Karada Vishwa

Article · March 23, 2025

ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ, ಆವಳ ಪಂಜ

ಪಾದುಕೆಗಳ ಪ್ರತಿಷ್ಠೆಯೊಂದಿಗೆ ಕೇರಳದಿಂದ ತಂದ ಶಂಖ, ಚಕ್ರ, ಅಭಯ, ವರದ ಹಸ್ತಗಳಿಂದ ಶೋಭಿಸುವ ದೇವಿಯ ಪಂಚಲೋಹದ ವಿಗ್ರಹವನ್ನು ಸ್ಥಾಪಿಸಿದ್ದಾರೆ. ನಯನ ಮನೋಹರ ಪ್ರಶಾಂತ ವಾತಾವರಣದಲ್ಲಿ ಶ್ರೀದುರ್ಗಾಮಾತೆಯ ಸಾನ್ನಿಧ್ಯಪೂರ್ಣ ದೇವಮಂದಿರ ರಾರಾಜಿಸುತ್ತದೆ. ದೇವಿಗೆ ತ್ರಿಕಾಲದಲ್ಲಿಯೂ ಪೂಜೆ ಸಲ್ಲುತ್ತದೆ. ಬಂದವರಿಗೆ ನಿತ್ಯವೂ ಅನ್ನ ಸಂತರ್ಪಣೆ ನಡೆಯುತ್ತದೆ.

ಡಾ| ಡಿ. ಸದಾಶಿವ ಭಟ್ಟರ ‘ಕರಾಡ ಬ್ರಾಹ್ಮಣರು - ಒಂದು ಅಧ್ಯಯನ’ ಎಂಬ ಗ್ರಂಥದಿಂದ

ಕಾಸರಗೋಡಿನಲ್ಲಿ ಪ್ರಸಿದ್ದ ಪೊಸಡಿಗುಂಪೆಯ ಉತ್ತರ ವಾಯವ್ಯದ ತಪ್ಪಲಿನ ಬುಡದಲ್ಲಿ ಕಂಗೊಳಿಸುತ್ತದೆ ಈ ದುರ್ಗಾಪರಮೇಶ್ವರೀ ದೇವಸ್ಥಾನ. ಇದರ ಸ್ಥಾಪನೆಯಾಗಿ ಸಾಮಾನ್ಯ 500ರಿಂದ 600 ವರ್ಷಗಳಾಗಿರಬಹುದೆಂದು ಸ್ಥಳ ಪ್ರಶ್ನೆಯ ಮೂಲಕ ತಿಳಿದುಬಂದಿದೆ. ಈಗಿನ ಆಡಳಿತ ಮೊಕ್ತೇಸರರ ಕುಟುಂಬದ ಹಿರಿಯರೊಬ್ಬರು ತೆಂಕನಾಡು ಕೇರಳ ಕಡೆಯಿಂದ ತಂದ ಪಾದುಕೆಗಳಿಂದಲೇ ದೇವಿಯ ಸಾನ್ನಿಧ್ಯ ನಿರ್ಮಾಣವಾಯಿತೆಂದು ತಿಳಿದು ಬರುತ್ತದೆ. ಬಳಿಕ ಊರವರ ಸಹಕಾರದಿಂದ ಈಗ ದೇವಸ್ಥಾನವಿದ್ದಲ್ಲಿಯೇ ಗುಡಿ ನಿರ್ಮಿಸಿ ಆರಾಧಿಸುತ್ತಾ ಕ್ರಮೇಣ ದೇವಾಲಯ ನಿರ್ಮಾಣವಾಯಿತು. ಆವಳ ಮಠದ ಮನೆತನದವರೇ ಆನುವಂಶಿಕ ಮೊಕ್ತೇಸರರಾಗಿ, ದೇವಸ್ಥಾನದ ಆಡಳಿತವನ್ನೂ ಪೂಜಾದಿ ಕಾರ್ಯಗಳನ್ನೂ ನಡೆಸುತ್ತಾ ಬಂದಿದ್ದು, ಈಗಲೂ ಅವರೇ ಆ ಕಾರ್ಯ ಮಾಡುತ್ತಾರೆ. ದೇವಾಲಯಕ್ಕೆ ಬೇಕಾದ ಎಲ್ಲಾ ಕಟ್ಟಡಗಳು, ಭಕ್ತಾದಿಗಳ ಸಹಕಾರದಿಂದ ನಿರ್ಮಾಣಗೊಂಡು ದೇವಾಲಯ ಪೂರ್ಣತ್ವವನ್ನು ಪಡೆದಿದೆ. ಇವರಲ್ಲದೆ ಮೊದಲು ನಾಲ್ಕು ಮತ್ತೆ ನಾಲ್ಕು ಹೀಗೆ ಎರಡು ಸ್ತರದಲ್ಲಿ ಒಟ್ಟು ಎಂಟು ಜನ ಮೊಕ್ತೇಸರರಿದ್ದಾರೆ.

ಪಾದುಕೆಗಳ ಪ್ರತಿಷ್ಠೆಯೊಂದಿಗೆ ಕೇರಳದಿಂದ ತಂದ ಶಂಖ, ಚಕ್ರ, ಅಭಯ, ವರದ ಹಸ್ತಗಳಿಂದ ಶೋಭಿಸುವ ದೇವಿಯ ಪಂಚಲೋಹದ ವಿಗ್ರಹವನ್ನು ಸ್ಥಾಪಿಸಿದ್ದಾರೆ. ನಯನ ಮನೋಹರ ಪ್ರಶಾಂತ ವಾತಾವರಣದಲ್ಲಿ ಶ್ರೀದುರ್ಗಾಮಾತೆಯ ಸಾನ್ನಿಧ್ಯಪೂರ್ಣ ದೇವಮಂದಿರ ರಾರಾಜಿಸುತ್ತದೆ. ದೇವಿಗೆ ತ್ರಿಕಾಲದಲ್ಲಿಯೂ ಪೂಜೆ ಸಲ್ಲುತ್ತದೆ. ಬಂದವರಿಗೆ ನಿತ್ಯವೂ ಅನ್ನ ಸಂತರ್ಪಣೆ ನಡೆಯುತ್ತದೆ. ವಿಶೇಷವಾಗಿ ಚಾಂದ್ರಮಾನ, ಸೌರಮಾನ ಯುಗಾದಿ, ಪ್ರಥಮ ಮಂಗಳವಾರ, ಪ್ರತಿಷ್ಠಾಪನಾ ದಿನಾಚರಣೆ, ನೂತನೋಪಾಕರ್ಮ, ವೆಂಕಟರಮಣ ಸಮಾರಾಧನೆ, ಶ್ರಾವಣ ಶನಿವಾರ (ಸೋಣ ಶನಿವಾರ) ಗಣೇಶ ಚತುರ್ಥಿ, ನವರಾತ್ರಿ, ಕಾರ್ತಿಕ ಪೂರ್ಣಿಮೆ, ಸುಬ್ರಹ್ಮಣ್ಯ ಷಷ್ಠಿ, ತುಲಾಭಾರ ಸೇವೆ, ಶತಸ್ವ ಪಾಯಸ, ದೀಪಾರಾಧನೆ ಇವೇ ಮೊದಲಾದುವು ಇಲ್ಲಿ ನಡೆಯುತ್ತವೆ. ನಂದಾದೀಪಗಳು ಉರಿಯುತ್ತವೆ. ರಕ್ತೇಶ್ವರಿಗೆ ತಂಬಿಲ ಮತ್ತು ನಾಗತಂಬಿಲಗಳು, ಜಟಾಧಾರೀ ದೈವಕ್ಕೆ ಸೀಯಾಳಗಳ ಸಮರ್ಪಣ ಕಾರ್ಯಗಳು ನಡೆಯುತ್ತವೆ.

“ದುರ್ಗಾಸದನ"ವೆಂಬ ಸುಸಜ್ಜಿತವಾದ ಕಲ್ಯಾಣ ಮಂಟಪವಿದ್ದು, ಮದುವೆ ಸಭೆ ಸಮಾರಂಭಗಳನ್ನು ನಡೆಸಲು ಉತ್ತಮ ಅನುಕೂಲವನ್ನು ಕಲ್ಪಿಸಿಕೊಡಲಾಗಿದೆ. ಜಗದ್ಗುರುಗಳಿಂದ ಈ ಸದನವು ಉದ್ಘಾಟನೆಗೊಂಡ ದಿನದ ನೆನಪಿಗಾಗಿ, ಪ್ರತಿ ತಿಂಗಳು ಆ ದಿನದಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಗಳನ್ನು ನಡೆಸಲಾಗುತ್ತದೆ. ಎಲ್ಲಾ ಜನರಿಗೆ ಊಟದ ವ್ಯವಸ್ಥೆ ದೇವಾಲಯದ ವತಿಯಿಂದ ಮಾಡಲಾಗುತ್ತದೆ.


Photo Credits : Shreekrishna Bhat S.
Fotomatic Studio
Bus Stand, Vittal-574243
Ph: +91 8255 239048, +91 9448 441268
Temples
ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ, ಆವಳ ಪಂಜ