Karada Vishwa

Article · June 1, 2026

ಅಪ್ಪ ನೀಡಿದ ಬಂಗಾರದ ಸಲಹೆ

- ಜಯಶ್ರೀ ಕೆ ಆರ್ ಭಟ್ ಪಳ್ಳತಡ್ಕ

ಮಗನೆ ಕೇಳು, ಕಷ್ಟಪಟ್ಟು 
ದುಡಿಯಬೇಕು ನೀನು /   
ಯಾರ ಮುಂದು ಕೈಯ ಚಾಚ
-ಬಾರದಲ್ಲವೇನು?/

ದುಡಿದು ಉಂಡರಾಗ ನಿನಗೆ
ಯಾರ ಹಂಗೂ ಇಲ್ಲ /
ದುಡಿದ ಹಣಕೆ ನೀನೇ ಒಡೆಯ,
ಬೇರೆ ಯಾರೂ ಅಲ್ಲ /

ಆಳಿನಂತೆ ದುಡಿದು ದುಡಿದು
ರಾಜನಂತೆ ಬಾಳೂ /
ಕಷ್ಟ ಸುಖವು ಸಹಜತಾನೇ?
ಎಲ್ಲಸಹಿಸಿ ತಾಳೂ /

ಬದುಕೆಂದರೆ ಹೀಗೇ ತಾನೇ?
ಇಹುದು ಏಳು ಬೀಳೂ /
ಬುದ್ಧಿಮಾತು ಹೇಳುತಿರುವೆ, 
ಮಗನೆ, ಬಿಡದೆ ಕೇಳೂ /

ಅರಸನಂತೆ ಬಾಳದಿದ್ದ-
-ರೇನು ಚಿಂತೆ ಬೇಡಾ /
ಭಿಕ್ಷುಕನಂತಾಗಿ ಬೇಡಿ
ಬಾಳೊ ಬದುಕು ಬೇಡ /

ನಿನ್ನ ಕಾಲ ಮೇಲೆ ಸ್ವತಃ
ನೀನು ನಿಲ್ಲಬೇಕು /
ಓದಿ,ಜ್ಞಾನ ಪಡೆದು
ಬುದ್ಧಿವಂತನಾಗಬೇಕು /

ನಿನ್ನ ನಡೆಗೆ ಜನರು ಕೈಯ-
-ನೆತ್ತಿ ಮುಗಿಯಬೇಕು /
ಹೆಮ್ಮೆ ಪಡುವ ಹಾಗೆ ನಡತೆ 
ನಿನ್ನದಾಗಬೇಕು!

☘️☘️☘️☘️
Creative Writings
ಅಪ್ಪ ನೀಡಿದ ಬಂಗಾರದ ಸಲಹೆ