Karada Vishwa

Article · May 23, 2026

ಅಮೆರಿಕ - ಇರಾನ್ ಯುದ್ಧವೂ... ನನ್ನ ಗ್ಯಾಸ್ ಟ್ರಬಲ್ಲೂ...

- ಪದ್ಮಶ್ರೀ ಮಾದೆರಿ

ಕಳೆದ ಎರಡು ವಾರಗಳಿಂದ ಮನೆಯಿಂದ ಹೊರಗೆ ಹೋಗದೆ ಕಾಯುತ್ತಾ, ತರಕಾರಿ, ದಿನಸಿ ಸಾಮಗ್ರಿಗಳನ್ನೂ ಬಿಗ್ ಬಾಸ್ಕೆಟ್ ನಲ್ಲಿಯೋ ಅಥವಾ ಅಮೆಜಾನ್ ನಲ್ಲಿಯೋ ತರಿಸಿ, ಇವತ್ತು ಬರಬಹುದು, ನಾಳೆ ಬರಬಹುದು ಎಂಬ ನಿರೀಕ್ಷೆಯಲ್ಲಿರುವಾಗ, ನಿನ್ನೆ ಸಂಜೆ ಅಪರೂಪಕ್ಕೆ ಗಾಳಿ ಸೇವನೆಗೆಂದು ಅದೂ ಬರೀ ಕಾಲು ಗಂಟೆ ಟೆರೆಸಿನಲ್ಲಿ ಕೂತು ಮನೆಗೆ ಬಂದಾಗ, ಸೆಕ್ಯೂರಿಟಿ ನನ್ನ ಹತ್ತಿರ "ಮೇಡಂ ಗ್ಯಾಸ್ ಬಂದಿತ್ತು ನೀವು ಮನೆಯಲ್ಲಿ ಇಲ್ಲ ಅಂತ ವಾಪಸ್ ಹೋದ್ರು"ಎನ್ನಬೇಕೇ..?!
 ಎರಡು ವಾರಗಳಿಂದ  ಗ್ಯಾಸ್ ಬಂದಿಲ್ಲ ಎಂದು  ನಾನು ಪೇಚಾಡುವುದನ್ನು ಕಂಡಿದ್ದ ಪಕ್ಕದ ಮನೆಯ ಆಂಟಿ, ಪಾರ್ಕಿಂಗ್ ನಲ್ಲಿ ಗ್ಯಾಸ್ ಸಿಲಿಂಡರ್ ತರುವ ರಿಕ್ಷಾ ಕಂಡು, ನಮ್ಮ ಮನೆಗೆ ಗ್ಯಾಸ್ ಬಂತೆಂದು ಭಾವಿಸಿ, ಸೀದಾ ಮನೆಗೆ ಬಂದು "ಸ್ವೀಟ್ ಕೊಡಮ್ಮ. ಗ್ಯಾಸ್ ಬಂತು ನೋಡು, ನೀನು ಸುಮ್ಮನೆ ಮಂಡೆ ಬಿಸಿ ಮಾಡಿದ್ದ" ಅಂತ ಹೇಳುವಾಗ ತಲೆ ಚಚ್ಚಿಕೊಳ್ಳುವಷ್ಟು ನನ್ನ ಮೇಲೆ ಕೋಪ ಬಂತು. ಅಲ್ಲ, ಇಷ್ಟು ದಿನ ಮನೆಯಲ್ಲಿಯೇ ಇದ್ದವಳು ಇವತ್ತೇ ಗಾಳಿ ಸೇವನೆಗೆ ಹೋಗಬೇಕಿತ್ತಾ? ಈಗ ಮನೆಯಲ್ಲಿ ಇಲ್ಲದಿರುವಾಗಲೇ ಗ್ಯಾಸ್ ಬರಬೇಕಿತ್ತಾ...!

ಈ ಸಲ ಗ್ಯಾಸ್ ಬಂದ ಕೂಡಲೇ ಉದ್ದಿನ ದೋಸೆ, ನೀರ್ ದೋಸೆ, ಮಜ್ಜಿಗೆ ದೋಸೆಗಳನ್ನೆಲ್ಲ ಮಾಡೋದು ಅಂತ ಪ್ಲಾನ್ ಮಾಡಿದ್ದ ನನಗೆ ಎಷ್ಟು ಬೇಜಾರಾಯ್ತು ಗೊತ್ತುಂಟಾ..? ಗ್ಯಾಸ್ ನಲ್ಲಿ ದೋಸೆ ಮಾಡಿದ್ರೆ ಗ್ಯಾಸ್ ಬೇಗ ಖಾಲಿ ಆಗ್ತದೆ. ಹೊಸ ಸಿಲಿಂಡರ್ ಬಂದ ಮೇಲೆ ದೋಸೆ ಎಲ್ಲ ಮಾಡುವ ಅಂತ ನಮ್ಮವರು ಹೇಳಿದ್ದರಿಂದ, ಮನೆಯಲ್ಲಿ ದಿನಾ ಚಿತ್ರಾನ್ನ, ಪುಳಿಯೋಗರೆ ಅಥವಾ ಪಲಾವು ಇತ್ಯಾದಿ ಬರೀ ಅನ್ನದ ತಿಂಡಿಗಳೇ. ದೋಸೆ, ಕಡುಬು ಎಲ್ಲಾ ಬಂದ್. ನಾನೋ ದೋಸೆ ಪ್ರಿಯೆ. ಅಂತೂ ನನ್ನ ಗಾಳಿ ಸೇವನೆ ದೋಸೆ ತಿನ್ನುವ ಆಸೆಗೆ ತಣ್ಣೀರೆರೆಚಿತು. ಇನ್ನು ಪುನಃ ಗ್ಯಾಸ್ ಯಾವಾಗ ಬರಬಹುದು ಎಂದು ಕಾಯುವ ಪರಿಸ್ಥಿತಿ.

ಇರಾನ್ ಮತ್ತು ಅಮೆರಿಕ ಯುದ್ಧ ಪ್ರಾರಂಭವಾದ ಮೇಲೆ, ಈ ಗ್ಯಾಸ್ ನದ್ದೇ ಭಾರಿ ಸಮಸ್ಯೆ. ಏಪ್ರಿಲ್ ನಲ್ಲಿ ಮದುವೆಗೆಂದು ಮಂಗಳೂರಿಗೆ  ಹೋದಾಗ, ಅಲ್ಲಿ ನಾವು ಉಳಿದುಕೊಂಡಿದ್ದ  ಹೋಟೆಲಿನಲ್ಲಿ ದೋಸೆಗಳೇ ಲಭ್ಯವಿಲ್ಲ. ಕೇಳಿದ್ದಕ್ಕೆ 'ಸೌದೆ ಒಲೆಯಲ್ಲಿ ಅಡುಗೆ ಮಾಡುವುದು, ದೋಸೆ ಇತ್ಯಾದಿ ಮಾಡುವುದು ಕಷ್ಟ. ಅದಕ್ಕೆ ಮೆನುವಿಂದ ದೋಸೆ ತೆಗೆದುಬಿಟ್ಟೆವು' ಅಂತ ಹೇಳಿದ್ರು. ನನ್ನಮ್ಮನದ್ದೂ  ಎರಡು ತಿಂಗಳಿನಿಂದ ಸೌದೆ ಒಲೆಯಲ್ಲಿಯೇ ಅಡುಗೆ. ಈಗ ನೆಂಟರ ಮನೆಗೆ ಹೋದರೂ ಉಭಯ ಕುಶಲೊಪರಿಯ ನಂತರ ಕೇಳುವ ಪ್ರಶ್ನೆ, ನಿಮ್ಮಲ್ಲಿ  ಗ್ಯಾಸ್ ಸಮಸ್ಯೆ ಉಂಟಾ,ಬುಕ್ ಮಾಡಿ ಎಷ್ಟು ದಿನದ ನಂತರ ಬರ್ತದೆ ಇತ್ಯಾದಿ.

ಅಡುಗೆಯನ್ನು ಸೌದೆಯ ಬದಲು ಗ್ಯಾಸ್  ಒಲೆಯಲ್ಲಿ ಮಾಡಲು ಆರಂಭಿಸಿ ಅನೇಕ ವರ್ಷಗಳಾದರೂ,  ಅಮೆರಿಕ ಇರಾನ್ ಯುದ್ಧದ ದೆಸೆಯಿಂದ ಪುನಃ ಸೌದೆ ಒಲೆಯನ್ನು ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ಈ ಯುದ್ಧದಿಂದ ನನ್ನ ದೋಸೆ ತಿನ್ನುವ ಆಸೆಗೇ  ಕುತ್ತು ಬರ್ತದೆ ಅಂತ ನಾನು ಎಣಿಸಿಯೇ ಇರ್ಲಿಲ್ಲ.

ನನ್ನ ಡೆಂಟಿಸ್ಟ್ ಅಪಾಯಿಂಟ್ಮೆಂಟ್, ಗೆಳತಿಯ ಭೇಟಿ ಇತ್ಯಾದಿ ಕಾರ್ಯಕ್ರಮಗಳನ್ನು  ಗ್ಯಾಸ್ ಬರುವಲ್ಲಿವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಈ ಗೃಹ ಬಂಧನದಿಂದ ಬಿಡುಗಡೆ ಯಾವಾಗಲೋ ನಾ ಕಾಣೆ. ದೋಸೆ ತಿನ್ನಲಿಕ್ಕೆ ಇನ್ನು ಎಷ್ಟು ದಿನ ಕಾಯ್ಬೇಕೋ ನಾ ಅರಿಯೆ..!!
Creative Writings
ಅಮೆರಿಕ - ಇರಾನ್ ಯುದ್ಧವೂ... ನನ್ನ ಗ್ಯಾಸ್ ಟ್ರಬಲ್ಲೂ...