
Article · March 14, 2026
ಪಂಚಭೂತಗಳೂ ದೇಹವೂ
- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
☘️☘️☘️
ನಾನುಂಟು ನೀನುಂಟು ಅವನುಂಟು ಅವಳುಂಟು
ಎಲ್ಲರೊಳಗೂ ಒಂದು ಹೃದಯ ಉಂಟು
ನೋವುಂಟು ನಲಿವುಂಟು ನಗು ಉಂಟು ಅಳು ಉಂಟು
ಬೆಸೆದು ಕೊಂಡಿಹ ಬಂಧ ನೂರ ಎಂಟು /
ಎಲುಬು ಗೂಡಿನ ಹೊರಗೆ ರಕ್ತಮಾಂಸವು ಉಂಟು.,
ನರಮಂಡಲವು ಉಂಟು, ಮಿದುಳು ಉಂಟು
ಹೊರಗೆ ಚರ್ಮದ ಚೀಲ ಇದಕೆಲ್ಲ ರಕ್ಷಣೆಗೆ,
ಎಲ್ಲರೊಳಗೂ ಒಂದು ಹೃದಯ ಉಂಟು /
ಹೃದಯದಲಿ ಉಸಿರುಂಟು ಮಿದುಳಿನಲಿ ನೆನಪುಂಟು,
ನೂರಾರು ಭಾವಗಳ ಮಿಳಿತ ಉಂಟು
ನೊಂದಾಗ ನೋವುಂಟು ಕಣ್ಣೀರ ಜಲವುಂಟು,
ಸಂತಸಕೆ ತುಟಿಗಳಲಿ ನಗುವು ಉಂಟು /
ಉದರವೆಂಬುವುದುಂಟು ವಾಯು ತತ್ವವು ಉಂಟು,
ಜಠರಾಗ್ನಿ ಕೆಂಡವೂ ಒಳಗೆ ಉಂಟು
ಸುಡುವ ಬೇಗೆಗೆ ಸುಟ್ಟು ಕರಕಲಾಗುವುದುಂಟು
ಭುಗಿಲೆದ್ದ ಕೋಪವೂ ಮನದಲುಂಟು /
ಆತ್ಮವಿಶ್ವಾಸದಲಿ ನಗುವ ಸಂಭ್ರಮ ಉಂಟು
ಆಯಾಸಕೆಲ್ಲರಿಗು ದಣಿವು ಉಂಟು
ಜಲ, ಅಗ್ನಿ, ವಾಯು, ಭೂ, ಆಕಾಶ ತತ್ವಗಳು
ಪಂಚ ಭೂತವು ಸೇರಿ ದೇಹ ಉಂಟು /
ಸ್ನೇಹ ಬಂಧಗಳುಂಟು ದ್ವೇಷ ದಳ್ಳುರಿಯುಂಟು,
ಕಾಡುವುದು ಹೃದಯವನು ನೆನಪ ಗಂಟು
ಎಲ್ಲವನು ಮೀರಿಸುತ 'ಆತ್ಮ ' ಎಲ್ಲರಲುಂಟು,
ಇದ್ದಾಗ ಮಾತ್ರವೇ ಚಲನೆಯುಂಟು /
ಹಳೆ ಬೇರು, ಹೊಸ ಚಿಗುರು, ಮತ್ತೆ ವಂಶ ವೃದ್ಧಿ
ಚಿಗುರಿ ಬೆಳೆಯುವ ಶಕ್ತಿ ಒಳಗೆ ಉಂಟು
ಉಸಿರುಂಟು ಹೆಸರುಂಟು ಎಲ್ಲವೂ ಇಲ್ಲುಂಟು,
ನೂರು ವರುಷದ ಗಡುವು ಇದಕೆ ಉಂಟು /
ಶ್ರಮದ ದುಡಿತವು ಉಂಟು, ಒಲವ ತುಡಿತವದುಂಟು
ಪ್ರೀತಿ ವಿಶ್ವಾಸಗಳ ಬೆಸುಗೆಯುಂಟು
ಬೋಧ, ಪ್ರಬೋಧ ಪ್ರತಿರೋಧ ವೇದನೆ ಎಲ್ಲ
ಆತ್ಮ ಒಳಗಿದ್ದಾಗ ಮಾತ್ರ ಉಂಟು /
ಬಾಲ್ಯ ಯೌವನ ಉಂಟು, ವಯಸಾದ ಮುಪ್ಪುಂಟು
ದೇಹ ನಿಶ್ಯಕ್ತ ತಾನಾಗಲುಂಟು
ಮಾಡಿದಾ ಪಾಪಗಳು, ಪುಣ್ಯಗಳು ಮತ್ತೊಮ್ಮೆ
ಮನದ ಪರದೆಯ ಮೇಲೆ ಮೂಡಲುಂಟು /
ನಾನುಂಟು ನೀನುಂಟು ಅವನುಂಟು ಅವಳುಂಟು
ಎಲ್ಲರೊಳಗೂ ಒಂದು ಆತ್ಮ ಉಂಟು
ಇದ್ದಾಗ ಮಾತ್ರವೇ ಹೃದಯ ಬಡಿತವು ಉಂಟು,
ಇಲ್ಲದಿರೆ ದೇಹ ಬಿದ್ದೋಗಲುಂಟು /
ನಾನುಂಟು ನೀನುಂಟು ಅವನುಂಟು ಅವಳುಂಟು
ಎಲ್ಲರೊಳಗೂ ಒಂದು ಆತ್ಮ ಉಂಟು
ಹಿರಿದಾಗಿ ಏನಿಲ್ಲ ಹೆಬ್ಬೆರಳ ಗಾತ್ರವದು,
ಹೀಗೆಂದು ಗುರುಗಳೂ ಹೇಳಿದ್ದುಂಟು /
ಒಳಿತು ಕೆಡುಕಿನ ಕೆಲಸ ಯಾವುದೇ ಮಾಡಿರಲಿ,
ಅದಕೆ ಅದರದೆ ಆದ ಫಲಗಳುಂಟು
ಒಳಿತು ಕೆಲಸವ ಮಾಡಿದವಗೆ ಪುಣ್ಯದ ಫಲವು '
ಕೆಟ್ಟ ಕೆಲಸಕೆ ಸದೃಶ ನರಕ ಉಂಟು /
ಯಮದೂತರವರು ನಿನ್ನಾತ್ಮವನು ಸೆಳೆದಾಗ
ಅತಿಯಾದ ವೇದನೆಯು ಆಗಲುಂಟು
ಅಲ್ಲಿ ಒಂಟಿಯು ಆತ್ಮ, ನೋಡುವನು ಪರಮಾತ್ಮ'
ಮಡದಿ ಮಕ್ಕಳ ಬಂಧ ಎಲ್ಲಿ ಉಂಟು?/
ಪರರಿಗೇ ನೋವಿತ್ತು ಕಣ್ಣೀರ ಹಾಕಿಸಿರೆ
ಪಾಪದಾ ಹೊರೆ ಬೆನ್ನನೇರಲುಂಟು
ಪರರಿಗೇ ಸಹಕರಿಸಿ ದಾನಧರ್ಮವ ಮಾಡೆ
ಪುಣ್ಯದಾ ತೂಕ ಹೆಚ್ಚಾಗಲುಂಟು /
ವಿಷಯ ಹೀಗೂ ಉಂಟು, ಆತ್ಮ ಎಲ್ಲರಲುಂಟು
ದೇಹ ತೊರೆದೊಂದು ದಿನ ಸಾಗಲುಂಟು
ಮೊದಲೇ ಅರಿವಾಗದೂ ಹೋದರೆ ಬಾರದೂ
ಮರಣವೆಂಬುದು ಇಲ್ಲಿ ಖಚಿತ ಉಂಟು /
ನಾನುಂಟು, ನೀನುಂಟು ಆತ್ಮ ಎಲ್ಲರಲುಂಟು
ಬಹುದೂರ ಯೋಜನವು ಸಾಗಲುಂಟು
ಮಕ್ಕಳಿತ್ತಿಹ 'ಶ್ರಾದ್ಧದೂಟ' ವಿದ್ದರೆ ಮಾತ್ರ
ಹಾದಿಯಲಿ ನಿನಗಿಷ್ಟು ಸಿಗುವುದುಂಟು /
ಆತ್ಮ ಸಾಗಲಿ ಕುಂಟು, ದೇಹ ಬೀಳಲಿ ಕುಂಟು
ಕರ್ಮಕನುಗುಣ ಪುನರ್ಜನ್ಮ ಉಂಟು
ಅವಧಿಯಾ ಅರಿವಿಲ್ಲಆ ದೇವರೇ ಬಲ್ಲ
ಅವನ ಧ್ಯಾನವ ಮಾಡೆ ಮೋಕ್ಷ ಉಂಟು /
🪻🪻🪻
Creative Writings
