
Article · November 17, 2026
ಕೊನೆಯ ನಗು
By ರಾಧಾಕೃಷ್ಣ ಭಟ್ ಕುರುಮುಜ್ಜಿ
(ಸಣ್ಣಕಥೆ) : ರಾಧಾಕೃಷ್ಣ ಭಟ್ ಕುರುಮುಜ್ಜಿ.
ಪ್ರಾಕೃತಿಕ ವಿಕೋಪದ ದುರಂತಗಳಿಗೆ ಬಲಿಯಾಗಿ ತನ್ನ ಕುಟುಂಬವನ್ನೆ ಕಳೆದುಕೊಂಡು ಕೊನೆಗೆ ಒಬ್ಬಂಟಿಯಾದ ಮಾನಸಿಕ ಅಸ್ವಸ್ಥನ ನಗುವಿನ ಹಿಂದಿರುವ ವೇದನೆ!
ನಾಗೂರಿನ ನರೇಂದ್ರ ರಾಯರು ನಗುವಿನ ರಾಯರೆಂದೇ ಊರಿನಲ್ಲಿ ಪ್ರಖ್ಯಾತರಾಗಿದ್ದರು. ಸುಖದು:ಖೇಸಮೇಕೃತ್ವಾ ಎನ್ನುವುದು ಅವರ ನಗುವಿನ ತತ್ವ. ದುರಂತಗಳದ್ದೆ ಸರಣಿಯ ತಮ್ಮ ಬದುಕಿನ ಕೊನೆಗೂ ನಗುವಿಗೇ ರಾಯರದ್ದು ಹೆಚ್ಚು ಮಹತ್ವ. ನೋವಿರಲಿ, ನಲಿವಿರಲಿ, ಸುಖವಿರಲಿ, ದು:ಖವಿರಲಿ ನಗುವೇ ಅವರ ಪ್ರತಿಕ್ರಿಯೆ. ಪ್ರಶ್ನೆಗೂ ನಗುವೇ ಅವರ ಪ್ರತ್ಯುತ್ತರ. ಅಲೆಗಳಂತೆ ಬರುವ ಅವರ ನಗುವನ್ನು ನಿಯಂತ್ರಿಸಲು ಕೆಲವೊಮ್ಮೆ ಅವರಿಂದಲೆ ಸಾಧ್ಯವಾಗುತ್ತಿರಲಿಲ್ಲ. ಪ್ರಾಕೃತಿಕ ವಿಕೋಪದ ದುರಂತಕ್ಕೆ ತಮ್ಮ ಕುಟುಂಬದವರೆಲ್ಲ ಬಲಿಯಾದಾಗ ಅತ್ತೂ ಅತ್ತೂ ಕಣ್ಣೀರಿಳಿಸಲಾಗದೆ ಕೊನೆಗೆ ಕಣ್ಣಾಲಿಗಳೆ ಬತ್ತಿ ಹೋಗಿ ಉಂಟಾದ ಮಾನಸಿಕ ಆಘಾತದಿಂದ ಆರಂಭವಾದ ಅವರ ನಗು ನಂತರದ ದಿನಗಳಲ್ಲೂ ಹಾಗೇ ಮುಂದುವರಿದಿತ್ತು.ತಮ್ಮ ಮುತ್ತಜ್ಜ-ಅಜ್ಜ ,ಅಪ್ಪ ,ಅಮ್ಮ, ಸಹೋದರರು,ಮಡದಿ ಮಕ್ಕಳತನಕ ಅನುಭವಿಸಿದ ಮಾರಣಾಂತಿಕ ದುರಂತಗಳ ವಿಷಯ ಮಾತನಾಡುವಾಗಲೂ ಅವರು ನಗುತ್ತಿದ್ದರು. ಬಾಹ್ಯವಾಗಿ ಅದು ನಗುವೆನಿಸಿದರೂ ಹಿಂದೆ ಅನುಭವಿಸಿದ ನೋವಿನ ಅಂತರಂಗದ ಕೂಗು. ಅಂದು ಮುಂಜಾನೆಯಿಂದಲೇ ಆರಂಭವಾದ ಧಾರಾಕಾರ ಮಳೆ ಮುಸ್ಸಂಜೆಯಾದರೂ ಕಡಿಮೆಯಾಗಲಿಲ್ಲ. ನರೇಂದ್ರರಾಯರು ಮನೆಯ ತಮ್ಮ ಕೋಣೆಯಲ್ಲಿ ಮಲಗಿ ಅಂದು ಮುಂಜಾನೆಯಿಂದಲೇ ವಿಕಾರವಾಗಿ ನಗುತ್ತಿದ್ದರು. ಅವರ ನಗುವಿನಲ್ಲಿ ಇಹದಿಂದ ಬಿಡುಗಡೆಗೆ ಮನವಿಯ ಪ್ರಾರ್ಥನೆ ಇತ್ತು. ಅಂದು ರಾತ್ರೆಯೂ ಮಳೆರಾಯ ತನ್ನ ಪ್ರತಾಪವನ್ನು ಮುಂದುವರಿಸಿದ್ದು ನಿದ್ರೆ ಬಾರದೆ ರಾಯರು ಮನೆಯ ಮೇಲ್ಛಾವಣಿಯನ್ನು ತೆರೆದ ಕಣ್ಣುಗಳಿಂದಲೆ ಮೇಲ್ಮುಖವಾಗಿ ನೋಡುತ್ತಾ ನಗುತ್ತಲೇ ಇದ್ದರು. ಅಂದು ಮಧ್ಯರಾತ್ರೆ ಮನೆಯ ಸಮೀಪದ ಗುಡ್ಡೆ ಕುಸಿದು ಮನೆ ಮತ್ತು ನಗುವಿನೊಂದಿಗೆ ಜೀವಂತ ಸಮಾಧಿಯಾಗುವ ತನಕ ಅವರು ನಗುತ್ತಲೇ ಇದ್ದರು.
ಕೊನೆಯ ಆರ್ತನಾದವೇ ಅವರ ಕೊನೆಯ ನಗು
