Karada Vishwa

Article · October 16, 2026

ಬನ್ನಿ , ಬನ್ನಿ ಕೊಟ್ಟು ಬಂಗಾರ ತಗೊಳೋಣು!

2024 ರ ವಿಕ್ರಮ ವಿಜಯದಶಮಿ ವಿಶೇಷಾಂಕದಲ್ಲಿ ಪ್ರಕಟವಾದ ಮೇಘನಾ ಕಾನೇಟ್ಕರ್ ಅವರ ಹಾಸ್ಯ ಬರಹ

ನಮ್ಮ ನಾಡ ಹಬ್ಬ ಶರನ್ನವರಾತ್ರಿ ಬಂತಂದ್ರ ಸಾಕು ಈಗಲೂ ಬಾಲ್ಯದ ನೆನಪುಗಳು ಕಚಗುಳಿ ಇಡ್ತಾವ. ಆಗೆಲ್ಲ ನಾವು ಚಿಕ್ಕವರಿದ್ದ ಕಾರಣಕ್ಕೊ, ಹುಡುಗಾಟದ ನಡುವೆಯೂ ಇದ್ದ ಅತಿಯಾದ ಮುಗ್ಧತನಕ್ಕೊ ಎಲ್ಲದರಲ್ಲೂ ಕೌತುಕ, ಅಚ್ಚರಿ, ಮೋಜು, ಸಡಗರ ಅನಿಸ್ತಿತ್ತು. ಆದರೆ ಈಗ ಹಿಂತಿರುಗಿ ನೋಡಿದ್ರ ಬಾಲ್ಯದ ನೆನಪುಗಳು ಅಪರಿಮಿತ ನಗೆ ಉಕ್ಕಿಸಿ ಹೊಟ್ಟೆ ಹುಣ್ಣಾಗಿಸ್ತಾವ. ಶರನ್ನವರಾತ್ರಿ ಹೊತ್ತು ತರುವ ನೆನಪುಗಳು ಹಾಸ್ಯದ ಹೊನಲನ್ನ ಹರಿಸ್ತದ.

ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಯೊಂದು ಹಬ್ಬಗಳು ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ಆಚರಣೆ, ಮಹತ್ವ, ಇತಿಹಾಸ, ವೈಜ್ಞಾನಿಕ ತಳಹದಿ, ಪರಂಪರೆ, ಉಡುಗೆ ತೊಡುಗೆ, ವಿಶೇಷ ಖಾದ್ಯಗಳು ಹಿಂಗ ಪ್ರತಿಯೊಂದರಲ್ಲೂ ತನ್ನದೇ ಆದಂತಹ ವೈಶಿಷ್ಟ್ಯ ಹೊಂದಿದೆ. ಅಂತೆಯೇ ನಮ್ಮ ನಾಡ ಹಬ್ಬ ದಸರೆಯ ಆಚರಣೆಯು ಕೂಡ ಇದಕ್ಕೆ ಹೊರತಾಗಿಲ್ಲ.

ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ದಸರೆಯ ಅಂತಿಮ ದಿನ ಅಂದರೆ ವಿಜಯ ದಶಮಿ ದಿನದಂದು ಬನ್ನಿ ಪತ್ರೆಯನ್ನು (ಶಮೀ ವೃಕ್ಷದ ಪತ್ರೆಗಳು) ಪರಸ್ಪರ ವಿನಿಮಯ ಮಾಡಿಕೊಂಡು ಶುಭಾಶಯ ಕೋರುವ ಪದ್ಧತಿ ಅದ. ಹಿಂಗ ಬನ್ನಿಯನ್ನ ವಿನಿಮಯ ಮಾಡೊ ಸಂದರ್ಭದಲ್ಲಿ “ನಾವು-ನೀವು ಬನ್ನಿ ತೊಗೊಂಡು ಬಂಗಾರದಂಗ ಇರೊಣು" ಅಂತ ಶುಭಾಶಯ ಕೋರಲಾಗ್ತದ. ಕಿರಿಯರು ಹಿರಿಯರಿಗೆ ಬನ್ನಿ ಕೊಟ್ಟು ಕಾಲ್ಮುಟ್ಟಿ ನಮಸ್ಕರಿಸುವಾಗ ಹಿರಿಯರು “ನಿನ್ನ ಬಾಳು ಬಂಗಾರದಂಗ ಇರಲಿ” ಅಂತ ಮನಸಾರೆ ಹರಸ್ತಾರ.

ಇದ್ರಾಗ ನಗೆಗಡಲಿನಲ್ಲಿ ತೇಲಿಸುವಂತಹ ಹಾಸ್ಯ ಸಂಗತಿ ಏನದ ಅಂತ ನೀವು ಯೋಚನೆ ಮಾಡ್ತಿರಬೇಕಲ್ಲ? ಹ್ಮ್ ಎಲ್ಲರೂ ದಿಟ್ಟೋ “ಬನ್ನಿ ತೊಗೊಂಡು ಬಂಗಾರದಂಗ ಇರೊಣು” ಅನ್ನೊದಿಲ್ಲ. ಕೆಲವು ಶಿಖಾಮಣಿಗಳು “ಬನ್ನಿ ಕೊಟ್ಟು ಬಂಗಾರ ತೊಗೊಳೊಣು” ಅಂತಲೂ ಹೇಳ್ತಿದ್ರು. ಅದ್ಯಾಕ ಹಂಗ ಹೇಳ್ತಾರ ಅಂತ ಕೇಳ್ದಾಗ ನಮ್ಮ ಅಪ್ಪ ಅಮ್ಮ ಹೇಳಿದ್ದು ಒಂದು ಬನ್ನಿ ಎಲೆ ಅಂದ್ರ ಒಂದು ಬಂಗಾರದ ತುಂಡಿಗೆ ಸಮ ಅಂತ. ಬನ್ನಿ ಎಲೆ ಅಂದ್ರ ಸಂಪತ್ತು ಅಥವಾ ಐಶ್ವರ್ಯದ ಸಂಕೇತ ಅಂತೆಲ್ಲ ಹೇಳಿದ್ರು. ನಾನೂ ಗೌರವದಿಂದ ಅವರ ಮಾತನ್ನ ಕೇಳಿ ಬನ್ನಿ ಎಲೆಯನ್ನ ಅತ್ಯಂತ ಭಕ್ತಿ ಭಾವದಿಂದ ಕಣ್ಣಿಗೊತ್ತಿ ಜೋಪಾನ ಮಾಡಿದ್ದೆ.

ನಮ್ಮ ಶಾಲ್ಯಾಗ ಒಂದಷ್ಟು ಗೆಳತಿಯರು ಯಾವ್ದೊ ಒಂದು ಎಲೆಯನ್ನ ತಂದು ನೋಟ್ ಪುಸ್ತಕದ ಹಾಳೆಯ ಮಧ್ಯ ಇಟ್ಟು ಅದು ಬೆಳೆಯೊದನ್ನ ಕಾಯ್ತಿದ್ರು. ಮತ್ತಷ್ಟು ಗೆಳತಿಯರು ನವಿಲು ಗರಿಯನ್ನ ಪುಸ್ತಕದ ಹಾಳೆಯ ಮಧ್ಯ ಇಟ್ರ ವಿದ್ಯಾ ಛಲೋ ಹತ್ತತದ ಅಂದಿದ್ರು. ಅದ್ರಿಂದ ಪ್ರೇರೇಪಿತಳಾದ ನನಗೆ ಜಗತ್ತಿನ ಮಹಾನ್ ವಿಜ್ಞಾನಿ ಐನ್‌ಸ್ಟೀನ್ ನ ಆತ್ಮ ಮೈಯೊಳಗೆ ಪ್ರವೇಶ ಮಾಡಿದಂಗ ಭಾಸವಾಗಿತ್ತು. ಅದರ ಪರಿಣಾಮವಾಗಿ ನಾನು ನನ್ನ ಪುಸ್ತಕದ ಹಾಳೆಯ ಮಧ್ಯ ಬನ್ನಿ ಎಲೆಯನ್ನ ಭದ್ರವಾಗಿ ಇಟ್ಟು ಅದು ಬಂಗಾರವಾಗಿ ಮಾರ್ಪಾಡು ಹೊಂದುವುದನ್ನ ನೋಡಲು ಚಾತಕ ಪಕ್ಷಿಯಂತೆ ಕಾಯ್ತಾ ಇದ್ದೆ.

ಆ ಪುಸ್ತಕಕ್ಕೆ ಎಷ್ಟು ಭದ್ರತಾ ವ್ಯವಸ್ಥೆ ಮಾಡಿದ್ದೆ ಅಂದ್ರ ಬಹುಶಃ ರಿಸರ್ವ್ ಬ್ಯಾಂಕ್ ನವರು ಅಷ್ಟೊಂದು ಸುರಕ್ಷತೆ ಒದಗಿಸಿದ್ರೊ ಇಲ್ಲೊ! ಇದು ಕಲಿಯುಗ; ಸರ್ರ್ ಅಂತ ಜಾದೂ ಆಗಂಗಿಲ್ಲ. ಎಲೆ ಬಂಗಾರ ಆಗ್ಲಿಕ್ಕೆ ಸ್ವಲ್ಪ ವ್ಯಾಳೆ ಹಿಡೀತದ. ಸರಿ ಈಗ ಒಂದಷ್ಟು ದಿನಗಳಾದ ಮ್ಯಾಲ ತೆಗ್ದು ನೋಡಿದ್ರಾತು. ಎಷ್ಟು ಬಂಗಾರ ಆಗಿರ್ತಾವೊ ಅದ್ರಿಂದ ಎಷ್ಟು ಆಭರಣ ಮಾಡ್ಸಬಹುದು ಅಂತ ವಿಚಾರ ಮಾಡಿದ್ರಾತು ಹೇಳಿ ಭದ್ರವಾಗಿ ಇಟ್ಟಿದ್ದಾಯ್ತು. ಅದೇನ್ ಹಣೀಬಾರನೊ ಒಂದು ವರ್ಷದ ತನಕ ನೆನಪಿಗೆ ಬರ್ಲಿಲ್ಲ. ಒಮ್ಮೆ ಪುಸ್ತಕದ ಕಪಾಟು ಶುಚಿ ಮಾಡ್ಬೇಕು ಅಂತ ಕೈ ಹಾಕ್ದಾಗ ಬನ್ನಿ ಎಲೆ ಇಟ್ಟಿದ್ದು ನೆನಪಾಗಿ ಮತ್ತೆ ಅಷ್ಟೆ ಭಕ್ತಿ ಭಾವದಿಂದ ಆ ಪುಸ್ತಕ ತೆಗಿಲೋ ಬ್ಯಾಡೊ ತೆಗಿಲೋ ಬ್ಯಾಡೊ ಅಂತ ಕಡೀಗೂ ಧೈರ್ಯ ಮಾಡಿ ತೆಗ್ದು ನೋಡಿದ್ರ ಆಹಾ ಆಶ್ಚರ್ಯ! ಪರಮಾಶ್ಚರ್ಯ!! ಬನ್ನಿ ಎಲೆ ಒಣಗಿ ಹಪ್ಪಳಾಗಿ ಅದನ್ನ ಮೂಸಲಿಕ್ಕೆ ವಾಸನಿ ಇರುವೆ ಬಂದು ಹಾಳೆಯ ಸುತ್ತಲೂ ತನ್ನ ಸಾಮ್ರಾಜ್ಯ ಕಟ್ಟಿಕೊಂಡು ರಾಜಾರೋಷವಾಗಿ ಮೆರಿತಾ ಇತ್ತು. ಓಹೊಹೋ ನಗು ಬರ್ಲಿಕತ್ತದ ಅಲಾ ನಿಮಗ? ಹ್ಮ್ ಇರ್ರಿ ಇರ್ರಿ ಕಹಾನಿ ಅಭೀ ಬಾಕಿ ಹೈ…

ಇಷ್ಟಾದರೂ ಮೀಸೆ ಮಣ್ಣಾಗಲು ಬಿಡದೆ ನಮ್ಮ ಡಿ.ವಿ.ಜಿ. ಯವರು ಹೇಳಿದಂಗ ‘ಮರಳಿ ಯತ್ನವ' ಮಾಡಲು ಮುಂದಾದೆ. ಈ ಬಾರಿ ಕೊಂಚ ವಿಭಿನ್ನ ಪ್ರಯತ್ನ ಮತ್ತು ವಿನೂತನ ಪ್ರಯೋಗ. ಅಪ್ಪನ ಸಂಗ್ರಹದಲ್ಲಿದ್ದ ಚಲಾವಣೆಯಲ್ಲಿಲ್ಲದ ಹಳೆಯ ಐದು, ಹತ್ತು, ಇಪ್ಪತ್ತು ಪೈಸೆಯ ನಾಣ್ಯಗಳನ್ನ ಭೂಮಿ ಅಗೆದು ಒಳಗೆ ಹುಗಿದಿಟ್ರೆ ಸ್ವಲ್ಪ ವರ್ಷಗಳ ಬಳಿಕ ಒಂದು ದೊಡ್ಡ ಕೊಡಪಾನ ತುಂಬಾ ನಿಧಿ ಅಂದ್ರ ಹಳೆಯ ಅಲ್ಯೂಮಿನಿಯಂ ನಾಣ್ಯಗಳು ಚಿನ್ನದ ನಾಣ್ಯಗಳಾಗಿ ಮಾರ್ಪಾಡು ಆಗ್ತಾವ ಅಂತ ನನ್ನ ಮೈಯೊಳಗೆ ಹೊಕ್ಕಿದ್ದ ಸರ್.ಐಸಾಕ್ ನ್ಯೂಟನ್ ನ ಆತ್ಮ ಪ್ರಚೋದನೆ ನೀಡಿತು.

ಈ ಬಾರಿ ಭಕ್ತಿ ಭಾವದ ಬದಲಾಗಿ ಅತ್ಯಂತ ಶ್ರದ್ಧಾಪೂರ್ವಕವಾಗಿ ನನ್ನ ನಿಧಿ ಕಾರ್ಯಾಚರಣೆಯನ್ನ ಕೈಗೊಳ್ಳಲಾಯಿತು. ಇಲ್ಲೂ ಅಷ್ಟೆ ಮುಜರಾಯಿ ಇಲಾಖೆ ಹಳೆಯ ದೇವಾಲಯಗಳ ಖಜಾನೆಗೆ ಎಷ್ಟು ಭದ್ರತೆ ಒದಗಿಸಿರ್ತಾರೊ ಅದಕ್ಕಿಂತ ಒಂದು ಕೈ ಮೇಲೆ ಅಷ್ಟ ದಿಗ್ಭಂಧನಗಳಿಂದ ನನ್ನ ನಿಧಿಯ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಮತ್ತ ಹಣೀಬಾರಕ್ಕ ಹೊಣಿ ಯಾರು ಅಂದಂಗ ನಾನು ಕೂಡಿಟ್ಟ ನಿಧಿ ಮ್ಯಾಲ ಅದ್ಯಾರ ಕಣ್ಣು ಬಿದ್ದಿತ್ತೊ ಬರೊಬ್ಬರಿ ಎರಡು ವರ್ಷಾದ್ರೂ ನನಗ ಅದ್ರ ನೆನಪೇ ಬಂದಿರ್ಲಿಲ್ಲ. ಒಂದ ದಿವ್ಸ ಸಂಜೀಕಡೆ ಶಾಲಿಯಿಂದ ಮನೀಗ ವಾಪಸ್ ಬಂದಾಗ ಹೃದಯ ವಿದ್ರಾವಕ ಘಟನೆಯೊಂದು ನಡೆದು ಹೋಗಿತ್ತು. ಯಾವ ಜಾಗದಲ್ಲಿ ನಾನು ನಿಧಿ ಉದ್ಭವಿಸುವ ಮಹದಾಸೆ ಹೊತ್ತು ಅಷ್ಟು ದಿನಗಳ ಕಾಲ ಜೀವ ಕೈಯಲ್ಲಿ ಹಿಡ್ಕೊಂಡಿದ್ನೊ ಅದೇ ಜಾಗದಲ್ಲಿ ನಮ್ಮಪ್ಪ ಮನೆಗೆ ಎಲೆಕ್ಟ್ರಿಕ್ ಅರ್ಥಿಂಗ್ ಸ್ಥಾಪಿಸಿ ಬಿಟ್ಟಿದ್ರು. ಬೆಳಗ್ಗೆ ಶಾಲೆಗೆ ಹೋಗಬೇಕಾದ್ರ ಸಹಜ ಸ್ಥಿತಿಯಲ್ಲಿದ್ದ ವಾತಾವರಣ ಶಾಲೆಯಿಂದ ಮರಳಿ ಬಂದಾಗ ಏಕಾಏಕಿ ಊಹಿಸಲಾರದಷ್ಟು ಬದಲಾಗಿ ಹೋದ್ರ ಹೆಂಗಾಗಬ್ಯಾಡ ಜೀವಕ್ಕ?!

ಏನೇ ಅನ್ರಿ ಒಟ್ಟ ಜೀವನದಾಗ ನಾವು ಬೆವರ ಸುರಿಸಿ ದುಡಿದು ಸಂಪಾದನೆ ಮಾಡಿ ಕೂಡಿಟ್ಟ ರೊಕ್ಕದಾಗ ಚೌಕಾಸಿ ಮಾಡಿ ಒಂದು ತೊಲಿ ಬಂಗಾರ ಮಾಡ್ಸಿ ಹಾಕೊಂಡು ಮೆರೀಬೇಕು ಹೊರತು ಈ ಜಾದೂ ಗೀದೂ ಎಲ್ಲಾ ಬರೀ ಟಿವಿ ಯೊಳಗ ನೋಡಿ ಶಿಳ್ಳೆ ಚಪ್ಪಾಳೆ ಹೊಡಿಲಿಕ್ಕೆ ಅಷ್ಟೆ ಚೆಂದ ಅಂತ ಜ್ಞಾನೋದಯ ಆಯ್ತು. ಇರಲಿ ಈಗ ನೀವೆಲ್ಲಾರೂ ಬನ್ನಿ ತೊಗೊಂಡು ಬಂಗಾರದಂಗ ಇರ್ರಿ.. ನಿಮ್ಮೆಲ್ಲರ ಬಾಳು ಬಂಗಾರದಂಗ ಇರಲಿ.. ಹ್ಞ ಒಂದ ವಿಷ್ಯ ಅಲ್ಲೊಂದು ಕಡೆ ದೀಪಾವಳಿ ಮುಂಗಡ ಶಾಪಿಂಗ್ ಮಾಡಿದ್ರ ಪ್ರತಿ ಪ್ರಾಡಕ್ಟ್ ಮ್ಯಾಲ ಹತ್ತು ಗ್ರಾಂ ಚಿನ್ನದ ನಾಣ್ಯ ಸಿಗ್ತಾವ ಅಂತ ಘೋಷಣೆ ಮಾಡ್ಲಿಕತ್ಯಾರ ನಾ ಹೋಗ್ಬರ್ತಿನಿ ಯಾರಿಗೂ ಹೇಳಬ್ಯಾಡ್ರಿ…!

Creative Writings