
Article · July 11, 2026
ಸೇತುಮನುಷ್ಯ
--ವೀಣಾ ಎಂ ಭಟ್
ಗಿರೀಶರ ನಾಮವದು ಸಾರ್ಥಕವಾಯಿತು
ಸಾಧಿಸಿ ಬೆಳೆದು ಗಿರಿಯೆತ್ತರಕೆ ನಿಂತು
ಕುಗ್ರಾಮದಲಿ ಜನಿಸಿ ದೇಶ ವಿದೇಶದಲಿ
ಉಜ್ವಲ ಗ್ರಾಮವಿದು ಇವರ ಹೆಸರಲ್ಲಿ
ಹಲವು ದಶಕದ ಕಾಲ ಸೇತುಬಂಧವಗೈದು
ಸೇತುವೆಯ ನಿರ್ಮಿಸಿದರು ಜನರು ತಪಗೈದು
ಸಾಧಿಸಿದರೆ ಸಬಳ ನುಂಗುವ ಮಾತು ಸತ್ಯ
ನುಂಗಲಾರದ ಕಬ್ಬಿಣದ ಕಡಲೆ ನುಂಗುತ ನಿತ್ಯ
ಯಾವ ಪರಿಸ್ಥಿತಿಯಲ್ಲು ತಿರುಗಿ ನೋಡದೆಯೆ
ಛಲವ ಬಿಡದೆ ಸಾಧಿಸಿದರು ಹಠದಡಿಯೆ
ನದಿ ತೊರೆ ತೋಡುಗಳ ಪರಿಗಣನೆ ಮಾಡುತ್ತ
ದಡದಿಂದ ದಡಕೆ ಸೇತುವೆಯ ನಿರ್ಮಿಸುತ
ಧನದ ಹಂಬಲವಿಲ್ಲ ಜನರ ಸಂಕಷ್ಟದಲಿ
ಧರ್ಮದಲಿ ಕರ್ಮವನು ಮಾಡಿ ತೋರುತಲಿ
ಕಷ್ಟ ಸುಖಗಳನೆಲ್ಲ ತ್ಯಜಿಸಿ ಕರ್ಮಕ್ಕಾಗಿ
ಜಲದೆ ಸೆಣಸಿದ ತ್ಯಾಗಿ ಇವರು ಕರ್ಮಯೋಗಿ
ಕರಾಡ ಸಮುದಾಯಕೆ ಹೆಮ್ಮೆಯ ಕುವರ
ಪದ್ಮಶ್ರೀ ಪದಕವನು ಗಳಿಸಿದ ಹಮ್ಮೀರ
ಅಳಿವಿಲ್ಲ ನಿನಗೆಂದು ಸೇತುಬಂಧದಲಿ
ನಿನ್ನ ಕೀರ್ತಿಯ ಜತೆ ಊರ ನಾಮವು ಸೇರಲಿ
Creative Writings
