Karada Vishwa

Article · June 17, 2026

"ಮನೆ" ಎಂದರೆ ಅಷ್ಟೇ ಸಾಕೇ??!!

✍🏻ಶಾರದಾ ಕಜೆಗದ್ದೆ , ಬಾಯಾರು

ಪ್ರಸ್ತುತ ಮನೆ ಎಂದರೆ 2 bhk with attached bathroom. ಅಥವಾ multistoreyed 4+bhk with lift facility, Bedrooms with AC. ಇಷ್ಟಲ್ಲದೆ parking four wheeler and two wheeler.  ಇನ್ನು ಇವುಗಳ ಮಾಡು, ಗೋಡೆ, ನೆಲ, ಬಾಗಿಲು, ಕಿಟಕಿ, ಯಾವುದರ ಬಗ್ಗೆಯೂ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಏಕೆಂದರೆ ಇಂದು ನಾವೆಲ್ಲ ಬದುಕುತ್ತಿರುವುದು ಅಂಥಾ ಮನೆಗಳಲ್ಲೇ ಅಲ್ಲವೇ..
ಇಂದು  50ರ ಆಸುಪಾಸಿನ ವಯೋಮಾನದವರ ಮನಸ್ಸು ಅಂದಾಜು  25 ಸಂವತ್ಸರಗಳ ಹಿಂದಿನ ತಮ್ಮ ಬಾಲ್ಯ ಕಳೆದ ಮನೆಗಳನ್ನು ಹೊಕ್ಕರೆ ಎಂಥಾ ಮನೆಯದು! ಕೇವಲ ಮನೆಯಲ್ಲ, ನೆನಪುಗಳ ಸಾಗರ, ಬಂಧಗಳ ಆಗರ. 

ಭೌತಿಕ ಲಕ್ಷಣಗಳ ಬಗ್ಗೆ ಹೇಳುವುದಾದರೆ ಸುಣ್ಣಬಣ್ಣವಿಲ್ಲದ ಮಣ್ಣಿನ, ಇಟ್ಟಿಗೆಯ ಯಾ ಕೆಂಪುಕಲ್ಲಿನ ಗೋಡೆ . ಮರದ ರೀಪು, ಅಡ್ಡಗಳ ಮೇಲೆ ಸುಂದರವಾಗಿ ಜೋಡಿಸಿದ ಕೆಂಪನೆ ಹಂಚುಗಳ ಮಾಡು. ಬೆಳಕಿಗಾಗಿ ಒಂದೆರಡು ಕಡೆ ಹೆಂಚಿನ ಬದಲಿಗೆ ಗಾಜಿನ ಜೋಡಣೆ. ಮರದ ಕಿಟಕಿ ಬಾಗಿಲುಗಳು. ಮರದಹಲಗೆಗಳನ್ನು ನೀಟಾಗಿ ಜೋಡಿಸಿ ಮಾಡಿದ ಅಟ್ಟಗಳು. ಸೆಗಣಿ ಸಾರಿಸಿದ ಮಣ್ಣಿನ ನೆಲಕ್ಕೆ ಗೇರುಬೀಜದೆಣ್ಣೆಯ ಲೇಪದಿಂದ ಫಳಫಳ ಮೆರುಗು, ಏನೋ ಒಂದು ನವಿರಾದ ಕಂಪು.
ಅಡುಗೆ ಕೋಣೆಯದು ಸೆಗಣಿ, ಬ್ಯಾಟರಿ ಕರಿ ಸೇರಿಸಿ ಸಾರಿಸಿದ ಕಪ್ಪುನೆಲ, ಕುಳಿತು ಅಡುಗೆ ಮಾಡಲು ಅನುಕೂಲಿಸುವಂತೆ ಅಚ್ಚುಕಟ್ಟಾದ 3 ಯಾ 4 ಸೌದೆ ಒಲೆಗಳು. ಅವುಗಳ ಶಾಖ , ಹೊಗೆ ತಾಕುವಂತೆ ಅಟ್ಟಳಿಗೆ, ಅದರ ಮೇಲೆ ಜೋಡಿಸಿಟ್ಟ ವರ್ಷಪೂರ್ತಿ ಸಾಕಾಗುವಷ್ಟು ದಿನೋಪಯೋಗಿ ಅಡುಗೆ ಸಾಮಗ್ರಿಗಳು ಕೆಡದಂತೆ ವರ್ಷ ಕಳೆದರೂ ಗರಿಗರಿತಾಜಾ ಆಗಿ ಉಳಿಯುತ್ತಿದ್ದವು.
ಇನ್ನುಳಿದ ಕೋಣೆಗಳ ನೆಲ ಕೆಂಪು ಕಾವಿಯಿಂದ ಕನ್ನಡಿಯಂತೆ ಹೊಳೆಯುತ್ತಿತ್ತು. ದೇವರ ಕೋಣೆಯಲ್ಲಿ ತುಸು ಕತ್ತಲೆ ಕವಿದಿದ್ದರೂ ಪರಿಶುದ್ಧ ತೆಂಗಿನೆಣ್ಣೆಯಲ್ಲಿ ಬೆಳಗಿದ ನಂದಾದೀಪದ ಮಂದಬೆಳಕಿನಲ್ಲಿ ದೈವೀಕತೆಯಿಂದ ತುಂಬಿರುತ್ತಿತ್ತು. 

ಇನ್ನು ಮನೆಯಿಂದ ಹೊರಗಿಳಿದರೆ ದೊಡ್ಡ ಅಂಗಳ. ಸೆಗಣಿ ಗುಡಿಸಿ ಶಿಸ್ತಿನಿಂದ ಖಾಕಿ ಬಣ್ಣದಲ್ಲಿ ಘಮ್ಮನೆ ಮನೆ ಸುತ್ತಮುತ್ತ ವಿಶಾಲವಾಗಿ ಮೈಚಾಚಿ ಹರಡಿರುತಿತ್ತು. ಮಣ್ಣಿನಿಂದ ಕಟ್ಟಿತೆಗೆದ ಸುಂದರ ತುಳಸಿಕಟ್ಟೆ ತನ್ನ ಸ್ವಸ್ಥಾನದಲ್ಲಿ ಮುಂಜಾನೆ ಮುಸ್ಸಂಜೆ ಗೋಧೂಳಿ ಸಮಯದಲ್ಲಿ ತೆಂಗಿನೆಣ್ಣೆ ದೀಪದಲ್ಲಿ ಮನೆಯ ಹೆಣ್ಣು ಮಗಳಿಂದ ಘಮ್ಮನೆ ಬೆಳಗುತ್ತಿರುತಿತ್ತು. ಬಿಸಿಲು ಬಂತೆಂದರೆ ಸಾಕು ಮುಕ್ಕಾಲುವಾಶಿ ಅಂಗಳ ಅಡಿಕೆಯಿಂದ ಕೇಸರಿಮಯವಾದರೆ ಇನ್ನುಳಿದ ಜಾಗ ಹಪ್ಪಳ, ಸಂಡಿಗೆ, ದಾರೇಹುಳಿ, ಗೇರುಬೀಜಗಳಿಂದ ತುಂಬುತಿತ್ತು. ಅಲ್ಲದೆ ಇನ್ನು ಅಂಗಳದ ಬದಿಗಳಲ್ಲಿ ಸಾಲುಸಾಲು ತೊಳೆದು ಒಣಗಲು ಹಾರಾಡುತ್ತಿದ್ದ ಬಟ್ಟೆಗಳು. ಬೇಸಗೆ ಕಾಲದಲ್ಲಿ ಈ ಅಂಗಳಕ್ಕೆ ಬಿಡುವೇ ಇಲ್ಲವಾದರೆ ಮಳೆಗಾಲದಲ್ಲಿ ಮಾತ್ರ ಗುಂಡಿ ಬಿದ್ದು ಹಾಳಾಗಬಾರದೆಂದು ಮಡಲಿನಿಂದ ಮುಚ್ಚಿ ಬೆಚ್ಚಗೆ ಮಲಗಿರುತಿತ್ತು.  ಅದರೆದುರಲ್ಲಿ ಹೂವಿನ ತೋಟ. ಬಗೆಬಗೆಯ ಗುಲಾಬಿ, ಮಲ್ಲಿಗೆ, ಸಂಪಿಗೆ, ಪಾರಿಜಾತ, ಅಬ್ಬಲಿಗೆ, ಮಂದಾರ, ಕಾಂತಣ, ನಂಡಿತ, ಸುಗಂಧಿ, ತ್ರಿಸಂಧಿ, ದಾಸವಾಳ ಅಲ್ಲದೆ ಅತ್ತಿ, ಇತ್ತಿ, ಅಶ್ವತ್ಥ, ಬಿಲ್ವ, ಶಮಿ, ದರ್ಭೆ,ಗರಿಕೆ, ತುಳಸಿ, ಗರ್ಗ  ಗಿಡಗಳಿಂದ ಸಾಲಂಕೃತವಾಗಿರುತಿತ್ತು.
ಅಂಗಳದ ಕೊನೆಯಲ್ಲಿ ಒಂದಿಷ್ಟು ಖಾಲಿ ಜಾಗ ತರಕಾರಿಗಾಗಿಯೇ ಮೀಸಲು. ಅಲ್ಲಿ ತೊಂಡೆ, ಬೆಂಡೆ, ಅಲಸಂಡೆ, ಸೌತೆ, ಮುಳ್ಳುಸೌತೆ, ಹಾಗಲ,ಬದನೆ, ಬೂದು ಕುಂಬಳ, ಚೀನಿಕಾಯಿ, ಸೋರೆ, ಹೀರೆ, ಸುವರ್ಣಗೆಡ್ಡೆ, ಸಿಹಿಗೆಣಸು, ಮರಗೆಣಸು, ಕೆಸು, ಹರಿವೆ, ಬಸಳೆ,ಮುಂಡಿಗೆಡ್ಡೆ  ಜೊತೆಗೆ ಶುಂಠಿ, ಅರಸಿನ, ನೆಲಮಾವು, ನೆಲನೆಲ್ಲಿ, ಕಬ್ಬು ಹೀಗೆ ಆಯಾ ಕಾಲಾನುಸಾರ ಬೆಳೆಯಬೇಕಾದ ತರಾವರಿ ತರಕಾರಿಗಳನ್ನು ಬೆಳೆಯಬಹುದಿತ್ತು. ಜೀವನಪೂರ್ತಿ ಮನೆಮಂದಿಯ ಹಸಿವನನ್ನಾರಿಸಿ ಆರೋಗ್ಯವನ್ನೂ ಕಾಪಿಡುತಿತ್ತು. 

ಮನೆಯಿಂದ ಕಣ್ಣಳತೆ ದೂರದಲ್ಲಿ ಬಚ್ಚಲುಮನೆ, ಅದರಲ್ಲಿ ದೊಡ್ಡಹಂಡೆ ಸದಾ ಬಿಸಿನೀರಿನಿಂದ ಹಬೆಯಾಡುತಿತ್ತು. ಹಂಡೆಯಡಿಯಲ್ಲಿರುವ ಒಲೆ ತುಂಬ ಅಡಿಕೆಸಿಪ್ಪೆ, ಕಟ್ಟಿಗೆ, ತೆಂಗಿನ ಸಿಪ್ಪೆ, ತೆಂಗಿನ  ಗರಿಗಳನ್ನು ತುರುಕಿ ಬೆಂಕಿ ಉರಿಸಿದರೆ ಮನೆಮಂದಿಗಲ್ಲದೆ  ಬಾಣಂತಿ ದನಕರುಗಳಿಗೂ ಬೆಚ್ಚಗೆ ಸ್ನಾನದ ಭಾಗ್ಯ. ಇದಕ್ಕೊಂದು ಅಟ್ಟ, ಅದರಲ್ಲಿ  ಒಣಗಲು ಹಾಕಿದ ಮಳೆಗಾಲದ ಅಡಿಕೆ, ತೆಂಗಿನಕಾಯಿಗಳು ಒಲೆಯ ಹೊಗೆ ಹಾಗೂ ಶಾಖವನ್ನು ಸಹಿಸಿಕೊಂಡು ಬೆಚ್ಚಗೆ ಬಿದ್ದುಕೊಂಡಿರುತ್ತಿದ್ದವು. ಅಲ್ಲೇ ಒಣಗಿ ಕೊಬ್ಬರಿಯಾಗಿ ಬೇಸಗೆಯಲ್ಲಿ  ಕೆಳಗಿಳಿಸಿ ಒಡೆದು ಕೊಬ್ಬರಿಯನ್ನು ಒಣಗಿಸಿ ಮಿಲ್ಲಿಗೆ ಕೊಟ್ಟರೆ ಪರಿಶುದ್ಧ ಪರಿಮಳಯುಕ್ತ ಎಣ್ಣೆ ಮನೆಯ ಅಟ್ಟವನ್ನೇರಿ ವರುಷದ ಅಗತ್ಯತೆಯನ್ನೆಲ್ಲ ಪೂರೈಸುತಿತ್ತು.

ಮನೆಯಂಗಳದ ಈಶಾನ್ಯ ಮೂಲೆಯಲ್ಲಿ ವರ್ಷಾನುಗಟ್ಟಲೆ ಇಡೀ ಕುಟುಂಬಕ್ಕೆ ಶುದ್ಧ ಜೀವಜಲವನ್ನು ಮೊಗೆಮೊಗೆದು ಭರಿಸುತಿದ್ದ ಬಾವಿ ತನ್ನ ಸ್ಥಾನವನ್ನು ಸ್ಥಾಪಿಸಿಕೊಂಡಿರುತಿತ್ತು. ಇನ್ನೊಂದು ಮೂಲೆಯಲ್ಲಿ ಸೋಗೆಮಾಡಿನಿಂದ ಅಲಂಕೃತವಾದ ಬೆಚ್ಚನೆ ನಾಯಿಗೂಡು ಎರಡುಮೂರು ನಾಯಿ, ಅವುಗಳ ಮರಿಗಳಿಂದ ಕುಯಿಂಗುಡುತ್ತಿತ್ತು. 

ಇನ್ನು ಮನೆಯ  ಹಿಂಬದಿಯಲ್ಲಿ ಕೊಂಚ ಎತ್ತರದಲ್ಲಿ ದನಕರುಗಳ ಅಂಬಾರವದಿಂದ ಕೂಡಿದ ಸುಂದರ ಹಟ್ಟಿ. ಗಂಗೆ, ತುಂಗೆ, ಕಾವೇರಿ, ಲಕ್ಷ್ಮೀ, ಸೀತೆ, ರಾಮ,ಬಸವ, ನಂದಿ ಹೀಗೆ ಅವುಗಳದೇ ಚಂದದೊಂದು ಕುಟುಂಬ. ಹಟ್ಟಿಗೊಂದು ಅಟ್ಟ. ಅದರ ತುಂಬ ಮುಳಿಹುಲ್ಲು, ಬೈಹುಲ್ಲು.  ಅದರ ಹಿಂಬದಿಯಲ್ಲಿ ಹುಲ್ಲಿನ ಕಟ್ಟಗಳು , ಹಟ್ಟಿಯಲ್ಲಿ ಉದುರಿಸಲು ಸೊಪ್ಪು, ಸೋಗೆ ರಾಶಿಗಳು. ಅಲ್ಲೇ ಪಕ್ಕದಲ್ಲೆಂಬಂತೆ ಸೌದೆ,ಮಡಲು, ಕೊತ್ತಲಿಂಗೆ ಹಾಗೂ ಇನ್ನಿತರ ಕಟ್ಟಿಗೆ ಸಾಮಗ್ರಿಗಳನ್ನು ಒಟ್ಟುಹಾಕಲೆಂದು ಸಾಮಾನ್ಯ ಕೊಟ್ಟಿಗೆ.  ಹಟ್ಟಿಯಿಂದ ಮಾರುದೂರದಲ್ಲಿ ಬೂದಿಹೊಂಡ. ಅಡುಗೆ ಒಲೆಯ, ಬಚ್ಚಲು ಒಲೆಯ ಬೂದಿಯನ್ನು ಅಲ್ಲಿ ಒಟ್ಟುಹಾಕಿ ವರ್ಷಕ್ಕೆರಡು ಬಾರಿ ತೋಟಕ್ಕೆ ಹಾಕಿದರೆ ಅದುವೇ ಒಂದೊಳ್ಳೆ ಕ್ರಿಮಿನಾಶಕ.  

ಮನೆಯ ಮೂರು ದಿಕ್ಕುಗಳನ್ನಾವರಿಸಿದಂತೆ  ಸಮೃದ್ಧ ತೋಟ. ಅದರ ತುಂಬಾ ಅಡಿಕೆ, ತೆಂಗು, ಬಾಳೆ, ಹಲಸು,ಕೊಕ್ಕೊ,ಪೇರಳೆ,ಚಿಕ್ಕು, ಸೀತಾಫಲ, ಈಚಲು, ಲಿಂಬೆ, ಗಜಲಿಂಬೆ, ನಾರಂಗ, ನೇರಳೆ, ಜಂಬು, ಪಪ್ಪಾಯಿ, ಬೀಂಪುಳಿ, ಏಲಕ್ಕಿ,ಇನ್ನದೆಷ್ಟೋ ಗಿಡಮರಗಳಿಂದ ಸದಾ ಹಚ್ಚಹಸುರಾಗಿ ಕಂಗೊಳಿಸುತ್ತಿತ್ತು. ಈ ಎಲ್ಲ ಗಿಡಮರಗಳಿಗೆ ನೀರುಣಿಸಲೆಂದೇ ಕಡೆಬೇಸಗೇಯಲ್ಲೂ ಬತ್ತದ ಎರಡುಮೂರು ಕೆರೆಗಳು.  ಇನ್ನು ಮನೆಯ ಹಿಂಭಾಗದಲ್ಲೆಂಬಂತೆ  ಇಷ್ಟು ದೊಡ್ಡ ತೋಟಕ್ಕೆ ಕಾಡುಸೊಪ್ಪನ್ನೀಯಲೆಂದೇ ಇರುವ ಬಿರುಸಾದ ಗುಡ್ಡೆ. ಅದರ ತುಂಬಾ ಗೇರುಬೀಜ, ಬಗೆಬಗೆಯ ಕಾಡುಮಾವು, ಕುಂಟಲ, ಕಾಸರ, ಪುನರ್ಪುಳಿ, ಹುಣಸೆಹುಳಿ, ದಾರೇಹುಳಿ, ಆಡ್ಸೋಗೆ, ಪಲ್ಲಿಚಪ್ಪು ಹೀಗೆ ಎಷ್ಟೆಷ್ಟೋ ಗಿಡಗಂಟಿ, ಬಳ್ಳಿ, ಪೊದೆ, ಮರಗಳಿಂದ ಒಂದು ರೀತಿಯಲ್ಲಿ ಮಳೆಗಾಲದಲ್ಲಿ ಕಾಡಿನಂತೆ ದಟ್ಟ ಹಸಿರಾಗುತಿತ್ತು.

ಇಂಥಾ ವಿಶಾಲ ಮನೆಯ ಜೀವಾಳ ಮನೆಮಂದಿ. ಅಬ್ಬಾ  ಎಷ್ಟೊಂದು ಜನ ಆ ಮನೆಯಲ್ಲಿ. ಅಜ್ಜ, ಅಜ್ಜಿ, ದೊಡ್ಡಪ್ಪ, ದೊಡ್ಡಮ್ಮ, ಅಪ್ಪ, ಅಮ್ಮ, ಚಿಕ್ಕಪ್ಪ ಚಿಕ್ಕಮ್ಮ, ಅಕ್ಕ,ಅಣ್ಣ,ತಮ್ಮ,ತಂಗಿ ಅಂತ ಮನೆ ತುಂಬ ಮಕ್ಕಳು. ಇವರೆಲ್ಲರ ಸಹಾಯಕ್ಕೆಂಬಂತೆ ಒಂದೋ ಎರಡೋ ಹೆಣ್ಣಾಳು, ಗಂಡಾಳುಗಳು. ರಜೆಗಳಲ್ಲಿ ಆಗಮಿಸುವ ಅತ್ತೆ, ಮಾವ, ಬಾವ ಅತ್ತಿಗೆಯಂದಿರು. ಇನ್ನು ಪೂಜೆ, ಹಬ್ಬ ಹರಿದಿನಗಂದು ಬರಮಾಡುವ ನೆಂಟರಿಷ್ಟರು, ಆಪ್ತಮಿತ್ರ, ಬಂಧುಬಳಗ. ಮನೆ ತುಂಬ ನೂರಾರು ಜನ ಏನು ಸಂಭ್ರಮ, ಸಂತೋಷ. ದುಃಖ ದುಮ್ಮಾನ ಜಗಳಗಳು ಇಲ್ಲವೆಂದಲ್ಲ. ಸಣ್ಣಮಟ್ಟಿನವು ಅಲ್ಲಿಂದಲಿಗೆ ಪರಿಹಾರವಾದರೆ, ದೊಡ್ಡಮಟ್ಟಿನವು ಅಜ್ಜ ಅಜ್ಜಿಯರಲ್ಲಿಗೆ ತಲುಪಿ ಸಮಾಪ್ತಿಯಾಗುತ್ತಿದ್ದವು.

ಆದರೆ, ಆದರೆ ಇಂದು ಅಂಥಾ ಮನೆ ಬೀಗ ಜಡಿದುಕೊಂಡು ಸ್ತಬ್ಧವಾಗಿ ಏಕಾಂಗಿಯಾಗಿ ನಿಟ್ಟುಸಿರಿಡುತ್ತಿದೆ. ಆ ಅಂಗಳ ಬಿಕೋ ಎಂದು ಏದುಸಿರು ಬಿಡುತ್ತಾ ಎಲ್ಲ ಕೆಲಸಗಳಿಂದ ನಿವೃತ್ತಿ ಪಡೆದಂತೆ ಸುಮ್ಮನೆ ಮಲಗಿದೆ. ಎಷ್ಟೋ ದೀಪಾವಳಿಗಳನ್ನು ಕಂಡ ಆ ಸುಂದರ ಕಟ್ಟೆಯಲ್ಲಿದ್ದ ತುಳಸಿಗಿಡ ಎಂದೋ ಸತ್ತು ಸ್ವರ್ಗ ಸೇರಿದೆ. ಕೆರೆಬಾವಿಗಳು  ಕಣ್ಣೀರಿಟ್ಟಂತೆ ತೋರುತ್ತಿದೆ . ಹಟ್ಟಿ ಖಾಲಿಯಾಗಿ ಸಲಿಕೆಗಳೆಲ್ಲ ಮುರಿದು ನೇತಾಡುತ್ತಿವೆ. ಒಟ್ಟುಸೇರಿಸಿದ ಸೌದೇರಾಶಿಗೆ ಹಿಡಿದ ಗೆದ್ದಲು ಮಾಡಿಗೇರುತ್ತಿದೆ. ಹೂತೋಟದಲ್ಲಿ ಗಿಡಗಳೆಲ್ಲ ನೀರುಗೊಬ್ಬರ ಕಾಣದೆ ನಿರ್ಜೀವವಾಗಿ ಉಸಿರಾಡುತ್ತಿವೆ. ತರಕಾರಿ ಜಾಗ ಕಳೆಗಿಡಗಳಿಂದ ಆವೃತವಾಗಿದೆ. ಹಚ್ಚಹಸಿರ ಸಮೃದ್ಧ ತೋಟ ವಾರಸುದಾರರಿಲ್ಲದೆ ಕಾಡೇ ಆಗಿದೆ. ಆ ಬಿರುಸಾದ, ಕಾಡಿನಂತಿರುವ ಗುಡ್ಡೆ ಬೋಳಾಗಿ ಬಟಾಬಯಾಲಾಗಿ ಬೇರೆ ಯಾರದ್ದೋ ಮನೆಗಳಿಗೆ ಆಶ್ರಯವಿತ್ತಿದೆ. 

ಮತ್ತು ಇಂದಿನ ಸುಸಜ್ಜಿತ ಐಷಾರಾಮಿ ಮನೆಗಳಲ್ಲಿನ  ಸಂಖ್ಯೆ ಹೆಚ್ಚೆಂದರೆ  ಮೂವರು. ಎಲ್ಲರೂ ಜೊತೆಗಿರುವ ಸಂಭವ ಆದಿತ್ಯವಾರದ ಸಂಜೆ ನಂತರವೇ ಇರಬಹುದೇನೋ. ಉಳಿದ ದಿನಗಳಲ್ಲಿ ಮಗು ಶಾಲೆಗೆ, ಗಂಡಹೆಂಡತಿ ಕೆಲಸಕ್ಕೆ. ಅವರಲ್ಲಿ ಒಬ್ಬರು ಡೇ ಶಿಫ್ಟ್ ಆದರೆ ಇನ್ನೊಬ್ಬರು ನೈಟ್ ಶಿಫ್ಟ್. ಅಲ್ಲಿಗೆ ಆ ಐಷಾರಾಮಿ ಮನೆಯೂ ಖಾಲಿ ಖಾಲಿ....
Creative Writings
"ಮನೆ" ಎಂದರೆ ಅಷ್ಟೇ ಸಾಕೇ??!!