Karada Vishwa

Article · October 28, 2025

ನಮ್ಮನೆ ಗೋಪೂಜೆ

✍️ ಶೈಲಜಾ ಭಟ್

ಬಲಿಪಾಡ್ಯಮಿಯಂದು  ನಮ್ಮಲ್ಲಿ
ಗೋಮಾತೆಯ ಪೂಜೆ...
ಎಲ್ಲರೂ ಸೇರಿ ತಯಾರಿ ಮಾಡಿದ್ದೆವು 
ಆ ದಿನದ ಸಂಜೆ...
            
              ನಮ್ಮನೆಯ ಗೋಮಾತೆಯರು 
              ಗಂಗೆ, ತುಂಗೆ, ಶಬರಿ...
             ಪುಟ್ಟ ಹಸು ಕಂದಮ್ಮಗಳದು
             ಗೌರಿ , ಭದ್ರೆ, ಕಾವೇರಿ..

ಹಟ್ಟಿಯ ತೊಳೆದು, ಕಸವನು ತೆಗೆದು
ಸ್ವಚ್ಛ ಮಾಡಿದೆವು ಸುತ್ತಮುತ್ತ...
ರಂಗೋಲಿಯ ಹಾಕಿ ,ಹಣಿತೆಯ ಹಚ್ಚಿ
ಶೃಂಗರಿಸಿದೆವು ಅಕ್ಕಪಕ್ಕ ...
              
                ನೀರನು ತಂದು ಅಪ್ಪನು ಹೊಯ್ದರು
               ಗೋಮಾತೆಗೆ ನಿಂತಲ್ಲೇ...
               ಹಗ್ಗವ ಎಳೆದು ದೂರದಿ ನಿಂತು
               ಪ್ರತಿಭಟಿಸಿದಳು ಕ್ಷಣದಲ್ಲೇ...

ತಿಲಕವನ್ನಿಟ್ಟು ಅಕ್ಷತೆ ಹಾಕಲು 
ತಟ್ಟೆಯ ತಂದರು ಅಮ್ಮ...
ಆರತಿ ಎತ್ತಿ ,ಗಂಟೆಯ ಹೊಡೆಯಲು 
ಅಣಿಯಾಗಿದ್ದನು  ತಮ್ಮ...

              ಶಂಖ , ಜಾಗಟೆ ಶಬ್ದವು ಮೊಳಗಿತು 
              ಆರತಿ ಎತ್ತುವ ವೇಳೆ...
              ಹೆದರಿದ ಮಾತೆಯು ಹಾರಿಯೇ ಬಿಟ್ಟಳು
              ತಾನಿಂತಿರುವ ಸ್ಥಳದಲ್ಲೇ...

ಕಷ್ಟವ ಪಟ್ಟು ಕೊರಳಿಗೆ ಬಿತ್ತು
ಪೂಜೆಯ ಹೊತ್ತಿಗೆ ಹೂ ಮಾಲೆ...
ಸಿಹಿ ಅವಲಕ್ಕಿ- ಕಡುಬು ತಯಾರಾಗಿತ್ತು 
ಭಕ್ಷ್ಯಕ್ಕೆಂದು ಆಮೇಲೆ...

               ಭೂಮಿಯ ಮೇಲಿನ  ಕಾಮಧೇನುವಿಗೆ
               ಕೋಟಿ ನಮನವದು ಮನದಲ್ಲೇ...
               ಕೈಯನ್ನು ಮುಗಿದು, ಮಾತೆಗೆ ನಮಿಸಿ
                ಪಾವನರಾದೆವು ಈ ಬದುಕಲ್ಲೇ...


 ಶೈಲಜಾ ಭಟ್         

Creative Writings
ನಮ್ಮನೆ ಗೋಪೂಜೆ