
News · September 11, 2026
ಕರಾಡ ವಿಶ್ವ–ಕರಾಡೆ ಬ್ರಾಹ್ಮಣ ಸಂಘ (ರಿ) ಹುಬ್ಬಳ್ಳಿ, ಇವರ ಸೌಹಾರ್ದ ಸಂವಾದ
ದಿನಾಂಕ: 09/09/2026
ಹುಬ್ಬಳ್ಳಿಯ ಭಾಸ್ಕರ ಭವನದಲ್ಲಿ ಕರಾಡ ವಿಶ್ವ ತಂಡದ ವತಿಯಿಂದ ಕರಾಡೆ ಬ್ರಾಹ್ಮಣ ಸಂಘ (ರಿ.), ಹುಬ್ಬಳ್ಳಿಯ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಸೌಹಾರ್ದ ಸಂವಾದ ಕಾರ್ಯಕ್ರಮ ನಡೆಯಿತು. ಕರಾಡ ವಿಶ್ವದ ಪರವಾಗಿ ಶ್ರೀ ಚಂದ್ರಹಾಸ ಕನ್ನಡ್ಕ ಮತ್ತು ಶ್ರೀ ಕೆ. ಎಸ್. ಭಟ್ ಕುದ್ಕುಳಿ ಭಾಗವಹಿಸಿದ್ದರು. ಸಮಾಜದ ಅಧ್ಯಕ್ಷ ಶ್ರೀ ಚಿದಂಬರ ಎಸ್. ಕಾನೇಟ್ಕರ್, ಉಪಾಧ್ಯಕ್ಷ ಡಾ. ವಿಜಯ ಪಿ ಜಾಯಿದೆ, ಪೋಷಕ ಸದಸ್ಯ ಶ್ರೀ ಸುರೇಶ್ ಎ. ಹರ್ಡಿಕರ್ ಸೇರಿದಂತೆ ಹಲವು ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಚಂದ್ರಹಾಸ ಕನ್ನಡ್ಕ ಅವರು ಕರಾಡ ವಿಶ್ವ ಮೊಬೈಲ್ ಆ್ಯಪ್‌ನ ಉದ್ದೇಶ, ಬೆಳವಣಿಗೆ ಹಾಗೂ ಪ್ರಮುಖ ವೈಶಿಷ್ಟ್ಯಗಳಾದ ವಿವಾಹ ವೇದಿಕೆ, ಉದ್ಯೋಗ, ಬಿಸಿನೆಸ್ ಲಿಸ್ಟಿಂಗ್, ಡಿಜಿಟಲ್ ಅಡ್ರೆಸ್ ಬುಕ್, ಕುಟುಂಬ ಸಂಪರ್ಕ, ವೆಬಿನಾರ್‌ಗಳು ಮತ್ತು ಕರಾಡ ಮೀಡಿಯಾ ಕುರಿತು ವಿವರಿಸಿದರು. ದೇಶ-ವಿದೇಶಗಳಲ್ಲಿ ನೆಲೆಸಿರುವ ಕರಾಡ ಬಂಧುಗಳನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಂಪರ್ಕಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.
ಶ್ರೀ ಕೆ. ಎಸ್. ಭಟ್ ಕುದ್ಕುಳಿ ಅವರು ಸಮಾಜದಲ್ಲಿ ಪರಸ್ಪರ ಸಂಪರ್ಕ, ಸಹಕಾರ ಮತ್ತು ಸಂಘಟನೆಯ ಮೂಲಕ ಸಮೃದ್ಧಿ ಸಾಧಿಸುವ ಅಗತ್ಯವನ್ನು ಒತ್ತಿ ಹೇಳಿದರು. ವೇದಾಧ್ಯಯನ, ಸಂಸ್ಕಾರ, ಸಂಸ್ಕೃತಿ, ಅತಿಥಿ ಸತ್ಕಾರ ಹಾಗೂ ಧರ್ಮಾಧಾರಿತ ಜೀವನ ಮೌಲ್ಯಗಳನ್ನು ವಿವರಿಸಿ, ಭಾರತೀಯ ಪರಂಪರೆಯ ಧರ್ಮ–ಅರ್ಥ–ಕಾಮ–ಮೋಕ್ಷದ ಸಮನ್ವಿತ ಜೀವನದರ್ಶನವನ್ನು ಪ್ರಸ್ತಾಪಿಸಿದರು. ಕರಾಡ ಸಮುದಾಯದ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಸ್ಮರಿಸಿ, ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಅವರಂತಹ ಮಹನೀಯರ ಕೊಡುಗೆಯನ್ನು ಉಲ್ಲೇಖಿಸಿದರು.
ಅಧ್ಯಕ್ಷ ಶ್ರೀ ಚಿದಂಬರ ಎಸ್. ಕಾನೇಟ್ಕರ್ ಅವರು ಭಾಸ್ಕರ ಭವನ ನಿರ್ಮಾಣದ ಹಿನ್ನೆಲೆ, ಸಮಾಜದ ದಾನಿಗಳ ಸಹಕಾರ ಹಾಗೂ ಭವನದಿಂದ ಸಮಾಜಕ್ಕೆ ದೊರೆಯುತ್ತಿರುವ ಪ್ರಯೋಜನಗಳ ಕುರಿತು ವಿವರಿಸಿದರು.
ಹುಬ್ಬಳ್ಳಿಯ ಕರಾಡೆ ಬ್ರಾಹ್ಮಣ ಸಂಘವು ತನ್ನದೇ ಆದ ವಿಶಾಲ ಸ್ವಂತ ಕಟ್ಟಡವನ್ನು ಹೊಂದಿದ್ದು, ಸುಮಾರು 400–500 ಜನರು ಕುಳಿತುಕೊಳ್ಳಬಹುದಾದ ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಿದೆ. ಈ ಕಟ್ಟಡವನ್ನು 1999ರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಸಮಾಜದ ವಿವಿಧ ಚಟುವಟಿಕೆಗಳಿಗೆ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತಿದೆ.
ಸಂಘವು ಪ್ರತಿವರ್ಷ ಮಕರ ಸಂಕ್ರಾಂತಿ ಹಾಗೂ ದಸರಾ ಹಬ್ಬಗಳನ್ನು ವಿಶೇಷವಾಗಿ ಆಚರಿಸುತ್ತದೆ. ಸಭಾಂಗಣವನ್ನು ಸಮಾರಂಭಗಳಿಗಾಗಿ ಬಾಡಿಗೆಗೆ ನೀಡಲಾಗುತ್ತಿದ್ದು, ಅದರಿಂದ ಬರುವ ಆದಾಯವನ್ನು ಸಂಘದ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಬಳಸಲಾಗುತ್ತಿದೆ.
ಹುಬ್ಬಳ್ಳಿ ಪ್ರದೇಶದಲ್ಲಿ ಸುಮಾರು 200 ರಿಂದ 250 ಕರಾಡೆ ಬ್ರಾಹ್ಮಣ ಕುಟುಂಬಗಳು ನೆಲೆಸಿದ್ದು, ಸಂಘವು ಅವರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಬಾಂಧವ್ಯವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಉತ್ತೇಜನ ನೀಡಲಾಗುತ್ತದೆ.
ನಾಟೇಕರ್ ಸ್ಮಾರಕ ನಿಧಿಯ ಮೂಲಕ ಸಮಾಜದಲ್ಲಿ ವಿಶಿಷ್ಟ ಸಾಧನೆ ಮಾಡಿದ ಗಣ್ಯ ವ್ಯಕ್ತಿಯೊಬ್ಬರಿಗೆ ಪ್ರತಿವರ್ಷ ₹25,000 ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಜೊತೆಗೆ ಅವರ ಸ್ಮರಣಾರ್ಥ ಉಪನ್ಯಾಸ ಅಥವಾ ವಿಚಾರ ಸಂಕಿರಣವನ್ನು ಆಯೋಜಿಸುವ ಮೂಲಕ ಸಮಾಜಕ್ಕೆ ಪ್ರೇರಣಾದಾಯಕ ಸಂದೇಶವನ್ನು ನೀಡಲಾಗುತ್ತಿದೆ.
ಸಾಮಾಜಿಕ ಸೇವೆ, ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಹುಬ್ಬಳ್ಳಿ ಕರಾಡೆ ಬ್ರಾಹ್ಮಣ ಸಂಘವು ಮಾದರಿ ಸಂಸ್ಥೆಯಾಗಿ ಬೆಳೆಯುತ್ತಿದೆ.
ಸಂವಾದದಲ್ಲು ಬೆಂಗಳೂರು, ಮುಂಬೈ, ಪುಣೆ ಮುಂತಾದ ನಗರಗಳಲ್ಲಿ ನೆಲೆಸಿರುವ ಹುಬ್ಬಳ್ಳಿ ಮೂಲದ ಕರಾಡೆ ಯುವಕರನ್ನು ಕರಾಡ ವಿಶ್ವ ಆ್ಯಪ್ ಮೂಲಕ ಸಮಾಜದ ಮುಖ್ಯವಾಹಿನಿಯೊಂದಿಗೆ ಸಂಪರ್ಕಿಸುವ ಬಗ್ಗೆ ಸದಸ್ಯರು ಹಲವು ಸಲಹೆಗಳನ್ನು ನೀಡಿದರು. ತಮ್ಮ ಸಂಪರ್ಕದಲ್ಲಿರುವ ಕರಾಡ ಬಂಧುಗಳಿಗೆ ಆ್ಯಪ್ ಪರಿಚಯಿಸಿ, ಡೌನ್‌ಲೋಡ್ ಮಾಡಿ ಬಳಸಲು ಪ್ರೋತ್ಸಾಹಿಸುವುದಾಗಿ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು.
ಹುಬ್ಬಳ್ಳಿ ಕರಾಡೆ ಬ್ರಾಹ್ಮಣ ಸಮಾಜದ ವತಿಯಿಂದ, ಮುಂದಿನ ವರ್ಷಗಳಲ್ಲಿ ಶೃಂಗೇರಿಯಲ್ಲಿ ನಡೆಯುವ ಶ್ರೀ ಶ್ರೀ ಜಗದ್ಗುರುಗಳ ಚಾತುರ್ಮಾಸ್ಯ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಉತ್ಸಾಹವನ್ನು ಈ ಸಂವಾದದಲ್ಲಿ ವ್ಯಕ್ತಪಡಿಸಲಾಯಿತು.
ಈಗಾಗಲೇ ಕರಾಡ ವಿಶ್ವ ಆ್ಯಪ್‌ನಲ್ಲಿ ಹುಬ್ಬಳ್ಳಿ ಭಾಗದ ಕರಾಡೆ ಬ್ರಾಹ್ಮಣ ಸಮಾಜದ ಸದಸ್ಯರು ಲೇಖನಗಳು, ವಿಚಾರಗಳು ಹಾಗೂ ಸಮಾಜೋಪಯೋಗಿ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಆ್ಯಪ್‌ನ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ವೇದಿಕೆಯ ವಿವಿಧ ಸೌಲಭ್ಯಗಳನ್ನು ಇನ್ನಷ್ಟು ವ್ಯಾಪಕವಾಗಿ ಬಳಸಿಕೊಂಡು ಸಮಾಜದ ಸದಸ್ಯರಿಗೆ ಹೆಚ್ಚಿನ ಪ್ರಯೋಜನ ತಲುಪಿಸುವ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಯಿತು.
ಅದೇ ರೀತಿ ಕರಾಡ ವಿಶ್ವದ ಮೂಲಕ ಆಯೋಜಿಸಲಾಗುವ ಜಾಲಗೋಷ್ಠಿಗಳು (ವೆಬಿನಾರ್‌ಗಳು), ಜ್ಞಾನ ಹಂಚಿಕೆ ಕಾರ್ಯಕ್ರಮಗಳು ಹಾಗೂ ಇತರೆ ಆನ್‌ಲೈನ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದಾಗಿ ಸದಸ್ಯರು ತಿಳಿಸಿದರು. ಹುಬ್ಬಳ್ಳಿ ಸಮಾಜದ ಮಹಿಳಾ ತಂಡವೂ ಅತ್ಯಂತ ಉತ್ಸಾಹ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಕರಾಡ ವಿಶ್ವದ ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಂಡು, ಅದರ ಪ್ರಯೋಜನಗಳನ್ನು ಹೆಚ್ಚಿನ ಸಂಖ್ಯೆಯ ಸಮಾಜಬಾಂಧವರಿಗೆ ತಲುಪಿಸಲು ಅಗತ್ಯ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿತು.
ಸಮಾಜದ ಏಕತೆ, ತಂತ್ರಜ್ಞಾನದ ಸದ್ಬಳಕೆ ಮತ್ತು ಮುಂದಿನ ಪೀಳಿಗೆಯೊಂದಿಗೆ ಸಂಪರ್ಕ ಎಂಬ ಆಶಯದೊಂದಿಗೆ ನಡೆದ ಈ ಸಂವಾದವು ಅತ್ಯಂತ ಆತ್ಮೀಯ ಹಾಗೂ ಫಲಪ್ರದವಾಗಿದ್ದು, ಕರಾಡ ವಿಶ್ವ ಮತ್ತು ಹುಬ್ಬಳ್ಳಿ ಕರಾಡೆ ಬ್ರಾಹ್ಮಣ ಸಮಾಜದ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಿತು.





