
Article · July 3, 2026
ಮರೆವು.....
--ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ
ಮರೆವು ಎನ್ನುವ ಶಬ್ದ ಬಹು ವಿಚಿತ್ರ. ಇದು ಸಂದರ್ಭಕ್ಕೆ ಹೊಂದಿಕೊಂಡು, ವಿಷಯಕ್ಕೆ ಹೊಂದಿಕೊಂಡು, ಸಮಯೋಚಿತವಾಗಿ ಅನ್ವಯವಾಗುತ್ತದೆ. ನಮಗೆ ಲಾಭವಾದರೆ ಒಳಿತು. ನಷ್ಟವಾದರೆ ಕೆಡುಕು . ಅಷ್ಟೇ. ಮನಸ್ಸಿಗೆ ನೋವಾದಾಗ ಅಥವಾ ಕಷ್ಟ ಬಂದಾಗ 'ಛೆ, ಮರೆತು ಹೋದ್ರೆ ಒಳ್ಳೆಯದಿತ್ತು ' ಅಂತ ಬಯಸುವ ನಾವು, ನಮಗೆ ಯಾರಾದ್ರೂ ನೋವು ಕೊಟ್ಟರೆ, ಅವಮಾನಿಸಿದ್ರೆ, ಆ ವ್ಯಕ್ತಿಯನ್ನು ಮರೆಯದಂತೆ ನೆನಪಿಡುವುದಿಲ್ಲವೆ? ಈ ಮರೆವು ಎಷ್ಟೊಂದು ವಿಚಿತ್ರ ಮತ್ತು ಹಾಸ್ಯಾಸ್ಪದವೆಂದರೆ, ಕಾಫಿಗೆ ಸಕ್ಕರೆ ಬದಲು ಉಪ್ಪು ಹಾಕುವುದು, ಅಡುಗೆಗೆ ಉಪ್ಪಿನ ಬದಲು ಸಕ್ರೆ ಹಾಕುವುದು ಹೀಗೆಲ್ಲ ಆಗುವುದಿದೆ. ಗಮನವನ್ನು ಎಲ್ಲೋ ಬಿಟ್ಟು ಕೆಲಸ ಮಾಡುವುದು. ತಲೆಯಲ್ಲಿ ಬೇರೆಯೇ ಯೋಚನೆಗಳು. ಕಣ್ಣಿಗೆ ಇಟ್ಟಿರುವ ಕನ್ನಡಕವನ್ನು ಹುಡುಕುವುದೇ ಹುಡುಕುವುದು, ಜಂಬ್ರಗಳಿಗೆ, ದೇವಸ್ಥಾನಗಳಿಗೆ ಹೋಗಿ ಬರುವಾಗ ಚಪ್ಪಲಿ ಮರೆತು ಬಂದು ಅಯ್ಯೋ ಹೊಸ ಚಪ್ಪಲಿ ಮರೆತು ಬಂದೆ ಎಂದು ಗೋಳಾಡುವುದು, ಬೀಗದ ಕೈ [ಕೀ ] ಎಲ್ಲಿಟ್ಟದ್ದೆಂದು ಊರೆಲ್ಲಾ ಹುಡುಕುವುದು, ಎಂತೆಂಥಾ ಫಜೀತಿಗಳೆಂದರೆ ಊಹಿಸಲೂ ಸಾಧ್ಯವಿಲ್ಲ. ಅಕ್ಕಿ, ಬೇಳೆ, ಖಾಲಿ ಎಂದು ಅಂಗಡಿಗೆ ಹೋಗಿ ಬರುವಾಗ ಅದೆರಡು ಬಿಟ್ಟು ಉಳಿದದ್ದೆಲ್ಲಾ ತರುವುದು ಹೀಗೆಲ್ಲಾ.....🤣.
ಒಮ್ಮೊಮ್ಮೆ ಯಾವುದಾದರೂ ಫಂಕ್ಷನ್ ಅಥವಾ ಜನಸಂದಣಿಗಳಲ್ಲಿ ಯಾರಾದರೂ ಕಾಣಿಸಿಕೊಂಡು 'ಹೇಗಿದ್ದೀರಾ? ಪರಿಚಯ ಉಂಟಾ ನನ್ನದು ?' ಅಂತ ಕೇಳಿದಾಗ ಎಲ್ಲಿಯೋ ಮಾತಾಡಿದ ನೆನಪು. ಯಾರು ಅಂತ ತಿಳಿಯೋದಿಲ್ಲ. ಹಾಗಂತ ಹೇಳಲು ಮುಜುಗರ. 'ಹಾ, ಹೌದು ಗೊತ್ತಿದೆ' ಅಂತ ಹೇಳುವುದು. ಅವರು ಆ ಕಡೆ ಹೋದ ಮೇಲೆ ಬೇರೆ ಯಾರನ್ನಾದರೂ 'ಅವರು ಯಾರೆಂದು' ಕೇಳುವುದು🤣🤣🤣. ಚಿಕ್ಕ ವಯಸ್ಸಿಗೂ ಈಗ ಮರೆವು ಬರುತ್ತಿದೆ. ಇದು ಖಾಯಿಲೆಯೇ ಅಥವಾ ಒಳ್ಳೆಯದೇ ?ಅರ್ಥವಾಗುವುದಿಲ್ಲ. ನಾವು ಯಾರಿಗಾದರೂ ಸಾಲ ಕೊಡಬೇಕಾದರೆ ಮರೆತು ಬಿಡುತ್ತೇವೆ. ಬೇರೆಯವರಿಂದ ನಮಗೆ ಬರಬೇಕಾದರೆ ಸಾವಿರ ಬಾರಿ ನೆನಪಿಸುತ್ತೇವೆ. ಅಲ್ಲವೆ? ಒಲೆಯ ಮೇಲೆ ಅಥವಾ ಗ್ಯಾಸ್ ಸ್ಟೌ ಮೇಲೆ ಏನನ್ನಾದರೂ ಕುದಿಯಲಿಕ್ಕಿಟ್ಟು ಮೊಬೈಲ್ ಹಿಡಿದು ಕೂತರೆ ಅಥವಾ ಟಿವಿ ಮುಂದೆ ಕೂತರೆ ಅಥವಾ ಹರಟೆಗೆ ಕೂತರೆ, ಕರಟಿದ ವಾಸನೆ ಬಂದಾಗಲೇ ನೆನಪಾಗುವುದು. ಪ್ರತಿನಿತ್ಯದ ಅಗತ್ಯ ವಸ್ತುಗಳನ್ನು ಎಲ್ಲೋ ಇಟ್ಟು ಎಲ್ಲೋ ಹುಡುಕುವುದು. ಮೊಬೈಲ್ ಎಲ್ಲಿಟ್ಟದ್ದೆಂದು ಮರೆಯುವುದಿಲ್ಲ. ಯಾಕಂದ್ರೆ ಧ್ಯಾನವೆಲ್ಲಾ ಅದರೆಡೆಗೆ. ಎಷ್ಟೋ ಸಾರಿ ಆತ್ಮೀಯವಾಗಿ ಮಾತನಾಡಿಸಿದವರು ಮತ್ತೊಮ್ಮೆ ಅಪರೂಪಕ್ಕೆ ಕಂಡಾಗ 'ಯಾರಪ್ಪಾ ಇವರು? ಎಲ್ಲೋ ನೋಡಿದಂತಿದೆ ಅನ್ನಿಸ್ತದೆ. ಮಾತನಾಡಲು ಹಿಂಜರಿಕೆ. ಯಾರೆಂದು ತಿಳಿಯದೆ ಗೊಂದಲ. ಆದ್ರೆ ಮಾತನಾಡದಿದ್ದರೆ ಎಲ್ಲಾರು ಅಂದುಕ್ಕೊಳ್ಳುತ್ತಾರೆ, ಹೋ ಇವಳಿಗೆ ಗುತ೯ವೇ ಸಿಗುವುದಿಲ್ಲ. ಅಷ್ಟೊಂದು ಕೊಬ್ಬು . ನೆಲದ ಮೇಲೆ ಇಲ್ಲಪ್ಪ. ಮೇಲೆಲ್ಲೋ ಹಾರಾಡ್ತಾಳೆ, ಅಹಂಕಾರ ಎಂದೆಲ್ಲಾ. ಆದ್ರೆ ನಿಜ ಬೇರೆಯೇ ಇರಬಹುದಲ್ಲವೆ? ಮಾತನಾಡದೆ ಇರುವುದಕ್ಕೂ? ಗಂಡ ಮಕ್ಕಳ ಫೋನ್ ನಂಬರ್ ಮರೀತದೆ. ಗೆಳತಿಯರದ್ದು ಮರೆಯಲ್ಲ.🤣 ಯಾಕೆ? ನಮಗಿಷ್ಟದ ವಿಷಯವಿದ್ದರೆ ಮರೆವನ್ನೂ ಮರೆತುಬಿಡುತ್ತೇವೆ. ನಮಗಿಂತ ವಯಸ್ಸಿನಲ್ಲಿ ಹಿರಿಯರಾದವರು ಕೂಡಾ ನಮ್ಮನ್ನು ಚೆನ್ನಾಗಿ ನೆನಪಿಡುತ್ತಾರೆ. ಕೆಲವರಂತೂ ಹೊತ್ತು, ಘಳಿಗೆ, ವಾರ, ನಕ್ಷತ್ರ, ದಿನ, ತಾರೀಖು, ಸ್ಥಳ ಎಲ್ಲವನ್ನು ನೆನಪಿಸಿ ಹೇಳಿಬಿಡುತ್ತಾರೆ. ಡೈರಿಯಂತೆ ಅವರ ನೆನಪುಗಳು ಶಾಶ್ವತವಾಗಿರುತ್ತವೆ. ಆದರೂ ಒಮ್ಮೊಮ್ಮೆ ಮರೆವೇ ಮದ್ದು, ಎಲ್ಲವನ್ನ ಮರೆತು ತನ್ನದೇ ಪ್ರಪಂಚದಲ್ಲಿ ಹಕ್ಕಿಯಂತೆ ಹಾರಾಡಬಹುದು. ಹಾಯಾಗಿ, ಯಾರ ಹಂಗೂ ಇಲ್ಲ, ಯಾವ ಚಿಂತೆಯೂ ಇಲ್ಲ. ನಿಶ್ಚಿಂತೆ. ಕಾಲ ಎಲ್ಲವನ್ನೂ ಮರೆಸುತ್ತದೆ. ಮರಣವನ್ನೂ ಸಹ. ಅದಕ್ಕೆ ಕಾಲಾಯ ತಸ್ಮೈ ನಮಃ ಎನ್ನುವುದು. ಏನೇ ಮರೆಯಲಿ, ನಮ್ಮತನ ಮರೆಯದಿದ್ದರೊಳಿತು.🙏
