Karada Vishwa

Article · August 21, 2026

ವರಮಹಾಲಕ್ಷ್ಮಿ

ವೀಣಾ ಎಂ ಭಟ್

ವರಮಹಾಲಕ್ಷ್ಮೀ ಬಾರಮ್ಮ ನಮ್ಮಮ್ಮ ನೀ

ಸೌಭಾಗ್ಯವ ನೀಡು ನನ್ನಮ್ಮ

ಕ್ಷೀರ ಸಾಗರದ ಮಥನದ ವೇಳೆ

ಉದಯಿಸಿದೆಯಾ ಹಾಲ್ಗಡಲಿನ ಮೇಲೆ

ಶರಣು ಶರಣು ನೀ ಸಿರಿ ದೇವತೆಯೇ

ಕರುಣೆಯಿಂದಲೀ ಕಾಪಾಡು ತಾಯೇ

ಸಕ್ಕರೆಯ ಪಂಚಕಜ್ಜಾಯವ ನೀಡುವೆ

ಶುಕ್ರವಾರದ ಈ ಶುಭದ ದಿನವೇ

ಅಕ್ಕರೆಯಿಂದ ನಮ್ಮನ್ನು ಸಲಹಿ

ಚಿಕ್ಕ ಈ ಮಕ್ಕಳ ಕಾಪಾಡು ತಾಯೇ

ಸಕಲ ಸಮೃದ್ಧಿಯ ನೀಡುವ ತಾಯೇ

ಸಕಲ ಸಂಪತ್ತಿನ ಅಧಿ ದೇವತೆಯೇ

ಸಕಲ ಸನ್ಮಂಗಳ ತೋರುವ ಮಾಯೇ

ಸಕಲ ಸಂಕಷ್ಟವ ಪರಿಹಾರ ನೀಯೇ

ತುಪ್ಪದ ದೀಪವ ಬೆಳಗುವೆ ತಾಯೇ

ತಪ್ಪದೆ ಬಂದು ನೀ ಎಲ್ಲರ ಕಾಯುವೆ

ಒಪ್ಪ ಓರಣದಿ ತೋರಣವನು ಕಟ್ಟುವೆ

ತಪ್ಪದೆ ಮನದಲಿ ಆರಾಧಿಸುವೆ

ಶ್ರಾವಣ ಮಾಸದ ಶುಕ್ರವಾರದ ದಿನವು

ಪೂಜೆಯ ಗೈಯಲು ಲೋಕಕೆ ಶುಭವು

ಅಂಗನೆಯರು ನಿನ್ನ ಸುಂದರ ಮಹಿಮೆಯ

ಮಂಗಳ ಹಾಡುವರು ಶುಭ ಕೀರ್ತನೆಯ

Creative Writings