Karada Vishwa

Article · September 2, 2026

ಏಕಾಂತ

ವೀಣಾ ಎಂ ಭಟ್

ಯಾರು ನೀ ಕನಕಾಂಗಿ ನಿಂದಿರುವೆ ಏಕಾಂಗಿ

ಮೈಮರೆತು ನಿಂದೆ ನಾ ಕಂಡಾಗ ನಿನ್ನ ಭಂಗಿ

ಕರದೊಳು ಚೆಲುವ ಚಿತ್ತಾರದ ಮದರಂಗಿ

ಬರುವೆಯಾ ನನ್ನ ಬಾಳಿಗೆ ಆಗಿ ಅರ್ಧಾಂಗಿ

ಮುಡಿತುಂಬ ಕರಿಮುಗಿಲು ಮೆಲ್ಲನೆ ಇಳಿಬಿಡಲು

ಬೆನ್ನಲ್ಲಿ ಓಲಾಡುವ ನಾಗಹೆಡೆ ಚಿತ್ತದೊಳು

ಮೊಲ್ಲೆ ಹೂವಿನ ಸಂಗದಲಿ ಕಂಪಿನ ಸತ್ಸಂಗ

ಸೌರಭಕೆ ಮೈಮರೆತು ಮನಸೋತ ಅಂಗಾಂಗ

ಉಟ್ಟ ಸೀರೆಯ ದಟ್ಟ ನೀಲ ವರ್ಣಕೆ ಸಾಟಿ

ಬಿಟ್ಟುಕೊಡಲಾರದೇ ಬಾನಸಿರಿ ಪೈಪೋಟಿ

ಮಟ್ಟ ಹಾಕುವ ನಿಲುವು ಕಂಡು ಸರಿಯದ ನಯನ

ದಿಟ್ಟ ಸಂಕಲ್ಪವಿದು ಚಿನ್ನ ಬಿಡಲಾರೆ ನಿನ್ನ

ಕಂಗಳ ಕಾಂತಿಯಲಿ ಮಿನುಗುವ ಹೊಂಗನಸು

ಅಂಗನೆ ನಿನ್ನಯ ಸಂಗ ಮಾಡುವ ಮನಸು

ಭಂಗ ತರುವ ಮನಸ ತೋರದೆಯೆ ಮುಂದಾಗಿ

ಮಂಗಳ ಹಾಡುವ ಪ್ರೇಮದಲಿ ಒಂದಾಗಿ

Creative Writings