Karada Vishwa

Article · November 6, 2026

ಯಾಕೆಂದರೆ...

By ದಿವ್ಯಾ ಶಿರಂತಡ್ಕ

ದಿವ್ಯಾ ಬಿ ಶಿರಂತಡ್ಕ

ಇದು ಚೆನ್ನಾಗಿಲ್ಲವೆಂದು ಜರೆಯದಿರು
ಅದು ಯಾರಿಗೋ ಚೆನ್ನಾಗಿ ಕಾಣುವುದು
ಯಾಕೆಂದರೆ......
ಸೌಂದರ್ಯವಿದೆ ನೋಡುಗರ ಕಣ್ಣಲ್ಲಿ!

ಇದು ರುಚಿಯಿಲ್ಲವೆಂದು ಹಳಿಯದಿರು
ಅದು ಯಾರಿಗೋ ಇಷ್ಟವಾಗುವುದು
ಯಾಕೆಂದರೆ.......
ರುಚಿ ಇದೆ ತಿನ್ನುವವರ ನಾಲಿಗೆಯಲ್ಲಿ!

ಇದು ಕರ್ಕಶವೆಂದು ಕಿವಿ ಮುಚ್ಚದಿರು
ಅದು ಯಾರಿಗೋ ಆನಂದ ತರಬಹುದು
ಯಾಕೆಂದರೆ........
ಇಂಪಿರುವುದು ಕೇಳುಗನ ಕಿವಿಯಲ್ಲಿ!

ವ್ಯಕ್ತಿ ಸರಿಯಿಲ್ಲವೆಂದು ಹಣೆಪಟ್ಟಿ ಕಟ್ಟದಿರು
ಅವನು ಯಾರಿಗೋ ಹತ್ತಿರವಾಗಿರಬಹುದು
ಯಾಕೆಂದರೆ...
ಒಳ್ಳೆತನವಿರುವುದು ಸಂಬಂಧದಲ್ಲಿ!

'ಸಮಯ' ಸರಿಯಿಲ್ಲ ಎಂದೆಣಿಸದಿರು
ಅದು ಯಾರಿಗೋ ರಸಮಯವಾಗಿರಬಹುದು
ಯಾಕೆಂದರೆ....
ಎಲ್ಲವೂ ಇರುವುದು ಮನಸ್ಥಿತಿಯಲ್ಲಿ!


Creative Writings