇವಪೂಜಾಕಾರ್ಯಗಳಿಗೆ ಅವಶ್ಯಕವಾದ ಸ್ವಧರ್ಮ ಶ್ರದ್ಧೆ, ಸ್ವಾಧ್ಯಾಯ, ಪ್ರವಚನ, ತಪೋನಿಷ್ಠೆ, ಗುರುದೇವತಾಭಕ್ತಿ ಇವುಗಳನ್ನು ರೂಪಿಸುವ ಕಾರ್ಯ ಮಠಗಳದ್ದಾಗಿತ್ತು.
ಶಾಲಾ ಕಾಲೇಜುಗಳ ಲೌಕಿಕ ವಿದ್ಯಾಕಾರ್ಯಗಳಿಗೂ, ಮಠ ದೇವಾಲಯಗಳ ಧಾರ್ಮಿಕ ವಿದ್ಯಾಕಾರ್ಯಗಳಿಗೂ ಪರಸ್ಪರ ಸಂಬಂಧ ಮತ್ತು ಪರಸ್ಪರ ಪೋಷಣೆ ಏರ್ಪಡಬೇಕಾದುದು ಧರ್ಮ. ಸ್ವಧರ್ಮಶ್ರದ್ಧೆ, ತತ್ವಜ್ಞಾನ, ಭಕ್ತಿ, ವೈರಾಗ್ಯಗಳಿಗೆ ಪೋಷಕವಾದ ಸಾತ್ವಿಕ ಗುಣಶೀಲಗಳ ಅಭ್ಯಾಸಕ್ಕೆ ತಕ್ಕ ವಾತಾವರಣ ಮಠ, ದೇವಾಲಯಗಳಲ್ಲಿ ಬೆಳೆಯಬೇಕು.
ತೈರೆ ಮಠದಲ್ಲಿ, ಈ ಶತಮಾನದ ಆರು, ಏಳನೇ ದಶಕಗಳಲ್ಲಿ ಶ್ರೀಯುತ ಬಳ್ಳಪದವು ವಾಸುದೇವ ಉಪಾಧ್ಯಾಯರ ಶಿಷ್ಯರಾಗಿದ್ದ ತೈರೆ ನಾರಾಯಣಭಟ್ಟರು 'ಗುರುಕುಲ’ ಪದ್ಧತಿಯಂತೆ ವಿದ್ಯಾದಾನವನ್ನು ಮಾಡುತ್ತಿದ್ದರು. ಪೌರೋಹಿತ್ಯ ಶಿಕ್ಷಣದೊಂದಿಗೆ ವೇದಮಂತ್ರಗಳನ್ನೂ ಕಲಿಸುತ್ತಾ ಸಮಾಜಸೇವೆ ಗೈದುದನ್ನು ಕರಾಡ ಸಮಾಜ ಬಾಂಧವರು ಸ್ಮರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮಹರ್ಷಿ ವಿದ್ಯಾಸಂಸ್ಥೆಯವರು ತೈರೆ ದೇವಸ್ಥಾನದಲ್ಲಿ 'ವೇದ ಮಂತ್ರ,ಪೌರೋಹಿತ್ಯಗಳ ಶಿಕ್ಷಣವನ್ನು ನೀಡುತ್ತಿರುವುದು ಗಮನಾರ್ಹ ವಿಷಯ. ಸಮಾಜ ಬಾಂಧವರು ವಿದ್ಯಾದಾನವನ್ನುಪಡೆಯುತ್ತಾ ಸರ್ವತೋಮುಖ ಏಳ್ಗೆಯನ್ನು ಸಾಧಿಸಬಹುದು.
Photo Credits : Shreekrishna Bhat S.
Fotomatic Studio
Bus Stand, Vittal-574243
Ph: +91 8255 239048, +91 9448 441268






