Karada Vishwa

News · December 7, 2025

ಕರಾಡವಾಣಿ ವಿಶೇಷಾಂಕ ಬಿಡುಗಡೆ - 2025

ವರದಿ ಕೃಪೆ : ಶ್ರೀಮತಿ ಅರುಣಾ ಶಿವರಾಮ್ ಪಡ್ಪು , ಶ್ರೀಮತಿ ದಿವ್ಯಾ ಶಿರಂತಡ್ಕ

'ಕರಾಡ ಕಲಾ ಸಾಹಿತ್ಯ ಪ್ರತಿಷ್ಠಾನ (ರಿ) ಪೆರ್ಲ' ಟ್ರಸ್ಟ್ ಮೂಲಕ ಪ್ರಕಟವಾಗುತ್ತಿರುವ ಕರಾಡವಾಣಿ ಪತ್ರಿಕೆಯ 24ನೇ ವಿಶೇಷಾಂಕವು ವಾಟೆತ್ತಿಲ ಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಟ್ರಸ್ಟ್ ನ ಅಧ್ಯಕ್ಷ ಶ್ರೀಯುತ ಕೃಷ್ಣ ಭಟ್ ಪಿಲಿಂಗಲ್ಲು ಇವರ ಘನ ಅಧ್ಯಕ್ಷತೆಯಲ್ಲಿ ಬಿಡುಗಡೆಯಾಯಿತು. ತಾ 30-11-2025ನೇ ಆದಿತ್ಯವಾರದಂದು ದೇವಸ್ಥಾನದ ಮೊಕ್ತೇಸರರಾದ ಶ್ರೀಯುತ ಸುಬ್ರಹ್ಮಣ್ಯ ಭಟ್ ವಾಟೆತ್ತಿಲ ಇವರು ವಿಶೇಷಾಂಕವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಆಗಮಿಸಿದ ಶ್ರೀಮತಿ ಸಂಧ್ಯಾಗೀತಾ ಬಾಯಾರು, ಡಾ| ಸತೀಶ ಪುಣಿಂಚಿತ್ತಾಯ ಹಾಗೂ ಡಾ| ವಿಷ್ಣು ಶರ್ಮ ಆಟಿಕುಕ್ಕೆ ಇವರು  ಕರಾಡವಾಣಿಯ ಕಾರ್ಯವೈಖರಿಯನ್ನು ಪ್ರಶಂಸಿಸಿದರು. ಟ್ರಸ್ಟ್ ಹಾಗೂ ಪತ್ರಿಕೆಯ ರೂವಾರಿಗಳಾಗಿದ್ದ  ಮಾ. ಭ ಪೆರ್ಲ, ಮವ್ವಾರು ಸುಬ್ರಹ್ಮಣ್ಯ ಭಟ್ ಹಾಗೂ ಆನೆಮಜಲು ವಿಷ್ಣು ಭಟ್ ಅವರುಗಳ ಸಂಸ್ಮರಣೆ ನಡೆಯಿತು. ಕರಾಡ ಸಮಾಜದ ಮೇರು ಸಾಹಿತಿ ಡಾ. ಸದಾಶಿವ ಭಟ್ ಪಳ್ಳು ಇವರಿಗೆ 'ಗೌರು ಮಾಧವ ಸ್ಮಾರಕ ಪ್ರಶಸ್ತಿ -೨೦೨೫' ನ್ನು ನೀಡಿ ಗೌರವಿಸಲಾಯಿತು. ಯಕ್ಷಗಾನ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿರುವ ಶ್ರೀಯುತ ಲಕ್ಷ್ಮೀನಾರಾಯಣ ಭಟ್ ಬಟ್ಯಮೂಲೆ ಇವರಿಗೆ 'ಡಾ| ಪುಷ್ಪ ಅನಂತಪದ್ಮನಾಭ ಭಟ್ ಬಲೆಕ್ಕಳ ಸ್ಮರಣಾರ್ಥ ದತ್ತಿನಿಧಿ' ಯನ್ನು ನೀಡಿ ಪುರಸ್ಕರಿಸಲಾಯಿತು. 
ಪತ್ರಿಕೆ ವತಿಯಿಂದ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. 'ಗೌರು ಮಾಧವ ಶಿಕ್ಷಣ ನಿಧಿ' ಹಾಗೂ 'ಶೈಕ್ಷಣಿಕ ದತ್ತು ಸ್ವೀಕಾರನಿಧಿ' ಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಅತ್ಯುತ್ತಮ ಭೋಜನ ಹೊಟ್ಟೆಗೆ ಮುದ ನೀಡಿದರೆ ಭೋಜನ ನಂತರದ ರಸಮಂಜರಿ ಕಾರ್ಯಕ್ರಮ ಮನಸೂರೆಗೊಂಡಿತು. ಆಗಮಿಸಿದ ಅತಿಥಿಗಳಿಗೆ, ಸಭಿಕರಿಗೆ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ವಾಟೆತ್ತಿಲ ಮನೆಯವರಿಗೆ ಹಾಗೂ ಸಹಕರಿಸಿದ ಸರ್ವರಿಗೂ ವಂದನಾರ್ಪಣೆಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಆನೆಮಜಲು ವಿಷ್ಣು ಭಟ್ ಸ್ಮರಣಾರ್ಥ ಮನೆಯವರು ಟ್ರಸ್ಟ್ ಹಾಗೂ ಪತ್ರಿಕಾ ಬಳಗವನ್ನು ಗೌರವಿಸಿದುದು ವಿಶೇಷವೆನಿಸಿಕೊಂಡಿತು.





ಕರಾಡವಾಣಿ ವಿಶೇಷಾಂಕ ಬಿಡುಗಡೆ - 2025