
News · September 12, 2026
ಚಿತ್ರರಂಗದಲ್ಲಿ ಕರಾಡ ಸಹೋದರರ ಹೊಸ ಹೆಜ್ಜೆ
‘ಹೆಗ್ಗಣ ಮುದ್ದು’ ಸಿನಿಮಾ ಮೂಲಕ ಅವಿನಾಶ್–ನಚಿಕೇತ್ ಬಲೆಕ್ಕಳ ಹೊಸ ಪಯಣ
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಕಥಾಹಂದರ ಹಾಗೂ ಕುತೂಹಲ ಮೂಡಿಸುವ ಶೀರ್ಷಿಕೆಯೊಂದಿಗೆ ಮೂಡಿಬರುತ್ತಿರುವ ‘ಹೆಗ್ಗಣ ಮುದ್ದು’ ಸಿನಿಮಾ, ಕರಾಡ ಸಮುದಾಯದ ಇಬ್ಬರು ಪ್ರತಿಭಾವಂತ ಸಹೋದರರಾದ ಅವಿನಾಶ್ ಬಲೆಕ್ಕಳ ಮತ್ತು ನಚಿಕೇತ್ ಬಲೆಕ್ಕಳ ಅವರ ಚಿತ್ರರಂಗದ ಪಯಣದಲ್ಲಿಯೂ ಮಹತ್ವದ ಮೈಲಿಗಲ್ಲಾಗಿದೆ.
ನಟ ರಾಕ್ಷಸ ಡಾಲಿ ಧನಂಜಯ್ ಅವರ ಡಾಲಿ ಪಿಕ್ಚರ್ಸ್ ನಿರ್ಮಾಣದ ಈ ಚಿತ್ರವನ್ನು ಅವಿನಾಶ್ ಬಲೆಕ್ಕಳ ನಿರ್ದೇಶಿಸಿದ್ದು, ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದೆ. ಸಂಬಂಧಗಳ ಸುತ್ತ ಹೆಣೆದಿರುವ ಡ್ರಾಮಾ–ಥ್ರಿಲ್ಲರ್ ಕಥಾವಸ್ತುವನ್ನು ಹೊಂದಿರುವ ‘ಹೆಗ್ಗಣ ಮುದ್ದು’, ತನ್ನ ವಿಭಿನ್ನ ಶೀರ್ಷಿಕೆ ಹಾಗೂ ಕಥೆಯ ಮೂಲಕವೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
ಈ ಚಿತ್ರದಲ್ಲಿ ಮತ್ತೊಂದು ವಿಶೇಷವೆಂದರೆ, ಚಿತ್ರದ ನಿರ್ದೇಶನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಒಂದೇ ಕುಟುಂಬದ ಇಬ್ಬರು ಸಹೋದರರು ನಿರ್ವಹಿಸಿರುವುದು. ಅವಿನಾಶ್ ಬಲೆಕ್ಕಳ ನಿರ್ದೇಶಕರಾಗಿ, ಅವರ ಸಹೋದರ ನಚಿಕೇತ್ ಬಲೆಕ್ಕಳ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಚಿತ್ರದ ಸಂಪೂರ್ಣ ಚಿತ್ರೀಕರಣ ಮೈಸೂರು ಭಾಗದಲ್ಲಿ ನಡೆದಿದ್ದು, ಪೂರ್ಣಚಂದ್ರ ಮೈಸೂರು ಹಾಗೂ ಅದಿತಿ ಸಾಗರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದಿತಿ ಸಾಗರ್ ಅವರು ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಯ ಹಂತ ತಲುಪಿದೆ.
ಚಿತ್ರಕ್ಕೆ ಕಾರ್ತಿಕ್ ಚೆನ್ನೂಜಿ ರಾವ್ ಮತ್ತು ರೋಣದ ಬಕ್ಕೆಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಭಿನ್ನ ಕಥಾಹಂದರದೊಂದಿಗೆ ರೂಪುಗೊಂಡಿರುವ ‘ಹೆಗ್ಗಣ ಮುದ್ದು’ ಸಿನಿಮಾ ಸೆಪ್ಟೆಂಬರ್ 25ರಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಅವಿನಾಶ್ ಬಲೆಕ್ಕಳ - ನಿರ್ದೇಶನದತ್ತ ಹೆಜ್ಜೆ
ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಬಿಸಿಲುಮಲೆ ಮನೆಯ ನಾಗರಾಜ ಭಟ್ ಬಿಸಿಲುಮಲೆ ಹಾಗೂ ಯಶೋದಾ ಬಿಸಿಲುಮಲೆ ದಂಪತಿಯ ಪುತ್ರರಾದ ಅವಿನಾಶ್ ಬಲೆಕ್ಕಳ ಅವರು ಬಿ.ಇ. (ಇನ್‌ಫರ್ಮೇಶನ್ ಸೈನ್ಸ್) ಪದವೀಧರರು.
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ ಹಾಗೂ ಗೀತರಚನೆಕಾರರಾಗಿ ಸಕ್ರಿಯರಾಗಿರುವ ಅವಿನಾಶ್, ಚಿತ್ರರಂಗಕ್ಕೆ ಕಾಲಿಡುವ ಮುನ್ನವೇ ಅನುಭವ ಸಂಪಾದಿಸಿದ್ದಾರೆ. ಹಿರಿಯ ನಿರ್ದೇಶಕರಾದ ಟಿ. ಎಸ್. ನಾಗಾಭರಣ ಹಾಗೂ ಪನ್ನಗ ಭರಣ ಅವರೊಂದಿಗೆ ವಿವಿಧ ಚಿತ್ರಗಳಲ್ಲಿ ಬರಹಗಾರ ಹಾಗೂ ಅಸೋಸಿಯೇಟ್ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಚಿತ್ರ ನಿರ್ಮಾಣದ ಹಲವು ಆಯಾಮಗಳನ್ನು ಅರಿತುಕೊಂಡಿದ್ದಾರೆ.ಈ ಅನುಭವದ ಬೆನ್ನಲ್ಲೇ ಇದೀಗ ‘ಹೆಗ್ಗಣ ಮುದ್ದು’ ಮೂಲಕ ಸ್ವತಂತ್ರ ನಿರ್ದೇಶಕರಾಗಿ ತಮ್ಮದೇ ಆದ ಮೊದಲ ಹೆಜ್ಜೆಯನ್ನು ಇಡುತ್ತಿದ್ದಾರೆ.
ನಚಿಕೇತ್ ಬಲೆಕ್ಕಳ – ಕ್ಯಾಮೆರಾದ ಹಿಂದಿನ ಪ್ರತಿಭೆ
ಅವಿನಾಶ್ ಅವರ ಸಹೋದರ ನಚಿಕೇತ್ ಬಲೆಕ್ಕಳ ಅವರೂ ಚಿತ್ರರಂಗದಲ್ಲಿ ತಮ್ಮದೇ ಆದ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಬಿ.ಇ. ಹಾಗೂ ಎಂ.ಎಸ್. (ಕಂಪ್ಯೂಟರ್ ಸೈನ್ಸ್) ವಿದ್ಯಾಭ್ಯಾಸ ಮಾಡಿರುವ ನಚಿಕೇತ್, ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಾಹಕರಾಗಿ ಸಕ್ರಿಯರಾಗಿದ್ದಾರೆ.
‘ಹೆಗ್ಗಣ ಮುದ್ದು’ ಚಿತ್ರದಲ್ಲಿ ತಮ್ಮ ಸಹೋದರ ಅವಿನಾಶ್ ಅವರ ನಿರ್ದೇಶನಕ್ಕೆ ಕ್ಯಾಮೆರಾ ಮೂಲಕ ಸಾಥ್ ನೀಡಿರುವ ನಚಿಕೇತ್, ಚಿತ್ರದ ದೃಶ್ಯಾನುಭವವನ್ನು ಕಟ್ಟಿಕೊಡುವ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ.
ಒಂದೇ ಕುಟುಂಬದ ಇಬ್ಬರು ಸಹೋದರರು ತಮ್ಮ ತಮ್ಮ ಪ್ರತಿಭೆ ಹಾಗೂ ಆಸಕ್ತಿಯ ಕ್ಷೇತ್ರಗಳಲ್ಲಿ ಬೆಳೆದು, ಇದೀಗ ಒಂದೇ ಸಿನಿಮಾದ ಮೂಲಕ ಒಟ್ಟಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವುದು ವಿಶೇಷ ಸಂಗತಿಯಾಗಿದೆ.
ಕರಾಡ ಸಮುದಾಯದ ಪ್ರತಿಭೆಗಳು ಶಿಕ್ಷಣ, ಉದ್ಯಮ, ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಸಂದರ್ಭದಲ್ಲಿ, ಅವಿನಾಶ್ ಬಲೆಕ್ಕಳ ಮತ್ತು ನಚಿಕೇತ್ ಬಲೆಕ್ಕಳ ಸಹೋದರರ ಚಿತ್ರರಂಗದ ಈ ಹೊಸ ಹೆಜ್ಜೆ ಸಮುದಾಯಕ್ಕೆ ಹೆಮ್ಮೆಯ ಸಂಗತಿ.
ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿರುವ ‘ಹೆಗ್ಗಣ ಮುದ್ದು’ ಚಿತ್ರಕ್ಕೆ ಕರಾಡ ಸಮುದಾಯದ ಎಲ್ಲರ ಪ್ರೋತ್ಸಾಹ ಮತ್ತು ಶುಭಹಾರೈಕೆ ಇರಲಿ. ಅವಿನಾಶ್ ಅವರ ಚೊಚ್ಚಲ ನಿರ್ದೇಶನದ ಪ್ರಯತ್ನ ಯಶಸ್ವಿಯಾಗಲಿ, ನಚಿಕೇತ್ ಅವರ ಛಾಯಾಗ್ರಹಣದ ಪ್ರತಿಭೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಮುಂದಿನ ದಿನಗಳಲ್ಲಿ ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಇನ್ನಷ್ಟು ಉತ್ತಮ ಕೃತಿಗಳ ಮೂಲಕ ತಮ್ಮದೇ ಆದ ಸ್ಥಾನವನ್ನು ಗಳಿಸಲಿ ಎಂಬುದು ಕರಾಡ ಸಮುದಾಯದ ಹಾರೈಕೆ.

ಅವಿನಾಶ್ ಬಲೆಕ್ಕಳ

ನಚಿಕೇತ್ ಬಲೆಕ್ಕಳ
