
News · September 9, 2026
ಕರಾಡ ವಿಶ್ವ- ಶಿರಸಿ ಪ್ರದೇಶ ಕರಾಡ ಸಮಾಜ ಬಾಂಧವರ ಭೇಟಿ
-ಕರಾಡ ವಿಶ್ವ ತಂಡ
2026ರ ಸೆಪ್ಟೆಂಬರ್ 8ರಂದು ಕರಾಡ ವಿಶ್ವದ ವತಿಯಿಂದ ಶ್ರೀ ಚಂದ್ರಹಾಸ ಕನ್ನಡ್ಕ ಹಾಗೂ ಶ್ರೀ ಸುಬ್ರಹ್ಮಣ್ಯ ಭಟ್ಟ ಕುದ್ಕುಳಿ ಅವರು ಶಿರಸಿ ಪ್ರದೇಶ ಕರಾಡ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸೌಹಾರ್ದ ಭೇಟಿಯನ್ನು ಹಾಗೂ ಸಂವಾದವನ್ನು ನಡೆಸಿದರು.
ಬೆಳಿಗ್ಗೆ ಶ್ರೀ ಉಮೇಶ್ ಭಟ್ ಕಾನಗೋಡು ಅವರು ಆತ್ಮೀಯವಾಗಿ ಸ್ವಾಗತಿಸಿ ತಮ್ಮ ಕೃಷಿ ಚಟುವಟಿಕೆಗಳನ್ನು ಪರಿಚಯಿಸಿದರು. ಕಾಳುಮೆಣಸು, ಕಾಫಿ, ಅಡಿಕೆ ಹಾಗೂ ಭತ್ತದ ಕೃಷಿಯನ್ನು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ಪಾನಿಪೂರಿಗಾಗಿ ಪೂರಿ ತಯಾರಿ ಮತ್ತು ವಿತರಣೆಯಂತಹ ಉದ್ಯಮದಲ್ಲಿಯೂ ತೊಡಗಿಸಿಕೊಂಡಿರುವ ಅವರ ಕಾರ್ಯಶೈಲಿ ಎಲ್ಲರಿಗೂ ಪ್ರೇರಣೆಯಾಯಿತು. “ದೈನಂದಿನ, ಮಾಸಿಕ ಮತ್ತು ವಾರ್ಷಿಕ ಆದಾಯದ ಮೂಲಗಳು ಇರಬೇಕು” ಎಂಬ ಅವರ ಜೀವನದೃಷ್ಟಿ ವಿಶೇಷವಾಗಿ ಗಮನ ಸೆಳೆಯಿತು. ಇವರ ಸಾಧನೆಯನ್ನು ಗುರುತಿಸಿ ಹಲವು ಸಂಸ್ಥೆಗಳು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ನಂತರ 'ಪ್ರದೇಶ ಕರಾಡ ಬ್ರಾಹ್ಮಣ ಸಮಾಜ, ಶಿರಸಿ' ಯ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಉದಯ ಲಕ್ಷ್ಮಣ್ ಸ್ವಾದಿ ಅವರ ನಿವಾಸದಲ್ಲಿ ಸೌಹಾರ್ದ ಸಭೆ ನಡೆಯಿತು.
ಗೌರವಾಧ್ಯಕ್ಷರಾದ ಶ್ರೀ ರವಿ ಕಾನೇಟ್ಕರ್, ಅಧ್ಯಕ್ಷರಾದ ಶ್ರೀ ಗಜಾನನ ಡೋಂಗ್ರೆ, ಉಪಾಧ್ಯಕ್ಷರಾದ ಶ್ರೀಮತಿ ಪ್ರತಿಭಾ ಸತೀಶ್ ದೇವ್, ಕಾರ್ಯದರ್ಶಿ ಶ್ರೀ ರಘು ಸ್ವಾದಿ, ಖಜಾಂಜಿಗಳು – ಶ್ರೀ ದತ್ತಾತ್ರೇಯ ನಾಡಿಗ್ ಹಾಗೂ ಸುಮಾರು 20 ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ ಈ ಸಭೆಯಲ್ಲಿ ಶ್ರೀ ಸುಬ್ರಹ್ಮಣ್ಯ ಭಟ್ಟ ಕುದ್ಕುಳಿ ಅವರು ಕರಾಡ ವಿಶ್ವದ ಧ್ಯೇಯವಾಕ್ಯವಾದ “ಸಂಪರ್ಕ – ಸಹಕಾರ – ಸಮೃದ್ಧಿ” ಕುರಿತು ವಿವರಿಸಿದರು. ದಕ್ಷಿಣ ಕನ್ನಡ, ಕಾಸರಗೋಡು, ಬೆಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳ ಕರಾಡ ಸಂಘಟನೆಗಳು, ಶಾಲೆಗಳು ಹಾಗೂ ದೇವಸ್ಥಾನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.
ಎರಡು ವರ್ಷಗಳ ಹಿಂದೆ ಆರಂಭವಾದ ಕರಾಡ ವಿಶ್ವ ಡಿಜಿಟಲ್ ವೇದಿಕೆ ಇಂದು ಸಮಾಜದ ಸಾವಿರಾರು ಸದಸ್ಯರನ್ನು ಸಂಪರ್ಕಿಸುವ ಪ್ರಮುಖ ಮಾಧ್ಯಮವಾಗಿ ಬೆಳೆದಿರುವುದಕ್ಕೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ವಿವಾಹ ವೇದಿಕೆ, ಉದ್ಯೋಗಾವಕಾಶಗಳು, ವ್ಯಾಪಾರ ಜಾಲ (Buy & Sell) ಹಾಗೂ ಸಮಾಜದೊಳಗಿನ ಪರಸ್ಪರ ಸಹಕಾರವನ್ನು ಇನ್ನಷ್ಟು ಬಲಪಡಿಸುವ ಅಗತ್ಯವನ್ನು ಸದಸ್ಯರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಮೂರು ವಿಶೇಷ ಸಂದರ್ಶನಗಳನ್ನು ದಾಖಲಿಸಲಾಯಿತು. ಕೃಷಿ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಶ್ರೀ ಉಮೇಶ್ ಭಟ್ಟ್ ಕಾನಗೋಡು, ಭಗವದ್ಗೀತೆ ಹಾಗೂ ಸಂಸ್ಕೃತ ಶ್ಲೋಕಗಳನ್ನು ಆನ್‌ಲೈನ್ ಮೂಲಕ ಪ್ರಸಾರ ಮಾಡುತ್ತಿರುವ ಶ್ರೀಮತಿ ಪ್ರತಿಭಾ ಸತೀಶ್ ದೇವ್, ಹಾಗೂ ಭಾಸ್ಕರ ಸ್ವಾದಿ ಚಾರಿಟೇಬಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಸಿಎ ಉದಯ ಲಕ್ಷ್ಮಣ್ ಸ್ವಾದಿ ಮತ್ತು ಶ್ರೀಮತಿ ಶೀತಲ್ ಸ್ವಾದಿ ಅವರ ಸಂದರ್ಶನಗಳು ಸಮಾಜಕ್ಕೆ ಸ್ಪೂರ್ತಿದಾಯಕವಾಗಿವೆ.
ಸಭೆಯಲ್ಲಿ ಭಾಗವಹಿಸಿದ ಎಲ್ಲರಲ್ಲಿಯೂ ಸಮಾಜದ ಬಗ್ಗೆ ಅಪಾರ ಪ್ರೀತಿ, ಕಳಕಳಿ ಹಾಗೂ ಯುವಪೀಳಿಗೆಯ ಹೆಚ್ಚಿನ ಭಾಗವಹಿಸುವಿಕೆಯನ್ನು ಕಾಣಬೇಕೆಂಬ ಆಶಯ ವ್ಯಕ್ತವಾಯಿತು. ಶಿರ್ಸಿಯ ಸದಸ್ಯರು ಮುಂದಿನ ದಿನಗಳಲ್ಲಿ ಮಂಗಳೂರು ಹಾಗೂ ಬೆಂಗಳೂರು ಭಾಗಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಆಶಯವನ್ನು ತಿಳಿಸಿದರು.
ವಿಶೇಷವಾಗಿ, ಶಿರ್ಸಿ ಕರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷರು ತಿಳಿಸಿದಂತೆ, ಸಮಾಜದ ನಿಯಮಿತ ಸಭೆಗಳಿಗೆ ಹೋಲಿಸಿದರೆ ಇಂದಿನ ಸಭೆಯಲ್ಲಿ ಅತ್ಯಧಿಕ ಸಂಖ್ಯೆಯ ಸದಸ್ಯರು ಭಾಗವಹಿಸಿದ್ದು, ಕರಾಡ ವಿಶ್ವದ ಕಾರ್ಯಚಟುವಟಿಕೆಗಳ ಬಗ್ಗೆ ಸದಸ್ಯರಲ್ಲಿ ಹೆಚ್ಚುತ್ತಿರುವ ಆಸಕ್ತಿ ಮತ್ತು ಉತ್ಸಾಹಕ್ಕೆ ಇದು ಸಾಕ್ಷಿಯಾಗಿದೆ.
ಈ ಭೇಟಿ ಪರಸ್ಪರ ಪರಿಚಯ, ಸ್ನೇಹ, ಸಹಕಾರ ಹಾಗೂ ಸಮಾಜದ ಭವಿಷ್ಯದ ಬೆಳವಣಿಗೆಗೆ ಹೊಸ ದಿಕ್ಕು ನೀಡಿದ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂತು.
-ಕರಾಡ ವಿಶ್ವ ತಂಡ


