
Article · October 20, 2026
ಬದುಕಿನ ದೃಷ್ಟಿ ಬದಲಿಸೋಣ - ದೃಶ್ಯವೇ ಬದಲಾದೀತು!
ಕರಾಡ ವಿಶ್ವದಲ್ಲಿ ರವೀ ಸಜಂಗದ್ದೆ ಅವರ ನೂರನೇ ವಿಶೇಷ ಬರಹ
ಎದೆಯಲ್ಲಿ ಉಳಿದದ್ದು ಮುನ್ನೂರ ಒಂದು... 'ನಿಮ್ಮ ಮುಂದಿನ ಬರಹವು 'ಕರಾಡವಿಶ್ವ'ದಲ್ಲಿ 100ನೆಯ ಬರಹ, ಅದು ವಿಶಿಷ್ಟವಾಗಿ ಮೂಡಿಬರಲಿ' ಎಂದಾಗ ಒಂದಷ್ಟು ಯೋಚಿಸಿ, ನನ್ನ ಬರವಣಿಗೆಯ ಮಟ್ಟಿಗೆ ಒಂದು ಹೊಸ ಮಾದರಿ-ಶೈಲಿಯ ಬರಹವನ್ನು ಗೀಚಿ ನಿಮ್ಮೆದುರು ಇರಿಸಿದ್ದೇನೆ, ಒಪ್ಪಿಸಿಕೊಳ್ಳಿ. ನೂರನೆಯ ಪ್ರಕಟಿತ ಬರಹದ ಈ ಸಂದರ್ಭದಲ್ಲಿ ನನ್ನ ಬರವಣಿಗೆಯ ಪಯಣದ ಮೆಲುಕು ಹಾಕಿದಾಗ 'ಅಬ್ಬಾ ಇಷ್ಟೆಲ್ಲಾ ನಾನೇ ಬರೆದದ್ದಾ'? 'ಇಷ್ಟೆಲ್ಲಾ ಬರೆಯಲು ನನ್ನಿಂದ ಹೇಗೆ ಸಾಧ್ಯವಾಯಿತು'? ಎಂಬುದಾಗಿ ನನ್ನನ್ನು ನಾನು ಪ್ರಶ್ನಿಸಿಕೊಂಡಾಗಲೆಲ್ಲ ನೆನಪಾಗುವುದು 'ಬೃಹತ್ ಮೌಂಟ್ ಎವರೆಸ್ಟ್ ಶಿಖರ ಏರಿದ ಪ್ರತಿಯೊಬ್ಬರೂ ಆ ಶಿಖರದ ತುತ್ತ ತುದಿಗೆ ತಲುಪಲು ನೆರವಾದದ್ದು ಅವರುಗಳು ಆತ್ಮವಿಶ್ವಾಸದಿಂದ ಇಟ್ಟ ಮೊದಲ ಹೆಜ್ಜೆ ಮತ್ತು ನಿರಂತರ ಪ್ರಯತ್ನ' ಎನ್ನುವ ಪ್ರೇರಣಾಭರಿತ ಸಾಲು! ನನ್ನನ್ನು ಬರೆಯಲು ಹುರಿದುಂಬಿಸಿದ, ಬರೆದುದನ್ನು ಓದಿ ಮೆಚ್ಚಿದ, ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ ನನ್ನ ನಡುವಿನ ದೊಡ್ಡ ಬಳಗಕ್ಕೆ ಹೃದಯದಿಂದ ಕೃತಜ್ಞತೆಗಳು ಮತ್ತು ನನ್ನಿ ಮನೆಯಲ್ಲಿ ನಾನು ಬರೆಯಲು ಕುಳಿತಾಗಲೆಲ್ಲಾ ಪೂರಕವಾದ, ನಿಶ್ಶಬ್ದದ ವಾತಾವರಣ ಕಲ್ಪಿಸಿಕೊಟ್ಟ ಮಡದಿ ಪ್ರತಿಭಾ ಮತ್ತು ಮಗಳು ಕು. ಭುವಿಗೆ ಚಿರಋಣಿ. ಸದಾ ಬೆನ್ನೆಲುಬಾಗಿ ನಿಂತು, ನನ್ನ ಬರಹಗಳನ್ನು ಯಥಾವತ್ ಪ್ರಕಟಿಸಿದ 'ಕರಾಡವಿಶ್ವ'ಕ್ಕೆ ದೊಡ್ಡ ಥ್ಯಾಂಕ್ಸ್. ಬರವಣಿಗೆಯ ಈ ಅತುಲ್ಯ ಪಯಣ ಹೀಗೇ ಮುಂದುವರೆಯುವಂತೆ ನಿಮ್ಮ ಪ್ರೀತ್ಯಾದರ, ಹಾರೈಕೆ ಸದಾ ನನ್ನ ಮೇಲಿರಲಿ. ನಿಮ್ಮ ಅಭಿಪ್ರಾಯಗಳನ್ನು ಛಾಪಿಸಲು ಮರೆಯದಿರಿ. ಮತ್ತೆ ಇಲ್ಲೇ ಸಿಗೋಣು! ಧನ್ಯೋಸ್ಮಿ. ಈ ಸಂದರ್ಭದಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ನನ್ನ ಚಿಕ್ಕಪ್ಪ ಮುದ್ದುಣ್ಣ ಯಾಕೋ ತುಂಬಾ ನೆನಪಾಗುತ್ತಿದ್ದಾರೆ...
ಇಂಗ್ಲೀಷ್ ಭಾಷೆಯಲ್ಲಿ 'Count your blessings' ಎನ್ನುವ ಮಾತೊಂದಿದೆ. 'ಭಗವಂತ ನಮಗೆ ಕರುಣಿಸಿದ-ದಯಪಾಲಿಸಿದ ಬದುಕಿನ ಎಲ್ಲಾ ಸೌಭಾಗ್ಯಗಳ ಕಡೆಗೊಂದು ದೊಡ್ಡ ಕೃತಜ್ಞತೆ ಎಂದೆಂದಿಗೂ ಇರಲಿ. ಸಿಕ್ಕಿರುವುದರಲ್ಲಿ-ಇರುವುದರಲ್ಲಿ ಖುಷಿ ಪಡು; ಇರದುದರ ಕುರಿತು ವ್ಯಥೆ, ವ್ಯರ್ಥಾಲಾಪ ಬೇಡ' ಎನ್ನುವುದು ಈ ವಾಕ್ಯದ ವಿಶಾಲ ಅರ್ಥ! ಹೌದಲ್ಲವೇ? ಒಮ್ಮೆ ಯೋಚಿಸಿ ನೋಡೋಣ. ಬದುಕಿನಲ್ಲಿ ನಮಗೆ ಸಿಕ್ಕಿದ ದೈನಂದಿನ ಮತ್ತು ಹಲವಾರು ಅಂಶ-ವಿಚಾರಗಳ ಕುರಿತು ತೃಪ್ತಿ-ಸಮಾಧಾನ ಪಡುವುದರ ಬದಲಾಗಿ ನಮಗೆ (ಇನ್ನೂ) ಸಿಗದ, ನಮ್ಮ ಪಾಲಿಗೆ ಒದಗಿಬರದ ಯಾವುದೋ ಕೆಲವು ಐಷಾರಾಮಿ ಎನಿಸಿಕೊಳ್ಳುವ ವಸ್ತು-ವಿಷಯಗಳ ಕುರಿತು ನಮ್ಮ ಯೋಚನೆ, ಬೇಸರ, ಅತೃಪ್ತಿ, ತುಮುಲ ಜಾಸ್ತಿ!
ಬದುಕು ಮತ್ತು ಸಂಬಂಧಗಳೆಂಬ ನಾಗಾಲೋಟದ ನಡುವೆ, ನಾವೆಲ್ಲರೂ ಅರಿತೋ ಅರಿಯದೆಯೋ ಯಾವುದೋ ಒಂದು ಅದೃಶ್ಯ ಆಸೆ-ಮಾಯೆಯ ಬೆನ್ನುಹತ್ತಿ ನಿರಂತರ ಓಡುತ್ತಿರುತ್ತೇವೆ. ನಮ್ಮ ಕಣ್ಣಿಗೆ ಕಾಣುವ ಇತರರ-ಬೇರೆಯವರ ಹೊಳಪೆನಿಸುವ ಬದುಕನ್ನು, ಅವರ ಸಂಬಂಧಗಳ ಹೊರನೋಟದ ನಗು-ಆನಂದವನ್ನು ನೋಡಿ, ನಮ್ಮ ಬದುಕಿನೊಂದಿಗೆ ಅನಾವಶ್ಯಕ ತುಲನೆ ಮಾಡಿ, ನಮ್ಮದೇ ಮನೆಯೊಳಗಿನ-ವರ್ತುಲದೊಳಗಿನ ನೈಜ, ವಿಶ್ವಾಸಭರಿತ ಪ್ರೀತಿ-ಮಮಕಾರಗಳನ್ನು ಅದೆಷ್ಟೋ ಬಾರಿ ನಾವುಗಳು ನಿರ್ಲಕ್ಷಿಸಿ ಬಿಡುತ್ತೇವೆ. ಪರರ ಅಂಗಳದಲ್ಲಿ ಅರಳಿ ನಿಂತಿರುವ ಹೂವು ಕ್ಷಣಿಕವಾಗಿ ಆಕರ್ಷಕವಾಗಿ ಕಾಣಬಹುದು! ಆದರೆ 'ನಮ್ಮದೇ ತೋಟದಲ್ಲಿ ನಮಗಾಗಿ ಅರಳಿದ ಸಣ್ಣ ಹೂವು-ಹಣ್ಣು-ಚಿಗುರು, ನಮ್ಮ ಕಣ್ಣೀರಿಗೆ ಸಾಂತ್ವನ ಹೇಳುವ-ನೀಡುವ ಕೈಗಳು, ಬೇಸರಕ್ಕೆ ಹೆಗಲಾಗುವ-ಮಡಿಲಾಗುವ ಸಂಬಂಧಗಳು ನಮ್ಮಗಳ ಬದುಕಿನ ನಿಜವಾದ ಆಸ್ತಿ-ಬೆಳಕು' ಎನ್ನುವ ಜ್ಞಾನೋದಯ ಅನೇಕ ಬಾರಿ ನಮಗೆ ಆಗುವುದೇ ಇಲ್ಲವಲ್ಲ! ನಾವೇ ಜಗತ್ತು ಎಂದು ನಂಬಿರುವವರ ನಂಬಿಕೆ-ನಿರೀಕ್ಷೆ ಹುಸಿ ಮಾಡದಿರೋಣ. ಯಾವುದೋ ಒಂದು, ನಮಗೆ ಗೊತ್ತಿರದ ಬೆಳಕು-ವಿಚಾರವನ್ನು ಹೋಲಿಕೆಯೆಂಬ ಬಿರುಗಾಳಿಗೆ ಸಿಲುಕಿಸಿ, ನಲುಗಿಸಿ ಅರಗಿಸಲಾಗದೇ ವ್ಯಥೆ ಪಡುವುದು ಖಂಡಿತಾ ಬಲುದೊಡ್ಡ ವಿಪರ್ಯಾಸವೇ ಸರಿ. ಈ ರೀತಿಯ ವಿಷಯಗಳಲ್ಲಿ 'ಅಂಗೈಯಲ್ಲಿ ಬೆಣ್ಣೆ ಹಿಡಿದು ಊರೆಲ್ಲಾ ಅಲೆದಂತೆ' ಎಂಬಂತಾಗಿದೆ ನಮ್ಮ ಪರಿಸ್ಥಿತಿ-ಮನಸ್ಥಿತಿ! ಇದಕ್ಕೆ ತಿಳಿದವರು ಹೇಳಿದ್ದು 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ' ಅಂತ.
ನಮ್ಮ ಕನಸುಗಳನ್ನು, ಆಸೆ-ಆಕಾಂಕ್ಷೆಗಳನ್ನು ನನಸಾಗಿಸಲು ಪ್ರಯತ್ನ ಮತ್ತು ಕೆಲಸ ನಿರಂತರ ಸಾಗುತಿರಲಿ. ಹಾಗೆಂದು 'ಬದುಕಿನಲ್ಲಿ ನಮಗಿರುವ ಎಲ್ಲಾ ಆಸೆಗಳೂ ಈಡೇರಬೇಕು, ಎಲ್ಲ ಕನಸುಗಳೂ ಕೈಗೂಡಲೇ ಬೇಕು' ಎನ್ನುವ ಹಠ ಖಂಡಿತಾ ಬೇಡ. ಕೆಲವು ಕನಸುಗಳು ಆಗೀಗ ಕನಸುಗಳಾಗಿಯೇ ಉಳಿಯುವುದರಲ್ಲೂ ಒಂದು ಮಧುರವಾದ ಕಲ್ಪನೆಯಿದೆ, ಒಂದು ಮಹತ್ತರ ಪಾಠವಿದೆ. 'ಎಲ್ಲವೂ ಸಿಕ್ಕಿರುವ-ದಕ್ಕಿರುವ ಬದುಕಿಗಿಂತ, ಇರುವುದರಲ್ಲೇ ನೆಮ್ಮದಿ-ಸಾತತ್ಯ ಕಾಣುವುದು ರಾಜಿಯಲ್ಲ; ಅದುವೇ ಬದುಕಿನ ಅತ್ಯುನ್ನತ ಉದ್ದೇಶ, ಆಶಯ' ಎನ್ನುವ ನೆನಪು ಸದಾ ನಮ್ಮೊಳಗೆ ಜಾಗೃತವಾಗಿರಲಿ. 'ಮನುಷ್ಯನ ಜನ್ಮದ ಸಾರ್ಥಕತೆ ಇರುವುದು ಕೇವಲ ಭೌತಿಕ ಆಸೆಗಳ ಬೆನ್ನೇರಿ ಓಡುವುದರಲ್ಲಲ್ಲ, ಬದಲಾಗಿ ನಮ್ಮ ಬಳಗದ ಮತ್ತು ಅಂತರಂಗದ ಶಾಂತಿ-ನೆಮ್ಮದಿಯನ್ನು ಕಂಡುಕೊಳ್ಳುವುದರಲ್ಲಿ ಮತ್ತು ನಮ್ಮ ಪಾಲಿಗೆ ಬಂದವರನ್ನು ನಿಷ್ಕಲ್ಮಷವಾಗಿ ಪ್ರೀತಿಸಿ, ಆದರಿಸಿ, ಆರಾಧಿಸಿ, ಆನಂದಿಸುವುದರಲ್ಲಿ'. ನಮ್ಮ ಪ್ರತಿಯೊಂದು ಸಂಬಂಧವೂ ನಮಗೆ ನಿಸ್ವಾರ್ಥತೆ, ತ್ಯಾಗ ಮತ್ತು ಸಹನೆಯನ್ನು ಕಲಿಸುವ ಮೂಲಕ ನಮ್ಮನ್ನು ಒಳಗಿನಿಂದ ಅರಳುವಂತೆ, ಒಳಗಿನಿಂದ ಗಟ್ಟಿ ಮಾಡುತ್ತದೆ. ಎಲ್ಲವನ್ನೂ ಒಳಗಣ್ಣಿನಿಂದ ನೋಡಿದಾಗ ಬದುಕು ಸ್ಪಷ್ಟ, ಸತ್ಯ, ಸುಂದರ, ಸರಳ, ಸುಲಲಿತ. ಅದಕ್ಕೇ ಯಾರೋ ಜ್ಞಾನಿ ಹೇಳಿದ್ದು 'ದೃಷ್ಟಿ ಬದಲಿಸಿ ನೋಡು ದೃಶ್ಯವೇ ಬದಲಾದೀತು; ಹವ್ಯಾಸ ಬದಲಿಸಿ ನೋಡು ಹಣೆಬರಹವೇ ಬದಲಾದೀತು; ವಿಚಾರ ಬದಲಿಸಿ ನೋಡು ದೇಶವೇ ಬದಲಾದೀತು; ದೋಣಿ ಬದಲಿಸಬೇಕೆಂದಿಲ್ಲ, ದಿಕ್ಕು ಬದಲಿಸಿದರೆ ಸಾಕು; ನೀ ಸೇರುವ ದಡ ಎದುರಾದೀತು'! ಇದರ ಜೊತೆಗೆ 'ದೃಷ್ಟಿಯೂ ನಮ್ಮದೇ; ಸೃಷ್ಟಿಯೂ ನಮ್ಮದೇ' ಎನ್ನುವ ಪಾರಮಾರ್ಥಿಕ ಸತ್ಯವೂ ನಮಗೆಲ್ಲ ಗೊತ್ತಿರಲಿ.
ನಮ್ಮದಲ್ಲದರತ್ತ, ನಮ್ಮ ಹಣೆಬರಹದಲ್ಲಿ ಬರೆಯದುದರೆಡೆಗೆ ಆಸೆಪಡುವುದನ್ನು, ಕೈಚಾಚುವುದನ್ನು ಬಿಟ್ಟು, ನಮಗಾಗಿ ಮಿಡಿಯುವ ಜೀವಿ-ಜೀವಗಳೊಂದಿಗೆ ಅರ್ಥಪೂರ್ಣವಾಗಿ ಬದುಕುವುದು, ಅವರಿಗೆ ಆಸರೆಯಾಗುವುದು, ಅವರಿಗೆ ನಮ್ಮ ಅಮೂಲ್ಯ ಸಮಯ ಮತ್ತು ನಿಷ್ಕಲ್ಮಷ ಪ್ರೀತ್ಯಾದರ ಸದಾ ಉಣಬಡಿಸುವುದು ಜೀವನದ ಪರಮ ಗುರಿಯಾಗಿರಲಿ. ಕಾಲದಾಚೆಗೂ ಉಳಿಯುವುದು ನಾವು ವರ್ಷಗಳ ಕಾಲ ದುಡಿದು ಗಳಿಸಿಕೊಂಡ-ಪಡೆದುಕೊಂಡ ವಸ್ತುಗಳು, ಭೌತಿಕ ಸಂಪತ್ತು ಅಲ್ಲವೇ ಅಲ್ಲ! ಬದಲಾಗಿ ನಾವು ಕಟ್ಟಿಕೊಂಡ, ಬೆಳೆಸಿದ, ಗಳಿಸಿದ ವಿಶ್ವಾಸ, ಹಂಚಿದ ಪ್ರೀತಿ, ಮತ್ತು ನಾವು ಅನುಭವಿಸಿದ ಆತ್ಮತೃಪ್ತಿ ಮಾತ್ರ! 'ಪರಮಾತ್ಮ ಮತ್ತು ಅಂತರಾತ್ಮ'ಕ್ಕೆ ಸತ್ಯದಿಂದ ನಡೆದುಕೊಂಡರೆ ಅದುವೇ ನೈಜ ಬದುಕು. ನಮ್ಮ ಪಾಲಿಗೆ ಬಂದಿರುವ ಈ ಪುಟ್ಟ, ಸುಂದರ, ಶ್ರೇಷ್ಠ, ಅಪರೂಪದ, ಅನನ್ಯ, ಅತುಲ್ಯ ಬದುಕನ್ನು, ನಮ್ಮನ್ನು ನಂಬಿರುವವರೊಂದಿಗೆ, ನಮ್ಮ ಒಳಿತಿಗಾಗಿ ಸರ್ವಸ್ವವನ್ನೂ ಸದಾ ಧಾರೆ ಎರೆಯುವ ನಮ್ಮವರಿಗಾಗಿ ಸದಾ ಮುಡಿಪಾಗಿಡೋಣ. ನಮ್ಮ ನಡುವಿನ ಅಚಲ ಸಂಬಂಧಗಳನ್ನು ಸಂಪೂರ್ಣವಾಗಿ, ಚೆಂದವಾಗಿ ನಿಭಾಯಿಸಬೇಕಿದೆ - ನಮ್ಮವರು ಎನಿಸಿಕೊಂಡವರ ಪಾಲಿಗೆ 'ನಮ್ಮ ಮಾತು-ನಗು-ಕಥೆ, ನಮ್ಮ ವ್ಯಕ್ತಿತ್ವ ಮತ್ತು ನಮ್ಮ ಪ್ರೀತಿ-ಒಲವು ಈ ಜಗತ್ತಿನಲ್ಲಿ ಅದ್ವಿತೀಯವಾದದ್ದು ಎನ್ನುವ ನೆನಪು, ಕಾಳಜಿ, ಎಚ್ಚರ ಸದಾ ಇರಲಿ.
ತೃಪ್ತಿ ಮತ್ತು ಪ್ರೀತಿ ತುಂಬಿದ ಈ ಸುಮಧುರ ಸುಂದರ ಹಾದಿಯಲ್ಲಿ ಸಾಗುತ್ತಾ ಹೋದಂತೆ, ಬದುಕಿನ ಅತ್ಯುನ್ನತ ಉದ್ದೇಶವಾದ 'ಆಂತರ್ಯದ ನೆಮ್ಮದಿ ಮತ್ತು ಸಾರ್ಥಕತೆ' ತಾನಾಗಿಯೇ ಒಲಿಯುತ್ತದೆ. ಕೊಡುವುದಾದರೆ ಭರಪೂರ ಪ್ರೀತಿ ಕೊಡೋಣ; ಹಂಚುವುದಾದರೆ ನಮ್ಮವರ ಎಲ್ಲರ ಬಾಳತುಂಬಾ ಸಿಹಿಯನ್ನೇ ಹಂಚೋಣ; ಗಳಿಸುವುದಾದರೆ ಜನರ ಮುಗಿಲೆತ್ತರ ವಿಶ್ವಾಸ ಗಳಿಸೋಣ, ಮರೆಯುವುದಾದರೆ ಇತರರು ಮಾಡಿದ ತಪ್ಪುಗಳನ್ನು ಕ್ಷಮಿಸಿ ಮರೆಯೋಣ, ವೃದ್ಧಿಸುವುದಾದರೆ ಸಂಬಂಧಗಳ ಸರಮಾಲೆಯನ್ನು ವೃದ್ಧಿಸೋಣ. ಕೊನೆಗೆ ಇಲ್ಲಿಂದ ಹೊರಡುವಾಗ, ಮಾಡಿದ ಸುಕರ್ಮಗಳನ್ನು ನಮ್ಮವರ ನೆನಪಿನಂಗಳದಲ್ಲಿ ಬಿಟ್ಟು, ಜೀವವೂ ಸೇರಿದಂತೆ ಎಲ್ಲವನ್ನೂ ತ್ಯಜಿಸಿ ಹೊರಡೋಣ, ಒಂದಲ್ಲ ಒಂದು ದಿನ ಹೊರಡಲೇಬೇಕಲ್ಲವೇ?! - ನಮ್ಮ ಮುದ್ದುಣ್ಣನಂತೆ....
ಇದೆಲ್ಲ ಬರೆಯುವ ಹೊತ್ತಿಗೆ, ನಮ್ಮೊಡನೆ ರಾಜನಂತೆ ಇದ್ದು, ಸಣ್ಣ ಸುಳಿವೂ ನೀಡದೆ ರಾಜನಂತೆ ಎದ್ದು ಹೋದ ನನ್ನ ಚಿಕ್ಕಪ್ಪ ಸಜಂಗದ್ದೆ ಮುದ್ದುಣ್ಣ ಬಹಳವಾಗಿ ನೆನಪಾದರು. 'ಓಹ್ ಸಾವು ಬಂತಾ? ಸರಿ, ನೀವೆಲ್ಲರೂ ನೂರ್ಕಾಲ ಚೆನ್ನಾಗಿರಿ, ನಾನು ಹೋಗಿ ಬರುವೆ...' ಎನ್ನುತ್ತಾ ಚೂರು ಅಳುಕು-ಅಂಜಿಕೆ ಇಲ್ಲದೆ, ಮಾಡಿದ ಎಲ್ಲಾ ಸತ್ಕಾರ್ಯಗಳನ್ನು ಇಲ್ಲೇ ಮಧುರ-ಶಾಶ್ವತ ನೆನಪಾಗಿ ಉಳಿಸಿ, ಮರಳಿ ಬಾರದ ಲೋಕಕ್ಕೆ ಎದ್ದು ಹೋಗುವ ಆ ಗತ್ತು-ಗಾಂಭಿರ್ಯ-ಘನತೆ ಇದೆಯಲ್ಲ, ಬಹುಷಃ ಅದು ಮುದ್ದುಣ್ಣನಂತಹ ವ್ಯಕ್ತಿತ್ವವಿರುವ, ಅಪರೂಪದ ಮನುಷ್ಯರಿಗೆ ಮಾತ್ರ ಸಾಧ್ಯವೇನೋ!? ನಿಮ್ಮ ಇರುವಿಕೆಯನ್ನು ಖಂಡಿತವಾಗಿಯೂ ನಮ್ಮ ಸುತ್ತಮುತ್ತಲೂ ಸದಾಕಾಲ ಮಿಸ್ ಮಾಡಿಕೊಳ್ಳಲಿದ್ದೇವೆ ಮುದ್ದುಣ್ಣಾ. ಇಲ್ಲಿದ್ದಷ್ಟೇ ಚೆನ್ನಾಗಿ ಅಲ್ಲೂ ಇರಿ, ಅಲ್ಲಿಂದಲೇ ನಮ್ಮನ್ನೆಲ್ಲ ಸದಾ ಹರಸುತಿರಿ...

ಒಂದಗಳು ಹೆಚ್ಚಿರದು; ಒಂದಗಳು ಕೊರೆಯಿರದು |
ತಿಂದು ನಿನ್ನನ್ನಋಣ ತೀರುತಲೆ ಪಯಣ ||
ಹಿಂದಾಗದೊಂದು ಚಣ; ಮುಂದಕುಂ ಕಾದಿರದು |
ಸಂದ ಲೆಕ್ಕವದೆಲ್ಲ – ಮಂಕುತಿಮ್ಮ_ ||
'ಇದುವೇ ಜೀವನ, ಇಷ್ಟೇ ಜೀವನ'!
