Karada Vishwa

Article · March 20, 2025

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕೊಂಗೂರು

ಸುಮಾರು 350 ವರ್ಷಗಳಷ್ಟು ಪುರಾತನ ಈ ಕೊಂಗೂರು ಮಠ ಶ್ರೀ  ದುರ್ಗಾಪರಮೇಶ್ವರೀ ಪುಣ್ಯ ಕ್ಷೇತ್ರವು ಸ್ಥಳೀಯವಾಗಿ ಬಹಳ ಪ್ರಸಿದ್ಧವಾಗಿದೆ. ಸರಳ ಮಣ್ಣಿನ ಗೋಡೆಯಿದ್ದ ಈ ದೇವಸ್ಥಾನವು ಭಕ್ತರ ನಂಬುಗೆಯ ತಾಣವಾಗಿದೆ. ನೀರಿನ ಆಶ್ರಯವಿರುವ, ಸಸ್ಯ ಸಮೃದ್ಧಿಯ ನಾಗ ಸನ್ನಿಧಿಯಾದ, ಈ ಕ್ಷೇತ್ರದ ಸ್ಥಳದಲ್ಲಿ ಭೂತಾರಾಧನೆಯೂ ನಡೆಯುತ್ತದೆ. ಇಲ್ಲಿನ ದೈವಗಳಾದ ಜಟಾಧಾರಿ, ಬ್ರಹ್ಮರ ದೈವ, ರಕ್ತೇಶ್ವರೀ ದೈವ ಮತ್ತು ಗುಳಿಗ  ದೈವಗಳು ಸ್ಥಳೀಯರ ಭಕ್ತಿಯ ದ್ಯೋತಕಗಳಾಗಿವೆ. ಇನ್ನು ಈ ಸ್ಥಳದಲ್ಲಿ ಸಂರಕ್ಷಣಾ ಉದ್ದೇಶದಿಂದ ಆರಾಧಿಸಿಕೊಂಡು ಬಂದ ಕಲ್ಲುರ್ಟಿ, ಪಂಜುರ್ಲಿ ದೈವಗಳೂ ಬಹಳ ಕಾರ್ಣಿಕ ಉಳ್ಳವುಗಳಾಗಿವೆ.

--ಡಾ . ಸುಬ್ರಹ್ಮಣ್ಯ ಭಟ್ M.Sc., Ph.d., ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ಕರಾಡ ಬ್ರಾಹ್ಮಣರ ಪ್ರಧಾನವಾದ ನಾಲ್ಕು ಮಠಗಳಲ್ಲಿ ಒಂದೆನಿಸಿದ ಕೊಂಗೂರು ಮಠವು ಮಂಗಳೂರಿನ ಕುಲಶೇಖರದ ಬಳಿ ಇದೆ. ಸುಮಾರು 400 ವರ್ಷಗಳಷ್ಟು ಪುರಾತನವೆಂಬ ಹೇಳಿಕೆ ಇರುವ ಈ ಮಠಕ್ಕೆ, ಮೊದಲು 40 ಒಕ್ಕಲುಗಳಿದ್ದುವು ಎಂದು ಹೇಳುತ್ತಾರೆ.

ಈಗ ಕೆಲವು, ಪ್ರಾರಂಭದ ಮನೆಗಳು ಕಡಿಮೆಯಾಗಿವೆ. ಹೊಸ ಮನೆಗಳು ಸೇರ್ಪಡೆಯಾಗಿವೆ. ಆರಂಭ ಕಾಲದಿಂದಲೇ ಇದ್ದ, ಕೆಲವು ಮನೆಗಳೆಂದರೆ  ಕುಂಟಲ್ಪಾಡಿ, ಕಕ್ಕೆಬೆಟ್ಟು, ಮಂದಾರ, ಕೊಂಚಾಡಿ, ಕೋಡಿಖಂಡ ಇತ್ಯಾದಿಗಳು .

ನಾಲ್ಕು ಮಠಗಳಲ್ಲಿ, ಕೊಂಗೂರು ಮಠವೇ, ಪ್ರಥಮವಾಗಿ ಅಸ್ತಿತ್ವಕ್ಕೆ ಬಂದಿರುವಂಥದ್ದು. ಆ ಬಳಿಕ, ಉಳಿದ ಮೂರು ಮಠಗಳು ಸ್ಥಾಪಿಸಲ್ಪಟ್ಟವು ಎಂಬ ವದಂತಿಯೂ ಇದೆ. ನಡುಮನೆ, ಮೂಡಕೋಡಿ ಮನೆಗಳು ಮಾತ್ರವಲ್ಲ ಮರೋಳಿ ಇತ್ಯಾದಿ ಮನೆಗಳು ಇದರಲ್ಲಿ ಸೇರ್ಪಡೆಗೊಂಡಿವೆ.  ಆಡಳಿತವನ್ನು ಕೊಂಗೂರು ಮಠದ ಮನೆಯವರು ನಡೆಸಿಕೊಂಡು ಬಂದಿದ್ದಾರೆ. ನಿತ್ಯಪೂಜೆ, ನೈಮಿತ್ತಿಕ ಪೂಜೆ, ನವರಾತ್ರಿ ಉತ್ಸವ ಕಾರ್ತಿಕ ಪೂರ್ಣಿಮೆ ಉತ್ಸವಗಳು, ವಸಂತ ಸಮರಾಧನೆ ಇತ್ಯಾದಿ ಕಾರ್ಯಕ್ರಮಗಳು, ಕೊಂಗೂರು ಮಠದ ಮನೆಯವರ ಆಡಳಿತೆಯಲ್ಲಿ, ಊರ ಜನರ ಸಹಕಾರದಿಂದ, ಕರಾಡ ಬಾಂಧವರ ಸಹಯೋಗದಿಂದ ನಡೆಸಲ್ಪಡುತ್ತದೆ.

ಸುಮಾರು ೩೫೦ ವರ್ಷಗಳಷ್ಟು ಪುರಾತನ ಈ ಕೊಂಗೂರು ಮಠ ಶ್ರೀ  ದುರ್ಗಾಪರಮೇಶ್ವರೀ ಪುಣ್ಯ ಕ್ಷೇತ್ರವು ಸ್ಥಳೀಯವಾಗಿ ಬಹಳ ಪ್ರಸಿದ್ಧವಾಗಿದೆ. ಸರಳ ಮಣ್ಣಿನ ಗೋಡೆಯಿದ್ದ ಈ ದೇವಸ್ಥಾನವು ಭಕ್ತರ ನಂಬುಗೆಯ ತಾಣವಾಗಿದೆ. ನೀರಿನ ಆಶ್ರಯವಿರುವ, ಸಸ್ಯ ಸಮೃದ್ಧಿಯ ನಾಗ ಸನ್ನಿಧಿಯಾದ, ಈ ಕ್ಷೇತ್ರದ ಸ್ಥಳದಲ್ಲಿ ಭೂತಾರಾಧನೆಯೂ ನಡೆಯುತ್ತದೆ. ಇಲ್ಲಿನ ದೈವಗಳಾದ ಜಟಾಧಾರಿ, ಬ್ರಹ್ಮರ ದೈವ, ರಕ್ತೇಶ್ವರೀ ದೈವ ಮತ್ತು ಗುಳಿಗ  ದೈವಗಳು ಸ್ಥಳೀಯರ ಭಕ್ತಿಯ ದ್ಯೋತಕಗಳಾಗಿವೆ. ಇನ್ನು ಈ ಸ್ಥಳದಲ್ಲಿ ಸಂರಕ್ಷಣಾ ಉದ್ದೇಶದಿಂದ ಆರಾಧಿಸಿಕೊಂಡು ಬಂದ ಕಲ್ಲುರ್ಟಿ, ಪಂಜುರ್ಲಿ ದೈವಗಳೂ ಬಹಳ ಕಾರ್ಣಿಕ ಉಳ್ಳವುಗಳಾಗಿವೆ. ಈ ಎಲ್ಲಾ ದೈವಗಳ ವಾರ್ಷಿಕ ಸರಳ ಆರಾಧನಾ ಕ್ರಮಗಳಾದ ಪರ್ವ ಸಲ್ಲಿಕೆಯೊಂದಿಗೆ ಸಂತೃಪ್ತಿ ಪಡೆಯುವ ಗುಣ ಉಳ್ಳವುಗಳಾಗಿವೆ. ನಂಬಿದ ಭಕ್ತರ ಕೈ ಬಿಡದೆ ಸಂರಕ್ಷಿಸಿದ ಪ್ರತೀತಿ ಇದೆ. ಕ್ಷೇತ್ರವು ಸಮೀಪದ ಪುರಾತನ ಕ್ಷೇತ್ರಗಳಾದ ಕುಲಶೇಖರದ ವೀರನಾರಾಯಣ ದೇವಸ್ಥಾನ ಮತ್ತು ಕೋಡಿಕಂಡದ ಕೊಡಂಗ ಮುರದಲ್ಲಿರುವ ವೈದ್ಯನಾಥ ದೈವಸ್ಥಾನದೊಂದಿಗೆ ಸಂಬಂಧ ಹೊಂದಿತ್ತು ಎoಬ ಪ್ರತೀತಿ ಇದೆ.

ಈ ಕ್ಷೇತ್ರದ ಆಡಳಿತ ಮತ್ತು ಆರಾಧನಾ ವ್ಯವಸ್ಥೆಯನ್ನು ಕೊಂಗೂರು ಮಠದ ಕುಟುಂಬದವರು ಭಕ್ತ ಸಮೂಹದ ಸಹಾಯ ಸಹಕಾರದೊಂದಿಗೆ ಶ್ರದ್ಧಾ ಭಕ್ತಿಯಿಂದ ನಡೆಸಿಕೊಂಡು ಬಂದಿರುತ್ತಾರೆ. ಭಕ್ತರ ಆಸಕ್ತಿ, ಹಿತಗಳಿಗೆ ಅನುಕೂಲವಾಗುವಂತೆ ಮಾನವೀಯ ದೃಷ್ಟಿಕೋನವನ್ನು ಮುಂದಿಟ್ಟು ಈ ಕ್ಷೇತ್ರವನ್ನು ನಡೆಸಿಕೊಳ್ಳುತ್ತಿದ್ದಾರೆ. ಈ ಪರಂಪರೆಯು ಮುಂದುವರಿಯಲಿದೆ.

ಇರುವ ದೇವಸ್ಥಾನದ ಆಡಳಿತವನ್ನು ಕೆ.ಎನ್.ಬಿ.ಎಮ್ ಟ್ರಸ್ಟ್ (ರಿ) ವತಿಯಿಂದ ನಡೆಸುತ್ತಿದ್ದಾರೆ. ಸುತ್ತಲಿನ ರೈಲುಮಾರ್ಗ ಇತ್ಯಾದಿ ಜನಪ್ರಿಯ, ಜನಪರ ಯೋಜನೆಗಳು ಈ ಕ್ಷೇತ್ರದ ಮೇಲೆ ಪರಿಣಾಮ ಬೀರಿದರೂ ಸದ್ಯಕ್ಕೆ ಎಲ್ಲವೂ ಸರಿದೂಗಿ ಮುನ್ನಡೆಯುತ್ತಿದೆ. ಬಹಳ ಹೆಚ್ಚಿನ ಅಭಿವೃದ್ಧಿ ಹೊಂದಿರುತ್ತಿರುವ ಪದವು ಗ್ರಾಮ ಕುಲಶೇಖರ ಮಂಗಳೂರು ಪರಿಸರದಲ್ಲಿ ಭಕ್ತಿ, ಬದ್ಧತೆಗಳಿರುವ ಹಲವು ಭಕ್ತ ಕುಟುಂಬಗಳ ಅಭಿಪ್ರಾಯ ಮತ್ತು ಆಶಯಗಳ ಆಧಾರದ ಮೇಲೆ ಈ ದೇವಸ್ಥಾನದ ಜೀರ್ಣೋದ್ಧಾರದ ಅಗತ್ಯ ಕಂಡುಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ೨೦೧೧ನೇ ಫೆಬ್ರವರಿಯಲ್ಲಿ ಭಕ್ತ ಸಾರ್ವಜನಿಕರ ಉಪಸ್ಥಿತಿಯಲ್ಲಿ ಪ್ರಸಿದ್ಧ ಜ್ಯೋತಿಷಿ ಶ್ರೀ ಬಿ. ರಂಗನಾರಾಯಣ ಭಟ್ಟ, ಮಧೂರು, ಕಾಸರಗೋಡು ಇವರಿಂದ ಅಷ್ಟಮಂಗಳ ಪ್ರಶ್ನೆ ವ್ಯವಸ್ಥೆ ಮಾಡಲಾಗಿತ್ತು. ಜ್ಯೋತಿಷಿಯವರಿಂದ ಅಷ್ಟಮಂಗಳ ಪ್ರಶ್ನೆಯಲ್ಲಿ ಪಡೆದ ನಿರ್ದೇಶನಗಳಂತೆ ಜೀರ್ಣೋದ್ಧಾರ ಕಾರ್ಯಕ್ರಮಗಳನ್ನು ಕೈಗೊಳ್ಳುವ ನಿರ್ಧಾರ ಮಾಡಲಾಗಿತ್ತು. ಈ ಸಂಬಂಧ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ವ್ಯವಸ್ಥೆ ಮತ್ತು ಅವುಗಳ ಪೌರೋಹಿತ್ಯವನ್ನು ಮಂಗಳೂರಿನ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದ ಪುರೋಹಿತರಾದ ಶ್ರೀ ಜಯರಾಮ ಭಟ್ ಚಿಂಚಲ್‌ಕರ್ ಇವರು ನಿರ್ವಹಿಸುತ್ತಿದ್ದಾರೆ. 

ಈ ಕ್ಷೇತ್ರದ ಜೀರ್ಣೋದ್ಧಾರದ ಶಿಲ್ಪ ನಿದೇಶನಗಳನ್ನು ಕುಡುಪು ಅನಂತ ಪದ್ಮನಾಭದೇವಸ್ಥಾನದ ಶ್ರೀ ಕೃಷ್ಣರಾಜ ತಂತ್ರಿಯವರು ನೀಡಿರುತ್ತಾರೆ. ದಿನಾಂಕ ೨೭.೦೧.೨೦೧೩ನೇ ಆದಿತ್ಯವಾರ ಬೆಳಿಗ್ಗೆ ಗಂಟೆ ೯.೨೧ರ ಕುಂಭ ಲಗ್ನ ಸುಮೂಹುರ್ತದಲ್ಲಿ ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಾಸರಗೋಡು ಇದರ ಆಡಳಿತ ಮೊಕ್ತೇಸರರಾದ ಆನೆಮಜಲು ಶ್ರೀ ವಿಷ್ಣುಭಟ್‌ರವರು ಜೀರ್ಣೋದ್ಧಾರ ಕಾರ್ಯಕ್ರಮದ ಶಿಲಾನ್ಯಾಸವನ್ನು ತಮ್ಮ ದಿವ್ಯ ಹಸ್ತಗಳಿಂದ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಶೃಂಗೇರಿ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಯವರ ಅನುಮತಿ ಮತ್ತು ಆಶೀರ್ವಚನ ಪಡೆಯಲಾಗಿದೆ. ಈ ಕ್ಷೇತ್ರದ ಭಕ್ತಾದಿಗಳು ಸರಳಭಕ್ತಿ, ಪ್ರಾರ್ಥನೆ ಪೂಜಾದಿಗಳಿಂದ ತಮ್ಮಮನೋಭಿಷ್ಟಗಳನ್ನು ನೆರವೇರಿಸಿಕೊಂಡು ಸಂತಸದ ಸಾರ್ಥಕ ಜೀವನವನ್ನು ನಡೆಸುತ್ತಿದ್ದಾರೆ. ನಂಬಿದವರಿಗೆ ಇಂಬು ಕೊಡುವ ಈ ಕ್ಷೇತ್ರಕ್ಕೆ ಬಂದು ಆಶೀರ್ವಚನ ಪಡೆದು ಕಾರ್ಯ ನಿರ್ವಹಿಸುತ್ತಿರುವ ಇಲ್ಲಿನ ಭಕ್ತರು ಯಶಸ್ಸಿನ ಹಾದಿಯಲ್ಲಿ ಜೀವನ ಸೌಖ್ಯ ಮತ್ತು ಮನಃಶಾಂತಿಯನ್ನು ಪಡೆಯುತ್ತಿದ್ದಾರೆ. 

ಶಾಂತ ವಾತಾವರಣ, ಸರಳತೆ, ಸ್ವಚ್ಛತೆ ಮತ್ತು ಮನಃಶಾಂತಿಗೆ ಹಿತವಾದ ಈ ಕ್ಷೇತ್ರ ಈಗಾಗಲೇ ಬಹಳಷ್ಟು ಭಕ್ತರನ್ನು ಆಕರ್ಷಿಸುತ್ತಿದೆ. ನಿಗೂಢವಾದ ಕಾರ್ಣಿಕವುಳ್ಳ ಶ್ರದ್ಧೆಯುಳ್ಳ ಭಕ್ತರಿಗೆ ಮಾತ್ರ ಎಟಕುವ ಈ ಕ್ಷೇತ್ರ ಎಲ್ಲಾ ವರ್ಗದ ಭಕ್ತರ ವಿಶ್ವಾಸಕ್ಕೆ ಪಾತ್ರವಾಗಿದೆ. ಶುಭಕಾರ್ಯಗಳು, ಸಂತಾನಪ್ರಾಪ್ತಿಗಾಗಿ ಪ್ರಾರ್ಥನೆ, ವೃದ್ಧಾಪ್ಯದಲ್ಲಿ ಮನಃಶಾಂತಿ ಕೋರಿ ಬರುವ ಬಹಳಷ್ಟು ಭಕ್ತರು ಇಲ್ಲಿದ್ದಾರೆ. 

ಮುಂದಿನ ದಿನಗಳಲ್ಲಿ ಭಕ್ತಾದಿಗಳಿಗೆ ಸುಲಭದ, ವ್ಯವಸ್ಥಿತವಾದ, ಪ್ರೀತಿ ಗೌರವ ಪೂರ್ವಕ ಆರಾಧನಾ ವ್ಯವಸ್ಥೆಗಳನ್ನು ಸರ್ವರ ಸಹಕಾರದಿಂದ ನೀಡುವ ಶ್ರದ್ಧೆ ಮತ್ತು ಆಸಕ್ತಿ ಆಡಳಿತ ವರ್ಗದಲ್ಲಿದೆ. ಜನಾದರಣೀಯವಾಗಿ ಈ ಕ್ಷೇತ್ರ ಬೆಳೆಯಲಿದೆ ಎಂಬ ವಿಶ್ವಾಸ ಇಲ್ಲಿನ ಎಲ್ಲಾಭಕ್ತವರ್ಗದಲ್ಲಿದೆ.

ಜೀರ್ಣೋದ್ಧಾರ ಕೆಲಸಗಳು ಹಾಗೂ ಬ್ರಹ್ಮ ಕಲಶೋತ್ಸವ: ೨೦೧೩ರ ಜನವರಿಯಲ್ಲಿ ಪ್ರಾರಂಭಗೊಂಡ  ಜೀರ್ಣೋದ್ಧಾರ ಪ್ರಕ್ರಿಯೆಗಳು ಸಮಸ್ತ ಭಕ್ತಬಾಂಧವರ ಸಹಕಾರಗಳೊಂದಿಗೆ ೨೦೧೮ರ ಅಂತ್ಯದ ವೇಳೆಗೆ ಪೂರ್ಣಗೊಂಡಿರುತ್ತವೆ. ದೇವಸ್ಥಾನವು ಅತ್ಯಂತ ಸುಂದರವಾಗಿ ಶಾಸ್ತ್ರೀಯವಾಗಿ ನಿರ್ಮಾಣಗೊಂಡಿರುತ್ತದೆ. ಶಿಲಾಮಯ ಪಂಚಾಂಗದ ಕೆಲಸವನ್ನು ತಮಿಳುನಾಡು ಮೂಲದ ಕಾರ್ಕಳದಲ್ಲಿ ನೆಲೆಸಿರುವ ಶ್ರೀ ಗೋಪಾಲ ಮೇಸ್ತ್ರಿ ತಂಡದವರು ಮಾಡಿರುತ್ತಾರೆ. 

ಗರ್ಭಗುಡಿಯ ಕೆಂಪುಕಲ್ಲಿನ ಸುಂದರವಾದ ಕೆಲಸವನ್ನು ಹುಬ್ಬಳ್ಳಿಯ ಶ್ರೀ ಕುಬೇರ ಮತ್ತು ತಂಡದವರು ರಚಿಸಿ ಕೊಟ್ಟಿರುತ್ತಾರೆ. ತೀರ್ಥ ಬಾವಿಯ ಕೆಲಸವನ್ನು ಶ್ರೀಯುತ ರಿಚರ್ಡ್ರವರು ಮಾಡಿರುತ್ತಾರೆ. ದಾರು ಶಿಲ್ಪದ ಕೆಲಸಗಳು ಶ್ರೀ ಪುಷ್ಪರಾಜ ಆಚಾರ್ಯ ಬಳಗದವರಿಂದ ನಡೆದಿರುತ್ತದೆ. ಸುತ್ತು ಪೌಳಿಯ ಸಂಪೂರ್ಣ ಕೆಲಸ, ಒಳಾಂಗಣದ ಕಲ್ಲುಹಾಸುವಿಕೆ, ದೇವಸ್ಥಾನದ ಉತ್ತರ ಭಾಗದಲ್ಲಿರುವ ಕೆರೆಯ ಕೆಲಸ ಇತ್ಯಾದಿಗಳನ್ನು ಮಂಗಳೂರಿನ ಪ್ರತಿಷ್ಠಿತ ದಿವಾಕರ್ ಕನ್ಸ್ಟ್ರಕ್ಷನ್ ಶ್ರೀ ದಿವಾಕರ ಮತ್ತು ಅವರ ಸಹೋದರ ರೋಹಿತಾಕ್ಷ ಬಳಗದವರು ಮಾಡಿರುತ್ತಾರೆ. ಈ ಎಲ್ಲಾ ಕೆಲಸಗಳೂ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಶ್ರೀ ಕೃಷ್ಣರಾಜ ತಂತ್ರಿಯವರ ಶಿಲ್ಪ ನಿರ್ದೇಶನದಲ್ಲಿ  ಕೊಂಗೂರು ಮಠದ ಶ್ರೀ ಅನಂತ ಭಟ್(ಬಿ.ಇ)ಇವರ ತಾಂತ್ರಿಕ ನಿರ್ದೇಶನದಲ್ಲಿ ನಡೆದಿರುತ್ತದೆ.

ಈ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವವು ದಿನಾಂಕ ೧೪.೦೧.೨೦೧೯ರಿAದ ೧೮.೦೧.೨೦೧೯ರವರೆಗೆ ನಡೆದಿರುತ್ತದೆ. ಸ್ವಸ್ತಿ ಶ್ರೀ ವಿಲಂಬಿ ನಾಮ ಸಂವತ್ಸರದ ಪುಷ್ಯ ಶುದ್ಧ ದ್ವಾದಶಿಯ ದಿನಾಂಕ ೧೮.೦೧.೨೦೧೯ನೇ ಶುಕ್ರವಾರದ ಪ್ರಾತಃಕಾಲ ೮.೪೦ರ ಕುಂಭಲಗ್ನದಲ್ಲಿ ನೂತನ ಗರ್ಭಗೃಹದಲ್ಲಿ ವೇ| ಮೂ| ಶ್ರೀ ಜಯರಾಮ ಭಟ್ ಚಿಂಚಲ್‌ಕರ್, ಪ್ರಧಾನ ಕಾಶೀ ಸದನ, ಡೊಂಗರಕೇರಿ, ಮಂಗಳೂರು ಇವರ ನಿರ್ದೇಶನದಂತೆ ಬಿಂಬ ಪ್ರತಿಷ್ಠೆ ನಡೆದಿರುತ್ತದೆ. ಬ್ರಹ್ಮಕಲಶ ಸಹಿತ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಶ್ರೀ ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾ ಸನ್ನಿಧಾನಂಗಳವರ ಮತ್ತು ತತ್ಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರ‍್ರೀ ವಿಧುಶೇಖರ ಭಾರತೀ ಮಹಾ ಸನ್ನಿಧಾನಂಗಳವರ ಪೂರ್ಣಾನುಗ್ರಹಗಳೊಂದಿಗೆ ನಡೆದಿರುತ್ತದೆ.

ಬ್ರಹ್ಮ ಕಲಶೋತ್ಸವದ ಪುಣ್ಯಾವಸರವು ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ವಿದ್ಯಾನರಸಿಂಹ ಭಾರತೀ ಮಹಾಸ್ವಾಮೀಜಿ, ಕರವೀರ ಪೀಠ ಕೊಲ್ಲಾಪುರ, ಮಹಾರಾಷ್ಟ್ರ ಇವರ ದಿವ್ಯ ಉಪಸ್ಥಿತಿ ಮತ್ತು ಆಶೀರ್ವಚನದ ಮೂಲಕ ಸಂಪನ್ನಗೊoಡಿರುತ್ತದೆ. ಈ ಎಲ್ಲಾ ಕಾರ್ಯಕ್ರಮಗಳು ಸಹಸ್ರಾರು ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ಸ್ಮರಣೀಯವಾಗಿ ನಡೆದಿರುತ್ತದೆ.

ಕರಾಡರು ಸ್ಥಾಪಿಸಿದ ನಾಲ್ಕು ಮಠಗಳಲ್ಲಿ ಆವಳ ಮಠ, ಅಗಲ್ಪಾಡಿ ಮಠ, ತೈರೆ ಮಠದೊಂದಿಗೆ ಕೊಂಗೂರು ಮಠ ಕೂಡಾ ಒಂದಾಗಿದೆ. ಈ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ, ಕಾರ್ತಿಕ ಪೌರ್ಣಮಿ ಸಮಾರಾಧನೆ, ರಾತ್ರಿ ಮಹಾಪೂಜೆ, ವಸಂತ ಸಮಾರಾಧನೆ, ಮಹಾಪೂಜೆ, ಉಪಾಕರ್ಮ,ಶಿವರಾತ್ರಿ, ಶ್ರೀಕೃಷ್ಣಾಷ್ಟಮಿ, ಚೌತಿ ಆಚರಣೆಗಳು ಯಥಾ ಪ್ರಕಾರ ನಡೆಯುತ್ತವೆ. ಕಾರ್ತಿಕ ಪೂಜೆ, ರುದ್ರಾಭಿಷೇಕ, ಹಾಲು ಪಾಯಸ, ಕುಂಕುಮಾರ್ಚನೆ, ದುರ್ಗಾಪೂಜೆ, ದುರ್ಗಾನಮಸ್ಕಾರ ಪೂಜೆ, ಸತ್ಯನಾರಾಯಣ ಪೂಜೆ ಮಾಡಿಸುವ ಅವಕಾಶಗಳಿವೆ. ನಾಗರಪಂಚಮಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜೀರ್ಣೋದ್ಧಾರದ ಬಳಿಕ ಕ್ಷೇತ್ರ ಬೆಳೆದು ಭಕ್ತಾದಿಗಳ ಜೀವನ ಬೆಳಗಿಸುತ್ತಿದೆ ಎಂಬ ವಿಶ್ವಾಸ ಈಗ ಎಲ್ಲರಲ್ಲಿದೆ. 

ಶ್ರೀ ದುರ್ಗಾಪರಮೇಶ್ವರಿ ಸರ್ವರಿಗೂ ಯಶಸ್ಸು, ಜೀವನದಲ್ಲಿ ತೃಪ್ತಿ ಸಂತೋಷಗಳನ್ನು ನೀಡಲೆಂದು ಪ್ರಾರ್ಥಿಸೋಣ.


Photo Credits :

Shreekrishna Bhat S.

Fotomatic Studio

Bus Stand, Vittal-574243

Ph: +91 8255 239048, +91 9448 441268


Temples
ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕೊಂಗೂರು