
Article · September 5, 2026
ಗುರು ಶಿಷ್ಯ ಬಂಧ
ವೀಣಾ ಎಂ ಭಟ್
ನುಡಿಯನ್ನು ಕಲಿಸಿದ ಮಾತೆಗೆ ನಮನವು
ನಡೆಯನ್ನು ಕಲಿಸಿದ ಪಿತೃದೇವಗೆ ನಮನ
ವಿದ್ಯೆಯನು ಕಲಿಸಿದ ಗುರುಗಳಿಗೆ ನಮನ
ಪಾಠವನು ಕಲಿಸಿದ ಜೀವನಕೆ ನಮನವು
ವಿದ್ಯಾಲಯದಲ್ಲಿ ಗುರು ಶಿಕ್ಷಣವ ನೀಡಿದರು
ತಲೆ ಎತ್ತಿ ಜಗದಲ್ಲಿ ನಿಲ್ಲುವಂತೆ ಮಾಡಿದರು
ಪಾಠದ ಜತೆಯಲ್ಲಿ ಬುದ್ಧಿಯನು ತಿದ್ದಿದರು
ವಿದ್ಯಾ ದಾನವನು ಸಾಕಷ್ಟು ನೀಡಿದರು
ಕರವ ಪಿಡಿದು ಮೆಲ್ಲ ಬರಹವ ಕಲಿಸಿದರು
ಗರಡಿಯಲಿ ಹಠ ಸಾಧನೆಗೆ ಒತ್ತು ನೀಡಿದರು
ಜ್ಞಾನದಾತನು ಆತ ಸ್ಪೂರ್ತಿದಾತನು ಆತ
ಬಾಳ ರೂಪಿಸಲು ಪರಿಪರಿಯ ಶಿಕ್ಷೆ ನೀಡಿದನಾತ
ಮಾಡಿದ ಕೆಲಸ ಮಗದೊಮ್ಮೆ ಹಲವು ಬಾರಿ
ಆಡಿ ತೋರಿದರು ಎಮಗೆ ಸರಿಯಾದ ದಾರಿ
ಒಂಟಿಕಾಲಲಿ ನಿಂತ ತುಂಟ ಮಕ್ಕಳ ತಂಟೆ
ಗಂಟೆಗಟ್ಟಲೆ ನಿಂತರೂ ಬಿಡಲಾರದ ತಂಟೆ
ಅವಿನಾಭಾವ ಬಂಧ ಗುರು ಶಿಷ್ಯರ ಬಂಧ
ಅಜ್ಞಾನದಿಂ ಸುಜ್ಞಾನದೆಡೆಗೆ ಒಯ್ಯುವ ಬಂಧ
ಭೇದ ಭಾವವ ಮರೆತು ದಡ ಸೇರಿಸುವ ನಾವಿಕ
ಮಕ್ಕಳನು ತನ್ನೆಡೆಗೆ ಸೆಳೆಯುವ ಮಾಂತ್ರಿಕ
ಗುರು ಚರಣಕೆ ಎದೆಯಾಂತರಾಳದ ನಮನ
ನೆನಪಿನ ಪಂಜರದ ಕದ ತಟ್ಟಿದ ದಿನ
ಬಾಲ್ಯದ ಹೊಂಗನಸು ಶಾಶ್ವತ ಹೃದಯದಲಿ
ಬಾಲ್ಯವೇ ಹೋದೆಯ ಬಿಟ್ಟು ದೂರದಲಿ
