
News · July 16, 2026
ಪೆರ್ಲ ನಿವಾಸಿ ಎಸ್. ಎನ್. ಭಟ್, ಸೈಪಂಗಲ್ಲು ಕನ್ನಡ ಪಯಸ್ವಿನಿ -ಸಾಧನಾ ಪ್ರಶಸ್ತಿಗೆ ಆಯ್ಕೆ
ವರದಿ ಕೃಪೆ : ವಿಶೇಷ ಚಾನೆಲ್
ಕರಾಡ ವಿಶ್ವ ಸಂಪಾದಕ ಬಳಗದ ಸದಸ್ಯರಾಗಿರುವ ಶ್ರೀಯುತ ಎಸ್ ಎನ್ ಭಟ್ ಸೈಪಂಗಲ್ಲು ಅವರಿಗೆ ಹಾರ್ದಿಕ ಅಭಿನಂದನೆಗಳು...
ಪೆರ್ಲ: ಗಡಿನಾಡು ಕಾಸರಗೋಡಿನ ಖ್ಯಾತ ಕನ್ನಡ ಸಂಸ್ಥೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯಕನ್ನಡ ಪಯಸ್ವಿನಿ – ಸಾಧನಾ ಪ್ರಶಸ್ತಿಗೆ ಎಸ್. ಎನ್. ಭಟ್, ಸೈಪಂಗಲ್ಲು ಆಯ್ಕೆಯಾಗಿದ್ದಾರೆ.
ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದ "ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ" ಪ್ರಯುಕ್ತ ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಈ ಪ್ರಶಸ್ತಿ ಪ್ರದಾನಗೈಯಲಾಗುವುದೆಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ. ಎನ್ ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನ ಸ್ಥಾಪಕ ಅಧ್ಯಕ್ಷ ಡಾ. ಕೆ ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರೀಯ ವಿದ್ಯಾಲಯದಲ್ಲಿ ಸುದೀರ್ಘ 36 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಸ್. ಎನ್. ಭಟ್, ಸೈಪಂಗಲ್ಲು ಅವರು ಶಿಕ್ಷಣ, ಸಾಹಿತ್ಯ ಮತ್ತು ಮಾಧ್ಯಮ ರಂಗದಲ್ಲಿ ಅತ್ಯಂತ ಪರಿಚಿತ ಹಾಗೂ ಗೌರವಾನ್ವಿತ ನಾಮ. ಪೆರ್ಲ ಮೂಲದ ಇವರು ತಮ್ಮ ಆಡಳಿತಾತ್ಮಕ ಚತುರತೆ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ನೀಡಿದ ಅನನ್ಯ ಕೊಡುಗೆಗಾಗಿ 2016ರಲ್ಲಿ ಪ್ರತಿಷ್ಠಿತ ಕೇಂದ್ರೀಯ ವಿದ್ಯಾಲಯ ಇನ್ನೋವೇಶನ್ ರಾಷ್ಟ್ರೀಯ ಪ್ರಶಸ್ತಿಯನ್ನು (ಕೇಂದ್ರೀಯ ವಿದ್ಯಾಲಯ ಪ್ರಶಸ್ತಿ) ಮುಡಿಗೇರಿಸಿಕೊಂಡಿದ್ದಾರೆ. ಇದಕ್ಕೂ ಮೊದಲು 2010ರಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆಯ ವಲಯ ಮಟ್ಟದ ಪ್ರಶಸ್ತಿ ಇವರಿಗೆ ಲಭಿಸಿತ್ತು.ಇವರ ಸುದೀರ್ಘ ಸಮಾಜಮುಖಿ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಪ್ರತಿಷ್ಠಿತ 'ಕರಾವಳಿ ಪ್ರತಿಷ್ಠಾನ ಪ್ರಶಸ್ತಿ' ಸೇರಿದಂತೆ ವಿವಿಧ ಗೌರವ ಪುರಸ್ಕಾರ ಗಳು ದೊರೆತಿವೆ.
ಪ್ರಮುಖ ಪತ್ರಿಕೆಗಳಾದ ಕರಾಡ ವಾಣಿ, ಉದಯವಾಣಿ, ಹೊಸದಿಗಂತ, ಪ್ರಜಾವಾಣಿ, ಉಪಯುಕ್ತ ವಿಶ್ವವಾಣಿ ಹಾಗೂ ಕೆಲವು ಸ್ಮರಣ ಸಂಚಿಕೆಗಳಿಗೆ ಲೇಖನ ಬರೆದಿರುವ ಜೊತೆಗೆ ಪ್ರಚಲಿತ ವಿದ್ಯಮಾನಗಳ ಕುರಿತು ಗಂಭೀರ ಲೇಖನಗಳನ್ನು ಬರೆಯುತ್ತಿರುವ ಇವರು, 'ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿ'ನಲ್ಲಿ ಬರಹಗಾರರಾಗಿ ವಿಜ್ಞಾನ ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಕರಾಡ ವಿಶ್ವ ಬಳಗದ ಓರ್ವ ಸಂಪನ್ಮೂಲ ವ್ಯಕ್ತಿಯಾಗಿ ಕರಾಡ ವಾರ್ತೆಗಳ ಸಂಪಾದಕ ಹಾಗೂ ವಾಚಕರಾಗಿ, 'ಕರಾಡವಾಣಿ' ಮಾಸಪತ್ರಿಕೆಯ ಉಪಸಂಪಾದಕರಾಗಿ ಮಾಧ್ಯಮ ರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಆಕಾಶವಾಣಿಯ ಮಂಗಳೂರಲ್ಲಿ ಹಿಂದಿ ಪಾಠಗಳು ಸೇರಿದಂತೆ, ಚಿಂತನ, ಭಾಷಣ, ಚರ್ಚೆಗಳಲ್ಲಿ ಭಾಗವಹಿಸಿದ ಅನುಭವ. ಸಣ್ಣ ಕಥೆ, ಕವನ, ವೈಚಾರಿಕ ಲೇಖನಗಳು, ಸಂದರ್ಶನ ಲೇಖನ, ಹಾಸ್ಯ ಬರಹಗಳ ಮೂಲಕ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರು.
ಇವರ ಸಾಹಿತ್ಯಕ ಕೊಡುಗೆಯಾಗಿ 'ಸೂರ್ಯ ಬಿಂಬ' ಮತ್ತು 'ಭಾವ ಸಂಧ್ಯಾ' ಎಂಬ ಕೃತಿಗಳು ಈಗಾಗಲೇ ಲೋಕಾರ್ಪಣೆಗೊಂಡಿವೆ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳ ಮೇಲೆ ಪ್ರಭುತ್ವ ಹೊಂದಿರುವ ಎಸ್.ಎನ್. ಭಟ್, ಸೈಪಂಗಲ್ಲುರವರು ಕರ್ನಾಟಕ ಜೇಸೀಸ್ ಸಂಸ್ಥೆಯ ರಾಜ್ಯಮಟ್ಟದ ನುರಿತ ತರಬೇತುದಾರರಾಗಿದ್ದಾರೆ. ಶಾಲಾ -ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಮತ್ತು ಒತ್ತಡ ನಿರ್ವಹಣೆಯ ಕುರಿತು ಹಲವಾರು ಯಶಸ್ವಿ ಕಾರ್ಯಾಗಾರಗಳನ್ನು ನಡೆಸಿಕೊಟ್ಟಿರುವ ಇವರು, ಉದ್ಯೋಗಿಗಳಿಗೆ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ತರಬೇತಿ ನೀಡುವ ಪ್ರಭಾವಿ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಪ್ರಬುದ್ಧ ನಿರೂಪಣೆ, ಕವಿಗೋಷ್ಠಿಗಳ ಯಶಸ್ವಿ ಚಾಲನೆ ಹಾಗೂ ವಿಚಾರಗೋಷ್ಠಿಗಳಲ್ಲಿ ಆಳವಾದ ಮಾರ್ಗದರ್ಶನ ನೀಡುವ ಮೂಲಕ ಸಾಂಸ್ಕೃತಿಕ ಸಭೆಗಳ ಆಕರ್ಷಣೆಯಾಗಿದ್ದಾರೆ
ಶಿಕ್ಷಣ ಕ್ಷೇತ್ರದ ಸುಧಾರಣೆಯಲ್ಲಿ ಇಂದಿಗೂ ಸಕ್ರಿಯರಾಗಿರುವ ಇವರು, ಕೇರಳದ ಶಾಲೆಗಳಲ್ಲಿ ನಡೆಯುವ ಪ್ರತಿಷ್ಠಿತ ಕಲೋತ್ಸವಗಳ ವಿವಿಧ ಸಾಹಿತ್ಯಕ ಸ್ಪರ್ಧೆಗಳಿಗೆ ಗೌರವಾನ್ವಿತ ನಿರ್ಣಾಯಕರಾಗಿ ಯಶಸ್ವಿ ಜವಾಬ್ದಾರಿ ನಿಭಾಯಿಸಿದ್ದಾರೆ. ಅಷ್ಟೇ ಅಲ್ಲದೆ, ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಕೇಂದ್ರೀಯ ವಿದ್ಯಾಲಯಗಳ ಗುತ್ತಿಗೆ ಆಧಾರಿತ ಶಿಕ್ಷಕರ ಆಯ್ಕೆ ಮ೦ಡಳಿಯ ತಜ್ಞ ಸದಸ್ಯರಾಗಿ, ಶಿಕ್ಷಕರ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪೂರ್ಣ ಸಂಪನ್ಮೂಲ ಸೇವೆ ನೀಡಿದ್ದಾರೆ. ಶಿಕ್ಷಣ, ಸಾಹಿತ್ಯ, ಕಲೆ ಮತ್ತು ಸಮಾಜ ಸೇವೆಯ ನಾನಾ ರಂಗಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ
