Karada Vishwa

Article · April 22, 2026

ಅವತರಣ 2026: ಕರಾಡರ ಒಗ್ಗಟ್ಟಿನ ಸಂಗಮ-ಸಂಭ್ರಮ!

- ರವೀ ಸಜಂಗದ್ದೆ

ಕರಾಡ ಬ್ರಾಹ್ಮಣ ಸಮುದಾಯದ ಎಲ್ಲಾ ಬಾಂಧವರನ್ನು ಒಂದೇ ಸೂರಿನಡಿ ತರುವ ಆಶಯದೊಂದಿಗೆ, ಮಂಗಳೂರು ಯುವ ಕರಾಡ ತಂಡವು ಹಮ್ಮಿಕೊಂಡಿದ್ದ 'ಅವತರಣ 2026' ಕ್ರೀಡಾ ಮಹೋತ್ಸವವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿರುವುದು ಸರ್ವವೇದ್ಯ. ಎಪ್ರಿಲ್ 18 ಮತ್ತು 19ರಂದು ಶಕ್ತಿನಗರದ ಮೈದಾನದಲ್ಲಿ ನಡೆದ ಈ ಎರಡು ದಿನಗಳ ಸಂಗಮ-ಸಮಾವೇಶ-ಸಮ್ಮಿಲನವು ಕೇವಲ ಕ್ರೀಡಾಕೂಟವಾಗಿರದೆ, ಸಮುದಾಯದ ಸಂಸ್ಕೃತಿ, ಒಗ್ಗೂಡುವಿಕೆ ಮತ್ತು ಬಾಂಧವ್ಯದ ಅನೂಹ್ಯ ಹಬ್ಬವಾಗಿ ಮಾರ್ಪಟ್ಟಿತ್ತು!

ಕರಾಡ ಸಮಾಜದ ಎಲ್ಲಾ ವಯೋಮಾನದವರಿಗೂ ಮುಕ್ತವಾಗಿದ್ದ ಈ ಕ್ರೀಡಾಕೂಟದಲ್ಲಿ ಕ್ರಿಕೆಟ್, ವಾಲಿಬಾಲ್, ತ್ರೋಬಾಲ್ ಮತ್ತು ಲಗೋರಿಯಂತಹ ಸಾಂಪ್ರದಾಯಿಕ ಆಟಗಳು ಮೈದಾನದಲ್ಲಿ ಮಿಂಚಿದರೆ; ರಂಗೋಲಿ, ಪದಬಂಧ, ಬೆಂಕಿ ರಹಿತ ಅಡುಗೆ ಮತ್ತು ಕಲರಿಂಗ್ ಸ್ಪರ್ಧೆಗಳು ನಮ್ಮವರ ಸೃಜನಶೀಲತೆಗೆ ವೇದಿಕೆ ಸೃಷ್ಟಿಸಿದವು. ವೃದ್ಧರಿಗಾಗಿ ಹಮ್ಮಿಕೊಂಡಿದ್ದ ವೇಗದ ನಡಿಗೆ ಮತ್ತು ಮಹಿಳೆಯರ ಲಿಂಬೆ ಚಮಚ ಸ್ಪರ್ಧೆಗಳು ನೋಡುಗರ ಗಮನ ಸೆಳೆದವು. ಎಲ್ಲರೂ ಖುಷಿಯಿಂದ ಪಾಲ್ಗೊಂಡು ಸಂಭ್ರಮಿಸಿದರು. ಕಡು ಬೇಸಿಗೆಯಲ್ಲೂ ನೀರಿನ ವ್ಯವಸ್ಥೆ, ತಂಪು ಪಾನೀಯ ವ್ಯವಸ್ಥೆ, ಊಟೋಪಚಾರ ವ್ಯವಸ್ಥೆ,‌‌ ಟೆಂಟ್  ವ್ಯವಸ್ಥೆ ಮತ್ತು ಶಿಸ್ತುಬದ್ಧ ಸಂಯೋಜನಾ ವ್ಯವಸ್ಥೆ ನೆರೆದವರನ್ನು ಸಂತಸ-ಸಂತೃಪ್ತಪಡಿಸಿದ್ದು ಸುಳ್ಳಲ್ಲ! ಇದರ ಹಿಂದೆ ಅವಿರತವಾಗಿ,‌ ಪ್ರತಿಫಲಾಪೇಕ್ಷೆಯಿಲ್ಲದೆ ದುಡಿದ ಮಂಗಳೂರು ಯುವ ಕರಾಡದ ಎಲ್ಲಾ ಚೈತನ್ಯಗಳಿಗೂ ದೊಡ್ಡ ಸಲಾಂ! ಸಮಾಜದ ಕಾರ್ಯಕ್ರಮ ಆಯೋಜಿಸುವ‌ ಶೈಲಿಗೆ ಒಂದು ವಿಶಿಷ್ಟ, ಅತುಲ್ಯ ಮೇಲ್ಪಂಕ್ತಿ ಹಾಕಿಕೊಟ್ಟ ಹೆಗ್ಗಳಿಕೆ ನಿಮ್ಮೆಲ್ಲರಿಗೂ ಸಲ್ಲಬೇಕು. ಬಂದ ಬಾಂಧವರನ್ನು ಸ್ವಾಗತಿಸಿ, ಪ್ರೋತ್ಸಾಹಿಸಿ, ಅವರ ಬೇಕು-ಬೇಡಗಳನ್ನು ಪೂರೈಸಲು ನೀವು ಪಣಕ್ಕಿಟ್ಟ ಒಟ್ಟು ಶ್ರಮದ ಪ್ರತಿಫಲವಾಗಿ ಅವತರಣ 2026ರ ಯಶಸ್ಸು ನಿಮ್ಮೆಲ್ಲರ ಮುಡಿಗೇರಿದೆ!

'ವಲಯವಾರು ಸ್ಪರ್ಧೆ' ಎನ್ನುವ ವಿನೂತನ ಚಿಂತನೆ-ಪರಿಕಲ್ಪನೆಯು ಕ್ರೀಡಾಕೂಟಕ್ಕೆ ಹೊಸ ಚೈತನ್ಯ-ಮೆರುಗು ನೀಡಿತು. ಸೋಲು-ಗೆಲುವಿನ ಪ್ರಶ್ನೆ ಬಂದಾಗ ಅಂತಿಮವಾಗಿ ಮಂಗಳೂರು ವಲಯ ಪ್ರಥಮ ಸ್ಥಾನವನ್ನು ಅಲಂಕರಿಸಿದರೆ, ಅಗಲ್ಪಾಡಿ ವಲಯ‌ವು ಅತ್ಯಂತ ಕಠಿಣ ಪೈಪೋಟಿ ನೀಡಿ, ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ತಿಂಗಳುಗಳಷ್ಟು ಸಣ್ಣ ಮಗುವಿನಿಂದ ತೊಡಗಿ ತೊಂಭತ್ತರ ಹರೆಯದವರೂ ಸೇರಿದ ಐನೂರಕ್ಕೂ ಹೆಚ್ಚು ಸಮಾಜದ ಬಾಂಧವರು ಸಕ್ರಿಯವಾಗಿ ಪಾಲ್ಗೊಂಡಿದ್ದ ಅವತರಣ‌2026ರಲ್ಲಿ ಗೆಲುವಿಗಿಂತಲೂ ಏಕತೆ, ಐಕ್ಯತೆ ಮತ್ತು ಸೌಹಾರ್ದತೆಯೇ ಪ್ರಮುಖವಾಗಿ ಎದ್ದು ಕಾಣುತ್ತಿತ್ತು. ಇದು ನಮ್ಮ ಸಮಾಜದ ಸಾಮರಸ್ಯ, ಸಾಮರ್ಥ್ಯ,‌ ಗರಿಮೆ!

ಮಂಗಳೂರಿನ ಸಮಾಜ ಬಾಂಧವರ ಯುವಶಕ್ತಿಯ ಸಂಘಟನಾ ಚಾತುರ್ಯ, ಹಿರಿಯರ ಮಾರ್ಗದರ್ಶನ ಮತ್ತು ಇಡೀ ಕರಾಡ ಸಮುದಾಯದ ಅಚಲ ಒಗ್ಗಟ್ಟು ಈ 'ಅವತರಣ'‌ದ ಯಶಸ್ಸಿನ ಹಿಂದಿನ ಗುಟ್ಟು-ರಹಸ್ಯ. ಇಂತಹ ಅರ್ಥಪೂರ್ಣ, ಚೊಕ್ಕ ಮತ್ತು ಅತ್ಯಂತ ಶಿಸ್ತಿನ ಕಾರ್ಯಕ್ರಮವನ್ನು ಆಯೋಜಿಸಿದ ಸಂಘಟಕರು ಹಾಗೂ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಸಹಕರಿಸಿದ ಮತ್ತು ಭಾಗವಹಿಸಿದ ಸಮಸ್ತ ಬಂಧುಗಳೂ ಅಭಿನಂದನಾರ್ಹರು.

ಮುಂದಿನ ದಿನಗಳಲ್ಲಿ ಇನ್ನಷ್ಟು-ಮತ್ತಷ್ಟು ಇಂಥಾ ಸಮುದಾಯ ಮುಖಿ ಕಾರ್ಯಕ್ರಮಗಳು‌ ಕರಾಡ ಸಮುದಾಯದ ಬಾಂಧವರು ಇರುವ ವಿವಿಧ ಪ್ರದೇಶಗಳಲ್ಲಿ ಯೋಜನಾಬದ್ಧವಾಗಿ ನಡೆಯುವಂತಾಗಲಿ. ಸಮಾಜ, ಸಂಘಟನೆ,‌ ಯುವಕರು ಮತ್ತಷ್ಟು ಒಗ್ಗೂಡಿ ನಾವೆಲ್ಲರೂ ಹೆಮ್ಮೆಯಿಂದ ಸಮಾಜ ಕಟ್ಟುವ ಇಂಥಾ ಅನೇಕ ಸೇವಾಯಜ್ಞದಲ್ಲಿ ಪಾಲ್ಗೊಳ್ಳೋಣ. ವೈಯಕ್ತಿಕ ಕಾರ್ಯಬಾಹುಳ್ಯದಿಂದಾಗಿ ನಾನು‌ ಖುದ್ದಾಗಿ ಭಾಗವಹಿಸಲಾಗಲಿಲ್ಲ. 'ಸಮುದಾಯದ ಒಗ್ಗಟ್ಟು, ಶ್ರೇಯಸ್ಸು ಸಾರುವ ಇಂಥಾ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ತಪ್ಪಿಸಲಾರೆ...' ಎಂದು ನನಗೆ ನಾನೇ ಈ ಸಂದರ್ಭದಲ್ಲಿ ಶಪಥ ಮಾಡಿಕೊಂಡಿದ್ದೇನೆ.

Hatsoff and many congratulations to the entire Mangalore Youth Karada Team! 🫡 

ನೀವು ಹಾಕಿಕೊಟ್ಟ ಮಾದರಿಯ, ಉತ್ಕೃಷ್ಟ ಗುಣಮಟ್ಟ, ಸಂಘಟನಾ ಚಾತುರ್ಯ  ಸಮಾಜದ ನಾಳೆಗಳ ಎಲ್ಲ ಕಾರ್ಯಕ್ರಮಗಳಿಗೆ-ಸಮಾರಂಭಗಳಿಗೆ ಮಾದರಿ. ನಿಮ್ಮ ಒಗ್ಗಟ್ಟು, ಸಂವಹನ, ಜವಾಬ್ದಾರಿ ನಿರ್ವಹಣೆ ಮತ್ತು ಗ್ರೌಂಡ್ ವರ್ಕ್ ಪ್ರಶಂಸನೀಯ! Great Job guys!

ಮಂಗಳೂರಿಗೆ ಬಂದಾಗ ನಿಮ್ಮನ್ನೆಲ್ಲ ಭೇಟಿಯಾಗಿ ಕೈ ಕುಲುಕಿ, ಮೈದಡವಿ ಅಭಿನಂದನೆ ತಿಳಿಸಬೇಕಿದೆ! 

ಈ ಯಶಸ್ಸನ್ನು ಸಂಭ್ರಮಿಸಿ, ಅರಗಿಸಿ ಮತ್ತು ಹಲವು ದಿನಗಳ ಕಾಲ ಗುನುಗುನಿಸುತ್ತಿರಿ...! ಯಾಕೆಂದರೆ ಇದು ನಿಮ್ಮ ಕಠಿಣಶ್ರಮಕ್ಕೆ, ತಂಡ ಶ್ರಮಕ್ಕೆ ಸಂದ ದೊಡ್ಡ ಪ್ರತಿಫಲ, ಬಹುಮಾನ. 

ಒಳ್ಳೆಯದಾಗಲಿ. ಸರ್ವೇ ಸಂತು ನಿರಾಮಯಾಃ.🤝

- ರವೀ ಸಜಂಗದ್ದೆ
Creative WritingsSportsCommunity
ಅವತರಣ 2026: ಕರಾಡರ ಒಗ್ಗಟ್ಟಿನ ಸಂಗಮ-ಸಂಭ್ರಮ!