Karada Vishwa

Article · August 5, 2026

ಭಕ್ತಿ ಗೀತೆ

_ವೀಣಾ ಎಂ ಭಟ್

ಕೃಷ್ಣ ಕೃಷ್ಣ ನಿನ್ನ ನಂಬಿದೆನು ಹೇ ದೇವಾ

ದೇವಾಧಿದೇವನೆ ಪುರುಷೋತ್ತಮ ದೇವಾ

ಬಯಸಿ ಬಂದಿಹ ಭಾಗ್ಯ ಕಸಿದು ಹೋಯಿತಲ್ಲ

ಬೆಸೆದು ಹೋಗಿದೆ ಜೀವ ದುಃಖದಲಿ ಬೆಂದೂ

ಬಸವಳಿದು ಹೋದೆನು ಜೀವ ಹೃದಯ ನೊಂದು

ಒಸಿಯಾದರೂ ಕೃಪೆಯು ಇರಲಿ ಶ್ರೀಹರಿಯೆ

ಕಷ್ಟ ಸುಖಗಳು ಎರಡು ಬೆಂಬಿಡದ ಭೂತದಂತೆ

ಮುತ್ತಿ ಬರುವುದು ಸಹಜ ಬಾಳಿನಲಿ ದೇವಾ

ಇಷ್ಟ ದೈವವು ನೀನೆ ಬೇಡುವೆನು ಅನವರತ

ಕೊಟ್ಟು ಬಿಡು ನಿನ್ನಿಷ್ಟ ವೈಕುಂಠ ಪತಿಯೇ

ಮಂದಗತಿಯಲಿ ಜೀವ ಸಾಗುತಿದೆ ಮುಂದಕೆ

ಇಂದಿರೇಶನೆ ನಿನ್ನ ನಂಬಿದೆನು ದೇವಾ

ಮಂದರೋದ್ಧರ ಶ್ರೀ ನಂದ ಮುಕುಂದ ಹರಿ

ಬಂದು ದಯದೋರಿ ನೀ ಹರಸೆನ್ನ ದೇವಾ

Creative Writings