
Article · July 16, 2026
ಬದುಕಿನ ಬುತ್ತಿ
✍🏻 ಅಮೃತಾ ಒ, ಬೇಂದ್ರೋಡು
ಹೊರಟ ಯಾತ್ರೆಯ ಜೊತೆಗೆ ಬಗಲ ಜೋಳಿಗೆಯಲ್ಲಿ
ಹೊಟ್ಟೆಪಾಡಿಗೆ ಸಾಲಲೊಂದು ಬುತ್ತಿ..
ಹಸಿದಾಗ ಉಣಬೇಕು, ತುಸು ವಿಶ್ರಮವು ಬೇಕು
ಹೊಸದಿನಕೆ ಹೊಸತನದ ಬೆನ್ನುಹತ್ತಿ ||
ನಾಳೆಗೂ ಇಡಬಹುದು ಹಸಿಯದಿರೆ, ಈ ಬುತ್ತಿ
ಬಳಸದಿರೆ ಬಡವಗೂ ಹಂಚಬಹುದು..
ಹಳಸದಿದ್ದರೆ ನಾಳೆ ಎಸೆಯದೆಯೆ ತಿನಬಹುದು
ಗಳಿಸಿದ್ದು ಶ್ರಮದಿ, ತಿಳಿ ಮನದಲೆಂದೂ ||
ಹಳಸಿದರೆ, ಹಳತುಗಳ ಹೊತ್ತು ಸಾಗಿಸಬೇಡ
ಕಳಚಿಬಿಡು ಅಲ್ಲಲ್ಲಿ, ನೀ ನಿರಾಳ !
ಹಳತುಗಳ ಸಿಕ್ಕವರ ಹೆಗಲಿಗೇರಿಸಬೇಡ,
ಹೊಲಸು ಕಳೆಯುತ ಮುಂದೆ ನಡೆಸು ಬಾಳ ||
ಹೊಸದಾಗಿ ಅಟ್ಟಡುಗೆ ಕಟ್ಟಿಬಿಡು ಮತ್ತೊಮ್ಮೆ
ಹಸನಾದ ಬಾಳ್ಗೆ ಶುಚಿ - ರುಚಿಯ ಬುತ್ತಿ
ಹಸಿಯೆ ಜೊತೆಗಿದ್ದವನ ನೀ ಕುಸಿಯಬಿಡಬೇಡ
ಕೈ ಹಿಡಿದು, ಜೊತೆ ನಡೆದು, ತುಂಬು ಶಕ್ತಿ ||
ಕೊಂಚ ಆರಿದರೇನು ? ಬಿಸಿ -ಬಿಸಿಯು ಬೇಕಿಲ್ಲ
ಚಾಚಬೇಕಿದೆ ಕಾಲು, ಹಾಸಿದಷ್ಟು
ಬಿಚ್ಚಿಡಲು ಈ ಬುತ್ತಿ ಘಮ್ಮೆನಿಸಬೇಕಿಲ್ಲ
ಹಸಿದವನು ಚಪ್ಪರಿಸಿ ತಿನುವ ತುತ್ತು ||
ಸಪ್ಪಗಿದ್ದರೆ ಸ್ವಲ್ಪ ಉಪ್ಪು ಸವರಲಿ ಸಾಕು
ಅಲ್ಪ ಖಾರವೆ ಇರಲಿ ಬದುಕ ಸ್ವಾದ
ಕಹಿಯಿರಲಿ ಒಂದಿನಿತು, ಸಿಹಿಯ ಅರಿವಾದೀತು
ಹುಳಿ, ಚೊಗರು ಜೊತೆಗಿದ್ದರೇನೆ ಮೋದ ||
ಹತ್ತು ಹಲವಿರಲಿ ರುಚಿ, ಸ್ವೀಕರಿಸಿ ಮುನ್ನಡೆಯು..
ಬುತ್ತಿಯಿದು, ನಾಳೆಗಳ ಬೆಳಗೊ ಬತ್ತಿ !
ಸಮನಾಗಿ ಸ್ವೀಕರಿಸು, ಹಸಿದವಗು ತುತ್ತುಣಿಸು
ಕುಸಿದಾಗ ಬರದಿರಲಿ ಚಿರವಿರಕ್ತಿ ||
