
Article · May 2, 2026
ಸನ್ನಿಧಿ ಭಟ್- ಕರಾಡ ಚೆಸ್ ಪ್ರತಿಭೆಯನ್ನು ಪ್ರೋತ್ಸಾಹಿಸೋಣ।
✍️ ಕರಾಡ ವಿಶ್ವ ತಂಡ
ನೋಡಿದ ತಕ್ಷಣ ಮನಸ್ಸಿನ ದೃಷ್ಟಿ ದೂರ ಬಹು ಎತ್ತರ ನೆಟ್ಟಂತಹ ಮುಖ ಛಾಯೆ, ವಯಸ್ಸಿಗೂ ಮೀರಿದ ಗಂಭೀರತೆ ಅಷ್ಟೇ ಸರಳತೆ. ಐಸ್ ಕ್ರೀಂ ಚಾಕೋಲೇಟ್ ಮೆಲ್ಲುತ್ತಾ ಫ್ರೆಂಡ್ಸ್ ಜೊತೆ ಹರಟುವ ವಯೋಮಾನದಲ್ಲಿ ಅದನೆಲ್ಲಾ ಬದಿಗಿರಿಸಿ ಚೆಸ್ ಬೋರ್ಡಿನಲ್ಲಿ ತಲ್ಲೀನತೆ. ಇದು ಪ್ರತಿಭೆಯ ಅನಾವರಣವೇ ಸರಿ.
ಸನ್ನಿಧಿ ಭಟ್ , ನಾರಂಪಾಡಿ, ಇವಳು 16ನೇ ವಯಸ್ಸಿನಲ್ಲಿ ಕರಾಡರು ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾಳೆ. ಪ್ರವರ್ಧಮಾನಕ್ಕೆ ಬರುತ್ತಿರುವ ಕರಾಡ ಚೆಸ್ ಪ್ರತಿಭೆ ಇತ್ತೀಚೆಗೆ ಅಹಮದಾಬಾದ್, ಗುಜರಾತ್‌ನಲ್ಲಿ 30 ಮಾರ್ಚ್ ನಿಂದ 7 ಏಪ್ರಿಲ್ 2026 ರವರೆಗೆ ನಡೆದ ನ್ಯಾಷನಲ್ U17 ಬಾಲಕಿಯರ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನವನ್ನು ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದಾಳೆ.
ಈ ರಾಷ್ಟ್ರಮಟ್ಟದ ಸಾಧನೆ ಆಕೆಯ ಪರಿಶ್ರಮ, ಏಕಾಗ್ರತೆ ಮತ್ತು ಪ್ರತಿಭೆಯ ಪ್ರತಿಬಿಂಬವಾಗಿದ್ದು, ಕರಾಡ ಸಮುದಾಯಕ್ಕೆ ಹೆಮ್ಮೆಯ ಸಂಗತಿ. ಕರಾಡ ವಿಶ್ವದಿಂದ ಸನ್ನಿಧಿಗೆ ಹಾರ್ದಿಕ ಅಭಿನಂದನೆಗಳು.
ತಾಯಿ ಶ್ರೀಮತಿ ನಾಗಲಕ್ಷ್ಮಿ ಸೈಪಂಗಲ್ಲು (ಬಿಯಸ್ಸಿ) ಹಾಗೂ ತಂದೆ ಶ್ರೀ ರಾಮಕೃಷ್ಣ ಭಟ್ (ಇಂಜಿನಿಯರ್ , ಮುಂಬಯಿ) ಫಣಿಯೆ ಬಲೆಕ್ಕಳ ಮನೆತನದವರು. ಅಕ್ಕ ದೀಕ್ಷಾ ಇಂಜಿನಿಯರಿಂಗ್ ಓದುತ್ತಿದ್ದಾಳೆ. ಯುವ ಚೆಸ್ ಆಟಗಾರ್ತಿ ಕಷ್ಟಪಟ್ಟು ಅಭ್ಯಾಸ ಮಾಡಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾಳೆ. ಇದು ಸತತ ಪರಿಶ್ರಮದ ಮತ್ತು ಏಕಾಗ್ರತೆಯ ಉತ್ತಮ ಉದಾಹರಣೆ. ಕುಟುಂಬದ ಪರಿಪೂರ್ಣ ಸಹಕಾರ, ನಿರಂತರ ಪ್ರೋತ್ಸಾಹ ಹಾಗೂ ತ್ಯಾಗ ಇವಳ ಸಾಧನೆಯ ಹಿಂದಿದೆ. ಶ್ರೀ ನೀಲೇಶ್ ಬಂಡೇಕರ್ ಇವಳ ತರಬೇತುದಾರರು.
ಗುರಿಯತ್ತ ಗಮನವಿಟ್ಟು ನಿರಂತರವಾಗಿ ಶ್ರದ್ಧೆ ಮತ್ತು ಏಕಾಗ್ರತೆಯಲ್ಲಿ ತಲ್ಲೀನತೆ ಈ ಕುಟುಂಬ ಪರಿಶ್ರಮದ ಮುಖ್ಯ ಅಂಶಗಳು.
ಚೆಸ್ ಆಟದಲ್ಲಿ ಉತ್ತಮವಾಗಲು ಪ್ರತಿದಿನ ಅಭ್ಯಾಸ ಮಾಡಬೇಕು. ತಂದೆ-ತಾಯಿಯ ಬೆಂಬಲ ಅತೀ ಮುಖ್ಯ. ಮಕ್ಕಳ ಪ್ರತಿಭೆಯನ್ನು ಬೆಳೆಸುವಲ್ಲಿ ಕುಟುಂಬದ ಪ್ರೋತ್ಸಾಹ ಪ್ರಮುಖವಾದದ್ದು. ಕಷ್ಟಪಡುವ ಮಕ್ಕಳ ಜೊತೆ ತಂದೆ-ತಾಯಿ ನಿಂತರೆ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ.
ಕರಾಡ ಸಮುದಾಯದದಿಂದ ಪ್ರೇರಣೆ ನೀಡುವುದು ಮಹತ್ವದ್ದು. ಪರಿಶ್ರಮ ಮುಂದುವರೆಸಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲಬಹುದು, ಸಮಾಜದಲ್ಲಿ ಗೌರವ ಪಡೆಯಬಹುದು ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಬಹುದು.
ಚೆಸ್ ಟೂರ್ನಮೆಂಟ್‌ಗಳಲ್ಲಿ ಎದುರಾಗುವ ಕಷ್ಟಗಳು ಬಹಳಷ್ಟು. ಹತ್ತಿಪ್ಪತ್ತು ದಿನ ಹೊಸ ಜಾಗ, ಅಪರಿಚಿತ ಪರಿಸರದಲ್ಲಿ ಮಾನಸಿಕ ಒತ್ತಡವಿರುತ್ತದೆ. ಪ್ರತಿ ಆಟದಲ್ಲೂ ಗೆಲ್ಲಲೇಬೇಕು ಎಂಬ ಗುರಿ ಇರುತ್ತದೆ. ಒಂದು ತಪ್ಪಾದ ನಡೆ ಇಡೀ ಆಟವನ್ನು ಹಾಳು ಮಾಡಬಹುದು. ಸೋಲಿನ ನಂತರ ಮನಸ್ಸನ್ನು ಸಂಭಾಳಿಸಿಕೊಂಡು ಮತ್ತೆ ಆಡುವುದು ತುಂಬಾ ಕಠಿಣ. ದೈಹಿಕ ಕಷ್ಟಗಳು ಅಂದರೆ ಗಂಟೆಗಟ್ಟಲೆ ಕುಳಿತು ಆಡಬೇಕಾಗುತ್ತದೆ, ಏಕಾಗ್ರತೆ ಕಾಯ್ದುಕೊಳ್ಳಲು ದೈಹಿಕ ಶಕ್ತಿ ಬೇಕು, ನಿದ್ರೆ ಕಡಿಮೆಯಾಗುತ್ತದೆ, ಆಹಾರ ಹವಾಮಾನಗಳ ವ್ಯತ್ಯಾಸ ತೊಂದರೆಯಾಗುತ್ತದೆ. ಕೆಲವೊಮ್ಮೆ ಪಂದ್ಯಗಳು ಐದಾರು ಘಂಟೆಗಳಷ್ಟು ದೀರ್ಘಕಾಲ ನಡೆಯುತ್ತವೆ. ಆರ್ಥಿಕ ಕಷ್ಟಗಳು, ಪ್ರಯಾಣ ಖರ್ಚು ಹೆಚ್ಚು. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಟೂರ್ನಮೆಂಟ್‌ಗಳಿಗೆ ದೂರದ ಊರುಗಳಿಗೆ ಹೋಗಬೇಕಾಗುತ್ತದೆ. ಉತ್ತಮ ಕೋಚ್ ಹತ್ತಿರ ಕಲಿಯಲು ಹಣ ಬೇಕಾಗುತ್ತದೆ. ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಪ್ರತಿಭಾವಂತ ಆಟಗಾರರ ವಿರುದ್ಧ ಕಠಿಣ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಸುಲಭವಲ್ಲ. ಶಾಲಾ ಅಭ್ಯಾಸ ಮತ್ತು ಚೆಸ್ ನಡುವೆ ಸಮತೋಲನದಿಂದ ಎರಡನ್ನೂ ನಿಭಾಯಿಸುವುದು ಬಹಳ ಕಷ್ಟ.
ಸನ್ನಿಧಿಗೆ ಉತ್ತಮ ಕೋಚ್ ಸಿಕ್ಕಿರುವುದು ಸಂತೋಷದ ವಿಚಾರ. ಈ ಎಲ್ಲಾ ಕಷ್ಟಗಳನ್ನು ಮೆಟ್ಟಿನಿಂತು ಸಾಧನೆ ಮಾಡಿದಾಗ ಸಿಗುವ ಸಂತೋಷ ಅನನ್ಯ! ತಂದೆ-ತಾಯಿ ಬೆಂಬಲ ಮತ್ತು ಸಮುದಾಯದ ಪ್ರೋತ್ಸಾಹ ಈ ಕಷ್ಟಗಳನ್ನು ಜಯಿಸಲು ದೊಡ್ಡ ಶಕ್ತಿಯಾಗುತ್ತದೆ.
ಗುಟ್ಟು ರಟ್ಟು
ಸನ್ನಿಧಿ ನಾಲ್ಕನೇ ಸ್ಥಾನದ ಗೌರವ ಪಡೆದು ನಿರ್ಗಮಿಸುವಾಗ ಸಂತಸದ ಜೊತೆಗೆ ಮೌನ, ಒಳಗೊಳಗೆ ಅಗಾಧ ಬೇನೆ. ಸೋಲನ್ನು ಸಹಿಸಿಕೊಳ್ಳುವುದು ಸುಲಭವಲ್ಲ. ತಾಯಿಯ ಕಣ್ಣಲ್ಲಿ ದು:ಖ ಮಿಶ್ರಿತ ಭರವಸೆಯ ಬಿಂದುಗಳು. ಅಪ್ಪನ ಮುಖದಲ್ಲಿ ಬಿಗು ಒಳಗೆ ಅಭಿಮಾನದ ನಗು. ನಾವು ಇಷ್ಟೆಲ್ಲ ಮಾಡಿದರೂ ನಿನಗಾಗಿ ಸರ್ವಸ್ವವನ್ನೂ ಧಾರೆ ಎರೆದರೂ ನೀನು ಯಾಕೆ ಸೋತೆ? ಎಂದು ಅಸಮಾಧಾನ. ಸನ್ನಿಧಿಗೆ ಇದೆಲ್ಲ ಹೊಸತಲ್ಲ. ಸೋಲು ಗೆಲುವಿನ ಮೆಟ್ಟಿಲೆಂಬ ದೃಢತೆ ಅವಳನ್ನು ಗಟ್ಟಿಗೊಳಿಸಿದೆ. ಎರಡನೇ ದಿನ ಎಲ್ಲವೂ ತಿಳಿಯಾಗಿ ಮತ್ತೆ ಪ್ರೀತಿ ವಿಶ್ವಾಸದ ಭರವಸೆಯ ಸಾಂತ್ವನ. ಮನೆಯವರೆಲ್ಲ ಸೇರಿ ಕೋಚ್ ಜೊತೆ ಮಾತಾಡಿ ಮುಂದಿನ ಭವ್ಯ ಭವಿಷ್ಯಕ್ಕಾಗಿ ಸಂಕಲ್ಪ. ಇದು ಭರವಸೆಯ ದಾರಿ, ನಮಗೆಲ್ಲರಿಗೂ ಮಾದರಿ.
ಸನ್ನಿಧಿ ಭಟ್ ಇನ್ನು ಅಂತಾರಾಷ್ರ್ಟೀಯ ಮಟ್ಟದಲ್ಲಿ ಆಡಬೇಕಾಗುತ್ತದೆ. ಅದು ಅವಳ ಭವಿಷ್ಯವನ್ನು ರೂಪಿಸುತ್ತದೆ.
ಕರಾಡ ಬ್ರಾಹ್ಮಣ ಸಮಾಜದ ನಾವೆಲ್ಲರೂ ಸನ್ನಿಧಿಯ ಯಶಸ್ಸಿಗಾಗಿ ಶುಭ ಹಾರೈಸುವ. ಶುಭಾಷಯಗಳನ್ನು ವಾಟ್ಸಪ್ ಮೂಲಕ ತಿಳಿಸಬಹುದು ( ಸಂಖ್ಯೆ 93720 20402) ಸನ್ನಿಧಿಯ ಏಕಾಗ್ರತೆಗೆ ತೊಂದರೆಯಾಗದಂತೆ ಎಚ್ಚರ ನಮಗಿರಲಿ. ಆಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜಯಿಯಾಗಲಿ.
28/04/2026
( ವಿಸ್ತೃತ ಸಂದರ್ಶನವು ಕರಾಡ ವಿಶ್ವ ಆ್ಯಪ್ ನಲ್ಲಿ ಪ್ರಸಾರವಾಗಲಿದೆ)

SportsAchievers
